Revenue Facts

2,೦೦೦ ರೆವಿನ್ಯೂ ನಿವೇಶನ ಅಕ್ರಮ ನೋಂದಣಿ: ಯಲಹಂಕ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಲಂಚಕ್ಕೆ ‘ಕೋಡ್‌ ವರ್ಡ್’

Yalahanka sub Registrar office

ಬೆಂಗಳೂರು, ಫೆ. 27: ಬೆಂಗಳೂರಿನ ಕೆಲವು ಉಪ ನೋಂದಣಾಧಿಕಾರಿಗಳ ಕಚೇರಿಗಳಲ್ಲಿ ಸರ್ಕಾರದ ಆದೇಶ ಉಲ್ಲಂಘನೆ ಮಾಡಿ ಸಾವಿರಾರು ಕಂದಾಯ ನಿವೇಶನಗಳನ್ನು ನೋಂದಣಿ ಮಾಡಿರುವ ಅರೋಪ ಕೇಳಿ ಬಂದಿದೆ. ಈ ರೆವಿನ್ಯೂ ನಿವೇಶನಗಳ ನೋಂದಣಿಗೆ ‘ಕಚೇರಿ ಖರ್ಚು’ ಹೆಸರಿನಲ್ಲಿ ಮಾಮೂಲಿ ನಿಗದಿ ಮಾಡಲಾಗಿದೆ. ಅಂದಹಾಗೆ ಅಂತಹ ಉಪ ನೋಂದಣಾಧಿಕಾರಿಗಳ ಕಚೇರಿ ಪೈಕಿ ಯಲಹಂಕ ಉಪ ನೋಂದಣಾಧಿಕಾರಿ ಕಚೇರಿ ಕೂಡ ಒಂದು. ಯಲಯಂಕ ಉಪ ನೋಂದಣಾಧಿಕಾರಿಗ ಕಚೇರಿಯ ರೆವಿನ್ಯೂ ನಿವೇಶನಗಳ ನೋಂದಣಿ ಅಕ್ರಮದ ವರದಿ ಇಲ್ಲಿದೆ.

ರೆವಿನ್ಯೂ ನಿವೇಶನ ಎಂದರೇನು ?

ರೆವಿನ್ಯೂ ನಿವೇಶನ ಎಂಬುದಕ್ಕೆ ಕಂದಾಯ ನಿಯಮದಲ್ಲಿ ಅಧಿಕೃತ ವಿವರಣೆ ಇಲ್ಲ. ಕೃಷಿ ಜಮೀನನ್ನು ಭೂ ಬದಲಾವಣೆ/ ಭೂ ಪರಿವರ್ತನೆ ಮಾಡದೇ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದಿಂದ ವಸತಿ ಯೋಜನೆ ಅನುಮೋದಿತ ನಕ್ಷೆ ಪಡೆಯದೇ ಅಭಿವೃದ್ಧಿ ಪಡಿಸಿದ ನಿವೇಶನಗಳನ್ನು ರೆವಿನ್ಯೂ ನಿವೇಶನ ಎಂದು ಕರೆಯುತ್ತೇವೆ.

