ಬೆಂಗಳೂರು: ಮೇ-29:ಗ್ಯಾರಂಟಿ ಹೆಸರಲ್ಲಿ ಭರ್ಜರಿ ಮತಗಳನ್ನು ಬೇಟೆಯಾಡಿ ಅಧಿಕಾರ ಹಿಡಿದಿರೋ ಕಾಂಗ್ರೆಸ್, ಕೊನೆಗೂ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಯೋಜನೆಗಳ ಜಾರಿಗೆ ಮುಂದಾಗುತ್ತಿದೆ. ಜೂನ್ 1ರಂದು ಕ್ಯಾಬಿನೆಟ್ ನಡೆಸಿ, ಅಂದೇ ಷರತ್ತು ಬದ್ದ ಗ್ಯಾರಂಟಿಗಳನ್ನು ಘೋಷಿಸೋ ನಿರೀಕ್ಷೆ ಇದೆ. ಗ್ಯಾರಂಟಿಗಳ ಜಾರಿ ಸಮಸ್ಯೆ ಬಗೆಹರಿಸಲು, ಮಾನದಂಡಗಳನ್ನು ವಿಧಿಸಲು ವಿಶೇಷ ಸಮಿತಿ ರಚನೆಗೆ ಸರ್ಕಾರ ಮುಂದಾಗಿದೆ.
ಈ ಬಗ್ಗೆ ಇಂದು ಪ್ರತಿಕ್ರಿಯಿಸಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಗ್ಯಾರಂಟಿ ಕೊಡ್ತೀವಿ ಅಂತ ಹೇಳಿದ್ದೀವಿ. ಮನೆ ಯಜಮಾನಿಗೆ ಕೊಡ್ತೀವಿ ಎಂದು ಹೇಳಿದ್ದೇವೆ. ಆದರೆ ನಿಮ್ಮ ಪತ್ನಿ ಮನೆಯ ಯಜಮಾನಿಯ, ಅಮ್ಮ ಮನೆ ಯಜಮಾನಿಯ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ, ಮನೆ ಯಜಮಾನಿ ಯಾರು ಅಂತ ತೀರ್ಮಾನ ಮಾಡುವವರು ಯಾರು? ಕೊಡ್ತೀವಿ ಅಂತ ಹೇಳಿದ್ದೀವಿ. ಆದರೆ ಮನೆ ಯಜಮಾನಿ ಅಂತ ಯಾರು ತೀರ್ಮಾನ ಮಾಡ್ತಾರೆ? ಯಾರ ಖಾತೆಗೆ ದುಡ್ಡು ಹಾಕುವುದು? ಎಂದು ಪ್ರಶ್ನೆಗಳನ್ನು ಡಿಕೆಶಿ ಮುಂದಿಟ್ಟಿದ್ದಾರೆ.
ಕೆಲವರು ಅನಕ್ಷರಸ್ಥರು ಇದ್ದಾರೆ, ಕೆಲವರು ಗಂಡನನ್ನೆ ಅವಲಂಬಿಸಿದ್ದಾರೆ. ಆದ್ದರಿಂದ ಯಾರು ಮನೆ ಯಜಮಾನಿಯಾಗಿದ್ದಾರೆ ಅವರಿಗೆ ಹಣ ಹೋಗಬೇಕು. ಬ್ಯಾಂಕ್ ಖಾತೆ ಇಲ್ಲ ಎಂದರೆ ಖಾತೆ ಮಾಡಿಸಬೇಕು. ಆದ್ದರಿಂದ ಸಂಸಾರ ನಡೆಸುವ ಹೆಣ್ಣಿನ ಖಾತೆಗೆ ಹಣ ಹೋಗಬೇಕು. ಯಾರು ಯಾರಿಗೋ ಮಾಡಲು ಸಾಧ್ಯವಿಲ್ಲ ಎಂದು ಡಿಸಿಎಂ ವಿವರಿಸಿದ್ದಾರೆ. ಡಿಕೆ ಶಿವಕುಮಾರ್ ರವರ ಮನೆಯ ಒಡತಿ ಯಾರು ಎಂದು ಯಾರು ತೀರ್ಮಾನ ಮಾಡುತ್ತಾರೆ. ಯಾರ ಖಾತೆಗೆ ಹಣ ಹೋಗುತ್ತದೆ ಎಂಬ ಪ್ರಶ್ನೆಗಳು ಅವರಲ್ಲಿ ಚಿಂತನೆ ಮೂಡುವಂತೆ ಮಾಡಿವೆ.
ಒಂದೊಮ್ಮೆ ಮನೆ ಯಜಮಾನಿಗೆ ವಿಧವಾ ವೇತನ ಅಥವಾ ವೃದ್ಧಾಪ್ಯ ವೇತನ ಬರುತ್ತಿದ್ದರೆ ಅತ್ತೆಯನ್ನು ಬಿಟ್ಟು ಸೊಸೆಗೆ ನೀಡುತ್ತಾರಾ? ಅಥವಾ ಸೊಸೆ ಮನೆ ಇಬ್ಭಾಗ ಮಾಡಿ ಹೋಗಬೇಕಾಗುತ್ತಾ ಎಂದ ಪ್ರಶ್ನೆಗಳು ಎದುರಾಗಿದೆ. ಅತ್ತೆ ಕೆಲಸ ಮಾಡಿ ಸೊಸೆ ಮನೆಯಲ್ಲಿದ್ದರೆ ಯಾರಿಗೆ ಎರಡು ಸಾವಿರ ಕೊಡುತ್ತಾರೆ? ಇಬ್ಬರು ಮನೆಯಲ್ಲೇ ಇದ್ದರೆ ಯಾರಿಗೆ ಹಣ ನೀಡಲಾಗುತ್ತದೆ? ಇನ್ನು ಏನೆಲ್ಲಾ ಷರತ್ತುಗಳನ್ನು ಸರ್ಕಾರ ರಾಜ್ಯದ ಜನರ ಮುಂದಿಡುತ್ತದೆ ಎಂಬ ಕುತೂಹಲ ಮೂಡಿದೆ.