Revenue Facts

ಬೆರಳ ತುದಿಯಲ್ಲಿ ಆಸ್ತಿ ನೋಂದಣಿ: ‘ಕಾವೇರಿ 2’ ಪ್ರಾಯೋಗಿಕ ಜಾರಿ!

ಬೆರಳ ತುದಿಯಲ್ಲಿ ಆಸ್ತಿ ನೋಂದಣಿ: ‘ಕಾವೇರಿ 2’ ಪ್ರಾಯೋಗಿಕ ಜಾರಿ!

ಆಸ್ತಿ ಮತ್ತು ದಾಖಲೆಗಳ ನೊಂದಣಿಯನ್ನು ಆನ್‌ಲೈನ್ ಮೂಲಕ ನೋಂದಣಿ ಮಾಡುವ ಕಾವೇರಿ 2 ಪ್ರಾಯೋಗಿಕ ಯೋಜನೆಯನ್ನು ಜಾರಿಗೆ ತರಲು ಕಂದಾಯ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ.
ಕನ್ನಡ ರಾಜ್ಯೋತ್ಸವ ನವೆಂಬರ್ 1 ರಂದು ಕಾವೇರಿ-2 ಯೋಜನೆ ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿ ಪ್ರಾಯೋಗಿಕವಾಗಿ ಜಾರಿಗೆ ಬರಲಿದೆ. ಚಿಂಚೋಳಿಯಲ್ಲಿ ಯಶಸ್ವಿಯಾದ ಬಳಿಕ ರಾಜ್ಯದಲ್ಲಿ ಜಾರಿಗೆ ಬರಲಿದೆ. ನವೆಂಬರ್ 1 ರಿಂದ ಚಿಂಚೋಳಿಯಲ್ಲಿ ಪ್ರಾಯೋಗಿಕವಾಗಿ ಜಾರಿಗೆ ಬರಲಿದೆ. ಆಸ್ತಿಗಳ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪಾವತಿಯಲ್ಲಿ ಪಾರದರ್ಶಕತೆ ಮತ್ತು ತ್ವರಿತ ಸೇವೆ ಕಲ್ಪಿಸುವ ಉದ್ದೇಶದಿಂದ ಕಾವೇರಿ 2 ಆನ್‌ಲೈನ್ ಸೇವೆ ಜಾರಿಗೆ ತರಲಾಗುತ್ತಿದೆ.

ಚಿಂಚೋಳಿಯಲ್ಲಿ ಪ್ರಾಯೋಗಿಕ ಜಾರಿ:
“ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿ ಕಾವೇರಿ 2 ಅನ್‌ಲೈನ್ ಆಸ್ತಿ ನೋಂದಣಿ ಪೈಲಟ್ ಯೋಜನೆ ಜಾರಿಗೆ ತರಲಾಗುತ್ತಿದೆ. ಈಗಾಗಲೇ ಸಿಬ್ಬಂದಿಗೆ ಎರಡು ಹಂತದ ತರಬೇತಿ ನೀಡಲಾಗಿದೆ. ಈಗಲೂ ತರಬೇತಿ ನಡೆಯುತ್ತಿದ್ದು, ನವೆಂಬರ್ ಒಂದರಿಂದ ಪ್ರಾಯೋಗಿಕವಾಗಿ ಜಾರಿಗೆ ತರಲಾಗುತ್ತಿದೆ. ಇದರಿಂದ ನೋಂದಣಿ ಮತ್ತು ಮುದ್ರಾಂಕ ಸೇವೆ ಆಸ್ತಿ ನೊಂದಣಿ ವೇಳೆ ಹೊರ ಗುತ್ತಿಗೆ ಸಿಬ್ಬಂದಿ ಮಾಡುವ ಎಡವಟ್ಟುಗಳಿಂದ ಉಪ ನೋಂದಣಾಧಿಕಾರಿಗಳು ಬಲಿ ಪಶು ಆಗುವುದು ತಪ್ಪುತ್ತದೆ. ಇಲ್ಲಿ ಆನ್‌ಲೈನ್ ಮೂಲಕ ಸಾರ್ವಜನಿಕರೇ ದಾಖಲೆಗಳು ಸಲ್ಲಿಸುವ ಕಾರಣದಿಂದ ನೋಂದಣಿ ಇಲಾಖೆಯ ಸಿಬ್ಬಂದಿಗೆ ದೊಡ್ಡ ಹೊರ ತಪ್ಪಿದಂತಾಗುತ್ತದೆ. ಪಾರದರ್ಶಕತೆ ಮತ್ತು ತ್ವರಿತ ಸೇವೆ ಒದಗಿಸಲು ಅನುಕೂಲವಾಗಲಿದೆ,” ಎಂದು ಕಲಬುರ್ಗಿ ಜಿಲ್ಲಾ ಉಪ ನೋಂದಣಾಧಿಕಾರಿ ಮಹಮದ್ ಅಸೀಬ್ ‘ರೆವೆನ್ಯೂ ಫ್ಯಾಕ್ಟ್ಸ್’ಗೆ ತಿಳಿಸಿದ್ದಾರೆ.

