ಬೆಂಗಳೂರು, ಮೇ. 29 : ಶಿವರಾಮ ಕಾರಂತ ಬಡಾವಣೆಗಾಗಿ ಭೂಮಿ ನೀಡಿರುವ ಮಾಲೀಕರು ಭೂ ಪರಿಹಾರವಾಗಿ ಅಭಿವೃದ್ಧಿ ಪಡಿಸಿದ ನಿವೇಶನಕ್ಕಾಗಿ ಮನವಿ ಸಲ್ಲಿಸಲು ಗಡುವು ನೀಡಲಾಗಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಈ ಹಿಂದೆ ನೀಡಿದ್ದ ಸಮಯವನ್ನು ವಿಸ್ತರಿಸಿದ್ದು, ಈಗ ಜೂನ್ 30ರವರೆಗೆ ಮನವಿ ಸಲ್ಲಿಸಲು ಕಾಲಾವಕಾಶವನ್ನು ನೀಡಲಾಗಿದೆ. ಜೂನ್ 30ರೊಳಗೆ ಭೂ ಮಾಲೀಕರು ನಿವೇಶನಕ್ಕಾಗಿ ಮನವಿಯನ್ನು ಸಲ್ಲಿಸದೇ ಹೋದಲ್ಲಿ ಐ ತೀರ್ಪಿನಲ್ಲಿ ನಿಗದಿಪಡಿಸಿರುವ ನಗದು ಪರಿಹಾರವನ್ನು ನೀಡುವುದಾಗಿ ಹೇಳಿದೆ.
ಭೂ ಪರಿಹಾರಔಾಗಿ ನಗದನ್ನು ಸಿಟಿ ಸಿವಿಲ್ ನ್ಯಾಯಾಲಯಕ್ಕೆ ನಿಯಮಾನುಸಾರ ಜಮಾ ಮಾಡುವುದಾಗಿ ಬಿಡಿಎ ತಿಳಿಸಿದೆ. ಶಿವರಾಮ ಕಾರಂತ ಬಡಾವಣೆಯನ್ನು ಸುಪ್ರೀಂಕೋರ್ಟ್ ಮೇಲ್ವಿಚಾರಣೆಯಲ್ಲಿ ರಚಿಸಲಾಗುತ್ತಿದೆ. ಭೂಮಾಲಿಕರಿಗೆ ನಗದು ಪರಿಹಾರವನ್ನು ನೀಡಬೇಕು ಇಲ್ಲವೇ, 40:60 ಅನುಪಾತದಲ್ಲಿ ಬಡಾವಣೆಯಲ್ಲಿ ಅಭಿವೃದ್ಧಿಪಡಿಸಿದ ನಿವೇಶನವನ್ನು ನೀಡಬೇಕು. ಅದು ಕೂಡ ಎಕರೆ ಒಂದಕ್ಕೆ 9583 ಚದರ ಅಡಿಗಳಂತೆ ಭೂ ಪರಿಹಾರ ಲೆಕ್ಕಚಾರವನ್ನು ಮಾಡಿ ಭೂ ಮಾಲೀಕರಿಗೆ ಪರಿಹಾರವನ್ನು ನೀಡುವಂತೆ ಆದೇಶ ನೀಡಲಾಗಿದೆ.
ಭೂ ಮಾಲಿಕರು ನಿವೇಶನ ಪಡೆಯಬೇಕೆಂದರೆ, ಅಂತಹವರು ಲಿಖಿತ ರೂಪದಲ್ಲಿ ಸಂಬಂಧಪಟ್ಟ ವಿಶೇಷ ಭೂಸ್ವಾಧೀನಾಧಿಕಾರಿಗಳಿಗೆ ಮನವಿ ಸಲ್ಲಿಸಬೇಕು. ಆಗ ಭೂ ಮಅಲೀಕರಿಗೆ ನೀಡಬೇಖಿರುವ ನಿವೇಶನದ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ ಎಂದು ಬಿಡಿಎ ತಿಳಿಸಿದೆ. ಈಗಾಗಲೇ ಬಿಡಿಎ ಕಾಳತಮ್ಮನಹಳ್ಳಿ, ಗಾಣಿಗರಹಳ್ಳಿ, ರಾಮಗೊಂಡನಹಳ್ಳಿ, ಗುಣಿ ಅಗ್ರಹಾರ, ಮೇಡಿ ಅಗ್ರಹಾರ, ವೀರಸಾಗರ, ದೊಡ್ಡಬೆಟ್ಟಹಳ್ಳಿ ಮತ್ತು ಬ್ಯಾಲಕೆರೆ ಗ್ರಾಮಗಳಲ್ಲಿ ಭೂ ಮಾಲೀಕರಿಗೆ ನಿವೇಶನಗಳ ಪ್ರಮಾಣ ಪತ್ರಗಳನ್ನು ವಿತರಣೆ ಮಾಡಿದೆ.
ಇನ್ನುಳಿದ ಭೂ ಮಾಲೀಕರು ತಮಗೆ ನಿವೇಶನ ಬೇಕಿದ್ದಲ್ಲಿ ನಾಳೆಯೊಳಗೆ ಮನವಿ ಸಲ್ಲಿಸಬೇಕಿದೆ. ಇಲ್ಲದೇ ಹೋದಲ್ಲಿ ಭೂ ಮಾಲೀಕರಿಗೆ ಬಿಡಿಎ ನಗದು ಪರಿಹಾರವನ್ನು ಸಿಟಿ ಸಿವಿಲ್ ಕೋರ್ಟ್ ನ ನಿಯಮದಂತೆ ಜಮೆ ಮಾಡಲಾಗುವುದು ಎಂದು ಬಿಡಿಎ ತನಮ್ನ ಪ್ರಕಟಣೆಯಲ್ಲಿ ತಿಳಿಸಿದೆ.