Revenue Facts

ಮನೆ ನಿರ್ಮಾಣಕ್ಕಾಗಿ ಗುತ್ತಿಗೆದಾರನ ಒಪ್ಪಂದದಲ್ಲಿ ಏನೇನಿರಬೇಕು…?

ಬೆಂಗಳೂರು, ಜು. 14 : ಬೆಂಗಳೂರಿನಂತಹ ಮಹಾ ನಗರಗಳಲ್ಲಿ ಬಹುತೇಕರು ಕೆಲಸಕ್ಕೆ ಹೋಗುವರೇ. ಕೆಲಸದ ಒತ್ತಡ ನಡುವೆ ಸ್ವತಃ ನಿಂತು ಮನೆ ಕಟ್ಟಿಕೊಳ್ಳುವುದು ತುಸು ತ್ರಾಸದ ಕೆಲಸ. ಹೀಗಾಗಿ ಬಹುತೇಕರು ಮನೆ ಕಟ್ಟಿ ಕೊಡುವುದನ್ನು ಗುತ್ತಿಗೆದಾರರಿಗೆ ಗುತ್ತಿಗೆ ನೀಡಿ ಬಿಡುತ್ತಾರೆ. ಕೆಲವರು ನಂಬಿಕೇ ಮೇಲೆ ಮಾತಿನ ಮೇಲೆ ಒಪ್ಪಂದ ಮಾಡಿಕೊಂಡು ಸುಮ್ಮನಾಗುತ್ತಾರೆ. ಆದ್ರೆ ಕಟ್ಟಡ ಕಟ್ಟುವ ವೇಳೆ ತಕರಾರುಗಳು ಶುರುವಾಗುತ್ತವೆ.

 


ಮನೆ ನಿರ್ಮಾಣ ಹಂತದಲ್ಲಿ ತಕರಾರು ಶುರುವಾಗಿ ಕಟ್ಟಡ ನಿರ್ಮಾಣ ನಿಂತರೆ ಮನೆ ಮಾಲೀಕರೇ ನಷ್ಟ ಅನುಭವಿಸಬೇಕಾಗುತ್ತದೆ. ಇನ್ನೂ ಕೆಲವರು ಗುತ್ತಿಗೆ ಕರಾರು ಮಾಡಿಕೊಂಡರೂ ಕರಾರಿನಲ್ಲಿರಬೇಕಾದ ಅಂಶಗಳನ್ನೇ ಮರೆತು ಬಿಡುತ್ತಾರೆ. ಆದ್ರೆ ಮನೆ ನಿರ್ಮಾಣ ಹಂತದಲ್ಲಿ ಆಗುವ ಸಮಸ್ಯೆ ನೆನಪಿಸಿಕೊಂಡು ಕಂಗಾಲಾಗುತ್ತಾರೆ. ಇಂತಹ ಸಮಸ್ಯೆಗಳಿಗೆ ತಿಲಾಂಜಲಿ ಇಡಬೇಕಾದರೆ ಗುತ್ತಿಗೆ ಕರಾರು ಮಾಡಿಕೊಂಡೇ ಗುತ್ತಿಗೆ ನೀಡಬೇಕು. ಜತೆಗೆ ಕರಾರಿನಲ್ಲಿ ಏನೆಲ್ಲಾ ಅಂಶಗಳು ಒಳಗೊಂಡಿರಬೇಕು ಎಂಬ ವಿಚಾರ ಗೊತ್ತಿರಬೇಕು.

