Revenue Facts

ಕೊಳಗೇರಿ ಮಂಡಳಿ 2.30 ಲಕ್ಷ ಮನೆಗಳ ಪೂರ್ಣಗೊಳಿಸಲು ತಾತ್ವಿಕ ಒಪ್ಪಿಗೆ

ಕೊಳಗೇರಿ ಮಂಡಳಿ 2.30 ಲಕ್ಷ ಮನೆಗಳ ಪೂರ್ಣಗೊಳಿಸಲು ತಾತ್ವಿಕ ಒಪ್ಪಿಗೆ

ಬೆಂಗಳೂರು :ಕೊಳಗೇರಿ ಅಭಿವೃದ್ಧಿ ಮಂಡಳಿ ಹಾಗೂ ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ನಿರ್ಮಿಸಲಾಗುತ್ತಿರುವ 2.30 ಲಕ್ಷ ಮನೆಗಳನ್ನು ಪೂರ್ಣ ಗೊಳಿಸುವ ನಿಟ್ಟಿನಲ್ಲಿ ಅಗತ್ಯ ಆರ್ಥಿಕ ನೆರವು ಒದಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮ್ಮತಿ ಸೂಚಿಸಿದ್ದಾರೆ ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.

ಮಂಗಳವಾರ ಗೃಹ ಕಚೇರಿ ಕೃಷ್ಣಾ ದಲ್ಲಿ ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಭೆ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಎ ಮಹತ್ವದ ತೀರ್ಮಾನದಿಂದ ಕಳೆದ ಹತ್ತು ವರ್ಷ ಗಳಿಂದ ನೆನೆಗುದಿಗೆ ಬಿದ್ದಿದ್ದ ವಸತಿ ಯೋಜನೆ ಒಂದು ವರ್ಷ ದೊಳಗೆ ಪೂರ್ಣ ಗೊಳಿಸಿ ಹಂಚಿಕೆ ಮಾಡಲು ಸಹಕಾರಿ ಆಗಲಿದೆ ಎಂದು ಹೇಳಿದರು.

2013 ರಿಂದ 2018 ರವರೆಗೆ ಮಂಜೂರು ಮಾಡಲಾಗಿರುವ ಮನೆಗಳ ಕಾಮಗಾರಿ ವಿವಿಧ ಹಂತಗಳಲ್ಲಿದ್ದು ಇದುವರೆಗೂ ಒಂದು ಮನೆ ಕೊಡಲು ಸಾಧ್ಯವಾಗಿಲ್ಲ. ಬಿಜೆಪಿ ಅವಧಿಯಲ್ಲಿ ಈ ಕುರಿತು ಗಮನ ಹರಿಸಿಲ್ಲ. ಜತೆಗೆ ಒಂದೇ ಒಂದು ಹೊಸ ಮನೆ ಸಹ ಕೊಟ್ಟಿಲ್ಲ. ಇದೀಗ ಫಲಾನುಭವಿಗಳ ವಂತಿಗೆ ಪಾವತಿ ದೊಡ್ಡ ಸಮಸ್ಯೆ ಆಗಿದೆ. ವಸತಿ ಯೋಜನೆ ಪೂರ್ಣ ಗೊಳಿಸಲು ಎಂಟು ಸಾವಿರ ಕೋಟಿ ರೂ. ಅಗತ್ಯ ಇರುವ ಬಗ್ಗೆ ಮುಖ್ಯಮಂತ್ರಿ ಅವರಿಗೆ ಮನವರಿಕೆ ಮಾಡಿಕೊಡಲಾಗಿದ್ದು, ಆದಷ್ಟು ಶೀಘ್ರ ಮಾರ್ಗೋಪಾಯ ಹುಡುಕಲು ಹಣಕಾಸು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ತಿಳಿಸಿದರು.

2.30 ಲಕ್ಷ ಮನೆಗಳ ಕಾಮಗಾರಿ ಪೂರ್ಣಗೊಳಿಸಲು ಹಂತ ಹಂತವಾಗಿ ಅಗತ್ಯ ನೆರವು ನೀಡಲು ಮುಖ್ಯಮಂತ್ರಿ ಅವರು ತಾತ್ವಿಕ ಒಪ್ಪಿಗೆ ನೀಡಿದಂತಾಗಿದ್ದು ವಸತಿ ಯೋಜನೆ ಗಳ ವ್ಯಾಪ್ತಿಯಲ್ಲಿ ಮೂಲ ಸೌಕರ್ಯ ಕಲ್ಪಿಸಲು ಬಾಕಿ ಇರುವ ಅನುದಾನ ತಕ್ಷಣ ಒದಗಿಸುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.ಕೊಳೆಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ 1.80 ಲಕ್ಷ ಮನೆ ಹಾಗೂ ರಾಜೀವ್ ಗಾಂಧಿ ವಸತಿ ನಿಗಮ ದಿಂದ 50 ಸಾವಿರ ಮನೆಗಳು ನಿರ್ಮಾಣ ಮಾಡಲಾಗುತ್ತಿದ್ದು ಆರ್ಥಿಕ ನೆರವು ಕಲ್ಪಿಸಿದರೆ ಮುಂದಿನ ವರ್ಷ ದೊಳಗೆ ಪೂರ್ಣ ಗೊಳಿಸಿ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು.

