#Health #health Insurance policy #Law #judgement
ಬೆಂಗಳೂರು, ನ. 15: ಆರೋಗ್ಯ ವಿಮೆ ಮಾಡಿಸಿರುವ ಪ್ರತಿಯೊಬ್ಬರು ಓದಲೇಬೇಕಾದ ತೀರ್ಪು ಇದು. ಹಳೇ ಕಾಯಿಲೆ ನೆಪ ನೀಡಿ ಕ್ಯಾನ್ಸರ್ ರೋಗಿಗೆ ಆರೋಗ್ಯ ವಿಮೆ ಕ್ಲೇಮ್ ನಿರಾಕರಿಸಿದ ವಿಮಾ ಕಂಪನಿಗೆ ಸಾಮಾನ್ಯ ನಾಗರಿಕ ಬುದ್ಧಿ ಕಲಿಸಿ ಪರಿಹಾರ ಪಡೆದ ಪ್ರಕರಣವಿದು. ತಪ್ಪದೇ ಓದಿ ಜನ ಸಾಮಾನ್ಯರಿಗೆ ತಲುಪಿಸಿ.
ಅನಾರೋಗ್ಯ ಎದುರಾದಾಗ ಚಿಕಿತ್ಸೆಗೆ ಹಣ ಹೊಂದಿಸಲು ಮಧ್ಯಮ ವರ್ಗದ ಜನರಿಂದ ಸಾಧ್ಯವಾಗಲ್ಲ. ಈ ಕಾರಣಕ್ಕೆ ಜನರು ಆರೋಗ್ಯ ವಿಮೆ ಪಾಲಿಸಿ ಖರೀದಿಸುತ್ತಾರೆ. ಕಷ್ಟ ಕಾಲದಲ್ಲಿ ಕಾಪಾಡುತ್ತದೆ ಎಂಬುದು ಜನರಲ್ಲಿ ಆರೋಗ್ಯ ವಿಮೆಯ ಬಗ್ಗೆ ಇರುವ ನಂಬಿಕೆ. ಆರೋಗ್ಯ ವಿಮೆ ಪಡೆಯುವ ವೇಳೆ ಏನೂ ಕೇಳದೇ ಪಾಲಿಸಿ ಮಾರುವ ವಿಮಾ ಕಂಪನಿಗಳು ಕ್ಲೇಮ್ ಮಾಡುವಾಗ ನೂರಾರು ಷರತ್ತು ವಿಧಿಸುತ್ತವೆ. ಪಿಳ್ಳೆ ನೆಪ ಹೇಳಿಕೊಂಡು ಕ್ಲೇಮ್ ನಿರಾಕರಿಸುತ್ತವೆ.
ಎಷ್ಟೋ ಮಂದಿ ಆರೋಗ್ಯ ವಿಮೆ ಮಾಡಿಸಿದ್ದರೂ ಕ್ಲೇಮ್ ಮಾಡಿಸಲಾಗದೇ ಚಿಕಿತ್ಸೆಗೆ ಕೈಯಿಂದ ಹಣ ಪಾವತಿ ಮಾಡಿರುವ ಸಾವಿರಾರು ನಿದರ್ಶನಗಳು ಇವೆ. ಆರೋಗ್ಯ ಸೇವೆ ಮುಖವಾಡ ಧರಿಸಿ ಕಾರ್ಪೋರೇಟ್ ಆರೋಗ್ಯ ವಿಮೆ ಕಂಪನಿಗಳು ಆಡುವ ಆಟಕ್ಕೆ ಎಷ್ಟೋ ಮಂದಿ ಮುಗ್ದರು ವಿಮೆ ಕ್ಲೇಮ್ ಮಾಡಲಾಗದೇ ಸಾಲಗಾರರಾಗಿ ಬೀದಿಗೆ ಬಿದ್ದಿರುವ ಅನೇಕ ಪ್ರಕರಣಗಳು ಇವೆ.
