ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ 16 ಕ್ಷೇತ್ರಗಳಲ್ಲಿ 16ಕ್ಕೂ ಹೆಚ್ಚಿನ ಅಭ್ಯರ್ಥಿಗಳು ಸ್ಪರ್ಧಿಸಲಿರುವ ಕಾರಣ ಆ ಕ್ಷೇತ್ರಗಳಲ್ಲಿ ಎರಡೆರಡು ಇವಿಎಮ್ಗಳನ್ನು ಬಳಸಲಾಗುತ್ತಿದೆ.
ಬೆಂಗಳೂರು: ಮೇ 10ರಂದು ನಡೆಯಲಿರುವ ಚುನಾವಣೆಯಲ್ಲಿ 16 ಕ್ಷೇತ್ರಗಳಲ್ಲಿ 2 ಮತಯಂತ್ರಗಳನ್ನು ಬಳಸಲಾಗುವುದಾಗಿ ಚುನಾವಣಾ ಆಯೋಗ ತಿಳಿಸಿದೆ.ನಾಮಪತ್ರ ಹಿಂಪಡೆಯಲು ಸೋಮವಾರ ಕೊನೆಯ ದಿನವಾಗಿತ್ತು. ಅದರಂತೆ ಸೋಮವಾರ 517 ಅಭ್ಯರ್ಥಿಗಳು ತಮ್ಮ ನಾಮಪತ್ರ ವಾಪಸು ಪಡೆದು ಕಣದಿಂದ ಹಿಂದೆ ಸರಿದ್ದಾರೆ. ಆ ಮೂಲಕ ಸದ್ಯ ಕಣದಲ್ಲಿ ಒಟ್ಟು 2,613 ಅಭ್ಯರ್ಥಿಗಳಿದ್ದಾರೆ.
ಒಟ್ಟು 16 ಕ್ಷೇತ್ರಗಳಲ್ಲಿ 16ಕ್ಕೂ ಅಧಿಕ ಅಭ್ಯರ್ಥಿಗಳು ಕಣದಲ್ಲಿ ಸ್ಪರ್ಧಿಸಲಿದ್ದಾರೆ. ಹೀಗಾಗಿ 16 ಕ್ಷೇತ್ರಗಳಲ್ಲಿ ಎರಡೆರಡು ಮತಯಂತ್ರಗಳನ್ನು ಬಳಸಲಾಗುವುದು. ಒಂದು ಇವಿಎಂನಲ್ಲಿ ಗರಿಷ್ಠ 16 ಅಭ್ಯರ್ಥಿಗಳನ್ನು ಹೆಸರು ಹಾಗೂ ಚಿಹ್ನೆಗೆ ವ್ಯವಸ್ಥೆ ಇರುತ್ತದೆ. ಅದಕ್ಕಿಂತ ಹೆಚ್ಚುತ್ತಾ ಹೋದಂತೆ ಪ್ರತಿ 16 ಅಭ್ಯರ್ಥಿಗಳಿಗೆ ಒಂದರಂತೆ ಹೆಚ್ಚುವರಿ ಮತಯಂತ್ರಗಳ ಸಂಪರ್ಕ ಕಲ್ಪಿಸಬೇಕು. ಈ ಬಾರಿ 16ಕ್ಕೂ ಅಧಿಕ ಅಭ್ಯರ್ಥಿಗಳು ಒಟ್ಟು 16 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದಾರೆ. ಹೀಗಾಗಿ ಆ 16 ಕ್ಷೇತ್ರಗಳಲ್ಲಿ ಎರಡೆರಡು ಮತಯಂತ್ರಗಳನ್ನು ಬಳಸಲಾಗುತ್ತದೆ. ಬಳ್ಳಾರಿ ನಗರದಲ್ಲಿ ಅತಿ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಒಟ್ಟು 24 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ. ಬಳಿಕದ ಸ್ಥಾನ ಹೊಸಕೋಟೆಗೆ ಬರುತ್ತದೆ. ಅಲ್ಲಿ ಈ ಬಾರಿ 23 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಳಿಕ ಚಿತ್ರದುರ್ಗದಲ್ಲಿ 21 ಅಭ್ಯರ್ಥಿಗಳು, ಬೆಂಗಳೂರಿನ ಯಲಹಂಕದಲ್ಲಿ 20 ಅಭ್ಯರ್ಥಿಗಳು ಕಣದಲ್ಲಿ ಉಳಿದುಕೊಂಡಿದ್ದಾರೆ.