ಕಟ್ಟಡ ನಿರ್ಮಾಣ ಸೇರಿದಂತೆ ಯಾವುದೇ ಒಂದು ಕೆಲಸವನ್ನು ಷರತ್ತುಗಳಿಗೆ ಅನುಗುಣವಾಗಿ ಮಾಡಿಕೊಡುವಂತೆ ವಹಿಸುವುದನ್ನು ಗುತ್ತಿಗೆ ಕರಾರು ಎಂದು ಕರೆಯುತ್ತೇವೆ. ಇಬ್ಬರು ವ್ಯಕ್ತಿಗಳು ಮಾಡಿಕೊಳ್ಳುವ ಗುತ್ತಿಗೆ ಕರಾರು ಉಲ್ಲಂಘನೆಯಾದರೆ ಪರಿಹಾರ ಕೋರಿ ನ್ಯಾಯಾಲಯದ ಮೊರೆ ಹೋಗಬಹುದು. ಪ್ರತ್ಯೇಕ ದಾವೆ ಸಲ್ಲಿಸಬಹುದು. ಪರಿಹಾರ ಪಡೆಯಬಹುದು. ಅದರಲ್ಲೂ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಗುತ್ತಿಗೆ ಕರಾರು ಇಲ್ಲದೇ ಯಾವ ಕೆಲಸವನ್ನು ಗುತ್ತಿಗೆಗೆ ನೀಡಲೇಬಾರದು. ಮೌಖಿಕ ಕರಾರುಗಳಿಗೆ ನ್ಯಾಯಾಲಯದಲ್ಲಿ ಮಾನ್ಯತೆ ಇರುವುದಿಲ್ಲ. ಮಿಗಿಲಾಗಿ ಮೌಖಿಕ ಕರಾರುಗಳಿಂದ ಜನ ಸಾಮಾನ್ಯರು ಮೋಸ ಹೋಗುವುದೇ ಜಾಸ್ತಿ!

ಗುತ್ತಿಗೆ ಕರಾರನ್ನು ಯಾರ ನಡುವೆ ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸಬೇಕು. ಗುತ್ತಿಗೆ ನೀಡುವರು ಹಾಗೂ ಮಾಡುವರ ಸಂಪೂರ್ಣ ವಿಳಾಸವನ್ನು ನಮೂದಿಸಿರಬೇಕು. ಗುತ್ತಿಗೆ ಕರಾರು ಜಾರಿಯಾಗುವ ದಿನಾಂಕವನ್ನು ಕರಾರಿನ ಅರಂಭದಲ್ಲಿಯೇ ನಮೂದಿಸಿರಬೇಕು. ಗುತ್ತಿಗೆ ಕರಾರಿನಲ್ಲಿ ಯಾವ ನಿವೇಶನದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಅದರ ಅಳತೆ ಮತ್ತು ಬೌಂಡರಿಯನ್ನು ಸ್ಪಷ್ಟವಾಗಿ ನಮೂದಿಸಿರಬೇಕು.ಜಾಗದಲ್ಲಿ ಬಿಲ್ಡಪ್ ಏರಿಯಾ ಬಗ್ಗೆಯೂ ವಿವರಿಸಿರಬೇಕು.

ಒಂದು ಚದರ ಕಟ್ಟಡ ನಿರ್ಮಾಣಕ್ಕೆ ಎಷ್ಟು ರೂಪಾಯಿಗೆ ನಿಗದಿ ಮಾಡಲಾಗಿದೆ ಎಂಬುದನ್ನು ಕರಾರಿನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿರಬೇಕು. ಗುತ್ತಿಗೆದಾರರಿಗೆ ಮುಂಗಡವಾಗಿ ಹಣ ನೀಡಿದ್ದಲ್ಲಿ ಅಥವಾ ನೀಡುತ್ತಿದ್ದಲ್ಲಿ ಅದನ್ನು ಬ್ಯಾಂಕ್ ಮೂಲಕವೇ ಪಾವತಿಸಿ ಅದನ್ನು ಕರಾರಿನಲ್ಲಿ ಉಲ್ಲೇಖಿಸುವುದು ಸುರಕ್ಷಿತ. ಯಾವುದೇ ಕಟ್ಟಡ ನಿರ್ಮಾಣ ಗುತ್ತಿಗೆ ಕರಾರಿನಲ್ಲಿ ವಹಿಸಿರುವ ಕಟ್ಟಡ ನಿರ್ಮಾಣದ ಎಲ್ಲಾ ಕೆಲಸಗಳನ್ನು ಉಲ್ಲೇಖಿಸಬೇಕು. ಉದಾಹರಣೆಗೆ ಎಷ್ಟು ಚದರ ಕಟ್ಟಡ ನಿರ್ಮಾಣ ಗುತ್ತಿಗೆ ನೀಡಲಾಗಿದೆ ಎಂಬುದನ್ನು ಸ್ಪಷ್ಟವಾಗಿ ಕರಾರಿನಲ್ಲಿ ಬರೆದಿರಬೇಕು.

