Revenue Facts

ಶ್ರೀರಾಮ ನವಮಿ ಆಚರಣೆ ಹಾಗೂ ರಾಮ ಶ್ಲೋಕದ ಮಹತ್ವ

ಬೆಂಗಳೂರು, ಮಾ. 28 :ಭಾರತದಾದ್ಯಂತ ಶ್ರೀರಾಮ ನವಮಿ ಅನ್ನು ಆಚರಿಸುತ್ತಾರೆ. ಇದನ್ನು ಹಬ್ಬವಾಗಿ ಆಚರಿಸದೇ ಸಂಭ್ರಮದಿಂದ ರಾಮನ ಜನ್ಮ ದಿನವನ್ನು ಆಚರಣೆ ಮಾಡುತ್ತಾರೆ. ಶ್ರೀರಾಮ ನವಮಿಯಂದು ಭಕ್ತರು ಉಪವಾಸದ ದಿವಸವಾಗಿ ಆಚರಿಸುತ್ತಾರೆ. ಸುಡು ಬೇಸಿಗೆಯಲ್ಲೂ ಎಲೆಲ್ಲೂ ಮಲ್ಲಿಗೆ, ಸಂಪಿಗೆ, ಘಮಘಮಿಸುವ ಹೂವಿನ ಪರಿಮಳಗಳು ಇರುತ್ತವೆ. ಮಾವು, ಬಾಳೆ, ಬನಾಸ್ಪತ್ರೆ, ಹಲಸು, ಬೇಲದ ಹಣ್ಣುಗಳು ಸಿಗುತ್ತವೆ. ಭಕ್ತರು ಹಬ್ಬ ಆಚರಿಸಿದಂತೆಯೇ ಮನೆಯನ್ನು ಅಲಂಕಾರಗೊಳಿಸಿ, ಮಂಟಪವನ್ನು ನಿರ್ಮಾಣ ಮಾಡುತ್ತಾರೆ. ಮಣೆಹಾಕಿ ರಾಮದೇವರ ಪಟವನ್ನಿಟ್ಟು ಹೂವಿನ ಹಾರಗಳಿಂದ ಅಲಂಕರಿಸುತ್ತಾರೆ.

ಭಕ್ತಿಯಿಂದ ಪೂಜೆ ಮಾಡಿ. ನೈವೇದ್ಯಕ್ಕೆ ಪಾನಕ, ಬೇಲದ ಹಣ್ಣಿನ, ನಿಂಬೆಹಣ್ಣಿನ, ಕರಬೂಜ ಹಣ್ಣಿನ ಪಾನಕಗಳನ್ನು ತಯಾರಿಸುತ್ತಾರೆ. ಒಂದೊಂದು ಕಡೆ ಒಂದೊಂದು ಹಣ್ಣಿನ ಪಾನಕ ಮಾಡುತ್ತಾರೆ. ಇದರ ಜೊತೆಗೆ ನೀರು ಮಜ್ಜಿಗೆ, ಹೆಸರುಬೇಳೆ, ಕಡಲೆಬೇಳೆ ಕೋಸಂಬರಿ, ಹಣ್ಣಿನ ರಸಾಯನ, ಗೊಜ್ಜವಲಕ್ಕಿ, ಕೇಸರಿಬಾತ್, ಗೋಧಿ ಹಿಟ್ಟಿನ ಉಂಡೆ ಮಾಡಿ ನೈವೇದ್ಯ ಮಾಡುತ್ತಾರೆ. ರಾಮ ಮಂತ್ರದ ಅಷ್ಟೋತ್ತರ, ಸಹಸ್ರನಾಮ, ರಾಮ ಭಜನೆ ಮಾಡಿ ಎಲ್ಲರೂ ಒಟ್ಟಾಗಿ ಸೇರುತ್ತಾರೆ. ಪಾನಕ ಕುಡಿಯುವುದರಿಂದ ಬಿಸಿಲಿಗೆ ದಣಿದವರ ದೇಹ ತಣ್ಣಗಾಗುವುದರ ಜೊತೆ ರಾಮನಾಮದಿಂದ ಮನಸ್ಸೂ ಪ್ರಶಾಂತವಾಗುತ್ತದೆ.

