Revenue Facts

ನಿಮ್ಮದು ಬಾಡಿಗೆ ಮನೆಯಾಗಿದ್ದರೆ ವಾಸ್ತು ಬಗ್ಗೆ ಇರಲಿ ಕೊಂಚ ಗಮನ

ನಿಮ್ಮದು ಬಾಡಿಗೆ ಮನೆಯಾಗಿದ್ದರೆ ವಾಸ್ತು ಬಗ್ಗೆ ಇರಲಿ ಕೊಂಚ ಗಮನ

ಬೆಂಗಳೂರು, ಜ. 03 : ಎಲ್ಲರೂ ಸ್ವಂತ ಮನೆಯಲ್ಲಿ ವಾಸ ಮಾಡಲು ಸಾಧ್ಯವಿಲ್ಲ. ಬಾಡಿಗೆ ಮನೆಯಲ್ಲಿ ವಾಸ ಮಾಡುವವರ ಸಂಖ್ಯೆಯೇ ಹೆಚ್ಚು. ಸ್ವಂತ ಮನೆಯಾದರೆ ವಾಸ್ತು ಪ್ರಕಾರ ಕಟ್ಟಿ, ಮನೆಯಲ್ಲಿ ಯಾವ ವಸ್ತು ಎಲ್ಲಿ ಇದ್ದರೆ ಒಳ್ಳೆಯದು ಎಂಬುದನ್ನು ನಿರ್ಧರಿಸುವುದು ಸುಲಭ. ಅದೇ ಬಾಡಿಗೆ ಮನೆಯಾದರೆ ಕಷ್ಟ. ಬಾಡಿಗೆ ಕೊಡಬೇಕು ಎಂದೇ ಮನೆ ಕಟ್ಟುವ ಕೆಲವರು ವಾಸ್ತು ನೋಡುವುದೇ ಇಲ್ಲ. ಇನ್ನು ಆ ಮನೆಯ ಅಕ್ಕ-ಪಕ್ಕ ಏನೇನಿದೆ ಎಂದು ಕೂಡ ಯೋಚಿಸುವುದಿಲ್ಲ. ಅದೇ ಬಾಡಿಗೆ ಮನೆಯಲ್ಲಿ ವಾಸಿಸುವವರು ಪದೇ ಪದೇ ಮನೆಯನ್ನು ಬದಲಾಯಿಸುತ್ತಿರಬೇಕು. ಪ್ರತೀ ಸಲ ಮನೆಯನ್ನು ಖಾಲಿ ಮಾಡಿದಾಗಲೂ ವಾಸ್ತು ನೋಡಿ ಹೋಗುವುದು ಕಷ್ಟವೇ.

ಆದರೆ ಬಾಡಿಗೆ ಮನೆಯಲ್ಲಿ ವಾಸ್ತು ನೋಡುವುದು ಹೇಗೆ..? ಯಾವ ವಸ್ತುವನ್ನು ಎಲ್ಲಿಟ್ಟರೆ ಒಳ್ಳೆಯದು..? ಬಾಡಿಗೆ ಮನೆಗೆ ಹೋಗುವ ಮುನ್ನ ಮಾಡಬೇಕಿರುವ ಮೊದಲ ಕೆಲಸವೇನು..? ಎಂದು ತಿಳಿದುಕೊಳ್ಳಿ. ಬಾಡಿಗೆ ಮನೆಯಲ್ಲಿ ವಾಸಿಸುವವರಿಗೆ ಕೆಲವೊಂದು ವಾಸ್ತು ಟಿಪ್ಸ್ ಗಳನ್ನು ಇಲ್ಲಿ ನೀಡಲಾಗಿದೆ. ಇದು ನಿಮಗೆ ಬಹಳ ಉಪಯುಕ್ತವಾಗಿರುತ್ತದೆ.

ನೀವು ಬಾಡಿಗೆ ಮನೆಗೆ ಹೋಗುವಾಗ ಅಲ್ಲಿ ಪೂಜಾ ಕೊಠಡಿ ಈಶಾನ್ಯ ದಿಕ್ಕಿನಲ್ಲಿದೆಯಾ ಎಂದು ಗಮನಿಸಿ. ಭಾರೀ ವಸ್ತುಗಳು ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ಇಡಿ. ಡ್ರೆಸ್ಸಿಂಗ್ ಟೇಬಲ್ ಅನ್ನು ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಇಟ್ಟರೆ ಒಳ್ಳೆಯದು. ಇನ್ನು ಪ್ರಮುಖವಾಗಿ ಮಲಗುವ ಕೋಣೆಯು ಪಶ್ಚಿಮ ಅಥವಾ ದಕ್ಷಿಣ ದಿಕ್ಕಿನಲ್ಲಿ ಇರಬೇಕು. ಅಡುಗೆ ಮನೆ ಯಾವಾಗಲೂ ಆಗ್ನೇಯ ದಿಕ್ಕಿನಲ್ಲಿದ್ದರೆ ಯಾವುದೇ ತೊಂದರೆಗಳು ಬರುವುದಿಲ್ಲ. ಆಭರಣ, ಎಟಿಎಂ ಕಾರ್ಡ್, ಪಾಸ್ಪೋರ್ಟ್ ಗಳನ್ನು ನೈಋತ್ಯ ದಿಕ್ಕಿನಲ್ಲಿ ಇಟ್ಟರೆ ಸುರಕ್ಷಿತವಾಗಿಯೂ ಇರುತ್ತದೆ, ವೃದ್ಧಿಯೂ ಹೊಂದುತ್ತದೆ.

