Revenue Facts

ಕಾವೇರಿ 2.0 ಡ್ರೈ ರನ್ ಸಾಫ್ಟ್ ವೇರ್ ನಲ್ಲಿ ರಿಜಿಸ್ಟರ್ ಆಗುವುದು ಹೇಗೆ?ಯಾವೆಲ್ಲಾ ಸೇವೆಗಳನ್ನು ಪಡೆಯಬಹುದು?

ಪಾಸ್ಪೋರ್ಟ್ ಮಾದರಿಯಲ್ಲಿ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿನ ನೋಂದಣಿ ಸೇವೆ ಮುಂದಿನ ವರ್ಷದಿಂದ ಸಿಗಲಿದೆ. ಇದಕ್ಕಾಗಿ ಕಾವೇರಿ 2 ತಂತ್ರಜ್ಞಾನ ಅಭಿವೃದ್ಧಿ ಪಡಿಸಲಾಗಿದೆ. ಈಗಾಗಲೇ ಬೆಳಗಾವಿ ದಕ್ಷಿಣ ಹಾಗೂ ಗುಲಬರ್ಗಾ ಜಿಲ್ಲೆಯ ಚಿಂಚೋಳಿಯಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದ್ದು, ಯಶಸ್ಸು ಸಿಕ್ಕಿದೆ. ಈ ಯಶಸ್ಸಿನ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕಂದಾಯ ಸೇವೆ ಆನ್ಲೈನ್ ನಲ್ಲಿಯೇ ಪಡೆಯಬಹುದಾಗಿದೆ.

ಕಾವೇರಿ 2 ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದ ನಂತರ ಸಾರ್ವಜನಿಕರು ತಮ್ಮ ಆಸ್ತಿ ರಿಜಿಸ್ಟ್ರೇಷನ್, ವಿವಾಹ ನೋಂದಣಿ, ಅಗ್ರಿಮೆಂಟ್ ನೋಂದಣಿ, ಜಿಪಿಎ ಕಾರ್ಯಗತ ಸೇರಿದಂತೆ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಸಿಗುವ ಬಹುತೇಕ ನೋಂದಣಿ ಪ್ರಕ್ರಿಯೆ ಆನ್ಲೈನ್ ನಲ್ಲಿಯೇ ಲಭ್ಯವಾಗಲಿದೆ. ಇದರಿಂದ ಸಾರ್ವಜನಿಕರು ಅನಾವಶ್ಯಕ ಉಪ ನೋಂದಣಾಧಿಕಾರಿಗಳ ಕಚೇರಿಗೆ ಅಲೆಯುವುದು ತಪ್ಪಲಿದೆ. ಜತೆಗೆ ನಿಗದಿತ ಕಾಲ ಮಿತಿಯಲ್ಲಿ ಕೆಲಸ ಆಗಲಿದ್ದು, ಭ್ರಷ್ಟಾಚಾರಕ್ಕೆ ಕಡಿವಾಣ ಬೀಳುವ ಆಶಾಭಾವನೆ ಹೊಂದಲಾಗಿದೆ.

ಕಾವೇರಿ 2.0 ತಂತ್ರಾಂಶದ ಮುಂದುವರೆದ ಅಭಿವೃದ್ದಿಯಂತೆ ಈ ತಂತ್ರಾಂಶದ ಒಂದು ಡೆಮೊ ಲಿಂಕ್ ಅನ್ನು ನಾಗರೀಕರಿಗಾಗಿ ಕಂದಾಯ ಇಲಾಖೆಯು ಬಿಡುಗಡೆ ಮಾಡಿದೆ. ಅದು ಈಗಾಗಲೇ ಜಾರಿಯಲ್ಲಿರುವ ಬೆಳಗಾವಿ ದಕ್ಷಿಣ ಹಾಗೂ ಗುಲಬರ್ಗಾ ಜಿಲ್ಲೆಯ ಚಿಂಚೋಳಿಯ ಉಪ ನೋಂದಣಾಧಿಕಾರಿಗಳ ಕಚೇರಿಗಳಲ್ಲಿನ ನೋಂದಣಿ ಸೇವೆಗಳಲ್ಲದೆ ಕರ್ನಾಟಕ ರಾಜ್ಯದ ಇತರೆ ಉಪ ನೋಂದಣಾಧಿಕಾರಿಗಳ ಕಚೇರಿಗಳಲ್ಲಿ ನೋಂದಣಿ ಸೇವೆಗಳನ್ನು ಪ್ರಾಯೋಗಿಕವಾಗಿ ಸಲ್ಲಿಸಬಹುದಾಗಿದೆ. ಅದಕ್ಕಾಗಿ ಈ ಕೆಳಕಂಡಂತೆ ಒಂದೊಂದಾಗಿ ವಿವರಿಸಿದ್ದೇವೆ.

