Revenue Facts

ಪತ್ರಗಳ ನೋಂದಣಿ ನಿಯಮ: ಪತ್ರಗಳನ್ನುಎಷ್ಟು ದಿನದಳೋಗೆ ನೋಂದಣಿ ಮಾಡಿಸಬೇಕು ?

ಪತ್ರಗಳ ನೋಂದಣಿ ನಿಯಮ: ಪತ್ರಗಳನ್ನುಎಷ್ಟು ದಿನದಳೋಗೆ ನೋಂದಣಿ ಮಾಡಿಸಬೇಕು ?

ಬೆಂಗಳೂರು, ಆಸ್ತಿ ವಿವಾದದ ಬಗ್ಗೆ ಸಹೋದರರಿಗೆ ನ್ಯಾಯಾಲಯ ತೀರ್ಮಾನ ಮಾಡಿ ಡಿಕ್ರಿ ಮಾಡಿಕೊಟ್ಟಿತು ಅಂದಿಟ್ಟುಕೊಳ್ಳಿ. ನ್ಯಾಯಾಲಯದ ಡಿಕ್ರಿಯನ್ನು ಇಂತಿಷ್ಟು ದಿನದಲ್ಲಿ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಶುಲ್ಕ ಪಾವತಿಸಿ ನೋಂದಣಿ ಮಾಡಿಸಬೇಕು. ಇಂತಿಷ್ಟು ಕಾಲಮಿತಿಯಲ್ಲಿ ನೋಂದಣಿ ಮಾಡದಿದ್ದರೆ, ಆ ನಂತರ ಆ ಪತ್ರಗಳನ್ನು ನೋಂದಣಿ ಮಾಡಲು ದಂಡ ಪಾವತಿಸಬೇಕಾಗುತ್ತದೆ. ಬರೆದ ಪತ್ರಗಳನ್ನು ಎಷ್ಟು ದಿನದಲ್ಲಿ ನೋಂದಣಿ ಮಾಡಿಸಬೇಕು. ಹೇಗೆ ಮಾಡಿಸಬೇಕು. ಮಾಡಿಸದಿದ್ದರೆ ಏನಾಗುತ್ತದೆ ಎಂಬ ಸಾಮಾನ್ಯ ಜ್ಞಾನ ಪ್ರತಿಯೊಬ್ಬರೂ ಕಡ್ಡಾಯವಾಗಿ ತಿಳಿದಿರಲೇಬೇಕು. ಈ ಹಿನ್ನೆಲೆಯಲ್ಲಿ ಪತ್ರಗಳ ನೋಂದಣಿ ಕಾಲಮಿತಿಯ ಸಮಗ್ರ ವಿವರ ರೆವಿನ್ಯೂಫ್ಯಾಕ್ಟ್ಸ್ ಇಲ್ಲಿ ವಿವರಿಸಿದೆ.

ಪತ್ರಗಳು: ಯಾವುದೇ ಸ್ಥಿರ, ಚರಾಸ್ತಿ ಕುರಿತ ಇಬ್ಬರ ನಡುವೆ ನಡೆಯುವ ವ್ಯವಹಾರದ ಭಾಗವಾಗಿ ಒಡಂಬಡಿಕೆ ಮಾಡಿಕೊಳ್ಳುವ ಕರಾರಿನ ದಾಖಲೆಗಳೇ ಪತ್ರಗಳು. ಕೆಲವು ಪತ್ರಗಳನ್ನು ಹೊರುತು ಪಡಿಸಿ ಬಹುತೇಕ ಪತ್ರಗಳನ್ನು ನೋಂದಣಿ ಕಚೇರಿಗಳಲ್ಲಿ ಕಾಲಮಿತಿಯಲ್ಲಿ ನೋಂದಣಿ ಮಾಡಿಸಲೇಬೇಕು. ಇಲ್ಲದಿದ್ದರೆ ಅವು ಅಮಾನ್ಯವಾಗುತ್ತವೆ. ಅವುಗಳನ್ನು ದಾಖಲೆಗಳನ್ನಾಗಿ ಪರಿಗಣಿಸಲು ಸಾಧ್ಯವಿಲ್ಲ.