ಇನ್ನು ನಿಮ್ಮ ಮನೆಯನ್ನು ಧನಾತ್ಮಕವಾಗಿ ಆಕರ್ಷಿಸಲು ಕೆಲ ವಾಸ್ತು ಟಿಪ್ಸ್ ಗಳನ್ನು ಫಾಲೋ ಮಾಡಿ. ಸೂರ್ಯನ ಬೆಳಕು ಮತ್ತು ಗಾಳಿ ಮನೆ ಒಳಗೆ ಪ್ರವೇಶಿಸುವಂತೆ ಇರಲಿ. ಹಗಲಿನಲ್ಲಿ ಕಿಟಕಿಗಳನ್ನು ತೆರೆದಿಡಿ. ಉಪ್ಪು ನೀರಿನಿಂದ ನೆಲವನ್ನು ಒರೆಸುವುದು ಒಳ್ಳೆಯದು. ಬಾಲ್ಕನಿಯಲ್ಲಿ ಗಿಡಗಳಿದ್ದರೆ, ಚೆನ್ನಾಗಿ ನೋಡಿಕೊಳ್ಳಿ ಬಾಡಿದರೆ ಅದು ಮನೆಗೆ ಒಳ್ಳೆಯದಲ್ಲ. ಅಸ್ತವ್ಯಸ್ತವಾಗಿ ಮನೆಯನ್ನು ಇಟ್ಟುಕೊಳ್ಳಬೇಡಿ. ಮನೆಯ ಮೂಲೆಗಳನ್ನು ಸ್ವಚ್ಛವಾಗಿಡಿ. ಊಟದ ಟೇಬಲ್‌ ನಲ್ಲಿ ಹಣ್ಣುಗಳು ಒಣಗದಂತೆಯೂ, ಕೊಳೆಯದಂತೆಯೂ ನೋಡಿಕೊಳ್ಳಿ. ಮನೆಯಲ್ಲಿ ಸಕರಾತ್ಮಕ ವಾತಾವರಣ ಸೃಷ್ಟಿಯಾಗುತ್ತದೆ.

ಇನ್ನು ನೀವು ಬಾಡಿಗೆ ಮನೆಗೆ ಹೋಗುವಾಗ ಅಲ್ಲಿ ವಿದ್ಯುತ್ ಕಂಬ ಮನೆಯ ಎದುರಿಗೆ ಇಲ್ಲದಿದ್ದರೆ ಒಳ್ಳೆಯದು. ಇದರ ಬಗ್ಗೆ ಗಮನಕೊಡಿ. ಈ ಹಿಂದೆ ನೀವು ಹೋಗುವ ಮನೆಯ ಜಾಗದಲ್ಲಿ ಸ್ಮಶಾನವಿತ್ತೇ ಎಂದು ಪರಿಶೀಲಿಸಿ. ಇಲ್ಲವೇ ಅಕ್ಕ-ಪಕ್ಕದಲ್ಲೂ ಸ್ಮಶಾನವಿದ್ದರೆ ಅಲ್ಲಿಗೆ ಹೋಗುವುದು ಒಳ್ಳೆಯದಲ್ಲ. ನೀವು ಹೋಗುವ ಮನೆ ಯಾವ ದಿಕ್ಕಿನಲ್ಲಿದೆ ಎಮದು ತಿಳಿಯಿರಿ. ಮನೆಯ ಮುಖ್ಯ ಬಾಗಿಲು ಪೂರ್ವ ಇಲ್ಲವೇ ಉತ್ತರ ದಿಕ್ಕಿನಲ್ಲಿದ್ದರೆ ಒಳ್ಳೆಯದು. ಇನ್ನು ಮನೆಯಲ್ಲಿನ ವಸ್ತುಗಳನ್ನು ಆಗಾಗ ಬಳಸುತ್ತಿರಿ. ಬೇಡದ ವಸ್ತುಗಳನ್ನು ಮನೆಯಲ್ಲಿ ಸುಮ್ಮನೆ ಇಟ್ಟುಕೊಳ್ಳದಿರಿ. ಇದರಿಂದ ಮನೆಯಲ್ಲಿ ನಕರಾತ್ಮಕತೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ.

Exit mobile version