Revenue Facts

ಏಕ ಬಳಕೆ ಪ್ಲಾಸ್ಟಿಕ್ ವಸ್ತುಗಳನ್ನು ಸಮಾರಂಭಗಳಲ್ಲಿ ಬಳಸದಿರಲು ದಕ್ಷಿಣ ವಲಯ ಆಯುಕ್ತರ ಮನವಿ

ಏಕ ಬಳಕೆ ಪ್ಲಾಸ್ಟಿಕ್ ವಸ್ತುಗಳನ್ನು ಸಮಾರಂಭಗಳಲ್ಲಿ ಬಳಸದಿರಲು ದಕ್ಷಿಣ ವಲಯ ಆಯುಕ್ತರ ಮನವಿ

ಬೆಂಗಳೂರು ಜೂನ್ 23:
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಏಕ ಬಳಕೆ ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸುವ ಸಲುವಾಗಿ ಬಿ.ಎಂ.ಎಸ್ ತಾಂತ್ರಿಕ ಮಹಾವಿದ್ಯಾಲಯ ಹಾಗೂ ಎಸ್.ಡಬ್ಲ್ಯೂಎಂ.ಆರ್‌ಟಿ ರವರ ಸಹಯೋಗದೊಂದಿಗೆ “ತ್ಯಾಜ್ಯ ರಹಿತ ಸಮಾರಂಭಗಳ” ಕುರಿತ ಜಾಗೃತಿ ಕಾರ್ಯಕ್ರಮಕ್ಕೆ ದಕ್ಷಿಣ ವಲಯ ಆಯುಕ್ತರು ಹಾಗೂ ಹಣಕಾಸು ವಿಭಾಗದ ವಿಶೇಷ ಆಯುಕ್ತರಾದ ಶ್ರೀ ಜಯರಾಮ್ ರಾಯಪುರ ರವರು ಚಾಲನೆ ನೀಡಿದರು.

ಕಳೆದ ವರ್ಷದಿಂದ ಬೆಂಗಳೂರು ನಗರದಲ್ಲಿ ಸುಮಾರು ನಾಲ್ಕು ಸಾವಿರ ಟನ್ ನಷ್ಟು ತ್ಯಾಜ್ಯ ಶೇಖರಣೆ ಯಾಗುತ್ತಿದ್ದು, ಅದರಲ್ಲಿ ಬಹುತೇಕ ಪ್ಲಾಸ್ಟಿಕ್ ತ್ಯಾಜ್ಯಗಳು ಆಗಿರುತ್ತದೆ. ಪ್ಲಾಸ್ಟಿಕ್ ತ್ಯಾಜ್ಯಗಳಿಂದ ವಾಯು ಮಾಲಿನ್ಯ ಉಂಟಾಗಲಿದ್ದು, ನಾಗರೀಕರಿಗೆ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತದೆ. ಆದ್ದರಿಂದ ನಗರದಲ್ಲಿ ದಿನನಿತ್ಯ ನಡೆಯುವ ವಿವಿಧ ಸಮಾರಂಭಗಳಲ್ಲಿ ಏಕ ಬಳಕೆ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲು ಸದರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದಕ್ಷಿಣ ವಲಯ ವ್ಯಾಪ್ತಿಯ ಕಲ್ಯಾಣಮಂಟಪ, ಪಾರ್ಟಿಹಾಲ್, ಕ್ಯಾಟರಿಂಗ್ ಉದ್ದಿಮೆಗಳ ಮಾಲೀಕರಿಗೆ ವಲಯ ಆಯುಕ್ತರು ಸೂಚಿಸಿದರು.

ಏಕಬಳಕೆ ಪ್ಲಾಸ್ಟಿಕ್‌ಗಳನ್ನು, ಕಲ್ಯಾಣ ಮಂಟಪ ಹಾಗೂ ಕ್ಯಾಟರಿಂಗ್ ಗಳಲ್ಲಿ ಉಪಯೋಗಿಸುವುದನ್ನು
ಸಂಪೂರ್ಣವಾಗಿ ನಿಷೇಧಿಸಿ ಅದರ ಬದಲಾಗಿ ಅಡಿಕೆ ಪಟ್ಟೆ, ಬಾಳೆ ಎಲೆ ಹಾಗೂ ಮರುಬಳಸಬಹುದಾದಂತಹ ಉಕ್ಕಿನ ವಸ್ತುಗಳನ್ನುಉಪಯೋಗಿಸುವಂತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರಿಗೆ ಮನವರಿಕೆ ಮಾಡಲಾಯಿತು.

 

 

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಣ ತ್ಯಾಜ್ಯ ಸಂಗ್ರಹಣಾ ಕೇಂದ್ರ,
ಬಯೋ ಗ್ಯಾಸ್ ಪ್ಲಾಂಟ್ಸ್, ಥರ್ಮಕೋಲ್ ರಿಸೈಕ್ಲಿಂಗ್ ಕೇಂದ್ರಗಳನ್ನು ತೆರೆಯಲಾಗಿದ್ದು, ಮುಂದಿನ ದಿನಗಳಲ್ಲಿ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಹೆಚ್ಚಿನ ಕೇಂದ್ರಗಳನ್ನು ತೆರೆಯಲಾಗುವುದೆಂದು ತಿಳಿಸುತ್ತಾ, ಸಭೆಗೆ ಆಗಮಿಸಿರುವ ಎಲ್ಲಾ ಪ್ರತಿನಿಧಿಗಳನ್ನು ಉದ್ದೇಶಿಸಿ, ತ್ಯಾಜ್ಯ ಉತ್ಪತ್ತಿಯಾಗುವ ಸ್ಥಳದಲ್ಲಿಯೇ ಬೇರ್ಪಡಿಸಿ, ವಿಲೇವಾರಿಗೆ ಕ್ರಮವಹಿಸಬೇಕೆಂದು ತಿಳಿಸಿದರು.

ಸದರಿ ಜಾಗೃತಿ ಕಾರ್ಯಕ್ರಮದಲ್ಲಿ ಅದಮ್ಯ ಚೇತನ ಫೌಂಡೇಷನ್ ಅಧ್ಯಕ್ಷರಾದ ಡಾ.ತೇಜಸ್ವಿನಿ ಅನಂತಕುಮಾರ್, ಸ್ತ್ರೀ ರೋಗ ತಜ್ಞ ಡಾ.ಮೀನಾಕ್ಷಿ ಭರತ್, ಜಂಟಿ ಆಯುಕ್ತರು(ದಕ್ಷಿಣ) ಡಾ. ಕೆ.ಜಗದೀಶ್ ನಾಯಕ್ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Exit mobile version