ಭಾರತದ ಸಿಲಿಕಾನ್ ವ್ಯಾಲಿ, ಸ್ಟಾರ್ಟ್‌ಅಪ್‌ಗಳ ರಾಜಧಾನಿ ಎಂದು ಕರೆಯಿಸಿಕೊಳ್ಳುವ ಬೆಂಗಳೂರು ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಏಷ್ಯಾದ ಪ್ರಮುಖ ನಗರಗಳಲ್ಲಿ ಒಂದು. ವ್ಯಾವಹಾರಿಕ, ವಾಸಕ್ಕೆ ಮತ್ತು ಚಿಲ್ಲರೆ ವಹಿವಾಟು ರಿಯಲ್ ಎಸ್ಟೇಟ್ ಹೂಡಿಕೆಗೆ ಆದ್ಯತೆಯ ತಾಣವಾಗಿ ರೂಪುಗೊಂಡಿದೆ. ಈ ನಗರದ ಕಾಸ್ಮೋಪಾಲಿಟನ್ ಸಂಸ್ಕೃತಿ, ಹೇರಳ ಉದ್ಯೋಗಾವಕಾಶ, ಯುವಜನತೆಯ ಪ್ರಾಬಲ್ಯ, ಸ್ಮಾರ್ಟ್ ಮೂಲಸೌಕರ್ಯ ಮತ್ತು ಅನುಕೂಲಕರ ವಾತಾವರಣವು ಐಟಿ, ಆರ್&ಡಿ, ಏರೋಸ್ಪೇಸ್, ಔಷಧ ಮತ್ತಿತರ ಸಂಸ್ಥೆಗಳ ನೆಚ್ಚಿನ ಕೇಂದ್ರವಾಗಿ ಮಾರ್ಪಡುವಂತೆ ಮಾಡಿದೆ.
ವರದಿಯೊಂದರ ಪ್ರಕಾರ, ಬೆಂಗಳೂರಿನ ವಸತಿ ಯೋಜನೆಯ ಮಾರುಕಟ್ಟೆ 2021ರಲ್ಲಿ ಶೇ 61ರಷ್ಟು ಪ್ರಗತಿ ಕಾಣುವ ಮೂಲಕ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. ಈ ಬೆಳವಣಿಗೆಯ ಕೇಂದ್ರ ಬಿಂದು ಆಗಿರುವುದು ಜಾಗತಿಕ ಹೂಡಿಕೆದಾರರ ತವರು ಮತ್ತು ಐಷಾರಾಮಿ ಜೀವನಶೈಲಿಯ ಉತ್ತರ ಬೆಂಗಳೂರು. 2021ರ ದ್ವಿತೀಯಾರ್ಧದಲ್ಲಿ ಅದಕ್ಕೂ ಹಿಂದಿನ ವರ್ಷದ ದ್ವಿತೀಯಾರ್ಧಕ್ಕೆ ಹೋಲಿಸಿದಲ್ಲಿ ಶೇ 134ರಷ್ಟು ಪ್ರಗತಿ ಕಂಡಿದೆ.
ಕಳೆದ ದಶಕದಲ್ಲಿ ಉತ್ತರ ಬೆಂಗಳೂರು ಮೂಲಸೌಕರ್ಯಗಳ ಮೇಲಿನ ಭಾರಿ ಹೂಡಿಕೆಯ ಪ್ರಯೋಜನ ಪಡೆದಿದೆ. ಅದಕ್ಕೆ ಕಾರಣ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ. ಈ ಭಾಗವು ಭಾರತದಲ್ಲೇ ಮೊದಲ ಬಾರಿಗೆ ವಿಮಾನನಿಲ್ದಾಣದ ಸುತ್ತ ಕೇಂದ್ರೀಕೃತವಾಗಿರುವ (ಏರೋಟ್ರೋಪೋಲಿಸ್) ಪ್ರದೇಶ ಎಂಬ ಖ್ಯಾತಿ ಗಳಿಸಿತ್ತು. ಉತ್ತರ ಬೆಂಗಳೂರು ಬೃಹತ್ ಪ್ರಮಾಣದ ಐಟಿ ಮತ್ತು ವಿಶೇಷ ಆರ್ಥಿಕ ವಲಯ ಪ್ರಗತಿಗೂ ಸಾಕ್ಷಿಯಾಗಿದೆ.