ಯಾವುದೇ ಜಮೀನು ಹಳದಿ ವಲಯದಲ್ಲಿದ್ದರೆ ಆ ಜಮೀನನ್ನು ಭೂ ಪರಿವರ್ತನೆ ಮಾಡಿ ವಸತಿ ಯೋಜನೆಗೆ ಬಳಸಬಹುದು. ಆದ್ರೆ ಲೇಔಟ್ ನಿರ್ಮಾಣ ಯೋಜನೆ ರೂಪಿಸಿ ಅದಕ್ಷೆ ಸಕ್ಷಮ ಪ್ರಾಧಿಕಾರಗಳಿಂದ ಅನುಮೋದನೆ ಪಡೆದು, ಯೋಜನೆ ಬದ್ಧವಾಗಿ ನಿವೇಶನಗಳನ್ನು ವಿಂಗಡಿಸಬೇಕು. ಉಳಿದಂತೆ ಕೃಷಿಗೆ ಮೀಸಲಿಟ್ಟಿರುವ, ಹಸಿರು ವಲಯದಲ್ಲಿ ಬರುವ ಜಮೀನನ್ನು ವಸತಿ ಉದ್ದೆಶಕ್ಕೆ ಬಳಸುವಂತಿಲ್ಲ. ಬಳಸಬೇಕಿದ್ದರೆ, ಕರ್ನಾಟಕ ಸರ್ಕಾರದಿಂದ ಭೂ ಬದಲಾವಣೆ ಮಾಡಿ ಆನಂತರ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಂದ ಭು ಪರಿವರ್ತನೆ ಆದೇಶ ಪಡೆಯಬೇಕು. ಆನಂತರ ಲೇಔಟ್ ನಿರ್ಮಿಸಿ ನಿವೇಶನ ಮಾರಾಟ ಮಾಡಬೇಕು.

ರೆವಿನ್ಯೂ ನಿವೇಶನ ದಂಧೆ :

ಹಣ ಮಾಡುವ ದುರುದ್ದೇಶದಿಂದ ಕೆಲವು ಬಿಲ್ಡರ್‌ ಗಳು ಭೂ ಪರಿವರ್ತನೆ ಮಾಡಿಸದೇ ವಸತಿ ಯೋಜನೆ ರೂಪಿಸಿ ನಗರಾಭಿವೃದ್ಧಿ ಪ್ರಾಧಿಕಾರಗಳಿಂದ ಅನುಮೋದನೆ ಪಡೆಯದೇ ಲೇಔಟ್ ನಿರ್ಮಿಸಿ ಮಾರಾಟ ಮಾಡಿದ್ದಾರೆ. ಯೋಜನಾ ಬದ್ಧ ವಸತಿ ಯೋಜನೆ ಅಡಿ ಉದ್ದೇಶಿತ ಯೋಜನೆಯಲ್ಲಿ ಶೇ. 55 ರಷ್ಟು ಜಾಗವನ್ನು ನಾಗರಿಕ ಸೌಲಭ್ಯಕ್ಕಾಗಿ ಮೀಸಲಿಡಬೇಕಾಗುತ್ತದೆ. ಚರಂಡಿ, ರಸ್ತೆ, ಪಾರ್ಕ್, ಸಮುದಾಯ ಭವನ, ಇನ್ನಿತರ ಸೌಲಭ್ಯ ಕಲ್ಪಿಸಬೇಕು. ಇಷ್ಟು ಪ್ರಮಾಣದ ಭೂಮಿ ಬಿಟ್ಟರೆ ಹೆಚ್ಚು ಲಾಭ ಗಳಿಸುವುದು ಕಷ್ಟ. ಹೀಗಾಗಿ ಕೇವಲ 30 ಅಡಿ ರಸ್ತೆ ಮಾಡಿ ಉಳಿದ ಜಾಗದಲ್ಲಿ ನಿವೇಶನ ಮಾಡಿ ಮಾರಾಟ ಮಾಡುತ್ತಾರೆ. ಕಡಿಮೆ ಬೆಲೆ ಎನ್ನುವ ಕಾರಣಕ್ಕೆ ಜನರೂ ಈ ರೆವಿನ್ಯೂ ನಿವೇಶನಗಳನ್ನೇ ಹೆಚ್ಚಾಗಿ ಖರೀದಿ ಮಾಡುತ್ತಾರೆ. ಈ ರೀತಿಯ ಲೇಔಟ್ ನಿರ್ಮಾಣದಿಂದ ನಾನಾ ಸಮಸ್ಯೆಗಳು ತಲೆ ದೋರುತ್ತವೆ. ಹೀಗಾಗಿ ಕರ್ನಾಟಕ ಸರ್ಕಾರ ರೆವಿನ್ಯೂ ನಿವೇಶನಗಳ ನೋಂದಣಿಯನ್ನು ರದ್ದು ಪಡಿಸಿತ್ತು.