ಕಾವೇರಿ-2 ಯೋಜನೆ ಪ್ರಕ್ರಿಯೆ ಹೇಗೆ :
ಆಸ್ತಿ ಮತ್ತು ದಾಖಲೆಗಳ ನೋಂದಣಿಗಾಗಿ ಕಾವೇರಿ 2 ತಂತ್ರಾಂಶದಲ್ಲಿ ಸಾರ್ವಜನಿಕರು ಅರ್ಜಿ ಜತೆಗೆ ದಾಖಲೆಗಳನ್ನು ಸಲ್ಲಿಸಬೇಕು. ದಾಖಲೆಗಳ ಸಲ್ಲಿಕೆ ವೇಳೆ ಅವರಿಗೆ ಬೇಕಾದ ಸಮಯ ನಿಗದಿ ಪಡಿಸಿಕೊಳ್ಳಬೇಕು. ನಿಗದಿತ ದಿನಾಂಕದಂದು ಅಸಲಿ ದಾಖಲೆಗಳ ಸಮೇತ ಸಂಬಂಧ ಪಟ್ಟ ಉಪ ನೋಂದಣಾಧಿಕಾರಿಗಳ ಕಚೇರಿಗೆ ಭೇಟಿ ನೀಡಿದರೆ, ಅಷ್ಟರಲ್ಲಿ ಆನ್‌ಲೈನ್ ದಾಖಲೆಗಳು ಪರಿಶೀಲನೆಯಾಗಿರುತ್ತವೆ. ಆನ್‌ಲೈನ್ ದಾಖಲೆಗಳ ಮಾಹಿತಿ ಅಸಲಿ ದಾಖಲೆಗಳಲ್ಲಿ ಸಾಮ್ಯತೆ ಇದ್ದರೆ, ನಿಗಧಿತ ವೇಳೆಯಲ್ಲಿ ನೋಂದಣಿ ಮಾಡಲಾಗುತ್ತದೆ. ಇದರಿಂದ ನಿಗಧಿತ ಕಾಲ ಮಿತಿಯಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಸೇವೆ ಪಡೆಯಲು ನೆರವಾಗಲಿದೆ. ಅನಾವಶ್ಯಕ ವಿಳಂಬ ಹಾಗೂ ಅಕ್ರಮಗಳಿಗೆ ತಡೆ ಬೀಳಲಿದೆ.

ಕಾವೇರಿ-2 ಯೋಜನೆಯಿಂದ ಅನುಕೂಲ:
ಕಾವೇರಿ-2 ನೋಂದಣಿ ಯೋಜನೆಗೆ ಚಾಲನೆ ಸಿಕ್ಕ ಬಳಿಕ ಸಾರ್ವಜನಿಕರು ಆನ್‌ಲೈನ್ ಮೂಲಕವೇ ದಾಖಲೆಗಳನ್ನು ಸಲ್ಲಿಸಬಹುದು. ಜತೆಗೆ ನೊಂದಣಿ ಮತ್ತು ಮುದ್ರಾಂಕ ಶುಲ್ಕವನ್ನು ಪಾವತಿಸಬಹುದು. ಆಸ್ತಿ ದಾಖಲೆಗಳು ನೋಂದಣಿಯಾದ ಬಳಿಕ ಸಂಬಂಧಪಟ್ಟ ದಾಖಲೆಗಳು ಆನ್‌ಲೈನ್ ಮೂಲಕವೇ ಜನರ ಕೈ ತಲುಪಲಿವೆ. ಆಸ್ತಿ ಮತ್ತು ದಾಖಲೆಗಳ ನೋಂದಣಿ ಮಾಡಿಸಲು ಇದೀಗ ವಿಳಂಬವಾಗುತ್ತಿದೆ. ಇದರ ಜತೆಗೆ ಬ್ರೋಕರ್ ಗಳು ಮಧ್ಯ ಪ್ರವೇಶದಿಂದ ಜನ ಸಾಮಾನ್ಯರು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಸೇವೆ ಪಡೆಯಲು ಅನಾವಶ್ಯಕ ವೆಚ್ಚ ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಬೀಳುವ ಜತೆಗೆ ತ್ವರಿತವಾಗಿ ಸೇವೆ ಒದಗಿಸುವ ಉದ್ದೇಶದಿಂದ ಕಂದಾಯ ಇಲಾಖೆ ಕಾವೇರಿ 2 ಮಹತ್ವದ ಯೋಜನೆಗೆ ಜಾರಿಗೆ ತರುತ್ತಿದೆ.