ಕಟ್ಟಡ ಪಾಯ ವಿಚಾರದಲ್ಲಿ ಎಷ್ಟು ಅಡಿ ಆಳದಲ್ಲಿ ಪಾಯ ಅಗೆದು ನಿರ್ಮಿಸಬೇಕು ಎಂಬುದನ್ನು ಉಲ್ಲೇಖಿಸಬೇಕು. ಮನೆ ನಿರ್ಮಾಣದ ನಕ್ಷೆ ಉಲ್ಲಂಘನೆ ಆಗದಂತೆ ಪಾಯಾ ಅಗೆದು ಪೂರ್ಣಗೊಳಿಸುವುದನ್ನು ನಮೂದಿಸಿರಬೇಕು. ಪಾಯಾ ಅಗೆಯುವುದು, ಫಿಲ್ ಮಾಡುವುದು, ಬಾರ್ ಬೈಂಡಿಂಗ್, ಕಟ್ಟಡ ನಿರ್ಮಾಣ ಸಲಕರಣೆಗಳ ಸಾಗಣೆಯನ್ನು ಸಹ ಗುತ್ತಿಗೆ ಕರಾರಿನಲ್ಲಿ ಬರೆದಿರಬೇಕು. ಪ್ಲೋರಿಂಗ್, ಫಿಟ್ಟಿಂಗ್, ,ವಾಲ್ ಪೇಂಟಿಂಗ್, ಎಲೆಕ್ಟ್ರಿಕಲ್ ವರ್ಕ್ ಮತ್ತಿತರ ಕೆಲಸವನ್ನು ಪೂರ್ಣಗೊಳಿಸುವ ಬಗ್ಗೆಯೂ ಕರಾರಿನಲ್ಲಿ ನಮೂದಿಸಬೇಕು.

ಸಂಪ್ ನಿರ್ಮಾಣ, ಕಾಂಪೌಂಡ್ ಗೋಡೆ ನಿರ್ಮಾಣ, ಯಂತ್ರಗಳ ಬಾಡಿಗೆ, ರೂಪ್ ಮೋಲ್ಡಿಂಗ್, ಸರ್ಜಾ ನಿರ್ಮಾಣ, ಕಾರ್ಮಿಕರ ವೆಚ್ಚ ಎಲ್ಲವನ್ನೂ ಸ್ಪಷ್ಟವಾಗಿ ಗುತ್ತಿಗೆ ಕರಾರಿನಲ್ಲಿ ಗುತ್ತಿಗೆದಾರ ಪಾವತಿ ಮಾಡಬೇಕು ಎಂಬುದನ್ನು ವಿವರಿಸಿರಬೇಕು. ಒಂದು ವೇಳೆ ಕಟ್ಟಡ ನಿರ್ಮಾಣಕ್ಕೆ ಬೇಕಾದ ಇಟ್ಟಿಗೆ ಸಿಮೆಂಟ್, ಮತ್ತಿತರ ಉಪಕರಣ ಮಾಲೀಕರೇ ತಂದು ಕೊಡುವುದಾದಲ್ಲಿ ಅದನ್ನು ಸ್ಪಷ್ಟವಾಗಿ ಕರಾರಿನಲ್ಲಿ ಬರೆದಿರಬೇಕು. ಕಬ್ಬಿಣ ಮತ್ತಿತರ ವಿಚಾರದಲ್ಲಿ ಯಾವ ಗುಣಮಟ್ಟದ ಕಂಬಿಯನ್ನು ಹಾಕಲಾಗುತ್ತದೆ ಎಂಬುದನ್ನು ಕರಾರಿನಲ್ಲಿ ಕಂಪನಿಯ ಹೆಸರು ಸಮೇತ ಗುಣಮಟ್ಟವನ್ನು ಉಲ್ಲೇಖಿಸಿರಬೇಕು.

