Revenue Facts

Ugadi 2023:ಯುಗಾದಿ ಹಬ್ಬದಂದು ಬೇವು – ಬೆಲ್ಲದ ವಿಶೇಷತೆ ಹಾಗು ಮಹತ್ವ:

ಬೆಂಗಳೂರು ಮಾ 21;ಯುಗಾದಿ ಅಂದರೆ ಹೊಸ ವರ್ಷದ ಮೊದಲ ದಿನ ಎಂದರ್ಥ. ಇಡೀ ವರ್ಷಕ್ಕೆ ಬೇಕಾದ ಯೋಜನೆಯನ್ನು ಹಾಕಿಕೊಂಡು ಅದಕ್ಕೆ ಅನುಗುಣವಾಗಿ ನಡೆಯುವ ಶುಭಸಂಕಲ್ಪವನ್ನು ಮಾಡಿಕೊಳ್ಳುವ ದಿನವೇ ಯುಗಾದಿ.ವಸಂತ ಮಾಸದ ಪ್ರಾರಂಭದೊಂದಿಗೆ ಪ್ರಕೃತಿಯಲ್ಲಿ ಹೊಸತನವನ್ನು ಕಾಣುವ ಪರ್ವಕಾಲವಾಗಿದೆ. ಹೊಸಚಿಗುರು, ತಾಜಾ ಗಾಳಿ, ಕೋಗಿಲೆಯ ಇಂಪಾದ ಗಾನ, ಪ್ರಖರ ಸೂರ್ಯಕಿರಣ ಮೇಳೈಸಿ ಹೊಸತನದೊಂದಿಗೆ ಪ್ರಕೃತಿಯು ಕಂಗೊಳಿಸುತ್ತದೆ. ಯುಗಾದಿ ಹಬ್ಬವನ್ನು ವಸಂತ ಋತುವಿನ, ಚೈತ್ರ ಮಾಸದ, ಶುಕ್ಲಪಕ್ಷದ ದಿನದಂದು ಆಚರಿಸಲಾಗುವುದು. ಈ ದಿನದಂದು ಬ್ರಹ್ಮದೇವನು ಜಗತ್ತನ್ನು ಸೃಷ್ಠಿಸಿದನೆಂದೂ, ಕಲಿಯುಗದ ಪ್ರಾರಂಭ ಯುಗಾದಿ ಹಬ್ಬದ ದಿನದಂದು ಶುರುವಾಯಿತೆಂದು ನಂಬಲಾಗಿದೆ.

ಹೊಸ ವರ್ಷದ ಈ ಹಬ್ಬವನ್ನು ಬೇರೆ ಬೇರೆ ರಾಜ್ಯಗಳಲ್ಲಿ ಭಿನ್ನವಾಗಿ ಆಚರಿಸಲಾಗುವುದು. ಕರ್ನಾಟಕದಲ್ಲಿ ಸಾಮಾನ್ಯವಾಗಿ ಹಬ್ಬದ ದಿನ ಬೆಳಿಗ್ಗೆ ಎದ್ದ ನಂತರ ಮಂಗಳ ದ್ರವ್ಯಗಳ ದರ್ಶನ ಮಾಡಲಾಗುವುದು. ನಂತರ ಅಭ್ಯಂಜನ ಸ್ನಾನದಿ ಕರ್ಮದ ತರುವಾಯ ಪೂಜಾ ಕರ್ಮವನ್ನು ಮುಗಿಸಿ ಬೇವು ಬೆಲ್ಲವನ್ನು ಸೇವಿಸಲಾಗುವುದು. ನಂತರ ವಿಶೇಷ ಭಕ್ಷ್ಯಗಳನ್ನು ಎಲ್ಲರೊಂದಿಗೆ ಸೇವಿಸಿ ಸಂಜೆ ಪಂಚಾಂಗ ಶ್ರವಣ ಮಾಡಲಾಗುವುದು. ಮಹಾರಾಷ್ಟ್ರದಲ್ಲಿ ಬೇವಿನ ಕಷಾಯವನ್ನು ಈ ದಿನ ಸೇವಿಸಲಾಗುವುದು. ಆಂಧ್ರಪ್ರದೇಶದಲ್ಲಿ ಬೇವು, ಹುಣಸೆಹಣ್ಣು, ಬೆಲ್ಲ, ಖಾರ, ಉಪ್ಪು, ಮಾವಿನಕಾಯಿಯನ್ನು ಬೆರೆಸಿ ತಯಾರಿಸಿದ ಪದಾರ್ಥವನ್ನು ಯುಗಾದಿಯಂದು ಸೇವಿಸಲಾಗುವುದು.ಸಂಪ್ರದಾಯಗಳು ಬೇರೆ ಆದರೂ ಬೇವಿನ ಸೇವನೆಯನ್ನು ಸಾಮಾನ್ಯವಾಗಿ ಕಾಣಬಹುದು. ಸಾಂಕೇತಿಕವಾಗಿ ಬೆಲ್ಲ ಸುಖ ಅಥವಾ ಸಂತೋಷದ ಪ್ರತೀಕವಾದರೆ. ಬೇವು ಜೀವನದ ಹಾದಿಯಲ್ಲಿ ಬರುವ ಹಲವು ತೊಡಕು, ದುಃಖದ ಸಂಕೇತ. ಜೀವನದಲ್ಲಿ ಸುಖ ಹಾಗೂ ದುಃಖ ಎರಡೂ ಅವಿಭಾಜ್ಯ ಅಂಗವಾಗಿದ್ದು, ಎರಡನ್ನು ಸಮಾನವಾಗಿ ಸ್ವೀಕರಿಸಬೇಕೆಂಬುದು ಇದರ ತಾತ್ಪರ್ಯ.