ಆರೋಗ್ಯ ವಿಮೆ ಕ್ಲೇಮ್ ಗೆ ಅರ್ಹತೆ ಇದ್ದರೂ ಅನರ್ಹ ಮಾಡಿ ಅಟ ಆಡುವ ಕಂಪನಿಗಳಿಗೆ ಕಾನೂನಿನಿಂದಲೇ ಪಾಠ ಕಲಿಸಲು ದಾರಿಯಿದೆ. ಬಹುತೇಕರು ಈ ಹಾದಿಗೆ ಹೋಗದೇ ಅನ್ಯಾಯಕ್ಕೆ ಒಳಗಾಗುತ್ತಾರೆ. ಕಾನೂನು ಅರಿತು ಸಮರ ಸಾರಿದರೆ ನ್ಯಾಯ ಪಡೆಯಲು ವಿಫುಲ ಅವಕಾಶಗಳಿವೆ. ಹಳೇ ಕಾಯಿಲೆ ಇತ್ತು ಎಂಬ ನೆಪ ನೀಡಿ ಕ್ಯಾನ್ಸರ್ ರೋಗಿ ಪಡೆದಿದ್ದ ಚಿಕಿತ್ಸೆಗೆ ವಿಮೆ ನೀಡದೇ ನಿರಾಕರಿಸಿದ್ದ ಬಜಾಜ್ ಅಲಿಯನ್ಸ್ ಜನರಲ್ ಇನ್‌ಶ್ಯೂರೆನ್ಸ್ ಕಂಪನಿ ವಿರುದ್ಧ ದಾವೆ ಹೂಡಿ ಜಯ ಗಳಿಸಿದ ಸಾಮಾನ್ಯ ಪ್ರಜೆಯ ರೋಚಕ ಕಥೆ ಇಲ್ಲಿ ನೀಡಲಾಗಿದೆ.
Health insurance policy: ಅವರ ಹೆಸರು ಗಂಗಾಧರ, ವಿದ್ಯಾರಣ್ಯಪುರದ ದೊಡ್ಡಬೆಟ್ಟಹಳ್ಳಿ ಗ್ರಾಮದ ನಿವಾಸಿ. ಹಳೇ ಕಾಯಿಲೆ ನೆಪ ನೀಡಿ ಇವರ ತಾಯಿಯ ಕ್ಯಾನ್ಸರ್ ಚಿಕಿತ್ಸೆಗೆ ಆರೋಗ್ಯ ವಿಮೆ ನೀಡಲು ನಿರಾಕರಿಸಿದ್ದ ಬಜಾಜ್ ಅಲಿಯನ್ಸ್ ಜನರಲ್ ಇನ್‌ಶ್ಯೂರೆನ್ಸ್ ಕಂಪನಿ ವಿರುದ್ಧ ಬೆಂಗಳೂರು ನಗರ ಗ್ರಾಹಕ ವ್ಯಾಜ್ಯ ಪರಿಹಾರ ನ್ಯಾಯಾಲಯದಲ್ಲಿ ದಾವೆ ಹೂಡಿ ಕ್ಲೇಮ್ ಮೊತ್ತ 3.49.537 ರೂ. ಜತೆಗೆ ಮಾನಸಿಕ ಹಿಂಸೆ ಅನುಭವಿಸಿದಕ್ಕೆ ಪರಿಹಾರವಾಗಿ 1 ಲಕ್ಷ ರೂ. ಪಡೆದು ವಿಮೆ ಕ್ಲೇಮ್ ನಿರಾಕರಿಸಿದ ಕಂಪನಿಗೆ ಸರಿಯಾಗಿ ಪಾಠ ಕಲಿಸಿದ್ದಾರೆ. ಕಾನೂನು ಸಮರದಲ್ಲಿ ಜಯ ಗಳಿಸಿ ಸಾರ್ವಜನಿಕರಿಗೆ ನಿರಾಕರಣೆ ಕ್ಲೇಮ್ ಮಾಡುವ ಹಾದಿಯನ್ನು ತೋರಿಸಿಕೊಟ್ಟಿದ್ದಾರೆ.