ಕಟ್ಟಡ ನಿರ್ಮಾಣ ಸಂಬಂಧ ಮನೆಯ ನಕ್ಷೆ ಉಲ್ಲಂಘನೆಯಾಗದಂತೆ ಕಟ್ಟಡ ನಿರ್ಮಾಣ ಮಾಡಬೇಕು. ವ್ಯತ್ಯಾಸವಾದರೆ ಅದರಿಂದ ಆಗುವ ಅನಾಹುತ, ನಷ್ಟ ಪರಿಹಾರವನ್ನು ಗುತ್ತಿಗೆದಾರ ಬರಿಸುವ ಬಗ್ಗೆ ಕರಾರಿನಲ್ಲಿ ನಮೂದಿಸಬೇಕು. ಕಟ್ಟಡ ನಿರ್ಮಾಣ ಪೂರ್ಣಗೊಳಿಸಿ ಮಾಲೀಕರಿಗೆ ವಹಿಸಿಕೊಡುವ ದಿನಾಂಕವನ್ನು ಉಲ್ಲೇಖಿಸಿರಬೇಕು. ಆಕಸ್ಮಿಕ, ನೈಸರ್ಗಿಕ ಕಾರಣದಿಂದ ವಿಳಂಬವಾದಲ್ಲಿ ಹೆಚ್ಚುವರಿ ಕಾಲಾವಕಾಶ ಕೊಡುವಂತಿದ್ದರೆ ಅದನ್ನೂ ಸಹ ಸ್ಪಷ್ಟವಾಗಿ ಬರೆದಿರಬೇಕು.

ಅನಗತ್ಯ ಕಾರಣದಿಂದ ವಿಳಂಬವಾದಲ್ಲಿ ಅದಕ್ಕೆ ಗುತ್ತಿಗೆದಾರ ಹೊಣೆಗಾರನನ್ನಾಗಿ ಮಾಡುವ ಜತೆಗೆ ಅದರಿಂದ ಆಗುವ ನಷ್ಟ ಪರಿಹಾರ ಕೋರಲು ಮಾಲೀಕ ಹಕ್ಕುಳ್ಳವ ಬಗ್ಗೆ ಕರಾರಿನಲ್ಲಿ ಬರೆದಿರಬೇಕು. ಕಟ್ಟಡ ನಿರ್ಮಾಣ ಸಂಬಂಧ ಯಾವ ಹಂತದಲ್ಲಿ ಎಷ್ಟು ಹಣ ಕೊಡಬೇಕು ಎಂಬುದನ್ನು ಸಹ ಕರಾರಿನಲ್ಲಿ ನಮೂದಿಸಿರಬೇಕು.ಈ ಎಲ್ಲಾ ಷರತ್ತುಗಳ ಜತೆ ಇಬ್ಬರು ನೈಜ ಸಾಕ್ಷಿಗಳ ಸಮಕ್ಷಮ ಸಹಿ ಮಾಡಿಸಿ ಕರಾರು ಮಾಡಿಸಿಕೊಂಡಿರಬೇಕು.

ಕರಾರಿನ ಒಂದು ಪ್ರತಿ ಮಾಲೀಕರು ಇಟ್ಟುಕೊಂಡು ಮತ್ತೊಂದನ್ನು ಗುತ್ತಿಗೆದಾರರಿಗೆ ನೀಡಬೇಕು. ಈ ಅಂಶಗಳು ಇಲ್ಲದೇ ಅಸ್ಪಷ್ಟವಾಗಿ ಕರಾರು ಮಾಡಿಕೊಂಡರೆ ಕಟ್ಟಡ ನಿರ್ಮಾಣ ವೇಳೆ ತಕರಾರು ಆರಂಭವಾಗಿ ಮನೆ ಮಾಲೀಕರೇ ನಷ್ಟಕ್ಕೆ ಒಳಗಾಗಬೇಕಾಗುತ್ತದೆ. ಹೀಗಾಗಿ ಗುತ್ತಿಗೆ ಕರಾರು ಮಾಡಿಕೊಳ್ಳುವಾಗ ಈ ಮೇಲಿನ ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ತಪ್ಪದೇ ನಮೂದಿಸಿ ಕರಾರು ಮಾಡಿಕೊಳ್ಳಬೇಕು. ಯಾವುದೇ ಅಂಶ ಬಿಟ್ಟು ಹೋಗದೇ ಇದ್ದು ಕರಾರು ಅಂಶಗಳನ್ನು ಎರಡು ಸಲ ಓದಿ ಆನಂತರ ಸಹಿ ಮಾಡಿಕೊಳ್ಳಬೇಕು ಎನ್ನುತ್ತಾರೆ ಕಾನೂನು ತಜ್ಞರು.

Exit mobile version