Revenue Facts

ಕರ್ನಾಟಕದಲ್ಲಿ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ನೇಮಕಾತಿ ಹಗರಣ,ಆರೋಪಿ ಆರ್. ಡಿ. ಪಾಟೀಲ್ ನಿವಾಸದ ಮೇಲೆ ಇಡಿ ಅಧಿಕಾರಿಗಳ ದಾಳಿ

ಕಲಬುರಗಿ, ಜನವರಿ 20;ಪಿಎಸ್ ಐ ಪರೀಕ್ಷಾ ಹಗಣದ ಕಿಂಗ್ ಪಿನ್ ಆರ್. ಡಿ. ಪಾಟೀಲ್ ಅಲಿಯಾಸ್ ರುದ್ರಗೌಡ ಪಾಟೀಲ್ ಅವರ ಅಕ್ಕಮಹಾದೇವಿ ಬಡಾವಣೆಯಲ್ಲಿರುವ ಮನೆಯ ಮೇಲೆ ಆದಾಯ ಮತ್ತು ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಎರಡು ತಂಡಗಳಲ್ಲಿ ಆಗಮಿಸಿದ ಅಧಿಕಾರಿಗಳು ಮನೆಯಲ್ಲಿ ತಪಾಸಣೆ ನಡೆಸಿದ್ದು, ಈ ವೇಳೆ ರುದ್ರಗೌಡ ಮನೆಯಲ್ಲಿದ್ದು ಅಧಿಕಾರಿಗಳಿಗೆ ಸಹಕಾರ ನೀಡುತ್ತಿದ್ದಾರೆಂಬ ಮೂಲಗಳು ಹೇಳಿವೆ.ಬೆಳಗ್ಗೆಯಿಂದಲೇ ನಿವಾಸದಲ್ಲಿ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.ಈ ಹಗರಣದಲ್ಲಿ ನೂರಾರು ಕೋಟಿ ರೂಪಾಯಿ ಹಣ ವರ್ಗಾವಣೆಯಾಗಿದೆ. ಈ ಹಿನ್ನಲೆಯಲ್ಲಿ ಕಲಬುರಗಿ ನಗರದ ಅಕ್ಕಮಹಾದೇವಿ ಕಾಲೋನಿಯಲ್ಲಿರುವ ಆರ್. ಡಿ. ಪಾಟೀಲ್ ನಿವಾಸದ ಮೇಲೆ ದಾಳಿ ನಡೆಸಲಾಗಿದೆ.

ಪಿಎಸ್‌ಐ ನೇಮಕಾತಿ ಪರೀಕ್ಷೆ ಬರೆದ ಅಭ್ಯರ್ಥಿಗಳಿಂದ ಮಧ್ಯವರ್ತಿಗಳ ಮೂಲಕ ಹಣ ಪಡೆದಿರುವುದು ಸಿಐಡಿ ತನಿಖೆ ವೇಳೆ ತಿಳಿದಿತ್ತು. ಆದ್ದರಿಂದ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ.ಈ ಹಗರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ 3.11 ಕೋಟಿ ರೂ. ಅಕ್ರಮ ಹಣ ವರ್ಗಾವಣೆಯಾಗಿದೆ ಎಂದು ಸಿಐಡಿ ಅಧಿಕಾರಿಗಳು ಉಲ್ಲೇಖಿಸಿದ್ದರು. ನೇಮಕಾತಿ ವಿಭಾಗದ ಎಡಿಜಿಪಿಯಾಗಿದ್ದ ಅಮೃತ್ ಪೌಲ್‌ಗೆ 1.5 ಕೋಟಿ ರೂ. ಹಣ ಸಂದಾಯವಾಗಿದೆ ಎಂಬುದು ಆರೋಪ.ಬೆಂಗಳೂರಿನ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪಿಎಸ್ಐ ನೇಮಕಾತಿ ಹಗರಣದ ಆರೋಪಿಗಳಾಗಿರುವ ಡಿವೈಎಸ್‌ಪಿ ಶಾಂತಕುಮಾರ್ ಸೇರಿದಂತೆ ಐವರ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿ ಪ್ರಕರಣ ದಾಖಲು ಮಾಡಿಕೊಂಡಿದೆ.

 

ಈ ಹಗರಣದಲ್ಲಿ ಲಂಚದ ವಹಿವಾಟು ನಡೆದ ಹಿನ್ನಲೆಯಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆಯ ಕಾಲಂ 7 (ಎ) (ಸಿ), 13 (1)ರ ಅನ್ವಯ ತನಿಖೆ ನಡೆಯಲಿದೆ. ಯಾವ ಆರೋಪಿಗಳು ಯಾವ ಮೂಲದಿಂದ ಹಣ ಸಂಪಾದನೆ ಮಾಡಿದ್ದಾರೆ, ಯಾರಿಗೆ ನೀಡಿದ್ದಾರೆ? ಎಂಬುದು ಸೇರಿದಂತೆ ಹಲವು ಆಯಾಮದಲ್ಲಿ ಇಡಿ ತನಿಖೆ ನಡೆಸಲಿದೆ.ಇನ್ನು ಪಿಎಸ್‌ಐ ನೇಮಕಾತಿ ಹಗರಣದ ಆರೋಪಿ ಬ್ಯಾಡರಹಳ್ಳಿ ಪೊಲೀಸ್‌ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ಕೆ. ಹರೀಶ್‌ಗೆ ಕರ್ನಾಟಕ ಹೈಕೋರ್ಟ್‌ ಬುಧವಾರ ಜಾಮೀನು ನಿರಾಕರಿಸಿತ್ತು.

Exit mobile version