solution for Health insurance claim by legal way
ವಿಮಾ ಪಾಲಿಸಿ ಖರೀದಿ: ಗಂಗಾಧರಯ್ಯ ತನ್ನ ತಾಯಿ ಯಶೋಧಮ್ಮಹೆಸರಿನಲ್ಲಿ ಐದು ಲಕ್ಷ ರೂ. ಮೊತ್ತದ ಮೆಡಿಕ್ಲೇಮ್ ಪಾಲಿಸಿಯನ್ನು 2017 ರಲ್ಲಿ ಖರೀದಿಸಿದ್ದರು. ಐದು ಲಕ್ಷ ರೂ. ಗೂ ಹೆಚ್ಚುವರಿ ಟಾಪಪ್ ಮಾಡಿ ಅದಕ್ಕೆ ಪ್ರೀಮಿಯಂ 4862 ಸಹ ಪಾವತಿಸಿದ್ದರು. 2017 ಫೆ. 24 ರಿಂದ 2018 ಫೆ. 23 ರ ವರೆಗೂ ಪಾಲಿಸಿ ಕವರ್ ಅವಧಿ ಆಗಿತ್ತು. ಮೊಬೈಲ್ ನಲ್ಲಿಯೇ ಪರಿಶೀಲಿಸಿ ಪಾಲಿಸಿಯನ್ನು ಬಜಾಜ್ ಅಲಿಯನ್ಸ್ ಜನರಲ್ ಇನ್‌ಶ್ಯೂರೆನ್ಸ್ ಪ್ರತಿನಿಧಿ ನೀಡಿದ್ದ.
ಗಂಗಾಧರಯ್ಯ ಅವರ ತಾಯಿಗೆ ಹೊಟ್ಟೆ ನೋವು ಕಾಣಿಸಿಕೊಂಡ ಕಾರಣ ಯಶವಂತಪುರದ ಆಚಾರ್ಯ ತುಳಸಿ ಜೈನ್ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಹೆಚ್ಚುವರಿ ಮೆಡಿಕಲ್ ಸೌಲಭ್ಯ ಇರದ ಕಾರಣ ಹಾಗೂ ವಿಮಾ ಪಾಲಿಸಿ ಕ್ಯಾಶ್ ಲೆಸ್ ಕ್ಲೇಮ್ ಮಾಡಲು ನೋಂದಣಿ ಆಗಿರದ ಕಾರಣ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ತನ್ನ ತಾಯಿಯನ್ನು ದಾಖಲಿಸಿದ್ದರು. ಸಿಟಿ ಸ್ಕ್ಯಾನ್ ಮಾಡಿದ ವೈದ್ಯರು ಯಶೋಧಮ್ಮನಿಗೆ ಕ್ಯಾನ್ಸರ್ ಇರುವ ವಿಚಾರ ದೃಢಪಡಿಸಿ ಬಯೋಪ್ಸಿ ಚಿಕಿತ್ಸೆ ನಡಿದದರು. ಅಕ್ಟೋಬರ್ 03, 2017 ರಂದು ಬಯೋಪ್ಸಿ ( ಕ್ಯಾನ್ಸರ್ ಗೆ ಮಾಡುವ ಪರೀಕ್ಷೆ ) ಮಾಡಿಸಿದ್ದರು. ಈ ವೇಳೆ ಚಿಕಿತ್ಸೆ ವೆಚ್ಚವನ್ನು ಆರೋಗ್ಯ ವಿಮೆ ಪಾಲಿಸಿ ಮೂಲಕ ಕ್ಲೇಮ್ ಮಾಡಲು ಪ್ರಕ್ರಿಯೆ ಮುಗಿಸಿದ್ದರು. ವಿಮಾ ಪಾಲಿಸಿಯಿಂದ ಚಿಕಿತ್ಸೆ ವೆಚ್ಚ ಕ್ಲೇಮ್ ಮಾಡಲು ಆಸ್ಪತ್ರೆಗೆ ಅಗತ್ಯ ದಾಖಲೆಗಳನ್ನು ನೀಡಿದ್ದರು. 90,518 ರೂ. ಬಿಲ್ ಆಗಿತ್ತು.
