Revenue Facts

ದಲಿತರಿಗೆ ಮಂಜೂರಾದ ಭೂಮಿ ಖರೀದಿಸಲು ಈ ನಿಯಮ ಗೊತ್ತಿರಲಿ!

ದಲಿತರಿಗೆ ಮಂಜೂರಾದ ಭೂಮಿ ಖರೀದಿಸಲು ಈ ನಿಯಮ ಗೊತ್ತಿರಲಿ!

ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯದ ಜನರಿಂದ ಆಸ್ತಿಯನ್ನು ಖರೀದಿ ಮಾಡುವುದು ಅಷ್ಟು ಸುಲಭದ ಮಾತಲ್ಲ. ಹಾಗಂತ ಖರೀದಿ ಮಾಡಲು ಸಾಧ್ಯವೇ ಇಲ್ಲ ಅಂತಲು ಹೇಳಲಿಕ್ಕೆ ಬರುವುದಿಲ್ಲ. ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯಕ್ಕೆ ಸರ್ಕಾರ ಮಂಜೂರು ಮಾಡಿರುವ ಜಮೀನನ್ನು ಖರೀದಿ ಮಾಡಬೇಕಾದರೆ ಕೆಲವು ನಿಯಮಗಳನ್ನು ಪಾಲಿಸಬೇಕು. ಮಿಗಿಲಾಗಿ ರಾಜ್ಯ ಸರ್ಕಾರವೇ ಭೂ ಪರಭಾರೆಗೆ ಅನುಮತಿ ನೀಡಬೇಕು. ಎಸ್‌ಸಿ ಎಸ್‌ಟಿ ವರ್ಗಕ್ಕೆ ಸರ್ಕಾರ ಮಂಜೂರು ಮಾಡಿರುವ ಜಮೀನು ಖರೀದಿ ವೇಳೆ ಪಾಲಿಸಬೇಕಾದ ನಿಯಮಗಳು ಇಲ್ಲಿ ಸಮಗ್ರವಾಗಿ ವಿವರಿಸಲಾಗಿದೆ.

ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯಕ್ಕೆ ಸೇರಿದವರಿಗೆ ಸರ್ಕಾರ ಭೂಮಿಯನ್ನು ಮಂಜೂರು ಮಾಡಿರುತ್ತದೆ. ಆ ಜಮೀನನ್ನು ಖರೀದಿ ಮಾಡಲು, ದಾನ ಮಾಡಲು, ಅದಲು- ಬದಲು ಪಡೆಯಲು ಅಥವಾ ಒತ್ತೆ ಇಡಲು ಕೂಡ ಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು. ಒಂದು ವೇಳೆ ಈ ನಿಯಮಗಳಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಜಮೀನು ಮಾಡಿದರೂ ಅದು ಮತ್ತೆ ನಿಮಗೆ ಸಿಗುತ್ತದೆ ಎಂಬ ಗ್ಯಾರೆಂಟಿ ಇರುವುದಿಲ್ಲ. ಸಣ್ಣ ವಿವಾದ ಉಂಟಾದರೂ ಜಮೀನು ವಾಪಸು ಮಾರಾಟ ಮಾಡಿದವರಿಗೆ ಸೇರುತ್ತದೆ.

ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸರ್ಕಾರ ಮಂಜೂರು ಮಾಡಿರುವ ಜಮೀನಿನ ಯಾವುದೇ ದಸ್ತಾವೇಜನ್ನು (ವಿಭಾಗ ಹಕ್ಕು ಬಿಡುಗಡೆ ಮತ್ತು ವಿಲ್ ಹೊರತು ಪಡಿಸಿ) ನೋಂದಣಿ ಅಧಿಕಾರಿಗಳು ನೋಂದಣಿ ಮಾಡುವಂತಿಲ್ಲ. ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜಮೀನುಗಳ ಪರಭಾರೆ ನಿಷೇಧ ಕಾಯ್ದೆ 1978 ರ ಕಲಂ 6 ಪ್ರಕಾರ ನೋಂದಣಿ ಮಾಡುವಂತಿಲ್ಲ. ಮಾಡಿದರೆ ಅದು ಅಪರಾಧವಾಗುತ್ತದೆ.