ಸರ್ಕಾರದ ಸುತ್ತೋಲೆ ಏನು ಹೇಳುತ್ತೆ:

ರೆವಿನ್ಯೂ ನಿವೇಶನಗಳ ನೋಂದಣಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಕಂದಾಯ ಇಲಾಖೆ ನೋಂದಣಿ ನಿಯಮಗಳಿಗೆ ತಿದ್ದುಉಪಡಿ ತಂದಿತು. ನಿವೇಶನ ಖರೀದಿದಾರರು ಅನಾವಶ್ಯಕ ವ್ಯಾಜ್ಯಗಳಲ್ಲಿ ಸಿಲುಕುವುದನ್ನು ತಪ್ಪಿಸಲು ಕಂದಾಯ ಇಲಾಖೆ 2009 ರಲ್ಲಿ ಸುತ್ತೋಲೆ ಹೊರಡಿಸಿತ್ತು. ( ಕಂ.ಇ. 344, ಮುನೋಮು 2008 ಬೆಂಗಳೂರು- ದಿನಾಂಕ 06-10-2009 ) ಪ್ರಕಾರ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ನಗರಸಭೆ, ಮಹಾನಗರ ಪಾಲಿಕೆ ವ್ಯಾಪ್ತಿಯ ಸ್ವತ್ತುಗಳ ನೋಂದಣಿಗೆ ಸಂಬಂಧಿಸಿದಂತೆ ನೋಂದಣಿದಾರರು ಸಲ್ಲಿಸಬೇಕಾದ ದಾಖಲೆಗಳು ಪಾಲಿಸಬೇಕಾದ ಕರ್ತವ್ಯಗಳ ಬಗ್ಗೆ ಸ್ಪಷ್ಟ ಸುತ್ತೋಲೆ ಹೊರಡಿಸಿತ್ತು. ಇದರ ಪ್ರಕಾರ ರೆವಿನ್ಯೂ ನಿವೇಶನಗಳನ್ನು ಉಪ ನೋಂದಣಾಧಿಕಾರಿಗಳು ನೋಂದಣಿ ಮಾಡವಂತಿಲ್ಲ.

ತಂತ್ರಾಂಶ ಕ್ರೋಢೀಕರಣ:

ಇನ್ನೂ ಈ ರೆವಿನ್ಯೂ ನಿವೇಶನಗಳ ಅಕ್ರಮ ನೋಂದಣಿ ತಡೆಯಲು ಹಾಗೂ ಪತ್ತೆ ಮಾಡಲು ರಾಜ್ಯ ಸರ್ಕಾರ ಕಾವೇರಿ ತಂತ್ರಾಂಶ ಅಭಿವೃದ್ಧಿ ಪಡಿಸಿತ್ತುಉ. ಕೃಷಿ ಭೂಮಿಗೆ ಸಂಬಂಧಿಸಿದಂತೆ ಭೂಮಿ ತಂತ್ರಾಂಶ, ಗ್ರಾಮೀಣ ಮತ್ತು ಪಂಚಾಯತ್ ರಾಜ್ ಇಲಾಖೆಯ ಇ ಸ್ವೊತ್ತು ತಂತ್ರಾಂಶ, ನಗರ ಪ್ರದೇಶಗಳಿಗೆ ಸಂಬಂಧಿಸಿದಂತೆ ಇ ಸ್ವೊತ್ತು ತಂತ್ರಾಂಶ ಇಂಟಿಗ್ರೇಟ್ ಮಾಡಲಾಗಿತ್ತು. ಈ ಸ್ವೊತ್ತುಗಳ ಡಿಜಿಟಲ್ ಕೋಡ್ ಉಲ್ಲೇಖಿಸಿದ ಕೂಡಲೇ ರೆವಿನ್ಯೂ ನಿವೇಶನ ಹೌದೋ ಅಲ್ಲವೋ ಎಂಬುದನ್ನು ಪತ್ತೆ ಮಾಡಬಹುದಾಗಿದೆ. ಇಷ್ಟಾಗಿಯೂ ರೆವಿನ್ಯೂ ನಿವೇಶನಗಳ ನೋಂದಣಿಗೆ ಉಪ ನೋಂದಣಾಧಿಕಾರಿಗಳು ಕಳ್ಳ ಮಾರ್ಗ ಹಿಡಿದು ಹಣ ಮೂಲ ಮಾಡಿಕೊಂಡಿದ್ದಾರೆ.

