ಜನರು ಸಾಮಾನ್ಯವಾಗಿ ನಿವೇಶನ, ಪ್ಲಾಟ್, ಮನೆ, ಕೃಷಿ ಭೂಮಿ ಖರೀದಿಸುವ ಸಂತಸದಲ್ಲಿ ಕಾನೂನು ಅಂಶಗಳನ್ನೇ ಮರೆತು ಬಿಡುತ್ತಾರೆ. ಒಮ್ಮೆ ಹಣ ಕೊಟ್ಟು ಖರೀದಿಸಿದ ಭೂಮಿ ತಕರಾರಿಗೆ ಒಳಪಟ್ಟರೆ ಅದರಿಂದ ಹೊರ ಬರುವುದು ಅಷ್ಟು ಸುಲಭದ ಕೆಲಸವಲ್ಲ. ಇನ್ನು ಕೋರ್ಟ್ ನಲ್ಲಿ ನಡೆಯುವ ಕಾನೂನು ಸಮರದಲ್ಲಿ ಜಯಿಸಲಿಕ್ಕೆ ವರ್ಷಗಳೇ ಬೇಕಾದೀತು. ಕೆಲವು ಸಂದರ್ಭದಲ್ಲಿ ಹೂಡಿಕೆ ಮಾಡಿದ ಹಣ ಬರುವ ಗ್ಯಾರೆಂಟಿ ಇರುವುದಿಲ್ಲ. ಹೀಗಾಗಿ ಒಂದು ನಿವೇಶನ, ಮನೆ, ಭೂಮಿ ಯಾವುದೇ ಆಸ್ತಿ ಖರೀದಿ ಮಾಡುವಾಗ ದಾಖಲೆಗಳನ್ನು ಪರಿಶೀಲಿಸುವುದು ಅತಿ ಮುಖ್ಯ. ಕೆಲವೊಮ್ಮೆ ನಕಲಿ ದಾಖಲೆಗಳು ಅಸಲಿಯಂತೆ ಮೈ ಮರೆಸುತ್ತವೆ. ಹೀಗಾಗಿ ಜನರು ಆಸ್ತಿ ಖರೀದಿ ಮಾಡುವ ವೇಳೆ ಪಾಲಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಕಂದಾಯ ಅಧಿಕಾರಿಯೊಬ್ಬರು ರೆವಿನ್ಯೂ ಫ್ಯಾಕ್ಟ್ ವೆಬ್ ತಾಣಕ್ಕೆ ಸಮಗ್ರ ವಿವರ ನೀಡಿದ್ದಾರೆ.
ಬೆಂಗಳೂರಿನಂತಹ ಮಹಾನಗರದಲ್ಲಿ ಹಣ ಮಾಡಲು ಯಾವ ಮಾರ್ಗ ಬೇಕಾದರೂ ಹಿಡಿಯುತ್ತಾರೆ. ಬದುಕಿದ ವ್ಯಕ್ತಿಗಳನ್ನೇ ಸಾಯಿಸಿ ಆಸ್ತಿ ಲಪಟಾಯಿಸಿ ಅನ್ಯರಿಗೆ ಮಾರಾಟ ಮಾಡುತ್ತಾರೆ. ನಕಲಿ ದಾಖಲೆಗಳನ್ನು ನ್ಯಾಯಾಲಯದ ಮುಂದಿಟ್ಟು ನ್ಯಾಯಾಲಯಗಳಿಂದಲೇ ತೀರ್ಪು ಪಡೆದು ಆಸ್ತಿ ಲೂಟಿ ಮಾಡುತ್ತಾರೆ. ಈ ಮೋಸ ಜಗತ್ತಿನಲ್ಲಿ ಕಷ್ಟ ಪಟ್ಟು ದುಡಿದ ಹಣದಿಂದ ಮನೆ, ನಿವೇಶನ,ಪ್ಲಾಟ್ ಖರೀದಿ ಮಾಡುವಾಗ ಭಾರೀ ಎಚ್ಚರಿಕೆ ವಹಿಸಬೇಕು.
ಕೃಷಿ ಭೂಮಿ ಖರೀದಿ:
ಕೃಷಿ ಭೂಮಿ ಖರೀದಿ ಮಾಡುವಂತಿದ್ದರೆ, ಆ ಜಮೀನಿಗೆ ಸಂಬಂಧಿಸಿದ ಆರ್‌ಟಿಸಿ, ಮುಟೇಷನ್, ಋಣಭಾರ ಪತ್ರವನ್ನು ಕಡ್ಡಾಯವಾಗಿ ಪರಿಶೀಲಿಸಬೇಕು.
