Revenue Facts

‘ಪುರುಷರಿಗಾಗಿ ರಾಷ್ಟ್ರೀಯ ಆಯೋಗ’ವನ್ನು ರಚಿಸುವಂತೆ ಸುಪ್ರೀಂಕೋರ್ಟ್ ‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ:-

‘ಪುರುಷರಿಗಾಗಿ ರಾಷ್ಟ್ರೀಯ ಆಯೋಗ’ವನ್ನು ರಚಿಸುವಂತೆ ಸುಪ್ರೀಂಕೋರ್ಟ್ ‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ:-

ನವದೆಹಲಿ ಜುಲೈ 01:-ಇತ್ತೀಚೆಗೆ ಮಹಿಳೆಯರಂತೆ ಪುರುಷರಿಗೂ ಸಹ ಕೌಟುಂಬಿಕ ದೌರ್ಜನ್ಯಗಳು ಹೆಚ್ಚಾಗಿ ಆಗುತ್ತಿವೆ. ಆದರೆ ಅದರ ವಿರುದ್ಧ ಧ್ವನಿಯೆತ್ತುವವರು ಯಾರು ಇರಲಿಲ್ಲ,ಹೆಚ್ಚಾಗುತ್ತಿರುವ ವಿವಾಹಿತ ಪುರುಷರ ಆತ್ಮಹತ್ಯೆಯಿಂದ ಬೇಸತ್ತ ವಕೀಲ ಮಹೇಶ್ ಕುಮಾರ್ ತಿವಾರಿ ಅವರು ಸಲ್ಲಿಸಿರುವ ಮನವಿಯಲ್ಲಿ 2021 ರಲ್ಲಿ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್ ‌ಬಿ) ಭಾರತದಲ್ಲಿ ಆಕಸ್ಮಿಕ ಸಾವುಗಳ ಕುರಿತು ಪ್ರಕಟಿಸಿದ ಅಂಕಿ-ಅಂಶಗಳನ್ನು ಉಲ್ಲೇಖಿಸಿದ್ದಾರೆ. 2021ರಲ್ಲಿ ಭಾರತದಲ್ಲಿ 1,64,033 ಜನರು ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದ್ದು, ಅದರಲ್ಲಿ 81,063 ವಿವಾಹಿತ ಪುರುಷರು, 28,680 ವಿವಾಹಿತ ಮಹಿಳೆಯರು ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್ ವೆಬ್‌ಸೈಟ್ ಪ್ರಕಾರ, ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ದೀಪಂಕರ್ ದತ್ತಾ ಅವರನ್ನೊಳಗೊಂಡ ಪೀಠವು ಸೋಮವಾರ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆಗಾಗಿ ಪಟ್ಟಿ ಮಾಡಿದೆ ಎಂದು ವರದಿ ಆಗಿದೆ.

“2021ರಲ್ಲಿ ಆತ್ಮಹತ್ಯೆ ಮಾಡಿಕೊಂಡ ಪುರುಷರಲ್ಲಿ 33.2 ಪ್ರತಿಶತ ಕೌಟುಂಬಿಕ ಸಮಸ್ಯೆಗಳಿಗಾಗಿ ಆತ್ಮಹತ್ಯೆ ಹಾದಿ ಹಿಡಿದಿದ್ದರೆ, 4.8 ಪ್ರತಿಶತ ಪುರುಷರು ವಿವಾಹ ಸಂಬಂಧಿತ ಸಮಸ್ಯೆಗಳಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ. 2021ರಲ್ಲಿ ಒಟ್ಟು 1,18,979 ಪುರುಷರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, 45,026 ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಟ್ಟು ಆತ್ಮಹತ್ಯೆ ಪ್ರಕರಣಗಳಲ್ಲಿ ಪುರುಷರ ಆತ್ಮಹತ್ಯೆ ಪ್ರಮಾಣ ಶೇಕಡಾ 72ರಷ್ಟಿದ್ದರೆ, ಮಹಿಳೆಯರ ಆತ್ಮಹತ್ಯೆ ಪ್ರಮಾಣ ಶೇಕಡಾ 27ರಷ್ಟಿದೆ” ಎಂದು ಎನ್‌ಸಿಆರ್ ‌ಬಿ ಒದಗಿಸಿದ ಅಂಕಿ-ಅಂಶಗಳನ್ನು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಮಹಿಳೆಯರ ಪರವಾಗಿ ದನಿ ಎತ್ತಲು ರಾಷ್ಟ್ರಮಟ್ಟದಲ್ಲಿ ಮಹಿಳಾ ಆಯೋಗ ಇರುವಂತೆ, ಪುರುಷರ ವಿರುದ್ಧ ನಡೆಯುವ ಕೌಟುಂಬಿಕ ದೌರ್ಜನ್ಯದ ದೂರನ್ನು ಕೇಳುವ, ಸಮಸ್ಯೆಗೆ ಸ್ಪಂದಿಸಲು ‘ಪುರುಷರಿಗಾಗಿ ರಾಷ್ಟ್ರೀಯ ಆಯೋಗ’ವನ್ನು ರಚಿಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಜುಲೈ 3 ರಂದು ವಿಚಾರಣೆ ನಡೆಸಲಿದೆ.