ಯಾವ ಕ್ಷೇತ್ರಗಳಲ್ಲಿ ಎರಡೆರಡು ಮತಯಂತ್ರ ಬಳಕೆ?:
ರಾಜಾಜಿ ನಗರ- 18 ಅಭ್ಯರ್ಥಿಗಳು
ಹೊಸಕೋಟೆ- 23 ಅಭ್ಯರ್ಥಿಗಳು
ಯಲಹಂಕ- 20 ಅಭ್ಯರ್ಥಿಗಳು
ಬ್ಯಾಟರಾಯನಪುರ- 17 ಅಭ್ಯರ್ಥಿಗಳು
ಬಳ್ಳಾರಿ ನಗರ- 24 ಅಭ್ಯರ್ಥಿಗಳು
ಹನೂರು- 18 ಅಭ್ಯರ್ಥಿಗಳು
ಗೌರಿಬಿದನೂರು- 18 ಅಭ್ಯರ್ಥಿಗಳು
ಚಿಕ್ಕಮಗಳೂರು- 16 ಅಭ್ಯರ್ಥಿಗಳು
ಚಿತ್ರದುರ್ಗ- 21 ಅಭ್ಯರ್ಥಿಗಳು
ಹುಬ್ಬಳ್ಳಿ-ಧಾರವಾಡ ಕೇಂದ್ರ- 16 ಅಭ್ಯರ್ಥಿಗಳು
ಕೋಲಾರ- 18 ಅಭ್ಯರ್ಥಿಗಳು
ಗಂಗಾವತಿ- 19 ಅಭ್ಯರ್ಥಿಗಳು
ಶ್ರೀರಂಗಪಟ್ಟಣ- 17 ಅಭ್ಯರ್ಥಿಗಳು
ಕೃಷ್ಣರಾಜ- 17 ಅಭ್ಯರ್ಥಿಗಳು
ನರಸಿಂಹರಾಜ- 17 ಅಭ್ಯರ್ಥಿಗಳು
ರಾಯಚೂರು- 18 ಅಭ್ಯರ್ಥಿಗಳು
2,613 ಅಭ್ಯರ್ಥಿಗಳ ನಾಮಪತ್ರ ಸ್ವೀಕಾರ: ಏಪ್ರಿಲ್ 20ರವರೆಗೆ ರಾಜ್ಯಾದ್ಯಂತ ಒಟ್ಟು 5,101 ನಾಮಪತ್ರ ಸ್ವೀಕರಿಸಲಾಗಿತ್ತು. ಈ ಪೈಕಿ ಇದೀಗ ಕಣದಲ್ಲಿರುವುದು 2,613 ಅಭ್ಯರ್ಥಿಗಳು. ಬಿಜೆಪಿಯಿಂದ 224 ಅಭ್ಯರ್ಥಿಗಳು, ಕಾಂಗ್ರೆಸ್ನಿಂದ 223 ಅಭ್ಯರ್ಥಿಗಳು, ಜೆಡಿಎಸ್ನಿಂದ 207 ಅಭ್ಯರ್ಥಿಗಳು, ಎಎಪಿಯಿಂದ 209 ಅಭ್ಯರ್ಥಿಗಳು, ಬಿಎಸ್ಪಿಯಿಂದ 113 ಅಭ್ಯರ್ಥಿಗಳು, ಜೆಡಿ(ಯು) 8, ಸಿಪಿಐಎಂ 4, ಎನ್ಪಿಪಿಯ ಇಬ್ಬರು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನೋಂದಾಯಿತ ಮಾನ್ಯತೆ ಪಡೆಯದ ವಿವಿಧ ಪಕ್ಷಗಳಿಂದ 685 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇನ್ನು 918 ಪಕ್ಷೇತರ ಅಭ್ಯರ್ಥಿಗಳು ರಣಕಣದಲ್ಲಿದ್ದಾರೆ.
ಬೆಂಗಳೂರಲ್ಲಿ 56 ಮಂದಿ ನಾಮಪತ್ರ ವಾಪಸ್: ಇತ್ತ ಬೆಂಗಳೂರಿನ 28 ಕ್ಷೇತ್ರಗಳಿಂದ 56 ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದಾರೆ. ಬೆಂಗಳೂರಲ್ಲಿ ಒಟ್ಟು 704 ನಾಮಪತ್ರ ಸಲ್ಲಿಸಿದ್ದರು. ಇದೀಗ 389 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿ 28, ಕಾಂಗ್ರೆಸ್ 28, ಜೆಡಿಎಸ್ 24, ಎಎಪಿ 28, ಬಿಎಸ್ ಪಿ 21 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ನ ಬಂಡಾಯವೆದ್ದಿದ್ದ 16 ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದರು. ಕಾಂಗ್ರೆಸ್ನ 6 ಬಂಡಾಯ ಅಭ್ಯರ್ಥಿಗಳು, ಬಿಜೆಪಿಯ 7 ಬಂಡಾಯ ಅಭ್ಯರ್ಥಿಗಳು ಹಾಗೂ ಜೆಡಿಎಸ್ನ 3 ಬಂಡಾಯ ಅಭ್ಯರ್ಥಿಗಳು ಕಣದಿಂದ ಹಿಂದಕ್ಕೆ ಸರಿದಿದ್ದಾರೆ.