ಅದೇ ರೀತಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಅವರ ಒಂದು ಲಕ್ಷ ಮನೆ ಯೋಜನೆ ಪೂರ್ಣ ಗೊಳಿಸಲು 500 ಕೋಟಿ ರೂ. ಸಾಲ ದ ವ್ಯವಸ್ಥೆ ಮಾಡಲು ಮುಖ್ಯಮಂತ್ರಿ ಅವರು ಒಪ್ಪಿಗೆ ಸೂಚಿಸಿದ್ದಾರೆ ಎಂದರು.ವಸತಿ ಯೋಜನೆಗಳಿಗೆ ಜಿಎಸ್ಟಿ ವ್ಯಾಪ್ತಿಯಿಂದ ವಿನಾಯಿತಿ ನೀಡಲು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ಸಭೆಯಲ್ಲಿ ನಿರ್ಧಾರ ಮಾಡಲಾಯಿತು.

ಅದೇ ರೀತಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ದಿಂದ ಸರ್ಕಾರಿ ಕೋಟಾದಡಿ ವೈದ್ಯಕೀಯ ಸೀಟು ಪಡೆಯುವ ವಿದ್ಯಾರ್ಥಿಗಳಿಗೆ ನೀಡುವ ಸಾಲದ ಪ್ರಮಾಣ ಮೂರು ಲಕ್ಷ ರೂ. ನಿಂದ ಐದು ಲಕ್ಷ ರೂ. ಗೆ ಹೆಚ್ಚಿಸಲು ಹಾಗೂ ಸ್ವಾವಲಂಬಿ ಸಾರಥಿ ಯೋಜನೆ ಫಲಾನುಭವಿಗಳ ಸಂಖ್ಯೆ ಹೆಚ್ಚಳ ಮಾಡಲು ಮುಖ್ಯಮಂತ್ರಿ ಅವರು ಒಪ್ಪಿಗೆ ಸೂಚಿಸಿದರು ಎಂದು ವಿವರಿಸಿದರು.

ಪೌರಾಡಳಿತ ಸಚಿವ ರಹೀಮ್ ಖಾನ್ ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಗಳಾದ ನಸೀರ್ ಅಹಮದ್, ಗೋವಿಂದ ರಾಜು, ವಸತಿ ಇಲಾಖೆ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಅಲ್ಪಸಂಖ್ಯಾತ ರ ಕಲ್ಯಾಣ ಇಲಾಖೆ ಕಾರ್ಯದರ್ಶಿ ಮನೋಜ್ ಜೈನ್ ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅತೀಕ್, ಕೊಳೆಗೇರಿ ಅಭಿವೃದ್ಧಿ ಮಂಡಳಿ ಆಯುಕ್ತ ವೆಂಕಟೇಶ್, ಪ್ರಧಾನ ಅಭಿಯಂತರ ಬಾಲರಾಜು, ರಾಜೀವ್ ಗಾಂಧಿ ವಸತಿ ನಿಗಮ ದ ವ್ಯವಸ್ಥಾಪಕ ನಿರ್ದೇಶಕರಾದ ಸುಶೀಲಮ್ಮ, ಪ್ರಧಾನ ಅಭಿಯಂತರ ಸಂಜೀವ್ ರೆಡ್ಡಿ, ಕೆ ಎಂಡಿಸಿ ವ್ಯವಸ್ಥಾಪಕ ನಿರ್ದೇಶಕ ನಜೀರ್, ನಿರ್ದೇಶನಾಲಯ ನಿರ್ದೇಶಕ ಜಿಲಾನಿ ಉಪಸ್ಥಿತರಿದ್ದರು.

 

ಸ್ವಂತ ಸಂಪನ್ಮೂಲ ಕ್ರೋಢೀಕರಣಕ್ಕೆ ನೀತಿ- ಪ್ರಸ್ತಾವನೆಗೆ ಸೂಚನೆ

ಪ್ರಧಾನ ಮಂತ್ರಿ ಆವಾಸ್‌ ಯೋಜನೆ ಪ್ರಗತಿ ಕುಂಠೀತವಾಗಿರುವುದರಿಂದ ಸಂಪನ್ಮೂಲ ಕ್ರೋಢೀಕರಣ ಕುರಿತಂತೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಯಿತು. ಈ ಯೋಜನೆಯಡಿ ಫಲಾನುಭವಿ ವಂತಿಗೆ ಪ್ರಮಾಣ ಹೆಚ್ಚಾಗಿರುವುದರಿಂದ ಹಾಗೂ ಫಲಾನುಭವಿಗಳ ವಂತಿಗೆ ಪಾವತಿ ಹಿನ್ನಡೆಯಾಗಿದೆ. ಈ ಹಿನ್ನೆಲೆಯಲ್ಲಿ ಸಂಪನ್ಮೂಲ ಕ್ರೋಢೀಕರಣಕ್ಕೆ ನೀತಿ ರೂಪಿಸಲು ಪ್ರಸ್ತಾವನೆ ಸಲ್ಲಿಸುವಂತೆ ಸಭೆಯಲ್ಲಿ ಮುಖ್ಯಮಂತ್ರಿಗಳು ಸೂಚನೆ ನೀಡಿದರು.

Exit mobile version