ಇನ್ನು ಪತ್ರಗಳನ್ನು ಇಂತಿಷ್ಟು ದಿನದಲ್ಲಿ ನೋಂದಣಿ ಮಾಡಿಸಬೇಕು. ಇಲ್ಲದಿದ್ದರೆ ಹತ್ತು ಪಟ್ಟು ದಂಡವನ್ನು ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ಪಾವತಿಸಬೇಕಾಗುತ್ತದೆ! ಇನ್ನು ಒಂದೊಂದು ಮಾದರಿಯ ಪತ್ರಗಳಿಗೆ ಒಂದೊಂದು ರೀತಿಯ ಶುಲ್ಕ ಹಾಗೂ ದಂಡದ ಮೊತ್ತವಿದೆ. ಅದರ ಸಂಪೂರ್ಣ ಚಿತ್ರಣ ಇಲ್ಲಿ ವಿವರಿಸಲಾಗಿದೆ.
ನಾಲ್ಕು ತಿಂಗಳಲ್ಲಿ ನೋಂದಣಿ: ಯಾವುದೇ ಒಂದು ದಾಸ್ತವೇಜನ್ನು ಪಾರ್ಟಿಗಳು ಬರೆದು ಸಹಿ ಮಾಡಿದರೆ, ಅದಕ್ಕೆ ಸಹಿ ಮಾಡಿದ ದಿನದಿಂದ ನಾಲ್ಕು ತಿಂಗಳು ಒಳಗಾಗಿ ಅದನ್ನು ಸಂಬಂಧಪಟ್ಟ ಉಪ ನೋಂದಣಾಧಿಕಾರಿ, ಜಿಲ್ಲಾ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಮಾಡಿಸಬೇಕಾಗುತ್ತದೆ.

ಭಾರತೀಯ ನೋಂದಣಿ ಕಾಯ್ದೆ 1908 ಕಲಂ 25 ರ ಪ್ರಕಾರ, ದಸ್ತಾವೇಜುಗಳನ್ನು ಅದನ್ನು ಬರೆದ ದಿನಾಂಕದಿಂದ ನಾಲ್ಕು ದಿನಗಳಲ್ಲಿ ನೋಂದಣಿ ಕಚೇರಿಯಲ್ಲಿ ನೋಂದಣಿ ಮಾಡಿಸಬೇಕು. ಒಂದು ವೇಳೆ ವಿಶೇಷ ಸಂದರ್ಭದಲ್ಲಿ ನಾಲ್ಕು ತಿಂಗಳ ಒಳಗಾಗಿ ಮಾಡಿಸದಿದ್ದ ಪಕ್ಷದಲ್ಲಿ ಹೆಚ್ಚುವರಿ ನಾಲ್ಕು ತಿಂಗಳಲ್ಲಿ ಕಡ್ಡಾಯವಗಿ ಮಾಡಿಸಲೇಬೇಕು. ವಿಶೇಷ ಸಂದರ್ಭ ಎಂದರೆ ಸದೀರ್ಘ ಅನಾರೋಗ್ಯ ಸೇರಿದಂತೆ ನೈಜ ಕಾರಣವಿದ್ದರೆ ಮಾತ್ರ ಅದನ್ನು ನೋಂದಣಾಧಿಕಾರಿಗಳು ಪರಿಗಣಿಸುತ್ತಾರೆ. ಆದರೆ ತಡವಾಗಿದ್ದಕ್ಕೆ ನೈಜ ಕಾರಣವನ್ನು ಉಪ ನೋಂದಣಾಧಿಕಾರಿಗಳ ಮೂಲಕ ಜಿಲ್ಲಾ ಉಪ ನೋಂದಣಾಧಿಕಾರಿಗಳಿಗೆ ತಿಳಿಸಬೇಕು. ಅದಕ್ಕೆ ಜಿಲ್ಲಾ ಉಪ ನೋಂದಣಾಧಿಕಾರಿಗಳು ಸಮ್ಮತಿಸುವುದು ಕಡ್ಡಾಯವಾಗಿರುತ್ತದೆ.