ಏನಿದು ಕಾವೇರಿ 1 ಮತ್ತು ಕಾವೇರಿ 2?
ರಾಜ್ಯದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಆಸ್ತಿ ಮತ್ತು ದಾಖಲೆಗಳ ನೋಂದಣಿಗಾಗಿ ಮೊದಲ ಹಂತದಲ್ಲಿ ಕಾವೇರಿ 01 ಯೋಜನೆ ಜಾರಿಗೆ ತರಲಾಗಿತ್ತು. ಈಗಾಗಲೇ ಕಾವೇರಿ 1 ಯೋಜನೆ ಚಾಲ್ತಿಯಲ್ಲಿದೆ. ಜನ ಸಾಮಾನ್ಯರು ಅಸ್ತಿ ಅಥವಾ ದಾಖಲೆಗಳ ನೋಂದಣಿಗೆ ಉಪ ನೋಂದಣಾಧಿಕಾರಿಗಳ ಕಚೇರಿಗೆ ತೆರಳಿ ದಾಖಲೆ ಸಲ್ಲಿಸುತ್ತಾರೆ. ಈ ದಾಖಲೆಗಳನ್ನು ಉಪ ನೋಂದಣಾಧಿಕಾರಿಗಳು ಕಾವೇರಿ- 01 ತಂತ್ರಾಂಶದಲ್ಲಿ ಆನ್‌ಲೈನ್ ಮೂಲಕವೇ ದಾಖಲೆಗಳನ್ನು ನೋಂದಣಿ ಮಾಡಲಾಗುತ್ತಿದೆ. ಕಾವೇರಿ 1 ತಂತ್ರಾಂಶದಿಂದ ಆನ್‌ಲೈನ್ ಸೇವೆ ಈಗಾಗಲೇ ರಾಜ್ಯದಲ್ಲಿ ಅಸ್ತಿತ್ವದಲ್ಲಿರುತ್ತದೆ. ಕಾವೇರಿ 2 ಜಾರಿಗೆ ಬಂದಲ್ಲಿ ಜನ ಸಾಮಾನ್ಯರು ಸಹ ಇರುವ ಕಡೆಯಿಂದಲೇ ಆನ್‌ಲೈನ್ ಮೂಲಕ ಆಸ್ತಿ ಮತ್ತು ದಾಖಲೆ ನೋಂದಣಿಗೆ ಅರ್ಜಿ ಸಲ್ಲಿಸಿ ನೊಂದಣಿ ಮಾಡಿಸಿಕೊಳ್ಳಬಹುದು.