ಮೊದಲನೆಯದಾಗಿ ಇಲಾಖೆಯ ಡ್ರೈ ರನ್ ಸಾಫ್ಟವೇರ್ ಲಿಂಕ್:https://staging.kaveri.karnataka.gov.in/landing-page ಇದರ ಮೇಲೆ ಕ್ಲಿಕ್ ಮಾಡಿದ ತಕ್ಷಣ ನಾವು ಕಂದಾಯ ಇಲಾಖೆಯ ವೆಬ್ ಸೈಟ್ ಗೆ ಹೋಗುತ್ತೇವೆ. ಇಲಾಖೆಯ ಹೋಮ್ ಪೇಜ್ ನಮಗೆ ಲಭ್ಯವಾಗುತ್ತದೆ. ಅಲ್ಲಿ ಇಲ್ಲಿಯವರೆಗೆ ರಿಜಿಸ್ಟರ್ ಆಗಿರುವ ದಾಖಲೆಗಳನ್ನು ನೋಡಬಹುದು ಮತ್ತು ಒಟ್ಟಾರೆಯಾಗಿ ಸರ್ಕಾರಕ್ಕೆ ಬಂದಿರುವ ಕಂದಾಯವನ್ನು ಸಹ ತೋರಿಸುತ್ತದೆ.

ಈ ಡ್ರೈ ರನ್ ಸಾಫ್ಟವೇರ್ ನಲ್ಲಿ ರಿಜಿಸ್ಟರ್ ಆಗುವುದು ಹೇಗೆ?
ಇಲಾಖೆಯ ಹೋಮ್ ಪೇಜ್ ನ ಬಲಭಾಗದ ಕಾರ್ನರ್ ನಲ್ಲಿ ರಿಜಿಸ್ಟರ್ ಮತ್ತು ಲಾಗಿನ್ ಎಂಬ ಎರಡು ಲಿಂಕ್ ಗಳಿವೆ ಅದರಲ್ಲಿ ಮೊದಲಿಗೆ ನಾವು ರಿಜಿಸ್ಟರ್ ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
ನಂತರ ನಾವು ಕ್ರಿಯೇಟ್ ಅಕೌಂಟ್ ಪೇಜ್ ಗೆ ಹೋಗುತ್ತೇವೆ ಅಲ್ಲಿ ನಮ್ಮ ಹೆಸರು,ಈಮೈಲ್ ಐಡಿ,ಮೊಬೈಲ್ ನಂಬರ್ ಜೊತೆಗೆ ಒಂದು ಸೆಕ್ಯುರುಟಿ ಪ್ರಶ್ನೆಯನ್ನು ಸೆಲೆಕ್ಟ್ ಮಾಡಿ ಅದಕ್ಕೆ ಉತ್ತರವನ್ನು ನೀಡಬೇಕಾಗುತ್ತದೆ. ನಂತರ ಕೊಟ್ಟಿರುವ ಕ್ಯಾಪ್ಚಾ ವನ್ನು ಟೈಪ್ ಮಾಡಿ ರಿಜಿಸ್ಟರ್ ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಖಾತೆಯ ವಿವರ ರಿಜಿಸ್ಟರ್ ಆಗುತ್ತದೆ. ಮತ್ತು ನಿಮ್ಮ ಯೂಸರ್ ನೇಮ್ ಮತ್ತು ಪಾಸ್ ವರ್ಡ್ ನಿಮ್ಮ ಮೊಬೈಲ್ ನಂಬರ್ ಮತ್ತು ಈಮೈಲ್ ಐಡಿ ಗೆ ಮೆಸೇಜ್ ರೂಪದಲ್ಲಿ ಬರುತ್ತದೆ. ಅದನ್ನು ಲಾಗಿನ್ ಆಗಲು ಉಪಯೋಗಿಸಬೇಕು.

