Revenue Facts

ಕೆ-ರೇರಾಕ್ಕೆ ರಿಕವರಿಯದ್ದೇ ಚಿಂತೆ, 250 ಕೋಟಿ ರೂ.ಗೂ ಅಧಿಕ ದಂಡ ವಸೂಲಿ ಬಾಕಿ

ಬೆಂಗಳೂರು;ಕರ್ನಾಟಕ ರಿಯಲ್‌ ಎಸ್ಟೇಟ್‌ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯಿದೆಯ ನಿಯಮಗಳನ್ನು ಉಲ್ಲಂಘಿಸಿದ ಬಿಲ್ಡರ್‌ಗಳಿಗೆ ವಿಧಿಸಿರುವ ದಂಡದ ಮೊತ್ತದಲ್ಲಿ ಸುಮಾರು 250 ಕೋಟಿ ರೂ.ಗೂ ಅಧಿಕ ಹಣ ವಸೂಲಿಗೆ ಬಾಕಿ ಇದೆ. ಕರ್ನಾಟಕ ರಿಯಲ್‌ ಎಸ್ಟೇಟ್‌ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯಿದೆಯ ನಿಯಮಗಳನ್ನು ಉಲ್ಲಂಘಿಸಿದ ಬಿಲ್ಡರ್‌ಗಳು ಮತ್ತು ಪ್ರವರ್ತಕರಿಗೆ ವಿಧಿಸಿರುವ ದಂಡದ ಮೊತ್ತದಲ್ಲಿ ಸುಮಾರು 250 ಕೋಟಿ ರೂಪಾಯಿಗೂ ಅಧಿಕ ಹಣ ಬಾಕಿ ಇದ್ದು, ಮೊತ್ತ ವಸೂಲು ಮಾಡುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಇದು, ರಾಜ್ಯದ ರೇರಾ ಮಾತ್ರವಲ್ಲ, ದೇಶದ ಎಲ್ಲ ರಾಜ್ಯಗಳ ರೇರಾ ಪ್ರಾಧಿಕಾರಗಳು ಎದುರಿಸುತ್ತಿರುವ ದೊಡ್ಡ ಸಮಸ್ಯೆಯಾಗಿದೆ. ದಿನೇ ದಿನೆ ಈ ವಿಚಾರ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಇತ್ತೀಚೆಗೆ ಹೊಸದಿಲ್ಲಿಯಲ್ಲಿ ನಡೆದ ರೇರಾ ಜಾರಿಯ ನಿಗಾ ವಹಿಸುತ್ತಿರುವ ಕೇಂದ್ರೀಯ ಸಲಹಾ ಸಮಿತಿ (ಸಿಎಸಿ) ಸಭೆಯಲ್ಲಿ ಈ ಬಗ್ಗೆ ಎಲ್ಲ ರಾಜ್ಯಗಳ ಪ್ರತಿನಿಧಿಗಳು ಗಂಭೀರ ಚರ್ಚೆ ನಡೆಸಿ, ರಿಕವರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮಾರ್ಗೋಪಾಯಗಳನ್ನು ಹುಡುಕಲು ಮುಂದಾಗಿದ್ದಾರೆ.

ಅಷ್ಟೇ ಅಲ್ಲ, ಈ ಬಾಕಿ ವಸೂಲಿಯ ವಿಚಾರದ ತೀವ್ರತೆಯನ್ನು ಅರಿತು ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಇಲಾಖೆಯು ಎಲ್ಲ ರಾಜ್ಯ ಸರಕಾರಗಳಿಗೆ ಖಡಕ್‌ ಸೂಚನೆ ನೀಡಿದೆ. ಬಿಲ್ಡರ್‌ ಮತ್ತು ಪ್ರೊಮೋಟರ್‌ಗಳಿಂದ ಬರಬೇಕಾಗಿರುವ ಕೋಟ್ಯಂತರ ರೂಪಾಯಿ ಬಾಕಿ ವಸೂಲಿಗೆ ಆಯಾ ರಾಜ್ಯ ಸರಕಾರಗಳು ಕಾರ್ಯತಂತ್ರವನ್ನು ರೂಪಿಸಬೇಕು ಮತ್ತು ಪ್ರಾಧಿಕಾರದ ಆದೇಶಗಳ ಹೊರತಾಗಿಯೂ ಏಕೆ ರಿಕವರಿ ಆಗುತ್ತಿಲ್ಲವೆಂಬ ಬಗ್ಗೆ ಅಧ್ಯಯನ ನಡೆಸುವಂತೆ ಸಲಹೆ ನೀಡಿದೆ.

ಹಾಗಾಗಿ ಸರಕಾರಗಳು, ವಿಶೇಷವಾಗಿ ಕಂದಾಯ ಇಲಾಖೆಗೆ ಇದು ತನ್ನ ಕೆಲಸವಲ್ಲ ಎಂದು ತಮ್ಮ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲಾಗದು. ರೇರಾ ಪ್ರಾಧಿಕಾರ ಹೊರಡಿಸಿರುವ ರಿಕವರಿ ಆದೇಶಗಳನ್ನು ಸ್ಥಳೀಯ ತಹಶೀಲ್ದಾರ್‌ಗಳ ಮೂಲಕ ಜಾರಿಗೊಳಿಸಿ, ಬಾಕಿ ಮೊತ್ತ ವಸೂಲು ಮಾಡಿ ಅದನ್ನು ಸಂತ್ರಸ್ತ ಗೃಹ ಖರೀದಿದಾರರಿಗೆ ನೀಡಲೇಬೇಕಾಗಿದೆ.

