ಬೆಂಗಳೂರು: ಮೈಸೂರು ಜಿಲ್ಲೆ ನಂಜನಗೂಡು ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ಅವರಣದಲ್ಲಿ ವಿಐಪಿ ಅತಿಥಿಗೃಹ, ಕೊಠಡಿಗಳ ನಿರ್ಮಾಣ, ಡಾರ್ಮೆಟರಿ ಕಟ್ಟಡಗಳ ನಿರ್ಮಾಣಕ್ಕೆ ಅನುಮೋದನೆ ನೀಡಿ ಸರ್ಕಾರ ಆದೇಶ ಹೊರಡಿಸಿದೆ.
ಸುಪ್ರಸಿದ್ಧವಾದ ಶ್ರೀಕಂಠೇಶ್ವರ ಸ್ವಾಮಿ ದೇವಾಲಯ ಕರ್ನಾಟದ ಶ್ರೀಮಂತ ದೇವಾಲಯಗಳಲ್ಲಿ ಒಂದು. ಕಪಿಲಾ ಮತ್ತು ಗುಂಡ್ಲುಹೊಳೆ ಸಂಗಮದ ಬಳಿ ಪೂರ್ವಾಭಿಮುಖವಾಗಿ ಇರುವ ದೇವಾಲಯ ದ್ರಾವಿಡ ಶೈಲಿಯ ಕಟ್ಟಡ ಹೊಂದಿದೆ. ರಾಜ್ಯದ ನಾನಾ ಭಾಗಗಳಿಂದ ಪ್ರತಿನಿತ್ಯ ಸಾವಿರಾರು ಭಕ್ತರು ಬರುತ್ತಾರೆ. ಅವರ ಅನುಕೂಲಕ್ಕಾಗಿ ವಸತಿ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಮುಂದಾಗಿದೆ.
ದೇವಾಲಯದ ಆವರಣದಲ್ಲಿ ವಿಐಪಿ ಅತಿಥಿಗೃಹ, 75 ಕೊಠಡಿಗಳು, ಡಾರ್ಮೆಟರಿ ಕಟ್ಟಡ ನಿರ್ಮಾಣಕ್ಕಾಗಿ 16.52 ಕೋಟಿ ರೂ. ಬಿಡುಗಡೆ ಮಾಡಿ ಕಂದಾಯ ಇಲಾಖೆಯ ಧಾರ್ಮಿಕ ದತ್ತಿ ವಿಭಾಗದಿಂದ ಆದೇಶ ಹೊರಡಿಸಲಾಗಿದೆ.
ಸದ್ಯ ಶ್ರೀಕಂಠೇಶ್ವರ ದೇವಾಲಯಕ್ಕೆ ಬರುವ ಭಕ್ತರಿಗಾಗಿ ಶ್ರೀ ಗಿರಿಜಾ ಕಲ್ಯಾಣ ಮಂದಿರದಲ್ಲಿ 24 ಕೊಠಡಿಗಳು, ಡಾರ್ಮೆಟರಿಯಲ್ಲಿ 34 ಕೊಠಡಿಗಳ ವ್ಯವಸ್ಥೆ ಇದೆ. ಇತ್ತೀಚಿನ ದಿನಗಳಲ್ಲಿ ನಾನಾ ಭಾಗಗಳಿಂದ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಹೀಗಾಗಿ ದೇವಾಲಯದ ಆವರಣದಲ್ಲಿ ವಿಐಪಿ ಅತಿಥಿಗೃಹ, 100 ಕೊಠಡಿಗಳ ನಿರ್ಮಾಣ ಹಾಗೂ ಡಾರ್ಮೆಟರಿ ಕಟ್ಟಡ ನಿರ್ಮಾಣಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಬಳಕೆಯಾಗದ ವಿಐಪಿ ಗೆಸ್ಟ್‌ಹೌಸ್:
ಇನ್ನು ದೇವಾಲಯಕ್ಕೆ ಬರುವ ಗಣ್ಯವ್ಯಕ್ತಿಗಳಿಗಾಗಿ ವಿಐಪಿ ಗೆಸ್ಟ್‌ಗೌಸ್ ಇದ್ದರೂ ಸಹ ಹಲವಾರು ವರ್ಷಗಳಿಂದ ಉಪಯೋಗಿಸದೇ ಇರುವುದರಿಂದ ಕೆಲವರು ಮೈಸೂರಿನ ಖಾಸಗಿ ಹೋಟೆಲ್‌ಗಳಲ್ಲಿ ಉಳಿದುಕೊಂಡು ಇಲ್ಲಿಗೆ ಬರುತ್ತಾರೆ. ವಿಶೇಷ ಪೂಜಾ ಸಂದರ್ಭದಲ್ಲಿ ಸಾಮಾನ್ಯ ಗೆಸ್ಟ್‌ಹೌಸ್ ಉಪಯೋಗಿಸಬೇಕಾದ ಅನಿರ್ವಾಯತೆ ಇದೆ. ಕೆಲವು ಪ್ರವಾಸಿಗರು ಉತ್ತಮ ಕೊಠಡಿಗಳು ಇಲ್ಲದ ಕಾರಣ ಬೇರೆ ಕಡೆ ವಾಸ್ತವ್ಯ ಮಾಡುತ್ತಿದ್ದಾರೆ ಎಂದು ಸರ್ಕಾರದ ಗಮನಕ್ಕೆ ತರಲಾಗಿತ್ತು.
ದೇವಾಲಯಕ್ಕೆ ಬರವ ಭಕ್ತರ ಅನುಕೂಲಕ್ಕಾಗಿ ಸರ್ಕಾರ ವಿವಿಧ ಹಂತದ ವಸತಿ ಯೋಜನೆಗೆ ಅನುಮತಿ ನೀಡಿದ್ದು, ದೇವಾಲಯವು ಕೇಂದ್ರ ಸರ್ಕಾರದ ಪುರಾತತ್ವ ಇಲಾಖೆ ವ್ಯಾಪ್ತಿಗೆ ಒಳಪಡುವುದರಿಂದ ಸೂಕ್ತ ಅನುಮತಿ ಪಡೆದು ನಿರ್ಮಾಣ ಕಾರ್ಯ ಕೈಗೊಳ್ಳಬೇಕು ಎಂದು ಷರತ್ತಿಗೆ ಒಳಪಡಿಸಿ ಅನುಮೋದನೆ ನೀಡಲಾಗಿದೆ.
ಯಾವುದಕ್ಕೆ ಎಷ್ಟು ಹಣ ಬಿಡುಗಡೆ?
ದೇವಾಲಯ ಆವರಣದಲ್ಲಿ ಡಾರ್ಮೆಟರಿ ಕಟ್ಟಡಗಳ ನಿರ್ಮಾಣ- 3.85 ಕೋಟಿ ರೂ.,
ವಿಐಪಿ ಅತಿಥಿಗೃಹ ನಿರ್ಮಾಣ- 2.70 ಕೋಟಿ ರೂ.
75 ಕೊಠಡಿಗಳ ನಿರ್ಮಾಣ- 9.97 ಕೋಟಿ ರೂ. ಅನುದಾನಕ್ಕೆ ಅನುಮೋದನೆ ನೀಡಲಾಗಿದೆ.