ಬೆಂಗಳೂರು: ಭ್ರಷ್ಟಾಚಾರ ಆರೋಪ ಹಿನ್ನೆಲೆಯಲ್ಲಿ ಬೆಂಗಳೂರಿನ ಹತ್ತು ಸರ್ಕಾರಿ ಆಸ್ಪತ್ರೆಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ದಾಖಲೆ ವಶ ಪಡಿಸಿಕೊಂಡಿದ್ದಾರೆ.ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಭಾಗದಲ್ಲಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅವ್ಯವಹಾರ ಹಾಗೂ ಅಕ್ರಮಗಳ ಬಗ್ಗೆ ಸಾರ್ವಜನಿಕರು ಆಗಿಂದಾಗ್ಗೆ ಲೋಕಾಯುಕ್ತ ಸಂಸ್ಥೆಯ ಗಮನ ಸೆಳೆಯುತ್ತಿದ್ದ ಮೇರೆಗೆ ಗೌರವಾನ್ವಿತ ಲೋಕಾಯುಕ್ತರು, ಲೋಕಾಯುಕ್ತ ಅಧಿಕಾರಿಗಳ ಮುಖಾಂತರ ಗೌಪ್ಯ ತನಿಖೆಯನ್ನು ನಡೆಸಿ, ಮಾಹಿತಿ ಸಂಗ್ರಹಿಸಿ, ಅಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಖಾತ್ರಿ ಪಡಿಸಿಕೊಂಡು, ಲೋಕಾಯುಕ್ತ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನ್ಯಾಯಾಂಗ ಹಾಗೂ ಪೊಲೀಸ್ ಅಧಿಕಾರಿಗಳ ತಂಡವನ್ನು ಮಾಡಿ. ಬೆಂಗಳೂರು ನಗರ ಹಾಗೂ ಗ್ರಾಮಾಂತರದಲ್ಲಿರುವ ಅಯ್ದ 10 ಸರ್ಕಾರಿ ಆಸ್ಪತ್ರೆಗಳಾದ ಸಾರ್ವಜನಿಕ ಆಸ್ಪತ್ರೆ, ನೆಲಮಂಗಲ, ಯಲಹಂಕ, ಕೆ.ಆರ್. ಪುರ, ಜಯನಗರ, ಕೆ.ಸಿ. ಜನರಲ್ ಆಸ್ಪತ್ರೆ, ಸಂಜಯ್ ಗಾಂಧಿ ಅಸ್ಪತ್ರೆ, ಇಂದಿರಾಗಾಂಧಿ ಆಸ್ಪತ್ರೆ, ರಾಜೀವ್ ಗಾಂಧಿ ಆಸ್ಪತ್ರೆ, ಗೌಸಿಯ ಆಸ್ಪತ್ರೆ ಹಾಗೂ ವಾಣಿವಿಲಾಸ್ ಅಸ್ಪತ್ರೆ ಏಕಕಾಲದಲ್ಲಿ ತಪಾಸಣೆ ಮಾಡಿ ಅಕ್ರಮಗಳನ್ನು ಪತ್ತೆ ಹಚ್ಚುವಂತೆ ಆದೇಶಿಸುತ್ತಾರೆ, ಈ ಕಾರ್ಯಾಚರಣೆಯು ಏಕ ಕಾಲದಲ್ಲಿ ಈ ದಿನ ಅಂದರೆ ದಿನಾಂಕ: 22.12.2023ರಂದು ನಡೆಯುತ್ತಿರುತ್ತದೆ. ಇದೇ ಸಂದರ್ಭದಲ್ಲಿ ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಡಿಜಿಪಿರವರು ಕೆ.ಸಿ. ಜನರಲ್ ಆಸ್ಪತ್ರೆ ಹಾಗೂ ಯಲಹಂಕದ ಸಾರ್ವಜನಿಕ ಆಸ್ಪತ್ರೆಗಳಿಗೆ ಹಾಗೂ ಐಜಿಪಿರವರು, ವಾಣಿ ವಿಲಾಸ್ ಹಾಗೂ ಸಂಜಯ್ ಗಾಂಧಿ ಆಸ್ಪತ್ರೆಗಳಿಗೆ ಬೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.
ಪೊಲೀಸ್ ಮಹಾನಿರ್ದೇಶಕ (Lokayukta)) ಪ್ರಶಾಂತ್ ಕುಮಾರ್ ಠಾಕೂರ್ ಅವರು ಕೆಸಿ ಜನರಲ್ ಆಸ್ಪತ್ರೆ ಮತ್ತು ಯಲಹಂಕ ಸಾರ್ವಜನಿಕ ಆಸ್ಪತ್ರೆಯನ್ನು ಪರಿಶೀಲಿಸಿದರು. ಪೊಲೀಸ್ ಮಹಾನಿರೀಕ್ಷಕ ಡಾ. ಎ ಸುಬ್ರಹ್ಮಣ್ಯೇಶ್ವರ ರಾವ್ ಅವರು ಸಂಜಯ್ ಗಾಂಧಿ ಆಸ್ಪತ್ರೆ ಮತ್ತು ವಾಣಿ ವಿಲಾಸ ಆಸ್ಪತ್ರೆಗೆ ಭೇಟಿ ನೀಡಿದರು.