ಶೇ. 10ರಷ್ಟು ಮಾತ್ರ ವಸೂಲು

ಗೃಹ ಖರೀದಿದಾರರ ಹಿತ ಕಾಯುವ ಉದ್ದೇಶದಿಂದ ಜಾರಿಗೊಳಿಸಿರುವ ರೇರಾ ಕಾಯಿದೆ ಅನ್ವಯ, ನಿಯಮಗಳನ್ನು ಪಾಲಿಸದ ಬಿಲ್ಡರ್‌ಗಳು ಮತ್ತು ಪ್ರವರ್ತಕರಿಗೆ ಪ್ರಾಧಿಕಾರ ದಂಡ ವಿಧಿಸುತ್ತಿದೆ. ಆನಂತರ ಆ ದಂಡವನ್ನು ವಸೂಲು ಮಾಡಲು ರಿಕವರಿ ಆದೇಶಗಳನ್ನು ಹೊರಡಿಸಲಾಗುತ್ತದೆ.

ಕರ್ನಾಟಕದ ರೇರಾ ವಿಷಯದಲ್ಲಿ ಹೇಳುವುದಾದರೆ 275 ಕೋಟಿ ರೂಪಾಯಿಗೂ ಅಧಿಕ ದಂಡ ವಸೂಲು ಮಾಡಬೇಕಾಗಿತ್ತು. ಆದರೆ ವಸೂಲು ಮಾಡಿರುವುದು ಕೇವಲ 25 ಕೋಟಿ ರೂ. ಮಾತ್ರ. ಇದರಂತೆ ವಸೂಲಿ ಪ್ರಮಾಣ ಶೇ. 10ಕ್ಕಿಂತಲೂ ಕಡಿಮೆ ಇದೆ. ಬಾಕಿ ಹಣವನ್ನು ವಸೂಲು ಮಾಡಲು ಪ್ರಾಧಿಕಾರಗಳು ಹಾಗೂ ಕಂದಾಯ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ.

ಅಲ್ಲದೆ, ಇತ್ತೀಚೆಗೆ ಕೇಂದ್ರ ವಸತಿ ಇಲಾಖೆಯ ಕಾರ್ಯದರ್ಶಿ ನೇತೃತ್ವದ ಉಪ ಸಮಿತಿ ಸಭೆಯಲ್ಲಿ ರೇರಾ ಆದೇಶಗಳು ಜಾರಿಯಾಗದಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಅಲ್ಲದೆ, 5-6 ರಾಜ್ಯಗಳಲ್ಲಿ ಅಧ್ಯಯನ ನಡೆಸಿ, ಬಿಲ್ಡರ್‌ಗಳಿಗೆ ಪಾಠ ಕಲಿಸಲು ಕಾನೂನು ತಿದ್ದುಪಡಿ ಮಾಡಬೇಕೆ ಅಥವಾ ರಾಜ್ಯ ಸರಕಾರಗಳಿಗೆ ಅಗತ್ಯ ಕ್ರಮ ಕೈಗೊಳ್ಳಲು ಶಿಫಾರಸು ಮಾಡಬೇಕೆ ಎಂಬ ಬಗ್ಗೆ ತೀರ್ಮಾನಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಒಟ್ಟಾರೆ ರೇರಾ ಆದೇಶಗಳಿಗೆ ಬಿಲ್ಡರ್‌ಗಳು ಕ್ಯಾರೇ ಎನ್ನದಿರುವ ಸಂದರ್ಭದಲ್ಲಿ ಕೇಂದ್ರ ಸರಕಾರ ಖಡಕ್‌ ನಿರ್ದೇಶನ ಮತ್ತು ಅಧ್ಯಯನಕ್ಕೆ ಮುಂದಾಗಿರುವುದು ಗೃಹ ಖರೀದಿದಾರರಿಗೆ ‘ನ್ಯಾಯ’ದ ಭರವಸೆ ಮೂಡಿಸಿದೆ ಎನ್ನುತ್ತಾರೆ ಗೃಹ ಖರೀದಿದಾರರೊಬ್ಬರು.

“ರಿಕವರಿ ಮತ್ತು ಆದೇಶಗಳ ಜಾರಿ (ಎಕ್ಸಿಕ್ಯೂಷನ್‌ ಆಫ್‌ ಆರ್ಡರ್ಸ್) ಬಗ್ಗೆ ರೇರಾ ಪ್ರಾಧಿಕಾರ, ಜಿಲ್ಲಾಧಿಕಾರಿ ಮತ್ತು ಕಂದಾಯ ಇಲಾಖೆ ಪರಸ್ಪರರ ಮೇಲೆ ಜವಾಬ್ದಾರಿಯನ್ನು ವರ್ಗಾಯಿಸುತ್ತಿದ್ದಾರೆ. ಕಾಲಮಿತಿಯಲ್ಲಿ ರಿಕವರಿ ಆದೇಶಗಳ ಜಾರಿಯ ಕುರಿತು ನಿಗಾವಹಿಸಲು ಸಮಿತಿ ರಚನೆ ಅಗತ್ಯವಿದೆ,” ಎಂದು ಫೋರಂ ಫಾರ್‌ ಪೀಪಲ್ಸ್‌ ಕಲೆಕ್ಟಿವ್‌ ಎಫರ್ಟ್ಸ್ ಪ್ರಧಾನ ಕಾರ್ಯದರ್ಶಿ ಎಂ.ಎಸ್‌.ಶಂಕರ್‌ ಹೇಳಿದ್ದಾರೆ.

Exit mobile version