Yalahanka sub registrar office

ರೆವಿನ್ಯೂ ನಿವೇಶನಗಳ ಅಕ್ರಮ ನೋಂದಣಿ:

ರೆವಿನ್ಯೂ ನಿವೇಶನಗಳಿಗೆ ಅದರ ಬೆಲೆಗೆ ಅನುಗುಣವಾಗಿ ನೋಂದಣಿಗೆ ಆಫೀಶು ಖರ್ಚಿನ ಹೆಸರಿನಲ್ಲಿ ಮಾಮೂಲಿ ಫಿಕ್ಸ್ ಮಾಡಿದ್ದಾರೆ. ಇಂತಿಷ್ಟು ಹಣ ಪಾವತಿ ಮಾಡಿದ ಕೂಡಲೇ ಸರ್ಕಾರದ ನಿಯಮ ಗಾಳಿಗೆ ತೂರಿ ರೆವಿನ್ಯೂ ನಿವೇಶನ ನೋಂದಣಿ ಮಾಡಿಕೊಡುತ್ತಾರೆ. ಅಂತಹ ಕಚೇರಿಯಗಳಲ್ಲಿ ಯಲಹಂಕ ಉಪ ನೋಂದಣಾಧಿಕಾರಿಗಳ ಕಚೇರಿ ಕೂಡ ಒಂದು.

ಯಲಹಂಕ ಉಪ ನೋಂದಣಾಧಿಕಾರಿಗಳ ಕಥೆ:

ಯಲಹಂಕ ಉಪ ನೋಂದಣಾಧಿಕಾರಿ ಕಚೇರಿಯಲ್ಲಿರೆವಿನ್ಯೂ ನಿವೇಶನಗಳ ನೋಂದಣಿ ಹಾಗೂ ವಸೂಲಿ ಕೋರ್ಡ್ ವರ್ಡ್ ಬಳಸಿ ನಡೆಸಲಾಗುತ್ತದೆ. ಒಂದು ರೂ. ಅಂದರೆ ವಸೂಲಿ ಭಾಷೆಯಲ್ಲಿ ಅದರ ಮೌಲ್ಯ ಒಂದು ಸಾವಿರ ರೂಪಾಯಿ! ಅಂದಹಾಗೆ ಇ ಖಾತಾ ಇಲ್ಲದ ನಿವೇಶನ ನೋಂದಣಿ ಮಾಡಿಸಲು 20 ರೂ. ಲಂಚಕ್ಕೆ (ಕಚೇರಿ ಖರ್ಚು) ಇಲ್ಲಿನ ಉಪ ನೋಂದಣಾಣಾಧಿಕಾರಿ ಜಯ ಪ್ರಕಾಶ್ ಬೇಡಿಕೆ ಇಟ್ಟಿದ್ದಾರೆ.

ಆನಂದವೇ ನಿಜವಾದ ಸಂಪತ್ತು !.

