Revenue Facts

ರಾಜ್ಯದ ಕೆಲ ಉಪ ನೋಂದಣಿ ಕಛೇರಿಗಳಲ್ಲಿ ಇತ್ತೀಚಿಗಷ್ಟೆ ಅನುಷ್ಟಾನಗೊಳಿಸಿದ್ದ ಕಾವೇರಿ-2 ತಂತ್ರಾಂಶದಲ್ಲಿ ಮಂದಗತಿಯ ಸರ್ವರ್ ಸಮಸ್ಯೆ: ಅಧಿಕಾರಿಗಳು ಕಳವಳ!

ಪಾಸ್ಪೋರ್ಟ್ ಮಾದರಿಯಲ್ಲಿ ಉಪ ನೋಂದಣಾಧಿಕಾರಿಗಳ ಕಚೇರಿಗಳಲ್ಲಿ ನೋಂದಣಿ ಸೇವೆ ಒದಗಿಸುವ ಸಲುವಾಗಿ ರಾಜ್ಯ ಕಂದಾಯ ಇಲಾಖೆ ರಾಜ್ಯದ ಕೆಲ ಉಪ ನೋಂದಣಿ ಕಛೇರಿಗಳಲ್ಲಿ ಇತ್ತೀಚಿಗಷ್ಟೆ ಅನುಷ್ಟಾನಗೊಳಿಸಿದ್ದ ಕಾವೇರಿ-2 ತಂತ್ರಾಂಶದಲ್ಲಿ ಮಂದಗತಿಯ ಸರ್ವರ್ ಸಮಸ್ಯೆ ಕಂಡುಬಂದಿದೆ. ಇದರಿಂದ ದಾಖಲಾತಿಗಳನ್ನು ನೋಂದಣಿ ಮಾಡಲು ಸಾಕಷ್ಟು ಸಮಯ ವ್ಯರ್ಥವಾಗುತ್ತಿದೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆ ಹೆಚ್ಚಾಗಿದೆ. ಮತ್ತು ನೋಂದಣಿ ಅಧಿಕಾರಿಗಳಿಗೂ ಇದು ಸಾಕಷ್ಟು ತಲೆನೋವಿನ ಸಮಸ್ಯೆಯಾಗಿದೆ. ಚುನಾವಣಾ ನೀತಿ ಸಂಹಿತೆ ಹಾಗೂ ಚುನಾವಣಾ ಸಮಯವಾಗಿರುವದರಿಂದ ಕಛೇರಿಗೆ ಬರುವ ಜನರ ಸಂಖ್ಯೆ ಕಡಿಮೆಯಿದ್ದು, ತುಂಬಾ ಜನರು ಬರುವ ಸಮಯದಲ್ಲಿ ಈ ತರಹ ಸಮಸ್ಯೆ ಎದುರಾದರೆ ತುಂಬಾ ತೊಂದರೆ ಯಾಗಲಿದೆ ಎಂದು ಕಂದಾಯ ಇಲಾಖೆಯ ನೋಂದಣಿ ಅಧಿಕಾರಿಗಳು ಹೇಳುತ್ತಿದ್ದಾರೆ.

ಇತ್ತೀಚಿಗಷ್ಟೆ ರಾಜ್ಯದಲ್ಲಿ ಪಾಸ್ಪೋರ್ಟ್ ಮಾದರಿಯಲ್ಲಿ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿನ ನೋಂದಣಿ ಸೇವೆ ನೀಡುವ ಸಲುವಾಗಿ, ಕಾವೇರಿ 2 ತಂತ್ರಜ್ಞಾನ ಅಭಿವೃದ್ಧಿ ಪಡಿಸಲಾಗಿತ್ತು. ಈಗಾಗಲೇ ಬೆಳಗಾವಿ ದಕ್ಷಿಣ ಹಾಗೂ ಗುಲಬರ್ಗಾ ಜಿಲ್ಲೆಯ ಚಿಂಚೋಳಿ ಹಾಗೂ ಮುಂತಾದ ಕಡೆ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದ್ದು, ಯಶಸ್ಸು ಸಿಕ್ಕಿದೆ. ಈ ಯಶಸ್ಸಿನ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕಂದಾಯ ಸೇವೆ ಆನ್ಲೈನ್ ನಲ್ಲಿಯೇ ಪಡೆಯಬಹುದಾಗಿದೆ.

ಕಾವೇರಿ 2 ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದ ನಂತರ ಸಾರ್ವಜನಿಕರು ತಮ್ಮ ಆಸ್ತಿ ರಿಜಿಸ್ಟ್ರೇಷನ್, ವಿವಾಹ ನೋಂದಣಿ, ಅಗ್ರಿಮೆಂಟ್ ನೋಂದಣಿ, ಜಿಪಿಎ ಕಾರ್ಯಗತ ಸೇರಿದಂತೆ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಸಿಗುವ ಬಹುತೇಕ ನೋಂದಣಿ ಪ್ರಕ್ರಿಯೆ ಆನ್ಲೈನ್ ನಲ್ಲಿಯೇ ಲಭ್ಯವಾಗಲಿದೆ. ಇದರಿಂದ ಸಾರ್ವಜನಿಕರು ಅನಾವಶ್ಯಕ ಉಪ ನೋಂದಣಾಧಿಕಾರಿಗಳ ಕಚೇರಿಗೆ ಅಲೆಯುವುದು ತಪ್ಪಲಿದೆ. ಜತೆಗೆ ನಿಗದಿತ ಕಾಲ ಮಿತಿಯಲ್ಲಿ ಕೆಲಸ ಆಗಲಿದ್ದು, ಭ್ರಷ್ಟಾಚಾರಕ್ಕೆ ಕಡಿವಾಣ ಬೀಳುವ ಆಶಾಭಾವನೆ ಹೊಂದಲಾಗಿದೆ.

ಮುಂಬರುವ ದಿನಗಳಲ್ಲಿ ಕಾವೇರಿ-2 ತಂತ್ರಾಂಶವನ್ನು ಸಂಪೂರ್ಣ ರಾಜ್ಯದ ಎಲ್ಲಾ ಜಿಲ್ಲಾ ನೋಂದಣಾಧಿಕಾರಿಗಳ ಕಛೇರಿ ವ್ಯಾಪ್ತಿಯ ಉಪ ನೋಂದಣಿ ಕಛೇರಿಗಳಲ್ಲಿ ನಿಯಮಾನುಸಾರ ಅನುಷ್ಟಾನಗೊಳಿಸಲು
ತೀರ್ಮಾನಿಸಿದ್ದರು ಮಂದಗತಿಯ ಸರ್ವಸ್ ಸಮಸ್ಯೆ ಬರದಂತೆ ಶೀಘ್ರವೇ ನೋಡಿಕೊಳ್ಳಬೇಕಿದೆ ಇದು ಜನರ ಹಾಗೂ ಅಧಿಕಾರಿಗಳ ಸಮಯ ಉಳಿತಾಯದ ಜೊತೆಗೆ ಉತ್ತಮ ಸೇವೆ ಪಡೆಯುವಲ್ಲಿ ಸಹಕಾರ ನೀಡಲಿದೆ.

Exit mobile version