ಬೆಳಗಾವಿ: ಕರ್ನಾಟಕ ಭೂಕಂದಾಯ ಕಾಯ್ದೆಯ ಸೆಕ್ಷನ್ 95 ಮತ್ತು 96ಕ್ಕೆ ತಿದ್ದುಪಡಿ ತರುವ ಮೂಲಕ ಕೃಷಿಯೇತರ ಉದ್ದೇಶಗಳಿಗಾಗಿ ಭೂ ಪರಿವರ್ತನೆ ಪ್ರಕ್ರಿಯೆಯನ್ನು ಸರಳಗೊಳಿಸುವ ಉದ್ದೇಶದಿಂದ ಕರ್ನಾಟಕ ಭೂಕಂದಾಯ (ಎರಡನೇ ತಿದ್ದುಪಡಿ) ವಿಧೇಯಕ 1964ನ್ನು ಕಂದಾಯ ಸಚಿವ ಆರ್.ಅಶೋಕ ವಿಧಾನಸಭೆಯಲ್ಲಿ ಮಂಡಿಸಿದರು.
ವಿಧಾನಸಭೆಯಲ್ಲಿ ಕಂದಾಯ ಸಚಿವ ಆರ್. ಅಶೋಕ ಮಂಡಿಸಿದ ಕರ್ನಾಟಕ ಭೂ ಕಂದಾಯ ವಿಧೇಯಕ -22 ಮಂಡಿಸಿದಾಗ ಕೆಲ ಸಲಹೆ ಸೂಚನೆಗಳು ನೀಡಿ ಒಪ್ಪಿಗೆ ನೀಡಲಾಯಿತು.ಈ ತಿದ್ದುಪಡಿಯನ್ನು ತರುವುದು ಕೃಷಿ ಭೂಮಿಯನ್ನು ಕೈಗಾರಿಕಾ ಉದ್ದೇಶಗಳಿಗಾಗಿ ಪರಿವರ್ತಿಸಲು ಸಹಾಯ ಮಾಡುತ್ತದೆ.
ಕೃಷಿ ಭೂಮಿಯನ್ನು ಕೃಷಿಯೇತರ ಭೂಮಿಯನ್ನಾಗಿ ಪರಿವರ್ತನೆ ಮಾಡಲು ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ 30 ದಿನಗಳು ಇರುವ ಭೂ ಪರಿವರ್ತನಾ ಅವಧಿಯನ್ನು 7 ದಿನಗಳಿಗೆ ಇಳಿಸಲು ಈ ವಿಧೇಯಕ ಮಂಡಿಸಲಾಗಿದೆ ಎಂದು ಕಂದಾಯ ಸಚಿವರು ಸದನಕ್ಕೆ ಮಾಹಿತಿ ನೀಡಿದರು.
ಇದು ಕೇವಲ ಯೋಜನಾ ಪ್ರಾಧಿಕಾರ ಹೊಂದಿರುವ ಪ್ರದೇಶಗಳಿಗೆ ಅನ್ವಯವಾಗಲಿದ್ದು,ಉಳಿದಂತೆ ಗ್ರಾಮೀಣ ಪ್ರದೇಶದಲ್ಲಿ ಒಂದು ತಿಂಗಳಿನ ಅವಧಿ ಮುಂದುವರೆಯಲಿದೆ ಎಂದು ಹೇಳಿದರು.ಪರಿವರ್ತನೆಗಾಗಿ ಭೂಮಿ ಕರ್ನಾಟಕ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ (ಕೆಲವು ಜಮೀನುಗಳ ವರ್ಗಾವಣೆ ನಿಷೇಧ) ಕಾಯಿದೆ, 1978ರ ಯಾವುದೇ ನಿಬಂಧನೆಗಳನ್ನು ಉಲ್ಲಂಘಿಸಿದರೆ, ಜಿಲ್ಲಾಧಿಕಾರಿ ಅರ್ಜಿಯನ್ನು ತಿರಸ್ಕರಿಸಬಹುದು.