Revenue Facts

ಗೃಹ ಸಾಲ ಬೆಲೆ ಏರಿಕೆಯಿಂದ ವಸತಿ ಯೋಜನೆ ಬೇಡಿಕೆ ಮೇಲೆ ಪರಿಣಾಮ

ವಸತಿ ಬೇಡಿಕೆ ಹಾಗೂ ಖರೀದಿ ಬಯಕೆಯ ಮೇಲೆ ಇತ್ತೀಚಿನ ರೆಪೋ ದರದ ಪರಿಷ್ಕರಣೆಗಳು ವ್ಯತಿರಿಕ್ತ ಪರಿಣಾಮ ಬೀರುತ್ತಿವೆ. ಇದರ ಪರಿಣಾಮಗಳ ಬಗ್ಗೆ ವಿಮರ್ಶಿಸಲು ಇದು ಆರಂಭಿಕ ಹಂತವಾದರೂ ರಿಯಲ್‌ ಎಸ್ಟೇಟ್‌ ಸೆಂಟಿಮೆಂಟ್‌ ಇಂಡೆಕ್ಸ್‌ ಬಗ್ಗೆ ಖರೀದಿದಾರರಿಗೆ ತಿಳಿಯುವುದು ಅವಶ್ಯಕವಾಗಿದೆ.

ನೈಟ್‌ ಫ್ರಾಂಕ್‌ ಇಂಡಿಯಾ ಹಾಗೂ ದ ನ್ಯಾಷನಲ್‌ ರಿಯಲ್‌ ಎಸ್ಟೇಟ್‌ ಡೆವಲಪ್‌ಮೆಂಟ್‌ ಕೌನ್ಸಿಲ್‌ ಜಂಟಿಯಾಗಿ ರಿಯಲ್‌ ಎಸ್ಟೇಟ್‌ ಸೆಂಟಿಮೆಂಟ್‌ ಇಂಡೆಕ್ಸ್‌ ಕುರಿತು ವರದಿ ತಯಾರಿಸಿದ್ದು, 2022ರ ಏಪ್ರಿಲ್‌– ಜೂನ್‌ ತ್ರೈಮಾಸಿಕದಲ್ಲಿ ರಿಯಲ್‌ ಎಸ್ಟೇಟ್‌ ಸೆಂಟಿಮೆಂಟ್‌ ಇಂಡೆಕ್ಸ್‌ 68ರಿಂದ 62 ಸ್ಕೋರ್‌ಗೆ ಜಿಗಿದಿದೆ ಎಂದು ತಿಳಿಸಿದೆ. ಫ್ಯೂಚರ್‌ ಔಟ್‌ಲುಕ್‌ ಇಂಡೆಕ್ಸ್‌ ಜನವರಿ – ಮಾರ್ಚ್‌ ತಿಂಗಳಲ್ಲಿ 75ರಷ್ಟಿದ್ದರೂ ನಂತರ 62ಕ್ಕೆ ಇಳಿಕೆ ಕಂಡಿತ್ತು. ರಿಯಾಲ್ಟಿ ಡೆವಲಪರ್‌ಗಳು ಉದ್ಯಮ ಮುಂಚಿನಂತೆ ಚೇತರಿಕೆ ಕಾಣುತ್ತದೆ ಎಂದು ವಿಶ್ವಾಸ ಹೊಂದಿದ್ದರೂ, ವರ್ತಮಾನದಲ್ಲಿ ಕೊಂಚ ಕ್ಷೀಣಿಸಿರುವುದು ಕಂಡುಬರುತ್ತದೆ.

ರಿಯಲ್‌ ಎಸ್ಟೇಟ್‌ ಸೆಂಟಿಮೆಂಟ್‌ ಇಂಡೆಕ್ಸ್‌ ಎಂದರೇನು?
ಪ್ರಸ್ತುತ ಮಾರುಕಟ್ಟೆಯ ಸ್ಥಿತಿಗತಿ, ಗ್ರಾಹಕರ ನಿರೀಕ್ಷೆಗಳು ಹಾಗೂ ಒಟ್ಟಾರೆ ರಿಯಲ್‌ ಎಸ್ಟೇಟ್‌ ಉದ್ಯಮ ಕುರಿತಾದ ಬೆಳವಣಿಗೆಗಳನ್ನು ಅರಿಯಲು ವಿವಿಧ ಸ್ಟಾಕ್‌ಹೋಲ್ಡರ್‌ಗಳು ಸೇರಿಕೊಂಡು ಮೂರು ತಿಂಗಳಿಗೊಮ್ಮೆ ನಡೆಸುವ ಸಮೀಕ್ಷೆಯಿದು. ಇದು ಪ್ರಸ್ತುತ ತ್ರೈಮಾಸಿಕ ಹಾಗೂ ಮುಂದಿನ ಆರು ತಿಂಗಳ ಕಾಲದ ಮಾರುಕಟ್ಟೆ ಸ್ಥಿತಿಯನ್ನು ಒಳಗೊಂಡಿರುತ್ತದೆ. ಇದಕ್ಕೆ ಬರುವ ಪ್ರತಿಕ್ರಿಯೆಯು ಉದ್ಯಮದ ಸ್ಥಿತಿಯನ್ನು ಅರಿಯಲು ಸಹಾಯ ಮಾಡುತ್ತದೆ. ಸ್ಕೋರ್‌ 50ಕ್ಕಿಂತ ಮೇಲಿದ್ದರೆ, ಧನಾತ್ಮಕವಾಗಿ ಪರಿಗಣಿಸಲಾಗುತ್ತದೆ. ಅದಕ್ಕಿಂತ ಕಡಿಮೆ ಇದ್ದಲ್ಲಿ ನ್ಯೂಟ್ರಲ್‌ ಅಥವಾ ನಕಾರಾತ್ಮಕವಾಗಿ ತೆಗೆದುಕೊಳ್ಳಲಾಗುತ್ತದೆ.