ಯಲಹಂಕ ತಹಶೀಲ್ದಾರ್ ಕಚೇರಿಯಲ್ಲಿರುವ ಯಲಹಂಕ ಉಪ ನೋಂದಣಾಧಿಕಾರಿಗಳ ಕಚೇರಿಗೆ ಎಂಟ್ರಿ ಕೊಟ್ಟ ಕೂಡಲೇ ಎದುರಾಗುವ ಬಾಗಿಲಲ್ಲಿ ಬರೆದಿರುವ ಪದವಿದು. “ಆನಂದದ ಮುಂದೆ ಯಾವ ಸಂಪತ್ತೂ ನಗಣ್ಯ ಎಂಬುದು ಈ ವಾಕ್ಯದ ಅರ್ಥ. ಇನ್ನು ಉಪ ನೋಂದಣಾಧಿಕಾರಿಗಳ ಖುರ್ಚಿ ಮೇಲೆ ಇರುವುದು ಬಸವಣ್ಣ, ಮಹಾತ್ಮ ಗಾಂಧೀಜಿ ಹಾಗೂ ಅಂಬೇಡ್ಕರ್ ಚಿತ್ರ! ಈ ವಾತಾವರಣ ನೋಡಿದ್ರೆ ಬಹುಶಃ ಜನರಿಗೆ ಲಂಚವಿಲ್ಲದೇ ಕೆಲಸ ಮಾಡಿಕೊಡುವಲ್ಲಿ ಸಂತೋಷ ಕಾಣುತ್ತಿದ್ದಾರೇನೋ ಎಂದೆನಿಸುತ್ತದೆ. ಆದ್ರೆ ಅಲ್ಲಿ ಪ್ರತಿ ಕಡತವೂ ಮಾಮೂಲಿ ಇಲ್ಲದೇ ನಡೆಯುವುದಿಲ್ಲ.

ಎದೆಯೊಳಗೆ ಲೋಕಾಯುಕ್ತ ಭೀತಿ ಇಟ್ಟುಕೊಂಡೇ ಮಾತುಕತೆ ಅರಂಭಿಸುವ ಇಲ್ಲಿನ ಉಪ ನೋಂದಣಾಧಿಕಾರಿ ಎರಡೆರಡು ಮಾತಲ್ಲಿ ವ್ಯವಹಾರ ಕುದುರಿಸಿ ಬಿಡುತ್ತಾರೆ. ಇನ್ನೂ ನಾಳೆ ಲಂಚದ ವಿಚಾರದಲ್ಲಿ ತೊಂದರೆ ಎದುರಾದರೆ ಲಂಚ ಕೇಳಿಲ್ಲ ಎಂಬುದನ್ನು ಸಮರ್ಥಿಸಿಕೊಳ್ಳಲು ಕೋಡ್‌ ವರ್ಡ್ ಬಳಿಸಿ ಜಯಪ್ರಕಾಶ್ ಮಾತುಕತೆ ನಡೆಸುತ್ತಾರೆ. ಜಯ ಪ್ರಕಾಶ್ ಯಾವ ರೀತಿ ಮಾತುಕತೆ ನಡಸಿ ಕೋಡ್‌ ವರ್ಡ್‌ ನಲ್ಲಿ ಫಿಕ್ಸ್ ಮಾಡುತ್ತಾರೆ ಎಂಬುದಕ್ಕೆ ಸಾಕ್ಷಿಯಿದೆ.

ಜಾಲ ಹೋಬಳಿ ಸಾತನೂರು ಗ್ರಾಮದ ರೆವಿನ್ಯೂ ನಿವೇಶನವನ್ನು ನೋಂದಣಿ ಮಾಡಿಕೊಡುವಂತೆ ಜಯ ಪ್ರಕಾಶ್ ಅವರಿಗೆ ನೀಡಲಾಗಿತ್ತು. ದಾಖಲೆ ನೋಡಿದ ಕೂಡಲೇ ಕಾನೂನು ಬದ್ಧವಾಗಿ ಪಾವತಿಸಬೇಕಿದ್ದ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಮತ್ತು ಸ್ಕಾನಿಂಗ್ ಶುಲ್ಕದ ವಿವರ ಕೊಟ್ಟು ದಾಖಲೆ ತೆಗೆದುಕೊಂಡು ಬರುವಂತೆ ಹೇಳಿದ್ರು.

