ಬೆಂಗಳೂರು, ಮೇ. 30 : ಈಗಾಗಲೇ ರಿಯಲ್ ಎಸ್ಟೇಟ್ ಉದ್ಯಮ ಬೆಳೆಯುತ್ತಿದೆ. ಎಲ್ಲೆಡೆ ಭೂಮಿಗೆ ಚಿನ್ನದ ಬೆಲೆ ಹೋಗಿ ಡೈಮೆಂಡ್ ಬೆಲೆ ಬರುತ್ತಿದೆ. ಎಲ್ಲಾ ಕಡೆಗಳಲ್ಲೂ ಭೂಮಿಯ ಬೆಲೆ ಏರಿಕೆಯಾಗುತ್ತಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಂತೂ ಇದ್ದಕ್ಕಿದ್ದ ಹಾಗೆಯೇ ಭೂಮಿಯ ಬೆಲೆ ಗಗನಕ್ಕೇರುತ್ತಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ, ಗಂಗಾವತಿಗೆ ಇರುವ ಹಿನ್ನೆಲೆ. ಇಲ್ಲಿ ಪೌರಾಣಿಕ ಹಿನ್ನೆಲೆಯ ಅಂಜನಾದ್ರಿ ಬೆಟ್ಟ ಹಾಗೂ ಭತ್ತದ ಕಣಜಗಳೇ ಬಹು ಮುಖ್ಯ ಕಾರಣ.
ಅಂಜನಾದ್ರಿ ಬೆಟ್ಟ ಇರುವ ಗಂಗಾವತಿಯನ್ನು ಪ್ರವಾಸೋದ್ಯಮ ಸ್ಥಳವಾಗಿದ್ದು, ಇಲ್ಲಿ ಅಭಿವೃದ್ಧಿಪಡಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಮುಂದಾಗಿವೆ. ಹೀಗಿರುವಾಗ ಇಲ್ಲಿನ ಜಾಗಕ್ಕೆ ಬೇಡಿಕೆಯೂ ಹೆಚ್ಚಾಗಿದೆ. ನೂರಾರು ರೈಸ್ ಮಿಲ್ ಇರುವ ಗಂಗಾವತಿಯಿಂದ ಅಕ್ಕಿ ರಫ್ತಾಗುತ್ತಿದೆ. ಇನ್ನು ಕಳೆದ ವರ್ಷ ಗಂಗಾವತಿಯಲ್ಲಿ ಜಮೀನುಗಳನ್ನು ಖರೀದಿ ಮಾಡುತ್ತಿದ್ದರು. ಅದೂ ಕೂಡ ಗುಂಟೆ, ಎಕರೆ ಲೆಕ್ಕದಲ್ಲಿ ಖರೀದಿ ಮಾಡುತ್ತಿದ್ದರು. ಬಳಿಕ ಚದರ ಅಡಿ ಲೆಕ್ಕದಲ್ಲಿ ಖರೀದಿಗೆ ಮುಂದಾಗಿದ್ದಾರೆ. ಬಳ್ಳಾರಿ, ಹೊಸಪೇಟೆ, ಹುಬ್ಬಳ್ಳಿ, ಬೆಂಗಳೂರು ಸೇರಿದಂತೆ ಹಲವು ಕಡೆಗಳಿಂದ ಬರುವ ಮೂಲದವರು ಭೂಮಿ ಖರೀದಿಗೆ ಮುಂದಾಗಿದ್ದಾರೆ.
ಕಳೆದ ವರ್ಷ ಗಂಗಾವತಿಯಲ್ಲಿ ನಿವೇಶನವನ್ನು ಖರೀದಿಸಲು ಒಂದು ಚದರ ಅಡಿಗೆ 1,200 ರಿಂದ 1,500 ರೂಪಾಯಿ ಅನ್ನು ನಿಗದಿ ಮಾಡಲಾಗಿತ್ತು. ಆದರೆ, ಈಗ ಒಂದು ಚದರ ಅಡಿಗೆ 2,000 ರಿಂದ 2,500 ರೂಪಾಯಿಗೆ ಏರಿಕೆಯಾಗಿದ್ದು, ಭೂಮಿ ಖರೀದಿಸಲು ಎಲ್ಲರೂ ಮುಗಿ ಬೀಳುತ್ತಿದ್ದಾರೆ. ಈಗಾಗಲೇ ಗಂಗಾವತಿಯಲ್ಲಿ ರಸ್ತೆ ಪಕ್ಕದಲ್ಲಿರುವ ಜಮೀನುಗಳ ಬೆಲೆ ಎಕರೆಗೆ 1 ಕೋಟಿಯಿಂದ 1.20 ಕೋಟಿ ರೂಪಾಯಿ ದರ ನಿಗದಿಪಡಿಸಲಾಗಿದೆ. ನಗರ ಪ್ರದೇಶದಲ್ಲಿರುವ ಜಮೀನಿಗೆ ಒಂದು ಎಕರೆಗೆ 1.50 ಕೋಟಿ ರೂ.ಗಳಿಂದ 2 ಕೋಟಿ ರೂ.ಗೆ ಮಾರಾಟವಾಗುತ್ತಿದೆ. ಇದು ಹೀಗೆ ಮುಮದುವರೆದರೆ, ಭೂಮಿಯ ಬೆಲೆ ಇನ್ನಷ್ಟು ಏರಿಕೆಯಾಗುತ್ತದೆ.