20 ನಿಮಿಷದಲ್ಲಿ ಆಸ್ತಿ ನೋಂದಣಿ ಟಾರ್ಗೆಟ್:
ಕಾವೇರಿ 2 ಯೋಜನೆ ಜಾರಿಗೆ ಬಂದ ಬಳಿಕ ಸಾರ್ವಜನಿಕರು ಆಸ್ತಿ ನೋಂದಣಿಗೆ ಸಂಬಂಧಿಸಿದಿಂತೆ ಆನ್‌ಲೈನ್‌ನಲ್ಲಿಯೇ ಅರ್ಜಿ ಸಲ್ಲಿಸಿದ ವೇಳೆ, ಆಸ್ತಿ ಮತ್ತು ದಾಖಲೆ ನೋಂದಣಿಯ ದಿನಾಂಕ ಸಮಯವನ್ನು ನಿಗದಿ ಮಾಡಲಾಗುತ್ತದೆ. ಆ ನಿಗದಿತ ದಿನದಂದು ಭೌತಿಕವಾಗಿ ಅರ್ಜಿದಾರರು ಉಪ ನೋಂದಣಾಧಿಕಾರಿಗಳ ಕಚೇರಿಗೆ ಹೋದರೆ, ಕೇವಲ 20 ನಿಮಿಷದಲ್ಲಿ ನೋಂದಣಿ ಪ್ರಕ್ರಿಯೆ ಮುಗಿಸಲಾಗುತ್ತದೆ. ಅರ್ಜಿ ಸಲ್ಲಿಸುವ ವೇಳೆ ಲೋಪದೋಷಗಳಿದ್ದಲ್ಲಿ, ಪುನಃ ಅರ್ಜಿ ಸಲ್ಲಿಸುವಿಕೆ ಅಥವಾ ತಿದ್ದುಪಡಿ ಮಾಡಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಈಗಿರುವ ವ್ಯವಸ್ಥೆ:
ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ನೋಂದಣಿ ಮಾಡಿಸಬೇಕಾದರೆ ಹಾಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ಭೌತಿಕವಾಗಿ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು. ಸಲ್ಲಿಸಿದ ದಾಖಲೆಗಳನ್ನು ಉಪ ನೋಂದಣಾಧಿಕಾರಿಗಳು ಪರಿಶೀಲಿಸಿ ನೋಂದಣಿ ಮತ್ತು ಮದ್ರಾಂಕ ಶುಲ್ಕ ಪಾವತಿ ರಶೀದಿ ನೀಡುತ್ತಾರೆ. ಬ್ಯಾಂಕ್ ನಲ್ಲಿ ಶುಲ್ಕ ಪಾವತಿಸಿದ ಬಳಿಕ ಸರದಿ ಪ್ರಕಾರ ಟೋಕನ್ ನಂಬರ್ ನಂತೆ ನೋಂದಣಿ ಮಾಡಿಕೊಡಲಾಗುತ್ತಿದೆ. ಇದರಿಂದ ಜನ ಸಾಮಾನ್ಯರು ಅನಾವಶ್ಯಕ ಕಚೇರಿಗಳಿಗೆ ಅಲೆಯುವಂತಾಗಿದ್ದು, ಕಾವೇರಿ 2 ತಂತ್ರಾಂಶ ಇದೆಲ್ಲದಕ್ಕೂ ಪರಿಹಾರವಾಗಲಿದೆ ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಪಾಸ್ ಪೋರ್ಟ್ ಮಾದರಿ ಸೇವೆ:
ರಾಜ್ಯದಲ್ಲಿ ಕಾವೇರಿ-2 ಆಸ್ತಿ ಮತ್ತು ದಾಖಲೆ ನೋಂದಣಿ ಆನ್‌ಲೈನ್ ಸೇವೆ ಒದಗಿಸಲು ಜಿಲ್ಲಾ ಉಪ ನೋಂದಣಾಧಿಕಾರಿಗಳ ಕಚೇರಿಗಳಿಗೆ ಹೊಸ ಸ್ಪರ್ಶ ನೀಡಲಾಗುತ್ತಿದೆ. ಪಾಸ್ ಪೋರ್ಟ್ ಕಚೇರಿಗಳ ಮಾದರಿಯಲ್ಲಿ ಸೇವೆ ಒದಗಿಸುವ ಉದ್ದೇಶದಿಂದ ಆ ಆನ್‌ಲೈನ್ ಸೇವೆ ಕಲ್ಪಿಸಲಾಗುತ್ತಿದ್ದು, ನೋಂದಣಿಗೆ ದಾಖಲೆಗಳನ್ನು ಆನ್‌ಲೈನ್ ನಲ್ಲಿ ಸಲ್ಲಿಸಲು ಪ್ರತಿ ಹಂತದಲ್ಲೂ ಸಂದೇಶದ ಮೂಲಕ ಸಾರ್ವಜನಿಕರಿಗೆ ಸಲಹೆ ನೀಡಲಾಗುತ್ತದೆ.

ನೊಂದಣಿ ದತ್ತಾಂಶ ಅನ್ವೇಷಣೆ:
ಕಾವೇರಿ 2 ಜಾರಿಗೆ ಬಂದ ಬಳಿಕ ರಾಜ್ಯದಲ್ಲಿ ಪ್ರತಿ ದಿನ ಸಲ್ಲಿಕೆಯಾಗುವ ಅರ್ಜಿಗಳು, ಅವುಗಳ ಹಂತ, ವಿಲೇವಾರಿ, ಸಂಗ್ರಹವಾಗುವ ಶುಲ್ಕ ಕುರಿತ ದತ್ತಾಂಶ ಒಂದಡೆ ಕ್ರೋಢೀಕರಣವಾಗಲಿದೆ. ಇದರಿಂದ ಆಸ್ತಿ ಮತ್ತು ದಾಖಲೆಗಳ ನೋಂದಣಿ ಎಷ್ಟಾಗಿವೆ. ಯಾರು ಮಾಡಿದ್ದಾರೆ. ಎಲ್ಲಿ ರಿಯಲ್ ಎಸ್ಟೇಟ್ ವಹಿವಾಟು ಚೆನ್ನಾಗಿದೆ. ಯಾವ ಜಿಲ್ಲೆಯಲ್ಲಿ ಹೆಚ್ಚು ರಾಜಸ್ವ ಸಂಗ್ರಹವಾಗುತ್ತಿದೆ ಎಂಬ ಸಮಗ್ರ ವಿವರಗಳು ಇಲಾಖೆಗೆ ಬೆರಳ ತುದಿಯಲ್ಲಿ ಲಭ್ಯವಾಗಲಿದೆ.

Exit mobile version