ಜಿಪಿಎ ಗೆ ಸ್ಟಾಂಪ್ ಡ್ಯೂಟಿ ಪಾವತಿಸಿದ ಬಳಿಕ ಇದಿಷ್ಟೇ ಶುಲ್ಕವೇ ಎಂದು ಪ್ರಶ್ನಿಸಿದಾಗ ಜಯ ಪ್ರಕಾಶ್ ಅವರ ಅಸಲಿತನ ಬೆಳಕಿಗೆ ಬಂದಿತ್ತು. ನಮ್ಮ ಕಚೇರಿಗೆ 20 ರೂ. ಎಕ್ಸ್‌ಪೆನ್ಸ್ ಆಗುತ್ತದೆ ಅಂತ ಹೇಳಿದ್ರು. ಕೇಳುಗರಿಗೆ ಅದು ಕೇವಲ 20 ರೂ. ಆದರ ಮೂಲ ಅರ್ಥ 20 ಸಾವಿರ ರೂ. ಅಂದರೆ ಒಂದು ಕಂದಾಯ ನಿವೇಶನ ಕಾನೂನು ಬಾಹಿರ ನೋಂದಣಿಗೆ ಸಮ್ಮತಿ ಸೂಚಿಸಿ 20 ರೂ. ( ಸಾವಿರ ರೂ) ಕಚೇರಿ ಖರ್ಚು ಹೆಸರಿನಲ್ಲಿ ಮಾಮೂಲಿ ಕೊಡಲು ಬೇಡಿಕೆ ಇಟ್ಟರು! ಕಚೇರಿಗೆ ಇಪ್ಪತ್ತು ರೂಪಾಯಿ ಆಗುತ್ತದೆ. ತೆಗೆದುಕೊಂಡು ಬನ್ನಿ ಮಾಡಿಕೊಡ್ತೇನೆ ಎಂದು ಮಾಮೂಲಿ ವೃತ್ತಾಂತವನ್ನು ಅವರೇ ಬಹಿರಂಗಗೊಳಿಸಿದರು.

ಯಲಹಂಕ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಆಗಿರುವ ಕಂದಾಯ ನಿವೇಶನಗಳ ವಿವರ ನೀಡುವಂತೆ ಮಾಹಿತಿ ಹಕ್ಕು ಅಧಿನಿಯಮದಡಿ ಕೇಳಿದರೂ ಈವರೆಗೂ ಉತ್ತರ ಬಂದಿಲ್ಲ. ಇದೇ ಕಚೇರಿಯಲ್ಲಿ ನೋಂದಣಿಯಾಗಿರುವ ಜಂಟಿ ಅಭಿವೃದ್ಧಿ ಕರಾರು ನೋಂದಣಿ ವಿವರಗಳನ್ನು ನೀಡುವಂತೆ ಮಾಹಿತಿ ಹಕ್ಕು ಅಧಿನಿಯಮದಡಿ ಅರ್ಜಿ ಹಾಕಿ ಕಾಲಮಿತಿ ಮುಗಿದರೂ ಮಾಹಿತಿಯನ್ನು ಉಪ ನೋಂದಣಾಧಿಕಾರಿ ಜಯ ಪ್ರಕಾಶ್ ನೀಡಿಲ್ಲ!

