ಮಂಡ್ಯ:-ನಿವೇಶನದ ಖಾತೆ ಮಾಡಿಕೊಡುವುದಕ್ಕೆ ಸಂಬಂಧಿಸಿದಂತೆ ಲಂಚದ ಬೇಡಿಕೆ ಇಟ್ಟು ಕಚೇರಿಯಲ್ಲಿ ಹಣ ಸ್ವೀಕರಿಸುತ್ತಿದ್ದ ವೇಳೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಮಂಡ್ಯ ತಾಲೂಕಿನ ಬೇಲೂರು ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ಜರುಗಿದೆ.ಮಂಡ್ಯ ತಾಲೂಕಿನ ಬೇಲೂರು ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ (ಗ್ರೇಡ್-1) ದಯಾನಂದ (54) ಎಂಬಾತನೇ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ ಎಂದು ಗುರುತಿಸಲಾಗಿದೆ.
ಲಂಚ ಸ್ವೀಕರಿಸಿದ್ದ 5 ಸಾವಿರ ರೂಪಾಯಿ ಹಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಇನ್ನು ಮಂಡ್ಯ ನಗರದ ಮಂಜುನಾಥ್ ಎಂಬುವರ ಮನೆ, ಖಾಲಿ ನಿವೇಶನದ ಇ-ಸ್ವತ್ತು ಮಾಡಿಕೊಡಲು ದಯಾನಂದ್ 40,000 ಸಾವಿರ ರೂ.ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಮಂಜುನಾಥ್ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಬುಧವಾರ ಬೆಳಿಗ್ಗೆ ಗ್ರಾಮ ಪಂಚಾಯಿತಿ ಕಛೇರಿಯಲ್ಲಿ ಮುಂಗಡವಾಗಿ 5 ಸಾವಿರ ರೂಪಾಯಿ ಲಂಚ ಪಡೆಯುವ ಸಂದರ್ಭದಲ್ಲಿ,ಲೋಕಾಯುಕ್ತ ಎಸ್‌ಪಿ ಶ್ರೀನಾಥ್‌ಜೋಷಿ, ಡಿವೈಎಸ್ಪಿ ಸುನಿಲ್‌ಕುಮಾರ್ ಮಾರ್ಗದರ್ಶನದಲ್ಲಿ ತನಿಖಾಧಿಕಾರಿ ಇನ್ಸ್‌ಪೆಕ್ಟರ್‌ಗಳಾದ ಪ್ರಕಾಶ್ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್‌ಗಳಾದ ಮೋಹನ್ ರೆಡ್ಡಿ, ಬ್ಯಾಟರಾಯಗೌಡ ಅವರು ಬಲೆಗೆ ಬೀಳಿಸಿದ್ದಾರೆ. ಸಿಬ್ಬಂದಿಗಳಾದ ಶಂಕರ್, ಮಹದೇವಯ್ಯ, ಶರತ್, ಯೋಗೇಶ್, ನಂದೀಶ್, ಚಾಲಕರಾದ ನವೀನ್, ಶಿವಕುಮಾರ್ ದಾಳಿಯಲ್ಲಿ ಪಾಲ್ಗೊಂಡಿದ್ದರು.