ಬೆಂಗಳೂರು;ರಾಜ್ಯ ಸರಕಾರವು ಸದ್ಯ ಶಕ್ತಿ ಯೋಜನೆಯ ಸ್ಮಾರ್ಟ್ ಕಾರ್ಡ್ ನ್ನು ನಾಲ್ಕು ನಿಗಮಗಳಿಗೆ ನೀಡುವ ಕುರಿತು ಇನ್ನೂ ಚಿಂತನೆ ನಡೆಸಿಲ್ಲ. ಈ ನಿಟ್ಟಿನಲ್ಲಿ ಗುರುತಿನ ಚೀಟಿ ತೋರಿಸುವ ಹಾಗೂ ಟಿಕೆಟ್ ನೀಡುವ ಕಿರಿಕಿರಿ ತಪ್ಪಿಸಲು ಮಹಿಳಾ ಪ್ರಯಾಣಿಕರಿಗೆ ಆಗಸ್ಟ್ ಮಧ್ಯಭಾಗ ಅಥವಾ ಅಂತ್ಯದಲ್ಲಿ ಸ್ಮಾರ್ಟ್ ಕಾರ್ಡ್ ವಿತರಣಾ ಕಾರ್ಯಕ್ಕೆ ಚಾಲನೆ ನೀಡುವ ಬಗ್ಗೆ ಚರ್ಚಿಸಲಾಗಿದೆ. ಟ್ಯಾಪ್ ಆಯಂಡ್ ಟ್ರಾವೆಲ್ ತಂತ್ರಜ್ಞಾನದ ಸ್ಮಾರ್ಟ್‌ಕಾರ್ಡ್ ನೀಡುವ ಕುರಿತು ಸಾರಿಗೆ ಇಲಾಖೆ ಚಿಂತನೆ ಮಾಡಿದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ. ಪ್ರತಿ ಸ್ಟಾರ್ಟ್ ಕಾರ್ಡ್‌ಗೆ ಕನಿಷ್ಟ 20-30 ರು ತಗಲುವ ಸಾಧ್ಯತೆಯಿದ್ದು, ಸ್ಟಾರ್ಟ್ ಕಾರ್ಡ್‌ಗಾಗಿಯೇ 20ಕೋಟಿಗೂ ಅಧಿಕ ಮೊತ್ತ ತಗುಲುವ ಸಾಧ್ಯತೆಯಿದೆ. ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳಲ್ಲಿನ 14 ಸಾವಿರಕ್ಕೂ ಹೆಚ್ಚಿನ ಸಾಮಾನ್ಯ ಸಾರಿಗೆ ಬಸ್‌ಗಳಿಗೆ ಸ್ಟಾರ್ಟ್ ಕಾರ್ಡ್ ಟ್ಯಾಪ್‌ಗೆ ಅಗತ್ಯವಾದ ಯಂತ್ರವನ್ನು ಅಳವಡಿಸಬೇಕಿದೆ. ಮಹಿಳೆಯರು ಬಸ್ ಹತ್ತುವಾಗ ಬಾಗಿಲಲ್ಲಿ ಅಳವಡಿಸುವ ಯಂತ್ರಕ್ಕೆ ಟ್ಯಾಪ್ ಮಾಡಿ ನಂತರ ಇಳಿಯುವಾಗ ಮತ್ತೊಮ್ಮೆ ಟ್ಯಾಪ್ ಮಾಡಬೇಕಿದೆ. ಆಗ ಮಹಿಳಾ ಪ್ರಯಾಣಿಕರು ಎಲ್ಲಿಂದ, ಎಲ್ಲಿಗೆ ಪ್ರಯಾಣಿಸಿದರು ಎಂಬ ನಿಖರ ಮಾಹಿತಿ ಪಡೆಯಬಹುದು ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.