ಬಯೋಪ್ಸಿ ನಂತರ ಯಶೋಧಮ್ಮಗೆ ಕ್ಯಾನ್ಸರ್ ಇರುವುದು ದೃಢಪಟ್ಟಿದ್ದು, ಕೀಮೋ ಥೆರಪಿ ನೀಡಲು ವೈದ್ಯರು ಸಲಹೆ ನೀಡಿದ್ದರು.ಚಿಕಿತ್ಸೆ ಪ್ರಾರಂಭಿಸಲಾಗಿತ್ತು. ಆದರೆ ರೋಗಿಯ ಬಿಲ್ ಪಾವತಿ ಮಾಡಲು ವಿಮಾ ಕಂಪನಿ ಆಕ್ಷೇಪಿಸಿ, ಈ ಮೊದಲೇ ಯಶೋಧಮ್ಮ ಅವರ ಬಲ ಬುಜಕಕೆ ಸರ್ಜರಿ ಆಗಿತ್ತು. ” ಲಿಪೋಮಾ” 2010 ರಲ್ಲಿ ಶಸ್ತ್ರ ಚಿಕಿತ್ಸೆ ನಡೆದಿದೆ. ಮೊದಲೇ ಕಾಯಿಲೆ ಇರುವುದನ್ನು ವಿಮಾ ಪಾಲಿಸಿ ಮಾಡಿಸುವಾಗ ಮರೆ ಮಾಚಿದ್ದು, ಆರೋಗ್ಯ ವಿಮೆ ನೀಡಲಾಗದು ಎಂದು ಪಾಲಿಸಿ ನಿಯಮ 3 ಉಲ್ಲೇಖಿಸಿ ನಿರಕರಿಸಲಾಗಿತ್ತು. ಹೀಗಾಗಿ ಗಂಗಾಧರಯ್ಯ ತನ್ನ ತಾಯಿಯ ಚಿಕಿತ್ಸೆ ವೆಚ್ಚವನ್ನು ಸ್ವತಃ ಕೈಯಿಂದ ಪಾವತಿಸಿದ್ದರು.
ಆನಂತರ ಅನೇಕ ಬಾರಿ ಆಸ್ಪತ್ರೆಗೆ ದಾಖಲಾಗಿ ಯಶೋಧಮ್ಮ ಅವರಿಗೆ ಚಿಕಿತ್ಸೆ ಮಾಡಿಸಿದ್ದ ಗಂಗಾಧರಯ್ಯ ಅವರು ತನ್ನ ತಾಯಿಯ ಆರೋಗ್ಯ ವಿಮೆಯನ್ನು 2018 ರಿಂದ 2019 ಕ್ಕೆ ರಿನೀವಲ್ ಮಾಡಿಸಿ ಪ್ರೀಮಿಯಂ ಪಾವತಿಸಿದ್ದರು. ಈ ಮೇಲಿನ ಚಿಕಿತ್ಸೆಗೆ ಆರೋಗ್ಯ ವೆಚ್ಚ ಕ್ಲೇಮ್ ಮಾಡಲು ಪಾಲಿಸಿ ರಿನೀವಲ್ ಮಾಡಿಸಲು ಸೂಚಿಸಿದ್ದರಿಂದ ವಿಮೆ ರಿನೀವಲ್ ಮಾಡಿಸಿದ್ದರು. ಅಂತಿಮವಾಗಿ ಚಿಕಿತ್ಸಾ ವೆಚ್ಚ 3.49. 527 ರೂ. ಆಗಿತ್ತು. ಕ್ಲೇಮ್ ಮಾಡುವಂತೆ ಕೋರಿದಾಗ, ವಿಮೆದಾರರು ವಂಚಿಸಿ ಪಾಲಿಸಿ ಪಡೆದಿದ್ದಾರೆ. ಚಿಕಿತ್ಸೆ ವೆಚ್ಚ ಕೊಡಲಾಗದು ಎಂದು ವಿಮಾ ಕಂಪನಿ ನಿರಾಕರಿಸಿತ್ತು. ಅಲ್ಲದೇ ವಿಮಾ ಪಾಲಿಸಿಯನ್ನು ರದ್ದು ಮಾಡಿದ್ದರು.
