Revenue Facts

ವಿದ್ಯುತ್ ಸಂಪರ್ಕ ಪಡೆಯಲು ಇನ್ನು ಮುಂದೆ ಓ.ಸಿ. ಪಡೆಯುವ ಅಗತ್ಯವಿಲ್ಲ!

ವಿದ್ಯುತ್ ಸಂಪರ್ಕ ಪಡೆಯಲು ಇನ್ನು ಮುಂದೆ ಓ.ಸಿ. ಪಡೆಯುವ ಅಗತ್ಯವಿಲ್ಲ!

ವಿದ್ಯುತ್ ಸಂಪರ್ಕ ಪಡೆದುಕೊಳ್ಳಲು ಈ ಹಿಂದೆ ಇದ್ದ ವಾಸ ಪ್ರಮಾಣಪತ್ರ (ಒ.ಸಿ) ಕಡ್ಡಾಯ ಸಲ್ಲಿಕೆಯ ನಿಯಮವನ್ನು ಕರ್ನಾಟಕ ಸರ್ಕಾರದ ನಗರಾಭಿವೃದ್ಧಿ ಪ್ರಾಧಿಕಾರವು ಈಚೆಗೆ ರದ್ದುಗೊಳಿಸಿದೆ. ಇದರಿಂದಾಗಿ ಬೆಂಗಳೂರಿನ ಅಂದಾಜು ಐದು ಲಕ್ಷ ಗೃಹಬಳಕೆದಾರರು ಮತ್ತು ವಸತಿ ಸಮುಚ್ಚಯಗಳು ಹಾಗೂ ರಾಜ್ಯದಾದ್ಯಂತ ಲಕ್ಷಾಂತರ ವಸತಿ ಮಾಲೀಕರು ನಿರಾಳರಾಗುವಂತಾಗಿದೆ.

ಈ ಹಿಂದಿನ ನಿಯಮದಿಂದಾಗಿ ಲಕ್ಷಾಂತರ ಮನೆಗಳು ವಿದ್ಯುತ್ ಸಂಪರ್ಕದಿಂದ ವಂಚಿತವಾಗಿದ್ದವು.

ಕಟ್ಟಡ ನಿರ್ಮಾಣದ ಬೈಲಾಗಳನ್ನು ಬೇಕಾಬಿಟ್ಟಿ ಉಲ್ಲಂಘಿಸುವುದನ್ನು ತಡೆಯುವ ಉದ್ದೇಶದಿಂದ ಈ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ನಿಯಮ ಉಲ್ಲಂಘಿಸುವ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕವನ್ನು ನಿರಾಕರಿಸಿತ್ತು. ಪರಿಣಾಮವಾಗಿ ಬೆಂಗಳೂರಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಡೆಯಿಂದ ವಾಸ ಪ್ರಮಾಣಪತ್ರ ಪಡೆಯುವಲ್ಲಿ ವಿಫಲವಾದ ಸಾಕಷ್ಟು ಮನೆಗಳು ಮತ್ತು ವಸತಿ ಸಮುಚ್ಚಯಗಳು ವಿದ್ಯುತ್ ಸಂಪರ್ಕವಿಲ್ಲದೇ ಕತ್ತಲಲ್ಲಿದ್ದವು. ಆದರೆ ಹೊಸ ನಿಯಮದ ಪ್ರಕಾರ ಗುರುತಿನ ಚೀಟಿ ಮತ್ತು ಮಾಲೀಕತ್ವದ ದಾಖಲೆಗಳನ್ನು ಸಲ್ಲಿಸಿ ಬೆಸ್ಕಾಂ ಕಡೆಯಿಂದ ವಿದ್ಯುತ್ ಸಂಪರ್ಕವನ್ನು ಪಡೆದುಕೊಳ್ಳುವ ಅವಕಾಶ ಸಿಕ್ಕಿದೆ.

ಹಳೆಯ ನಿಯಮದಿಂದ ಅಸಮಾಧಾನಗೊಂಡಿದ್ದ ನಾಗರಿಕರು, ಈ ನಿಯಮವನ್ನು ರದ್ದು ಮಾಡುವಂತೆ ಸರ್ಕಾರವನ್ನು ಮೇಲಿಂದ ಮೇಲೆ ಒತ್ತಾಯಿಸುತ್ತಲೇ ಇದ್ದರು. ಅಷ್ಟಲ್ಲದೇ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಹಾಗೂ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ಕೂಡ ಈ ನಿಯಮವನ್ನು ವಾಪಸ್ ಪಡೆಯಬೇಕು ಮತ್ತು ಇಂಥ ಮನೆಗಳಿಗೆ ವಿದ್ಯುತ್ ಸಂಪರ್ಕ ಒದಗಿಸಬೇಕು ಎಂದು ಮನವಿ ಮಾಡಿತ್ತು.

ನಂತರ ಈ ವಿಚಾರವಾಗಿ ಕರ್ನಾಟಕ ಸರ್ಕಾರ ಕೂಡ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ (ಕೆಇಆರ್ಸಿ) ಪತ್ರ ಬರೆದಿತ್ತು. ಸಮಸ್ಯೆ ಕುರಿತು ಗಮನ ಹರಿಸಿದ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ಪ್ರಸ್ತಾವವನ್ನು ಒಪ್ಪಿಕೊಂಡ ತರುವಾಯ ಸರ್ಕಾರವು ಈ ಕುರಿತು ಅಧಿಸೂಚನೆ ಹೊರಡಿಸಿದೆ.

ಇಂಧನ ಸಚಿವ ವಿ.ಸುನಿಲ್ಕುಮಾರ್ ಅವರು, ʻಎಲ್ಲರಿಗೂ ವಿದ್ಯುತ್ ಸಂಪರ್ಕ ಕಲ್ಪಿಸುವುದು ನಮ್ಮ ಸರ್ಕಾರದ ಉದ್ದೇಶ. ಅದರಂತೆ ಬೆಂಗಳೂರು ಮತ್ತು ರಾಜ್ಯದ ಇತರೆ ಭಾಗಗಳಲ್ಲಿನ ಯಾರೂ ವಿದ್ಯುತ್ ಸಂಪರ್ಕದಿಂದ ವಂಚಿತರಾಗದಂತೆ ನಾವು ಕಾರ್ಯನಿರ್ವಹಿಸುತ್ತಿದ್ದೇವೆ. ನಿವಾಸಿಗಳಷ್ಟೇ ಅಲ್ಲದೇ ಬೆಂಗಳೂರಿನ ಎಲ್ಲ ಶಾಸಕರು ಕೂಡ ಈ ನಿಯಮವನ್ನು ರದ್ದು ಮಾಡುವಂತೆ ಮನವಿ ಮಾಡಿದ್ದರು. ಈಗ ನಿವಾಸಿಗಳು ಕೇವಲ ಗುರುತಿನ ಚೀಟಿ ಮತ್ತು ಮಾಲೀಕತ್ವದ ದಾಖಲೆಗಳನ್ನು ಸಲ್ಲಿಸಿ ವಿದ್ಯುತ್ ಸಂಪರ್ಕ ಪಡೆಯಬಹುದಾಗಿದೆʼ ಎಂದಿದ್ದಾರೆ.

Exit mobile version