ಶಿವಮೊಗ್ಗ: ಫೆ 27;ಶಿವಮೊಗ್ಗ-ಭದ್ರವತಿ ನಗರಗಳ ಮಧ್ಯದಲ್ಲಿರುವ ಸೋಗಾನೆ ಗ್ರಾಮದ ಬಳಿ 778.62 ಎಕರೆ ಪ್ರದೇಶದಲ್ಲಿ ₹449.22 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ನೂತನ ವಿಮಾನ ನಿಲ್ದಾಣವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು (ಸೋಮವಾರ) ಲೋಕಾರ್ಪಣೆ ಮಾಡಲಿದ್ದಾರೆ.
ಹೆಚ್.ಡಿ ಕುಮಾರ ಸ್ವಾಮಿ ಹಾಗೂ ಬಿ.ಎಸ್. ಯಡಿಯೂರಪ್ಪ ರವರ ಸಮಿಶ್ರ ಸರ್ಕಾರ 2007ರಲ್ಲಿ ಸೋಗಾನೆಯಲ್ಲಿ ₹220 ಕೋಟಿ ವೆಚ್ಚದ ಕಿರು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಅನುಮೋದನೆ ನೀಡಿತ್ತು. ಮೊದ ಮೊದಲು ಕಾಮಗಾರಿ ಶುರುವಾಯಿತ್ತಾದರೂ ಪಡೆದಿದ್ದ ಗುತ್ತಿಗೆದಾರರು ಕಾಮಗಾರಿ ನಿರ್ವಹಣೆಯಿಂದ ಹಿಂದೆ ಸರಿದಿದ್ದರು. ನಂತರ ಬಂದ ಸರ್ಕಾರಗಳು ಆಸಕ್ತಿ ತೋರದ ಕಾರಣ ವಿಮಾನ ನಿಲ್ದಾಣ ಕಾಮಗಾರಿ ಮಂದಗತಿಯಲ್ಲಿ ಸಾಗಿತ್ತು.
2019ರಲ್ಲಿ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ತಮ್ಮ ತವರು ಕ್ಷೇತ್ರದ ವಿಮಾನ ನಿಲ್ದಾಣದ ವಿನ್ಯಾಸ ಬದಲಿಸಿತ್ತು. ಬೋಯಿಂಗ್ ನಂತಹ ದೊಡ್ಡ ವಿಮಾನ ಇಳಿಯಲು ಅವಕಾಶ ಕಲ್ಪಿಸಿ, ರನ್ ವೇ ಉದ್ದವನ್ನು 2.05 ಕಿ.ಮೀ ಬದಲಿಗೆ, 3.20 ಕಿ.ಮೀ.ಗೆ ಹೆಚ್ಚಿಸಲಾಯಿತು. ರಾತ್ರಿ ವೇಳೆ ವಿಮಾನ ಇಳಿಯುವ ಸೌಲಭ್ಯ ಕಲ್ಪಿಸಲಾಯಿತು. ಇದರಿಂದ ಯೋಜನಾ ವೆಚ್ಚ ₹220 ಕೋಟಿಯಿಂದ ₹449.22 ಕೋಟಿಗೆ ಏರಿಕೆಯಾಯಿತು. ವಿಮಾನಗಳ ಹಾರಟಕ್ಕೆ ಸಿದ್ದವಾಗಿರುವ ಈ ವಿಮಾನ ನಿಲ್ದಾಣವನ್ನು ರಾಜ್ಯ ಪ್ರಮಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ರವರು ಇಂದು ಲೋಕರ್ಪಣೆ ಮಾಡಿ ವಿಮಾನ ನಿಲ್ದಾಣದ ಹೆಸರನ್ನು ಸಹ ಘೋಷಿಸಲಿದ್ದಾರೆ. ವಿಮಾಣ ನಿಲ್ದಾಣಕ್ಕೆ ಬಿಜೆಪಿಯ ಹಿರಿಯ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರವರ ಹೆಸರನ್ನು ನಾಮಕರಣ ಮಾಡುವ ಸಾಧ್ಯತೆಗಳಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ನರೇಂದ್ರ ಮೋದಿ ರವರು ಶಿವಮೊಗ್ಗ– ಶಿಕಾರಿಪುರ– ರಾಣೆಬೆನ್ನೂರು ನಡುವೆ ನೂತನ ರೈಲು ಮಾರ್ಗ ನಿರ್ಮಾಣ ಕಾಮಗಾರಿಗೂ ಚಾಲನೆ ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ತಿಳಿಸಿದ್ದಾರೆ.