ನಂತರ ಇಲಾಖೆಯ ಅಫಿಷಿಯಲ್ ಲಾಗಿನ್ ಪೇಜ್ ಓಪನ್ ಆಗುತ್ತದೆ. ಅದರಲ್ಲಿ ನಿಮಗೆ ಬಂದಿರುವ ಯೂಸರ್ ನೇಮ್ ಮತ್ತು ಪಾಸ್ ವರ್ಡ್ ಅನ್ನು ನಮೂದಿಸಿ ಲಾಗಿನ್ ಆಗಬೇಕು. ನಂತರ ನಿಮಗೆ ಒಟಿಪಿ ಯನ್ನು ನಮೂದಿಸಲು ಅದು ಕೇಳುತ್ತದೆ. ಇದು ಡೆಮೊ ಸಾಫ್ಟ್‌ವೇರ್ ಆಗಿರುವುದರಿಂದ 1234 ಎಂದು ಟೈಪ್ ಮಾಡಿ ಕ್ಲಿಕ್ ಮಾಡಿದರೆ ನಿಮಗೆ ಅಧಿಕೃತ ಪೇಜ್ ಓಪನ್ ಆಗುತ್ತದೆ. ಇದರಲ್ಲಿನ ಮುಖ್ಯ ಸಂಗತಿ ಏನೆಂದರೆ ಇಲ್ಲಿ ನಾವು ಭಾಷೆಯನ್ನು ಕನ್ನಡ ಅಥವಾ ಇಂಗ್ಲಿಷ್ ಆಗಿ ಬದಲಾಯಿಸಿಕೊಳ್ಳಬಹುದು, ಇದರಿಂದ ಸಾಮಾನ್ಯ ಜನರೂ ಸಹ ಯಾವುದೇ ಗೊಂದಲಗಳಿಲ್ಲದೆ ತಮಗೆಬೇಕಾದ ಸೇವೆಯನ್ನು ಪಡೆಯಬಹುದು.

ಲಾಗಿನ್ ಆದ ನಂತರ ನಮ್ಮ ಅಪ್ಲಿಕೇಶನ್ ನನ್ನು ಸಂಭಂದಪಟ್ಟ ಉಪ ನೋಂದಣಾಧಿಕಾರಿಗಳ ಕಛೇರಿಗೆ ಹೇಗೆ ಸಲ್ಲಿಸುವುದು?

ಅಧಿಕೃತ ಪೇಜ್ ಓಪನ್ ಗೆ ಬಂದ ನಂತರ ಅಲ್ಲಿ ಹೊಸ ಅರ್ಜಿಯನ್ನು ಪ್ರಾರಂಭಿಸಿ ಎಂಬ ಲಿಂಕ್ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿದರೆ,

ನೀವು ಯಾವುದಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದೀರಿ?
ಮುಂದುವರಿಸಲು ಸೇವೆಗಳಲ್ಲಿ ಒಂದನ್ನು ಆಯ್ಕೆಮಾಡಿ ಎಂಬ ಸಂದೇಶವಿರುತ್ತದೆ. ಅಲ್ಲಿರುವ ಆಯ್ಕೆಗಳೆಂದರೆ.
1.ದಸ್ತಾವೇಜು ನೋಂದಣಿ
2.ಋಣಭಾರ ರಾಹಿತ್ಯ ಪ್ರಮಾಣಪತ್ರ – (ಆನ್ಲೈನ್ ಇಸಿ)
3.ಪ್ರಮಾಣೀಕೃತ ನಕಲು – (ಆನ್ಲೈನ್ ​​ಸಿಸಿ)
4.ಮದುವೆ ನೋಂದಣಿ
5.ಸಂಸ್ಥೆಯ ನೋಂದಣಿ
6.ಅಧಿಕಾರ ಪತ್ರಗಳ ನೋಂದಣಿ
ನಂತರ ನಿಮಗೆ ಬೇಕಾದ ಸೇವೆಯನ್ನು ಆಯ್ಕೆ ಮಾಡಿ ನಂತರ ನಮ್ಮ ಅಪ್ಲಿಕೇಶನ್ ನನ್ನು ಸಂಭಂದಪಟ್ಟ ಉಪ ನೋಂದಣಾಧಿಕಾರಿಗಳ ಕಛೇರಿಗೆ ಸಲ್ಲಿಸಬೇಕಾಗುತ್ತದೆ.

Exit mobile version