ಗ್ರಾಮೀಣ ನಕ್ಷೆ ಪಟ್ಟಾ, ಅಕಾರ ಬಂಧು, ಸ್ವತ್ತು ಎಸ್‌ಸಿಎಸ್ ಟಿ ಸಮುದಾಯಕ್ಕೆ ಗ್ರಾಂಟ್ ಅಗಿದೆಯೆ ಇಲ್ಲವೆ ? ಇದು ಸರ್ಕಾರಿ ಸ್ವತ್ತೇ ? ಸ್ವಾಧೀನ ಸರಿಯಾಗಿದೆಯೇ ಎಂಬುದನ್ನು ದಾಖಲೆಗಳ ಮೂಲಕ ಖಚಿತ ಪಡಿಸಿಕೊಳ್ಳಬೇಕು. ಸದರಿ ಜಮೀನು ಸರ್ಕಾರದ ಯಾವುದಾದರೂ ಯೋಜನೆಗಾಗಿ ಸ್ವಾಧೀನಕ್ಕಾಗಿ ಒಳಪಟ್ಟಿದೆಯೇ ಎಂಬುದನ್ನು ಸಂಬಂದಪಟ್ಟ ಸಕ್ಷಮ ಪ್ರಾಧಿಕಾರಗಳಿಂದ ಖಾತ್ರಿ ಪಡಿಸಿಕೊಳ್ಳಬೇಕು.
ಆಸ್ತಿಯನ್ನು ಬರೆದುಕೊಡುವ ಪಾರ್ಟಿಯ ಪೂರ್ಣ ವಂಶಾವಳಿ, ಆಸ್ತಿಯ ಬಂದ ಮೂಲ, ಪಿತ್ರಾರ್ಜಿತ ಆಸ್ತಿಯ ಪಾಲುದಾರರು, ಇವರ ವಂಶಾವಳಿ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು. ಸಾಧ್ಯವಾದಷ್ಟು ಮೂಲ ದಾಖಲೆಗಳನ್ನು ಪಡೆದುಕೊಂಡಿರಬೇಕು.
ಒಂದು ವೇಳೆ, ಎರಡು ಅಥವಾ ಮೂರು ತಲೆಮಾರು ಇದ್ದರೆ, ತಲೆಮಾರಿನ ವಿಭಾಗವೂ ಕ್ರಮ ಬದ್ಧವಾಗಿಯೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬೇಕು.
ವಸತಿ ನಿವೇಶನ:
ವಾಸಯೋಗ್ಯ ವಸತಿ ನಿವೇಶನ, ಪ್ಲಾಟ್, ವಾಣಿಜ್ಯ ಸಂಕೀರ್ಣ ಅಥವಾ ಇನ್ನಿತರೆ ವಾಣಿಜ್ಯ ಬಳಕೆ ಭೂಮಿಗೆ ಸಂಬಂಧಿಸಿದಂತೆ ಸ್ವತ್ತು ಖರೀದಿ ವೇಳೆ ಮೂಲತಃ ಕೃಷಿ ಭೂಮಿಗೆ ಸಂಬಂಧಿಸಿದ ನಿಯಮಗಳೇ ಅನ್ವಯ ಆಗುತ್ತವೆ. ಈ ಸ್ವತ್ತುಗಳು ಸಹ ಮುಲತಃ ಕೃಷಿ ಭೂಮಿಯಿಂದಲೇ ಬಂದಿರುವುದರಿಂದ, ಕೃಷಿ ಭೂಮಿಗೆ ನೋಡುವ ಅಂಶಗಳ ಜತೆಗೆ ಸಂಬಂಧಪಟ್ಟ ಪ್ರಾಧಿಕಾರಗಳಿಂದ ಭೂ ಪರಿವರ್ತನೆ, ಲೇಔಟ್ ಪ್ಲಾನ್, ಇತ್ತೀಚಿನ ಖಾತೆ, ಕಂದಾಯ ಕಟ್ಟಿರುವ ಬಗ್ಗೆ ಮತ್ತು ಅಸ್ತಿಯ ಮಾಲಿಕತ್ವ ವಂಶಾವಳಿಯ ಬಗ್ಗೆ ಎಲ್ಲಾ ದಾಖಲೆಗಳ ಮೂಲ ಪ್ರತಿ ನೋಡಿ ಸಂಬಂಧಪಟ್ಟ ಕಚೇರಿಯಿಂದ ಮುಲ ಪತ್ರಗಳನ್ನು ದೃಢೀಕರಿಸಿ ತೆಗೆದುಕೊಳ್ಳುವುದು.
ಇವಿಷ್ಟು ಅಂಶಗಳನ್ನು ಪರಿಶೀಲಿಸಿದ ಬಳಿಕವೇ ಆಸ್ತಿ ಖರೀದಿಯ ವಹಿವಾಟು ನಡೆಸಬೇಕು.ಯಾವುದೇ ದಾಖಲೆಗಳ ಪೂರ್ವ ಪರ ಪರಿಶೀಲಿಸದೇ ಆಸ್ತಿ ಖರೀದಿ ಮಾಡಬಾರದು. ದಾಖಲೆಗಳನ್ನು ಖಾತ್ರಿ ಪಡಿಸಿಕೊಳ್ಳದೇ ಯಾವ ಕಾರಣಕ್ಕು ಹಣಕಾಸಿನ ವಹಿವಾಟು ನಡೆಸಬಾರದು. ಇಲ್ಲವೇ ದಾಖಲೆಗಳನ್ನು ಪಡೆದು, ಪರಿಚಿತ ಕಂದಾಯ ಅಧಿಕಾರಿಗಳು ಇಲ್ಲವೇ ವಕೀಲರ ಬಳಿ ಅಭಿಪ್ರಾಯ ಪಡೆದು ಆಸ್ತಿಗಳನ್ನು ಖರೀದಿ ಮಾಡುವುದು ಸೂಕ್ತ.