ಇಂದು ಎಲ್ಲಾ ದೇವಸ್ಥಾನಗಳಲ್ಲಿ, ಮುಖ್ಯವಾಗಿ ಆಂಜನೇಯಸ್ವಾಮಿ, ರಾಮದೇವರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಪಲ್ಲಕ್ಕಿ ಉತ್ಸವ, ಭಜನೆ, ಮೆರವಣಿಗೆ ಎಲ್ಲಾ ಜೋರಾಗಿರುತ್ತದೆ. ದಾರಿ ದಾರಿಯಲ್ಲೂ ಎಲ್ಲರೂ ಪಾನಕ, ಮಜ್ಜಿಗೆಯನ್ನು ದಾರಿ ಹೋಕರಿಗಾGI ತಯಾರಿಸಿ, ವಿತರಿಸುತ್ತಾರೆ. ಅದರಲ್ಲೂ ಹಳ್ಳಿಯಲ್ಲಿ ಇನ್ನೂ ಜೋರು. ಪಾನಕದ ಹೊಳೆಯನ್ನೇ ಎಲ್ಲಾ ಕಡೆಗಳಲ್ಲಿ ಹರಿಸುತ್ತಾರೆ. ಸಂತಸ ಸಂಭ್ರಮ ಪಡುತ್ತಾ ರಾಮನವಮಿ ಆಚರಿಸುತ್ತಾರೆ.

ಇನ್ನು ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ| ರಘುನಾಥಾಯ ನಾಥಾಯ ಸೀತಾಯ ಪತಯೇ ನಮಃ ॥ ಇದು ಬಹು ಪ್ರಸಿದ್ಧವಾದ ಶ್ಲೋಕ. ಆದರೆ ಆ ಪದಪ್ರಯೋಗಗಳಿಗೆ ಇರುವ ಗೂಢಾರ್ಥ ವಿಶೇಷವಾಗಿದೆ. ಮನಸ್ಸಿಗೆ ಮುದವನ್ನುಂಟು ಮಾಡುವಂತಹುದು.

ರಾಮಾ: ಶ್ರೀರಾಮಚಂದ್ರನನ್ನು ದಶರಥ ಚಕ್ರವರ್ತಿ ಮಾತ್ರ “ರಾಮಾ” ಎಂದು ಕರೆಯುತ್ತಿದ್ದನಂತೆ.ಆ ರೀತಿಯ ಅಧಿಕಾರ ತಂದೆಯಾದವನಿಗೆ ಮಾತ್ರ.
ರಾಮಭದ್ರ: ಇನ್ನು ತಾಯಿಯಾದ ಕೌಸಲ್ಯೆ ಮಗನನ್ನು “ರಾಮಭದ್ರ” ಎನ್ನುತ್ತಿದ್ದಳಂತೆ.ಅದು ವಾತ್ಸಲ್ಯಭರಿತವಾದ ಸಂಬೋಧನೆ.
ರಾಮಚಂದ್ರ: ಚಿಕ್ಕಮ್ಮ ಕೈಕೇಯಿ ರಾಮಚಂದ್ರ ಎನ್ನುತ್ತಿದ್ದಳು.ಬಾಲ್ಯದಲ್ಲಿ ಬಾನಿನಲ್ಲಿರುವ ಚಂದ್ರ ಬೇಕೆಂದು ಅಳುತ್ತಿದ್ದ ಶ್ರೀರಾಮನಿಗೆ ಕೈಕೇಯಿ-ಮಂಥರೆಯರು ಕನ್ನಡಿಯೊಳಗೆ ಚಂದ್ರಬಿಂಬ ತೋರಿಸಿ ಸಮಾಧಾನಪಡಿಸಿದ್ದರು.! ಆ ಕಾರಣದಿಂದ “ರಾಮಚಂದ್ರ” ಎಂಬ ಅನ್ವರ್ಥನಾಮ.
ವೇದಸೇ: ಬ್ರಹ್ಮರ್ಷಿಗಳಾದ ವಶಿಷ್ಠರು ಶ್ರೀರಾಮನನ್ನು ಪರತತ್ತ್ವವೆಂದು ತಿಳಿದು “ವೇಧಸೇ” ಎಂದು ಕರೆಯುತ್ತಿದ್ದರು.
ರಘುನಾಥಯ: ಆದರೆ ಅಯೋಧ್ಯೆಯ ಪುರಜನರೆಲ್ಲಾ ’ನಮ್ಮ ರಘುವಂಶದ ಅರಸು’ ಎಂಬರ್ಥದಲ್ಲಿ “ರಘುನಾಥ” ಎಂದು ಕರೆಯುತ್ತಿದ್ದರು.
ನಾಥಯ: ಇನ್ನು “ನಾಥ” ಎಂದಷ್ಟೆ ಕರೆಯುತ್ತಿದ್ದವಳು ಸೀತಾದೇವಿ ಮಾತ್ರ.ಹಾಗೆ ಕರೆಯುವುದು ಅವಳೊಬ್ಬಳ ಹಕ್ಕು.!
ಸೀತಾಯ ಪತಯೇ: ಆದರೆ ಮಿಥಿಲೆಯ ಜನರೆಲ್ಲರೂ ’ನಮ್ಮ ಸೀತೆಯ ಗಂಡ’ ಎಂಬ ಅಭಿಮಾನದಿಂದ “ಸೀತಾಯ ಪತಯೇ” ಎನ್ನುತ್ತಿದ್ದರು.

Exit mobile version