ಈ ನಿಯಮದ ಪ್ರಕಾರ, ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಜನರಿಗೆ ಸರ್ಕಾರ ಮಂಜೂರು ಮಾಡಿದ ಆಸ್ತಿಯನ್ನು ಖರೀದಿಸುವಂತಿಲ್ಲ. ಖರೀದಿ ಮಾಡಬೇಕಾದರೆ, ಮಂಜೂರು ಮಾಡಿರುವ ರಾಜ್ಯ ಸರ್ಕಾರ ಪೂರ್ವಾನುಮತಿ ನೀಡಬೇಕು. ಪೂರ್ವಾನುಮತಿ ಪಡೆಯದೇ ಪರಿಶಿಷ್ಟ ಜಾತಿ ಮತ್ತು ಪಂಗಡ ವರ್ಗಕ್ಕೆ ಸೇರಿದವರ ಜಮೀನು ಪರಭಾರೆ ಪ್ರಕ್ರಿಯೆಯನ್ನು ನೋಂದಣಿ ಮಾಡಿದರೆ, ಸಂಬಂಧಪಟ್ಟ ನೋಂದಣಿ ಅಧಿಕಾರಿ ಮೇಲೆ ಕ್ರಿಮಿನಲ್ ದಾವೆ ಹಾಕಲಾಗುತ್ತದೆ. ಅಲ್ಲದೇ ಬಂಧನಕ್ಕೆ ಒಳಗಾಗಿ ಶಿಕ್ಷೆ ಅನುಭವಿಸಬೇಕಾಗುತ್ತದೆ.

ಆದರೆ, ಪರಿಶಿಷ್ಟ ಜಾತಿ ಮತ್ತು ಪಂಗಡದ ವರ್ಗಕ್ಕೆ ಸರ್ಕಾರ ಮಂಜೂರು ಮಾಡಿದ ಜಮೀನನ್ನು ಮಾರಾಟ ಮಾಡಲು ಸರ್ಕಾರ ಅನುಮತಿ ನೀಡಿದ್ದರೆ, ಅದನ್ನು ಪರಭಾರೆ ಮಾಡಲು ಕಾನೂನಿನಲ್ಲಿ ಅವಕಾಶವಿದೆ. ಸರ್ಕಾರ ಅನುಮತಿ ನೀಡಿದ ಬಳಿಕ, ಮಾರಾಟ ಮಾಡಿದಷ್ಟು ಜಮೀನನ್ನು ಇನ್ನೊಂದು ಕಡೆ ಸಂಬಂಧಪಟ್ಟ ಪರಿಶಿಷ್ಟ ಜಾತಿ ಮತ್ತು ಪಂಗಡದ ವ್ಯಕ್ತಿ ಖರೀದಿ ಮಾಡಬೇಕು.

ಪರಭಾರೆ ನಿಷೇಧ ಅವಧಿ 15 ವರ್ಷ:
ಪರಿಶಿಷ್ಟ ಜಾತಿ ಮತ್ತು ವರ್ಗದ ಜನರಿಗೆ ಸರ್ಕಾರ ಮಂಜೂರು ಮಾಡಿದ ಭೂಮಿಯನ್ನು ಹದಿನೈದು ವರ್ಷ ಪರಭಾರೆ ಮಾಡುವಂತಿಲ್ಲ. ಒಂದು ವೇಳೆ ಯಾರಿಗೂ ಗೊತ್ತಾಗದಂತೆ ಹದಿನೈದು ವರ್ಷಕ್ಕಿಂತಲೂ ಮೊದಲೇ ಪರಭಾರೆ ಮಾಡಿದರೆ, ಮಾರಾಟಗಾರ ಆ ಜಮೀನಿನ ಮೌಲ್ಯವನ್ನು ಸರ್ಕಾರಕ್ಕೆ ಪಾವತಿ ಮಾಡಬೇಕು.
ಒಂದು ವೇಳೆ, ಹದಿನೈದು ವರ್ಷಕ್ಕಿಂತಲೂ ಮೊದಲೇ ಮಾರಾಟ ಮಾಡಿ, ಅಷ್ಟೇ ಜಾಗವನ್ನು ಬೇರೆ ಕಡೆ ತಗೊಂಡಲ್ಲಿ, ಮಾರಾಟ ಮಾಡಿದ ಬಳಿಕ ಉಪ ವಿಭಾಗಾಧಿಕರಿಗಳಿಗೆ ಅರ್ಜಿ ನೀಡಿದರೆ, ಆ ಜಮೀನಿನ ಕ್ರಯಪತ್ರ ರದ್ದಾಗಿ, ಮೂಲ ಮಂಜೂರಾತಿದಾರರಿಗೆ ಜಮೀನನ್ನು ಮಂಜೂರು ಮಾಡಿ ಉಪ ವಿಭಾಗಾಧಿಕಾರಿಗಳು ಆದೇಶ ಮಾಡುತ್ತಾರೆ.