ಈ ಲೆಕ್ಕಾಚಾರದಿಂದಲೇ ಯಲಹಂಕ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನೂರಾರು ಕಂದಾಯ ನಿವೇಶನ ನಿಯಮ ಬಾಹಿರವಾಗಿ ನೋಂದಣಿ ಮಾಡಿರುವ ಅರೋಪ ಕೇಳಿ ಬಂದಿದೆ. ಇಲ್ಲಿ ನಿಯಮ ಬಾಹಿರವಾಗಿ ನೋಂದಣಿಯಾಗಿರುವ ಕಂದಾಯ ನಿವೇಶನಗಳ ಲೆಕ್ಕವನ್ನು ನೋಂದಣಿ ಮತ್ತು ಮುದ್ರಾಂಕ ಅಯುಕ್ತರು ತರಿಸಿಕೊಂಡಿದ್ದಾರೆ. ಆದರೆ ಅದನ್ನು ಪರಿಶೀಲಿಸಿ ಕ್ರಮ ಜರುಗಿಸುವ ಕಾರ್ಯ ಮಾತ್ರ ನಡೆದಿಲ್ಲ. ಇದರ ಮರ್ಮ ಯಾರಿಗೂ ಗೊತ್ತಿಲ್ಲ!

ಬೆಂಗಳೂರು ಮಹಾನಗರ ಪಾಲಿಕೆಗೆ ಸೇರಿದ ಸ್ವತ್ತುಗಳನ್ನು ಕಾನೂನು ಬಾಹಿರವಾಗಿ ನೋಂದಣಿ ಮಾಡಿದ ಅರೋಪದಡಿ ಜಯ ಪ್ರಕಾಶ್ ವಿರುದ್ಧ ಕ್ರಿಮಿನಲ್ ಕೇಸು ದಾಖಲಾಗಿತ್ತು. ಅವರನ್ನು ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಲಾಗಿತ್ತು. ಸರ್ಕಾರದ ಅಮಾನತು ಆದೇಶಕ್ಕೆ ತಡೆಯಾಜ್ಞೆ ತರುವ ಮೂಲಕ ಮತ್ತೆ ಯಲಹಂಕ ಉಪ ನೋಂದಣಾಧಿಕಾರಿಗಳ ಕಚೇರಿಗೆ ಎಂಟ್ರಿ ಕೊಟ್ಟಿದ್ದಾರೆ. ಕಂದಾಯ ನಿವೇಶನಗಳ ನಿಯಮ ಬಾಹಿರ ನೋಂದಣಿಗೂ ಚಾಲನೆ ನೀಡಿದ್ದಾರೆ.

ಬಿಬಿಎಂಪಿ ಬ್ಯಾಟರಾಯನಪುರ ಉಪ ವಿಭಾಗಕ್ಕೆ ಒಳಪಟ್ಟಿರುವ ವಾರ್ಡ್ ನಂಬರ್ 5 ರ ಕಟ್ಟಿಗೇನಹಳ್ಳಿ ಗ್ರಾಮದಲ್ಲಿ ಅನಧಿಕೃತ ಬಡಾವಣೆ ನಿರ್ಮಿಸಲಾಗಿದೆ. ಈ ಅಕ್ರಮ ಬಡಾವಣೆಯ ನಿವೇಶನಗಳಿಗೆ ಬಿಬಿಎಂಪಿಯಲ್ಲಿ ತೆರಿಗೆ ಪಾವತಿ ಮಾಡಿರುವ ರೀತಿ ನಕಲಿ ತೆರಿಗೆ ಪಾವತಿ ರಿಶೀದಿ ನಿಡಿ ನಕಲಿ ಬಿ ಖಾತಾ ಸೃಷ್ಟಿಸಲಾಗಿದೆ. ಈ ಕುರಿತು ಬ್ಯಾಟರಾಯನಪುರ ಉಪ ವಿಭಾಗಾಧ ಸಹಾಯಕ ಕಂದಾಯ ಅಧಿಕಾರಿ ಬರೆದ ಪತ್ರದ ಮೇಲೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ವಿಚಾರಣೆ ನಡೆಸಿ ಜಯ ಪ್ರಕಾಶ್ ಅವರನ್ನು ಅಮಾನತು ಮಾಡಲಾಗಿತ್ತು. ಜಯ ಪ್ರಕಾಶ್ ಹಾಗೂ ನಜೀರ್ ಅಹಮದ್ ಅಮಾನತಿಗೆ ಒಳಗಾಗಿದ್ದರು.

Exit mobile version