Revenue Facts

ಶೀಘ್ರದಲ್ಲೇ ರಾಷ್ಟ್ರೀಯ ಚಿಲ್ಲರೆ ವ್ಯಾಪಾರ ನೀತಿ ಜಾರಿ ಸಣ್ಣ ವ್ಯಾಪಾರಿಗಳಿಗೆ ಅನುಕೂಲ!

ಶೀಘ್ರದಲ್ಲೇ ರಾಷ್ಟ್ರೀಯ ಚಿಲ್ಲರೆ ವ್ಯಾಪಾರ ನೀತಿ ಜಾರಿ   ಸಣ್ಣ ವ್ಯಾಪಾರಿಗಳಿಗೆ ಅನುಕೂಲ!

ಚಿಲ್ಲರೆ ವ್ಯಾಪಾರದಲ್ಲಿ ಸುಧಾರಣೆಗೆ ಕೇಂದ್ರ ಸರ್ಕಾರ ಕ್ರಾಂತಿಕಾರಿ ಕ್ರಮ ಕೈಗೊಂಡಿದ್ದು, ರಾಷ್ಟ್ರೀಯ ಚಿಲ್ಲರೆ ವ್ಯಾಪಾರ ನೀತಿ ಜಾರಿಗೆ ಸಿದ್ಧತೆ ಕೈಗೊಂಡಿದೆ.ಇದೇ ಮೊದಲ ಬಾರಿಗೆ ಚಿಲ್ಲರೆ ವ್ಯಾಪಾರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಮಗ್ರ ರಾಷ್ಟ್ರೀಯ ನೀತಿ ಘೋಷಣೆ ಮಾಡುವ ಸಾಧ್ಯತೆ ಇದೆ.ಸುಲಲಿತ ವ್ಯಾಪಾರವನ್ನು ಉತ್ತೇಜಿಸುವ ಉದ್ದೇಶದಿಂದ ಇಟ್ಟಿಗೆ ಮತ್ತು ಗಾರೆ ಚಿಲ್ಲರೆ ವ್ಯಾಪಾರಿಗಳಿಗೆ ರಾಷ್ಟ್ರೀಯ ಚಿಲ್ಲರೆ ವ್ಯಾಪಾರ ನೀತಿಯನ್ನು ತರುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

ಜಿ.ಎಸ್‌.ಟಿ. ಅಡಿ ನೋಂದಾಯಿತ ವ್ಯಾಪಾರಿಗಳಿಗೆ ಅಪಘಾತ ವಿಮೆ ಜಾರಿಗೊಳಿಸಲಾಗುವುದು ಎಂದು ಕೇಂದ್ರದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಚಿಲ್ಲರೆ ವ್ಯಾಪಾರ ನೀತಿ ಅಡಿ ವ್ಯಾಪಾರಿಗೆ ಸುಧಾರಿತ ಮೂಲ ಸೌಕರ್ಯ ಹಾಗೂ ಹೆಚ್ಚು ಸಾಲ ಸೌಲಭ್ಯ ಕಲ್ಪಿಸಲಾಗುವುದು. ಚಿಲ್ಲರೆ ವ್ಯಾಪಾರದ ಆಧುನಿಕರಣ, ಡಿಜಿಟಲೀಕರಣ, ಸರಕು ವಿತರಣೆಗೆ ಆಧುನಿಕ ಮೂಲ ಸೌಕರ್ಯ, ಕೌಶಲ್ಯ ಅಭಿವೃದ್ಧಿಗೆ ಪ್ರೋತ್ಸಾಹ, ಕಾರ್ಮಿಕರ ಉತ್ಪಾದಕತೆ ಹೆಚ್ಚಳ, ದೂರು ಪರಿಹಾರ ವ್ಯವಸ್ಥೆ ಜಾರಿಗೊಳಿಸುವ ಸಾಧ್ಯತೆ ಇದೆ.

ಕೇಂದ್ರ ವಾಣಿಜ್ಯ ಸಚಿವಾಲಯದಿಂದ ಹಣಕಾಸು ಇಲಾಖೆ ಜೊತೆ ಸೇರಿ ನಿಯಮಗಳನ್ನು ರೂಪಿಸಲಾಗುತ್ತಿದೆ. ಚಿಲ್ಲರೆ ವ್ಯಾಪಾರಿಗಳಿಗೆ ಕಡಿಮೆ ಬಡ್ಡಿ ದರಕ್ಕೆ ಸುಲಭವಾಗಿ ಸಾಲ ದೊರೆಕಿಸಿಕೊಡಲಾಗುವುದು ಎಂದು ಹೇಳಲಾಗಿದೆ.

ಭಾರತ ವಿಶ್ವದಲ್ಲಿ ಐದನೇ ಅತಿ ದೊಡ್ಡ ಚಿಲ್ಲರೆ ವ್ಯಾಪಾರ ವಲಯ ಹೊಂದಿದ ದೇಶವಾಗಿದ್ದು, ಇ- ಕಾಮರ್ಸ್ ಮಾತ್ರವಲ್ಲದೆ, ಭೌತಿಕ ವ್ಯಾಪಾರ ನಡೆಸುವವರಿಗೂ ಅನುಕೂಲವಾಗುವಂತೆ ನೀತಿ ರೂಪಿಸಲು ಸರ್ಕಾರ ಕ್ರಮ ಕೈಗೊಂಡಿದೆ.

ಉದ್ಯಮ ಮತ್ತು ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆಯ (ಡಿಪಿಐಐಟಿ) ಜಂಟಿ ಕಾರ್ಯದರ್ಶಿ ಸಂಜೀವ್ ಮಾತನಾಡಿ, ಈ ನೀತಿಯು ವ್ಯಾಪಾರಿಗಳಿಗೆ ಉತ್ತಮ ಮೂಲಸೌಕರ್ಯ ಮತ್ತು ಹೆಚ್ಚಿನ ಸಾಲವನ್ನು ಒದಗಿಸಲು ಸಹಾಯ ಮಾಡುತ್ತದೆ ಎಂದಿದ್ದಾರೆ.

ಆನ್‌ಲೈನ್ ಚಿಲ್ಲರೆ ವ್ಯಾಪಾರಿಗಳಿಗಾಗಿ ಇ-ಕಾಮರ್ಸ್ ನೀತಿಯನ್ನು ತರಲು ಇಲಾಖೆಯು ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಹೇಳಿದರು.ಇ-ಕಾಮರ್ಸ್ ಮತ್ತು ಚಿಲ್ಲರೆ ವ್ಯಾಪಾರಿಗಳ ನಡುವೆ ಸಮನ್ವಯ ಇರಬೇಕೆಂದು ನಾವು ಬಯಸುತ್ತೇವೆ” ಎಂದು ಸಂಜೀವ್ ಎಫ್‌ಎಂಸಿಜಿ ಮತ್ತು ಇ-ಕಾಮರ್ಸ್ ಕುರಿತ ಸಮ್ಮೇಳನದಲ್ಲಿ ಹೇಳಿದರು.
ಇಲಾಖೆಯು ಎಲ್ಲಾ ಚಿಲ್ಲರೆ ವ್ಯಾಪಾರಿಗಳಿಗೆ ವಿಮಾ ಯೋಜನೆಯನ್ನು ರೂಪಿಸುವ ಪ್ರಕ್ರಿಯೆಯಲ್ಲಿದೆ. ಅಪಘಾತ ವಿಮಾ ಯೋಜನೆಯು ವಿಶೇಷವಾಗಿ ದೇಶದ ಸಣ್ಣ ವ್ಯಾಪಾರಿಗಳಿಗೆ ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.

Exit mobile version