ಭಾರತದಲ್ಲಿ ವಿವಾಹಿತ ಪುರುಷರ ಆತ್ಮಹತ್ಯೆ ಪ್ರಮಾಣ ಹೆಚ್ಚುತ್ತಿದ್ದು ಆತಂಕ ಮೂಡಿಸುವ ವಿಷಯವಾಗಿದೆ. ಕೌಟುಂಬಿಕ ಹಿಂಸಾಚಾರಕ್ಕೆ ಒಳಗಾಗುವ ಪುರುಷರ ಹಿತಾಸಕ್ತಿ ಕಾಪಾಡಲು ಮಾರ್ಗಸೂಚಿಗಳನ್ನು ರೂಪಿಸಲು ಆಯೋಗ ರಚನೆ ಮಾಡಬೇಕು ಎಂದು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

ಪುರುಷರ ದೂರುಗಳನ್ನು ಸ್ವೀಕರಿಸಲು ಆಯೋಗ:-
ವಿವಾಹಿತ ಪುರುಷರ ಆತ್ಮಹತ್ಯೆಯ ಸಮಸ್ಯೆಯನ್ನು ನಿಭಾಯಿಸಲು ಮತ್ತು ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದ ಪುರುಷರ ದೂರುಗಳನ್ನು ಸ್ವೀಕರಿಸಲು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಸುಪ್ರೀಂಕೋರ್ಟ್ ‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ಕೋರಲಾಗಿದೆ.

“ಕೌಟುಂಬಿಕ ಹಿಂಸಾಚಾರಕ್ಕೆ ಒಳಗಾದವರ, ಕೌಟುಂಬಿಕ ಸಮಸ್ಯೆಗಳು ಮತ್ತು ಮದುವೆ ಸಂಬಂಧಿತ ಸಮಸ್ಯೆಗಳಿಂದಾಗಿ ಒತ್ತಡದಲ್ಲಿ ಇರುವವರ ದೂರನ್ನು ಸ್ವೀಕರಿಸಲು ಪ್ರತಿ ಪೊಲೀಸ್ ಠಾಣೆಯ ಪೊಲೀಸ್ ಪ್ರಾಧಿಕಾರಕ್ಕೆ, ಸ್ಟೇಷನ್ ಹೌಸ್ ಆಫೀಸರ್ ‌ಗೆ ಗೃಹ ಸಚಿವಾಲಯದ ಮೂಲಕ ಸರಿಯಾದ ಮಾರ್ಗಸೂಚಿಗಳನ್ನು ನೀಡಲು ಭಾರತೀಯ ಒಕ್ಕೂಟಕ್ಕೆ (ಪ್ರತಿವಾದಿ ಸಂಖ್ಯೆ 1) ನಿರ್ದೇಶನ ನೀಡಬೇಕು. ಭಾರತ ಸರ್ಕಾರದಿಂದ ಸರಿಯಾದ ಕಾನೂನು ಜಾರಿಗೆ ಬರುವವರೆಗೆ ಇಂತಹ ಪ್ರಕರಣಗಳ ವಿಲೇವಾರಿ ಮಾಡಲು ರಾಜ್ಯ ಮಾನವ ಹಕ್ಕು ಆಯೋಗಕ್ಕೆ ನಿರ್ದೇಶನ ನೀಡುವಂತೆ” ಕೋರಲಾಗಿದೆ.

“ಕೌಟುಂಬಿಕ ಹಿಂಸಾಚಾರ ಅಥವಾ ಕೌಟುಂಬಿಕ ಸಮಸ್ಯೆ ಮತ್ತು ವಿವಾಹ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿರುವ ವಿವಾಹಿತ ಪುರುಷರ ಆತ್ಮಹತ್ಯೆಯ ವಿಷಯದ ಬಗ್ಗೆ ಸಂಶೋಧನೆ ನಡೆಸಲು ಮತ್ತು ರಾಷ್ಟ್ರೀಯ ಪುರುಷರ ಆಯೋಗವನ್ನು ರಚಿಸುವ ಬಗ್ಗೆ ಅಗತ್ಯ ವರದಿಯನ್ನು ಮಾಡಲು ಭಾರತೀಯ ಕಾನೂನು ಆಯೋಗಕ್ಕೆ ನಿರ್ದೇಶನ ನೀಡಿ” ಎಂದು ಮನವಿಯಲ್ಲಿ ತಿಳಿಸಲಾಗಿದೆ.

Exit mobile version