ಸಮೀಪದ ಸಾಫ್ಟ್ ವೇರ್ ಮತ್ತು ಹಾರ್ಡ್‌ವೇರ್ ಟೆಕ್ನಾಲಜಿ ಪಾರ್ಕ್, ದೇವನಹಳ್ಳಿ ಬಿಸಿನೆಸ್ ಪಾರ್ಕ್ ಮತ್ತು ಏರೋಸ್ಪೇಸ್ ಪಾರ್ಕ್ ಕೂಡ ಇಲ್ಲಿ ವಸತಿ ಖರೀದಿಗೆ ಇಂಬು ನೀಡುವಂತಿದೆ. ಈ ಭಾಗದಲ್ಲಿ ಇನ್ನೂ ಮೂರೂವರೆ ಲಕ್ಷ ಹೊಸ ಉದ್ಯೋಗ ಸೃಷ್ಟಿಯಾಗಲಿದೆ ಮತ್ತು 2025ರ ಹೊತ್ತಿಗೆ ಬೆಂಗಳೂರಿನ ಶೇ 30ರಷ್ಟು ಕಚೇರಿಗಳು ಇಲ್ಲಿರುತ್ತವೆ ಎಂಬ ಮಾತೂ ಇದೆ. ಆ ವೇಳೆಗೆ ಇಲ್ಲಿ ಇನ್ನೂ 1 ಲಕ್ಷ ಮನೆಗಳ ಬೇಡಿಕೆ ಸೃಷ್ಟಿಯಾಗುವ ಎಲ್ಲ ನಿರೀಕ್ಷೆಗಳಿವೆ.
ಸಾಂಕ್ರಾಮಿಕದ ಪರಿಣಾಮವಾಗಿ ಹೆಚ್ಚಿನ ಗ್ರಾಹಕರು ಆರೋಗ್ಯ, ಸುರಕ್ಷತೆ ಮತ್ತು ಸಮತೋಲಿತ ಜೀವನಶೈಲಿಯತ್ತ ಗಮನ ಹರಿಸುತ್ತಿದ್ದಾರೆ. ಕೌಟುಂಬಿಕ ಜೀವನ ಮತ್ತು ಜೀವನಶೈಲಿಯನ್ನು ಉತ್ತಮಗೊಳಿಸುವ ಸೌಕರ್ಯಗಳನ್ನು ಬಯಸುತ್ತಿದ್ದಾರೆ. ಇದು ಬಾಡಿಗೆ ಮನೆಗಳಿಂದ ವಿಶಾಲ ಸ್ಥಳಾವಕಾಶ, ಶುದ್ಧ ಗಾಳಿ, ಉದ್ಯಾನ, ಖಾಸಗಿ ಈಜುಕೊಳ, ಬಾಲ್ಕನಿಯಂತಹ ಸೌಕರ್ಯವಿರುವ ಸ್ವಂತ ಮನೆಗೆ ಹೋಗುವ ತವಕವನ್ನು ಹೆಚ್ಚಿಸುತ್ತಿದೆ.
ಸಾಕಷ್ಟು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಅಂತರರಾಷ್ಟ್ರೀಯ ಶಾಲೆಗಳು, ಖರೀದಿ ಕೇಂದ್ರಗಳಂತಹ ಸಾಮಾಜಿಕ ಮೂಲಸೌಕರ್ಯಗಳೊಂದಿಗೆ ಉತ್ತರ ಬೆಂಗಳೂರಿನಲ್ಲಿ ಡೆವಲಪರ್‌ಗಳು ಐಷಾರಾಮಿ ಜೀವನಕ್ಕೆ ಬೇಕಾಗುವ ವಾತಾವರಣವನ್ನು ಸೃಷ್ಟಿಸಿದ್ದಾರೆ. ಅಲ್ಲದೆ, ಉತ್ತರ ಬೆಂಗಳೂರಿನ ಹೆಚ್ಚಿನ ಭಾಗಗಳು ಇನ್ನೂ ಅಭಿವೃದ್ಧಿ ಹಂತದಲ್ಲಿವೆ. ಐಟಿ ಮತ್ತು ಇತರ ಉದ್ಯಮಗಳಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿದ್ದಂತೆ ಇಲ್ಲಿ ಮನೆ ಖರೀದಿಸುವವರ ಸಂಖ್ಯೆ ಹೆಚ್ಚಳವಾಗುವ ಜೊತೆಗೆ ಇಲ್ಲಿ ಬೆಲೆಗಳೂ ಏರುಮುಖವಾಗುವುದು ಖಚಿತ.
ಉತ್ತರ ಬೆಂಗಳೂರು ಅನುಭವಿ ಹೂಡಿಕೆದಾರರಿಗೆ ಮಾತ್ರವಲ್ಲದೆ ಮೊದಲ ಬಾರಿ ಮನೆ ಖರೀದಿದಾರರು ಮತ್ತು ದೀರ್ಘಾವಧಿಯ ಹೂಡಿಕೆಗೆ ಎದುರುನೋಡುತ್ತಿರುವ ಯುವ ಸಮುದಾಯವನ್ನು ಕೂಡ ಆಕರ್ಷಿಸುತ್ತಿದೆ. ನಗರ ಹಾಗೂ ವಿಮಾನ ನಿಲ್ದಾಣಕ್ಕೆ ಅತ್ಯುತ್ತಮ ಸಂಪರ್ಕ, ಭವಿಷ್ಯದ ಉದ್ಯೋಗಾವಕಾಶ, ಬೆಳವಣಿಗೆಯ ಸಾಮರ್ಥ್ಯದ ಕಾರಣಕ್ಕೆ ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಉತ್ತರ ಬೆಂಗಳೂರು ಒಂದು ʻಗೇಮ್ ಚೇಂಜರ್ʼ ಎಂಬ ಆಶಾಭಾವ ಮೂಡಿಸಿದೆ.