ಸದ್ಯದ ಇಂಡೆಕ್ಸ್‌ ಏನು ಸೂಚಿಸುತ್ತದೆ?
ಸದ್ಯ ರಿಯಲ್‌ ಎಸ್ಟೇಟ್‌ ಸೆಂಟಿಮೆಂಟ್‌ ಇಂಡೆಕ್ಸ್‌ ಸ್ಕೋರ್‌ 62 ಇರುವುದರಿಂದ ಪಾಸಿಟೀವ್‌ ಆಗಿದೆ. ಮೇ ಹಾಗೂ ಜೂನ್‌ ತಿಂಗಳಲ್ಲಿ ಎರಡು ಬಾರಿ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ರೆಪೋ ದರವನ್ನು ಏರಿಕೆ ಮಾಡಿರುವುದು ಇಂಡೆಕ್ಸ್‌ ಸ್ಕೋರ್‌ ಇಳಿಕೆಯಾಗಲು ಕಾರಣ ಎನ್ನಬಹುದು. ಹಾಗೇ ಏ‌ರುತ್ತಿರುವ ಹಣದುಬ್ಬರ, ಕುಸಿಯುತ್ತಿರುವ ಭಾರತೀಯ ರೂಪಾಯಿ ಮೌಲ್ಯ, ಯುರೋಪ್‌, ಅಮೆರಿಕದ ಆರ್ಥಿಕ ಕುಸಿತ, ಉಕ್ರೇನ್‌– ರಷ್ಯಾ ಯುದ್ಧ ಸಂಘರ್ಷ ವಿಚಾರಗಳು ಇಂಡೆಕ್ಸ್‌ ಕುಸಿತಕ್ಕೆ ಇತರ ಕಾರಣಗಳಾಗಿವೆ.

ಸದ್ಯದ ಇಂಡೆಕ್ಸ್‌ ಸ್ಕೋರ್‌ ಬಗ್ಗೆ ತಜ್ಞರ ಅಭಿಪ್ರಾಯ
ಸ್ಟ್ಯಾಂಪ್‌ ಡ್ಯೂಟಿ ಕಡಿತದಂತಹ ಸರ್ಕಾರದ ಬೆಂಬಲ ನೀತಿ, ಸಮರ್ಪಕವಾದ ಬೆಲೆ, ಆಕರ್ಷಕ ಡೀಲ್‌ಗಳಿಂದಾಗಿ ಕಳೆದ 8–10 ತ್ರೈಮಾಸಿಕದಲ್ಲಿ ವಸತಿ ಮಾರುಕಟ್ಟೆಯು ಧನಾತ್ಮಕವಾಗಿ ಏರಿಕೆ ಕಂಡಿದೆ. ಜಾಗತಿಕ ಆರ್ಥಿಕ ಪರಿಸ್ಥಿತಿಗಳು ಸ್ವಲ್ಪ ಕ್ಷೀಣಿಸಿದಂತೆ ಕಂಡರೂ, ಉದ್ಯಮ ಮತ್ತೆ ಮೊದಲಿನಂತೆ ಪುಟಿದೇಳುವ ನಿರೀಕ್ಷೆಯಿದೆ ಎಂದು ರಿಯಾಲ್ಟಿ ತಜ್ಞರು ಅಭಿಪ್ರಾಯ ಪಡುತ್ತಾರೆ.

ಗೃಹ ಸಾಲ ದರ ಏರಿಕೆಯಿಂದ ವಸತಿ ಯೋಜನೆ ಬೇಡಿಕೆ ಮೇಲೆ ಪರಿಣಾಮ?
ಮೆಟ್ರೊ ನಗರಗಳಲ್ಲಿ ಯಾವುದೇ ಪರಿಣಾಮ ಕಂಡುಬಂದಿಲ್ಲ. ಇಎಂಐ ಸೌಲಭ್ಯ ಹಾಗೂ ಮನೆ ಖರೀದಿದಾರರಿಗೆ ಅಧಿಕ ಹೊರೆಯು ಇಲ್ಲದೇ ಇರುವುದು ಇದಕ್ಕೆ ಕಾರಣವಿರಬಹುದು. ಆರ್‌ಬಿಐ ಮುಂದಿನ ದಿನಗಳಲ್ಲಿ ಸಾಲದ ದರದಲ್ಲಿ ಮತ್ತೆ ಹೆಚ್ಚಳ ಘೋಷಿಸಿದರೆ ವಸತಿ ಯೋಜನೆಗಳ ಮೇಲೆ ಪರಿಣಾಮ ಬೀರಬಹುದು ಎಂದು ರಿಯಾಲ್ಟಿ ತಜ್ಞರು ತಿಳಿಸುತ್ತಾರೆ.

Exit mobile version