ಹೀಗಾಗಿ ಅಷ್ಟೋ ಮೊತ್ತವನ್ನು ಗಂಗಾಧರಯ್ಯ ತನ್ನ ಕೈಯಿಂದ ಆಸ್ಪತ್ರೆಗೆ ಪಾವತಿಸಿ ವಿಮಾ ಕಂಪನಿಗೆ ಲೀಗಲ್ ನೋಟಿಸ್ ಜಾರಿ ಮಾಡಿದ್ದರು. ಇದಕ್ಕೆ ಯಾವುದೇ ಪ್ರತ್ಯುತ್ತರ ಸಿಗದ ಹಿನ್ನೆಲೆಯಲ್ಲಿ ವಿಮಾ ಕಂಪನಿ ವಿರುದ್ಧ ಗಂಗಾಧರಯ್ಯ ಬೆಂಗಳೂರು ನಗರ ಜಿಲ್ಲಾ ಗ್ರಾಹಕ ವ್ಯಜ್ಯಗಳ ಪರಿಹಾರ ನ್ಯಾಯಾಲಯದಲ್ಲಿ 2019 ರಲ್ಲಿ ದಾವೆ ಹೂಡಿದರು.ವಾದ ಪ್ರತಿವಾದ ಆಲಿಸಿದ ಬೆಂಗಳೂರು ನಗರ ಜಿಲ್ಲಾ ಗ್ರಾಹಕ ನ್ಯಾಯಾಲಯ, ಮಹತ್ವದ ತೀರ್ಪು ನೀಡಿದೆ. ದೂರುದಾರರು ಮೆಡಿಕ್ಲೇಮ್ ಪಾಲಿಸಿ ಖರೀದಿ ಮಾಡಿರುವುದಲ್ಲಿ ಅನುಮಾನವಿಲ್ಲ. ಅವರ ತಾಯಿ ಕ್ಯಾನ್ಸರ್ ರೋಗದಿಂದ ಬಳಲಿ ಸಾವನ್ನಪ್ಪಿದ್ದಾರೆ. ವಿಮೆ ಪಾಲಿಸಿ ಮಾಡಿಸುವಾಗ ಈ ಹಿಂದೆ ಸರ್ಜರಿ ಆಗಿದ್ದನ್ನು ಮರೆ ಮಾಚಿದ ಕಾರಣ ನೀಡಿ ಆರೋಗ್ಯ ವಿಮೆ ನೀಡಲು ನಿರಾಕರಿಸುವುದರಲ್ಲಿ ಅರ್ಥವಿಲ್ಲ. ವಿಮೆ ಪಾಲಿಸಿ ಮಾಡುವಾಗ ಈ ವಿಮಾ ಮಾಡಿಸಿದ ಪ್ರತಿನಿಧಿ ಯಾವುದೇ ಪ್ರಶ್ನೆ ಮಾಡಿಲ್ಲ. ವೈದ್ಯಕೀಯ ಪರೀಕ್ಷೆ ಮಾಡಿಸಿಲ್ಲ. ಕೇವಲ ಆನ್‌ಲೈನ್ ನಲ್ಲಿ ಪ್ರಕ್ರಿಯೆ ಮುಗಿಸಿ ಪಾಲಿಸಿ ನೀಡಿದ್ದಾರೆ. ಆನ್‌ಲೈನ್ ಸಂದರ್ಶನ ಕೂಡ ಮಾಡಿಲ್ಲ. ಹೀಗಾಗಿ ಹಳೇ ಸರ್ಜರಿ ವಿಚಾರ ಮುಚ್ಚಿಟ್ಟ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಅಲ್ಲದೇ ಈ ಹಿಂದಿನ ಸರ್ಜರಿಗೂ ಕ್ಯಾನ್ಸರ್ ಗೂ ಸಂಬಂಧವಿಲ್ಲ ಎಂಬುದನ್ನು