ವ್ಯಕ್ತಿ ನೀಡುವ ಕಾರಣ ಜಿಲ್ಲಾ ಉಪ ನೋಂದಣಾಧಿಕಾರಿ ಒಪ್ಪಿ ಅನುಮತಿ ನೀಡಿದರೆ, ದಂಡವನ್ನು ಕಟ್ಟಿ ದಾಸ್ತವೇಜನ್ನು ನೋಂದಣಿ ಮಾಡಿಸಲು ನೋಂದಣಿ ನಿಯಮಗಳು ಅವಕಾಶ ನೀಡುತ್ತವೆ.
ನಿಯಮ 52 (i) ಅಡಿಯಲ್ಲಿ ದಾಸ್ತವಾಜು ನಾಲ್ಕು ತಿಂಗಳ ಕಾಲಮಿತಿ ಮುಗಿದು ಒಂದು ವಾರ ಆಗಿದ್ದರೂ, ನೋಂದಣಿ ಶುಲ್ಕದಷ್ಟೇ ದಂಡವನ್ನು ಪಾವತಿಸಬೇಕು. ಉದಾಹರಣೆಗೆ ಪತ್ರಗಳ ನೋಂದಣಿ ಶುಲ್ಕ ನೂರು ರೂಪಾಯಿ ಇದ್ದರೆ, ನೂರು ರೂಪಾಯಿ ದಂಡ ಪಾವತಿಸಬೇಕು.

ಪತ್ರಗಳ ನೋಂದಣಿ ಕಾಲಮಿತಿ ಮುಗಿದು ಎರಡು ವಾರ ಆಗಿದ್ದರೆ, ಪತ್ರಗಳ ನೋಂದಣಿ ಶುಲ್ಕದ ಎರಡು ಪಟ್ಟು ದಂಡವನ್ನು ಪಾವತಿಸಬೇಕು. ಒಂದು ವೇಳೆ ಒಂದು ತಿಂಗಳ ಒಳಗೆ ಇದ್ದರೆ, ನೋಂದಣಿ ಶುಲ್ಕದ ಮೂರರಷ್ಟು ದಂಡ ಪಾವತಿಸಬೇಕು. ವಿಳಂಬ ಒಂದು ತಿಂಗಳಿನಿಂದ ಎರಡು ತಿಂಗಳ ಒಳಗೆ ಇದ್ದರೆ, ನೋಂದಣಿ ಶುಲ್ಕದ ಐದರಷ್ಟು ದಂಡ ಪಾವತಿ ಮಾಡಲೇಬೇಕು. ಇಲ್ಲದಿದ್ದರೆ ಪತ್ರಗಳನ್ನು ನೋಂದಣಿ ಮಾಡುವುದಿಲ್ಲ.
ಒಂದು ವೇಳೆ ಪತ್ರಗಳ ನೋಂದಣಿ ಅವಧಿ ಮುಗಿದು ನಾಲ್ಕು ತಿಂಗಳ ಕೆಳಗೆ ಆಗಿದ್ದರೆ, ನೋಂದಣಿ ಶುಲ್ಕದ ಹತ್ತರಷ್ಟು ದಂಡವನ್ನು ಪಾವತಿ ಮಾಡಲೇಬೇಕು. ಆದರೆ, ವಿಲ್ ಅಥವಾ ಮರಣ ಶಾಸನಕ್ಕೆ ಈ ನಿಯಮ ಅನ್ವಯ ಆಗುವುದಿಲ್ಲ. ಎಂಟು ತಿಂಗಳು ವಿಳಂಬ ಮಾಡಿದರೆ, ಅಂತಹ ಪತ್ರಗಳನ್ನು ನೋಂದಣಿ ಅಧಿಕಾರಿಗಳು ನೋಂದಣಿಯೇ ಮಾಡುವುದಿಲ್ಲ. ನೋಂದಣಿ ಮಾಡಲು ಅವಕಾಶವೂ ಇಲ್ಲ.

Exit mobile version