ಯುಗಾದಿ ಹಬ್ಬದಂದು ಬೇವು – ಬೆಲ್ಲದ ಮಹತ್ವ:
ಕರ್ನಾಟಕದಲ್ಲಿ ಯುಗಾದಿಯನ್ನು ಬಹಳ ಸಂಭ್ರಮದಿಂದ ಆಚರಿಸಲಾಗುವ ಅರ್ಥಪೂರ್ಣ ಹಬ್ಬವಾಗಿದೆ. ಈ ದಿನ ಜನರು ಬೇವು ಮಿಶ್ರಿತ ನೀರಿನಿಂದ ಸ್ನಾನ ಮಾಡಿ ಹೊಸ ಬಟ್ಟೆಯನ್ನು ಧರಿಸಿ ದೇವರ ಪೂಜೆಯನ್ನು ಮಾಡುತ್ತಾರೆ. ನಂತರ ಬೇವು – ಬೆಲ್ಲದ ಸೇವನೆ ಅಂದರೆ ಸಿಹಿ – ಕಹಿಯ ಸೇವನೆಯೊಂದಿಗೆ ಯುಗಾದಿಯನ್ನು ಸ್ವಾಗತಿಸುತ್ತಾರೆ. ನಾವು ಯುಗಾದಿಯಂದು ಸೇವಿಸುವ ಬೇವು – ಬೆಲ್ಲವು ನಮ್ಮ ಜೀವನದ ಸುಖ-ದುಃಖವನ್ನು, ಬ್ರಹ್ಮಾಂಡದ ರಾತ್ರಿ – ಹಗಲನ್ನು, ಸೋಲು – ಗೆಲುವನ್ನು ಸೂಚಿಸುತ್ತದೆ.

ಯುಗಾದಿಯ ದಿನ ಮುಂಜಾನೆ ಬೇವು ಮಿಶ್ರಿತ ನೀರಿನಿಂದ ಸ್ನಾನ ಮಾಡಿ, ಹೊಸಬಟ್ಟೆ ಧರಿಸಿ ತಂತಮ್ಮ ದೇವರನ್ನು ಪೂಜಿಸಿ, ಬೇವು ಬೆಲ್ಲವನ್ನು ಸೇವನೆ ಮಾಡುತ್ತಾರೆ. ಬೇವು-ಬೆಲ್ಲವು ಸುಖ-ದುಃಖ, ರಾತ್ರಿ-ಹಗಲು ಇವುಗಳ ಸಂಕೇತಗಳಾಗಿವೆ. ಮಾನವರ ಬದುಕಿನಲ್ಲಿ ಸುಖ-ದುಃಖಗಳು ಅವಿಭಾಜ್ಯ ಅಂಶಗಳು. ಇವೆಲ್ಲವುಗಳೊಂದಿಗೆ ಸಮತೋಲನ ಕಾಯ್ದುಕೊಂಡೇ ಮನುಷ್ಯ ಬದುಕಬೇಕು. ಜೀವನ ಕಷ್ಟ-ಸುಖ. ನೋವು ನಲಿವುಗಳ ಸಮ್ಮಿಶ್ರಣವಾಗಿದೆ. ಇವೆರಡೂ ಒಟ್ಟಿಗೆ ಇರುವವು. ಎರಡನ್ನೂ ಸಮದೃಷ್ಟಿಯಿಂದ ಸವಿಯುವುದನ್ನು ಕಲಿಯಲೆಂದೇ ಯುಗಾದಿಯಂದು ಬೇವು-ಬೆಲ್ಲವನ್ನು ತಿನ್ನಿಸುವರು. ಯುಗಾದಿ ಹಬ್ಬವು ಪೌರಾಣಿಕ ಹಾಗೂ ಐತಿಹಾಸಿಕ ವಿಶೇಷತೆಗಳ ದಿನವಾಗಿದೆ.

ಬೇವು-ಬೆಲ್ಲದ ವಿಶೇಷತೆ ಏನು?
* ಬೇವು-ಬೆಲ್ಲ ವೈದ್ಯಕೀಯ ಗುಣಗಳನ್ನು ಹೊಂದಿದೆ.
* ಬೇವಿನ ಎಲೆಗಳನ್ನು ಸೇವಿಸುವದರಿಂದ ಸರ್ವ ಅನಿಷ್ಟಗಳೂ ನಾಶವಾಗುತ್ತದೆ.
* ಮಾನವ ವಜ್ರದ್ರೇಹಿಯಾಗುತ್ತಾನೆ.
* ಸಂಪತ್ತು ಉಂಟಾಗುತ್ತದೆ.
* ಆಯಸ್ಸು ವೃದ್ಧಿಯಾಗುತ್ತದೆ ಎಂದು ಆಯುರ್ವೇದ ಹೇಳುತ್ತದೆ.

Exit mobile version