Revenue Facts

ಪೆದ್ದ ಪಂಡುಗ ಆಚರಿಸುವ ತೆಲುಗು ನಾಡು ಜನತೆ : ಆಚರಣೆಯ ಬಗೆ ಹೇಗೆ..?

ಪೆದ್ದ ಪಂಡುಗ ಆಚರಿಸುವ ತೆಲುಗು ನಾಡು ಜನತೆ :  ಆಚರಣೆಯ ಬಗೆ ಹೇಗೆ..?

ಬೆಂಗಳೂರು, ಜ. 14 : ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಸಂಕ್ರಾಂತಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ತೆಲುಗು ನಾಡಿನವರಿಗೆ ಇದು ಜೋರು ಹಬ್ಬ. ನಾಲ್ಕು ದಿನಗಳ ಕಾಲ ಈ ಹಬ್ಬವನ್ನು ಆಚರಿಸುತ್ತಾರೆ. ಸಂಕ್ರಾಂತಿ ಹಬ್ಬ ತೆಲುಗರಿಗೆ ಅತ್ಯಂತ ಪ್ರಿಯವಾದ ಹಬ್ಬ. ಇದನ್ನು ಅವರು ತೆಲುಗಿನಲ್ಲಿ ಪೆದ್ದ ಪಂಡುಗ ಎಂದು ಕೂಡ ಹೇಳುತ್ತಾರೆ. ಈ ಹಬ್ಬದಲ್ಲಿ ಮೊದಲು ಆಕರ್ಷಣೀಯವಾಗಿ ಕಾಣುವುದು ಎಲ್ಲರ ಮನೆಯ ಮುಂದಿನ ತರಹೇವಾರಿ ರಂಗೋಲಿಗಳು. ಇನ್ನು ಮೊದಲನೇ ದಿನ ‘ಭೋಗಿ’, ಎರಡನೇ ದಿನ ‘ಸಂಕ್ರಾಂತಿ’, ಮೂರನೇ ದಿನ ‘ಕನುಮ’, ನಾಲ್ಕನೇ ದಿನ ‘ಮುಕ್ಕನುಮ’ ಎಂದು ಆಚರಿಸಲಾಗುತ್ತದೆ.

ಭೋಗಿ : ಭೋಗಿ ಹಬ್ಬದಂದು ಮನೆಯಲ್ಲಿ ಎಲ್ಲರೂ ಸೂರ್ಯೋದಯಕ್ಕೂ ಮುನ್ನ ಎದ್ದು ಭೋಗಿ ಮಂಟಲು ಬೆಳಗಿಸುತ್ತಾರೆ. ಹಳೆಯ ವಸ್ತುಗಳನ್ನು ಭೋಗಿ ಮಂಟಲಲ್ಲಿ ಇಟ್ಟು ಸುಡುತ್ತಾರೆ. ಮನೆ, ಹೊಲಗಳನ್ನು ಸ್ವಚ್ಛ ಗೊಳಿಸಿ ಬೇಡದ ತ್ಯಾಜ್ಯವನ್ನು ಸುಡುತ್ತಾರೆ. ಮಕ್ಕಳು ದೀಪೋತ್ಸವದ ಸುತ್ತಲೂ ನೃತ್ಯ ಮಾಡುತ್ತಾರೆ. ಮಹಿಳೆಯರು ಮನೆಯ ಮುಂದೆ ಗೋವಿನ ಸಗಣಿ ನೀರನ್ನು ಸಿಂಪಡಿಸಿ ರಂಗೋಲಿ ಮಾಡುತ್ತಾರೆ. ರಂಗೋಲಿಯಲ್ಲಿ ಹಸುವಿನ ಸಗಣಿಯನ್ನು ರಂಗೋಲಿಯಲ್ಲಿ ಇಟ್ಟು ಅರಿಶಿನ, ಕುಂಕುಮ, ಹೂವುಗಳೀಂದ ಅಲಂಕರಿಸಿ ಪೂಜೆ ಮಾಡುತ್ತಾರೆ. ಸಂಜೆ ಮನೆಯಲ್ಲಿಗೊಂಬೆಗಳಿಗೆ ಪೂಜೆ ಮಾಡಿ ಮುತ್ತೈದೆಯರಿಗೆ ವಾಯನ ದಾನ ಮಾಡುತ್ತಾರೆ.