ವೈದ್ಯರು ದೃಢಪಡಿಸಿದ್ದಾರೆ. ಜೀವ ಹಿಂಡುವ ಕ್ಯಾನ್ಸರ್ ಗೆ ಸಂಬಂಧ ವಿಲ್ಲದ ಕಾಯಿಲೆಯ ಶಸ್ತ್ರ ಚಿಕಿತ್ಸೆ ಮರೆ ಮಾಚಿದರೂ ಅದಕ್ಕೆ ಸಂಬಂಧಿವಲ್ಲ. ಹೀಗಾಗಿ ದೂರುದಾರರು ಆರೋಗ್ಯ ವಿಮೆ ಪಡೆಯಲು ಅರ್ಹರು ಎಂದು ನ್ಯಾಯಾಲಯ ತೀರ್ಪು ನೀಡಿದೆ.
solution for Health insurance claim by legal way
Life insurance policy judgement : ಅರ್ಜಿದಾರರು ತನ್ನ ತಾಯಿ ಚಿಕಿತ್ಸೆಗೆ ವ್ಯಯಿಸಿದ ವೆಚ್ಚ ಪಡೆಯಲು ಅರ್ಹರು. ಹೀಗಾಗಿ ವಿಮಾ ಕಂಪನಿ 3.49.527 ರೂ.ಗಳನ್ನು ವಾರ್ಷಿಕ 10 ರೂ. ಬಡ್ಡಿ ದರದಲ್ಲಿ ಪಾವತಿಸಬೇಕು. ಇಷ್ಟು ದಿನ ಮಾನಸಿಕ ಹಿಂಸೆ ನೀಡಿದ್ದಕ್ಕೆ ಪರಿಹಾರವಾಗಿ 1 ಲಕ್ಷ ರೂ. ಪಾವತಿಸಬೇಕು. ಆದೇಶ ಹೊರ ಬಿದ್ದ ಎರಡು ತಿಂಗಳಲ್ಲಿ ಪಾವತಿಸಬೇಕು. ತಪ್ಪಿದರೆ ವಾರ್ಷಿಕ 12 ಬಡ್ಡಿ ದರದಲ್ಲಿ ಪಾವತಿ ಮಾಡಬೇಕು ಎಂದು ಬೆಂಗಳೂರು ನಗರ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.
ಏನೂ ಕೇಳದೆ ಪಾಲಿಸಿ ಮಾಡಿಸಿಕೊಂಡು ಪ್ರೀಮಿಯಂ ಪೀಕುವ ವಿಮಾ ಕಂಪನಿಗಳು ಕ್ಲೇಮ್ ಮಾಡುವಾಗ ನೂರರು ತಕರಾರು ತೆಗೆದು ನಿರಾಕರಿಸುತ್ತವೆ. ಅಷ್ಟಕ್ಕೆ ಸುಮ್ಮನಾದರೆ ಏನೂ ಪ್ರಯೋಜನ ಆಗಲ್ಲ. ಸಂಬಂಧವಿಲ್ಲದ ಕಾಯಿಲೆ ನೆಪ ಕೊಟ್ಟು ಆರೋಗ್ಯ ವೆಚ್ಚ ನೀಡಲು ನಿರಾಕರಿಸಿದರೆ ದಂಡ ತೆತ್ತಬೇಕಾಗುತ್ತದೆ ಎಂಬುದಕ್ಕೆ ಈ ಪ್ರಕರಣ ನಿದರ್ಶನ.