ಪರಿಶಿಷ್ಟ ವರ್ಗ ಮತ್ತು ಪಂಗಡದ ಸಮುದಾಯಕ್ಕೆ ಸರ್ಕಾರ ಮಂಜೂರು ಮಾಡಿದ ಜಮೀನನ್ನು ಹದಿನೈದು ವರ್ಷಗಳ ಬಳಿಕ ಪರಭಾರೆ ಮಾಡಲು ಮೊದಲು ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಬೇಕು. ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಅರ್ಜಿಯನ್ನು ರವಾನಿಸುತ್ತಾರೆ. ಸಚಿವ ಸಂಪುಟ ಅನುಮತಿ ನಿಡಿದ ಬಳಿಕ ಸದರಿ ಜಮೀನನ್ನು ಮಾರಾಟ ಮಾಡಲು ಅವಕಾಶವಿದೆ. ಷರತ್ತುಗಳ ಅನ್ವಯ ಮಾರಾಟ ಮಾಡಿದ ಜಮೀನಿಗೆ ಬದಲಿ ಜಮೀನು ಖರೀದಿ ಮಾಡಿದ ಬಳಿಕವಷ್ಟೇ ಉಪ ನೋಂದಣಾಧಿಕಾರಿಗಳು ಜಮೀನಿನ ನೋಂದಣಿ ಪ್ರಕ್ರಿಯೆ ಮಾಡುತ್ತಾರೆ. ಇಲ್ಲದಿದ್ದರೆ ನಿರಾಕರಿಸುತ್ತಾರೆ.

ಪರಿಶಿಷ್ಟರಿಂದ ಈ ಜಮೀನು ಖರೀದಿ ಮಾಡಬಹುದು:
ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯ ಸ್ವಂತ ಪರಿಶ್ರಮದಿಂದ ಸಾಮಾನ್ಯರಿಂದ ಖರೀದಿ ಮಾಡಿದ ಜಮೀನನ್ನು ಅನ್ಯರಿಗೆ ಮಾರಾಟ ಮಾಡಬಹುದು. ಇದಕ್ಕೆ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪಂಗಡದ ಜಮೀನು ಪರಭಾರೆ ನಿಷೇಧ ಕಾಯ್ದೆಯ ನಿಯಮಗಳು ಅನ್ವಯ ಆಗುವುದಿಲ್ಲ. ಆದರೆ ಆ ಜಮೀನು ಮೊತ್ತೊಬ್ಬ ದಲಿತ ಕುಟುಂಬಕ್ಕೆ ಸರ್ಕಾರ ಪರಭಾರೆ ಮಾಡಿರುವ ಜಮೀನು ಆಗಿರಬಾರದು. ಆದರೆ, ಜಮೀನು ಮಾರಾಟ ಮಾಡುವಾಗ, ಇದು ಸರ್ಕಾರದ ಮಂಜೂರಾತಿ ಜಮೀನು ಅಲ್ಲ ಎಂಬುದಕ್ಕೆ ದಾಖಲೆಗಳನ್ನು ಒದಗಿಸಬೇಕು. ನೋಂದಣಾಧಿಕಾರಿಗಳಿಗೆ ನೋಂದಣಿ ವೇಳೆ ದಾಖಲೆಗಳನ್ನು ಸಲ್ಲಿಸಬೇಕು. ಆಗ ಮಾತ್ರ ನೋಂದಣಿ ಮಾಡಲು ಅವಕಾಶವಿದೆ.

Exit mobile version