ಮಕರ ಸಂಕ್ರಾಂತಿ : ಎರಡನೇ ದಿನ ಸಂಕ್ರಾಂತಿ ಹಬ್ಬ. ಈ ದಿನ ಎಲ್ಲರೂ ಎಣ್ಣೆ ಹಚ್ಚಿಕೊಂಡು ಅಭ್ಯಂಜನ ಸ್ನಾನ ಮಾಡುವುದು ಪದ್ಧತಿ. ಸೂರ್ಯ ನಾರಾಯಣನಿಗೆ ಪೂಜೆ ಮಾಡಿ ಪೊಂಗಲ್ ನೈವೇದ್ಯ ಅರ್ಪಿಸಿ ಆ ಪ್ರಸಾದವನ್ನು ಸ್ವೀಕರಿಸುತ್ತಾರೆ. ಮಕ್ಕಳು ಗಾಳಿಪಟಗಳನ್ನು ಹರಿಸುತ್ತಾರೆ. ಹಿರಿಯರು ಕೋಳಿ ಪಂದ್ಯಗಳನ್ನು ನೋಡಲು ಹೋಗುತ್ತಾರೆ. ವಿವಿಧ ತಳಿಗಳ ಎತ್ತುಗಳೊಂದಿಗೆ ಸ್ಪರ್ಧೆಗಳನ್ನು ನಡೆಸಲಾಗುತ್ತದೆ. ಮಹಿಳೆಯರು ತಮ್ಮ ಮನೆಯ ರುಬ್ಬೋ ಕಲ್ಲು, ಬೀಸೋ ಕಲ್ಲು, ದುಂಡು ಗಲ್ಲು, ಕುಟ್ನಿ, ಒರಲುಕಲ್ಲು, ಒಣಕೆ ಇತ್ಯಾದಿ ಅಡಿಗೆ ಮನೆ ವಸ್ತುಗಳನ್ನು ಅರಿಶಿನ ಕುಂಕುಮ ಹಚ್ಚಿ ಪೂಜೆ ಮಾಡುತ್ತಾರೆ.

ಕನುಮ : ಮೂರನೇಯ ದಿನ ಕೃಷಿ ಆಧಾರಿತವಾದ ನಮ್ಮ ದೇಶದಲ್ಲಿ ರೈತರಿಗೆ ಯಾವಾಗಲೂ ಜೊತೆಯಾಗಿರುವ ಎತ್ತುಗಳ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಅದಕ್ಕಾಗಿಯೇ ರೈತರು ತಮ್ಮ ಕೃತಜ್ಞತೆಯನ್ನು ಹೇಳಲು ಎತ್ತುಗಳನ್ನು, ಹಸುಗಳನ್ನು ಸುಂದರವಾಗಿ ಅಲಂಕರಿಸಿ, ಪೂಜೆ ಮಾಡಿ, ಬಲವರ್ಧಕ ಆಹಾರವನ್ನು ನೀಡುತ್ತಾರೆ. ಮನೆಯಲ್ಲಿರುವ ಜೀವಿಗಳಿಗೆ ಮಾತ್ರವೇ ಅಲ್ಲ. ಮನೆತುಂಬ ಧಾನ್ಯರಾಶಿಗಳು ತುಂಬಿದ ಈ ಸಂಭ್ರಮದಲ್ಲಿ, ಚಿಕ್ಕ ಚಿಕ್ಕ ಹಕ್ಕಿಗಳನ್ನೂ ಕೂಡ ಗಮನಿಸಬೇಕೆನ್ನುವ ಆಚಾರವಿದೆ. ಅದಕ್ಕಾಗಿಯೇ ಹಕ್ಕಿಗಳಿಗೋಸ್ಕರ ಮನೆಯ ಮುಂದೆ ಧಾನ್ಯದ ಗೊನೆಯನ್ನು ತೂಗುಹಾಕುತ್ತಾರೆ. ಹಾಗೆ ಈ ದಿನ ಪಿತೃ ದೇವತೆಗಳಿಗೆ ತರ್ಪಣೆ ಮಾಡುತ್ತಾರೆ.

ಮುಕ್ಕನುಮ : ಈ ದಿನ ಯಾವ ನಿರ್ದಿಷ್ಟ ವಿಧಿಗಳು ನಿರ್ವಹಿಸಬೇಕೆಂದು ಅನ್ನುವುದು ಎಲ್ಲೂ ಕಾಣುತ್ತಿಲ್ಲ. ಆದ್ದರಿಂದ ಈ ದಿನ ಜನರು ತಮ್ಮ ಗ್ರಾಮದೇವತೆಗಳನ್ನು ನೆನಸಿಕೊಂಡು ಮಾಂಸಾಹಾರವನ್ನು ತಿನ್ನುತ್ತಾರೆ. ಈ ದಿನ ಒಂದು ಹಬ್ಬದಂತೆ ಕಾಣುವ ಬದಲು ಸಂಕ್ರಾಂತಿಗೆ ವಿದಾಯ ಹೇಳುವ ದಿನ ಎಂದು ಹೇಳಬಹುದು.

ಹೀಗೆ ಆಂದ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ನಾಲ್ಕು ದಿನಗಳ ಕಾಲ ಸಂಕ್ರಾಂತಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಾರೆ. ಎಲ್ಲರ ಮನೆಯಲ್ಲೂ ಸಂಬಂಧಿಕರು, ಮಕ್ಕಳು ಸಂತಸದಿಂದ ಹಬ್ಬವನ್ನು ಮಾಡುತ್ತಾರೆ. ನಾಲ್ಕು ದಿನಗಳ ಕಾಲ ಮಹಿಳೆಯರು, ಪುರುಷರು, ಮಕ್ಕಳು ಎಲ್ಲರಿಗೂ ಸಂಭ್ರಮವೋ ಸಂಭ್ರಮ.

Exit mobile version