Revenue Facts

ಲಂಚ ಪಡೆಯುತ್ತಿದ್ದಾಗಲೇ ಸಿಕ್ಕಿಬಿದ್ದ ಕಿತ್ತೂರು ತಹಶೀಲ್ದಾರ್ ಹಿಂಡಲಗಾ ಜೈಲಿಗೆ

ಬೆಳಗಾವಿ: ಲಂಚ ಪಡೆಯುತ್ತಿದ್ದಾಗಲೇ ಲೋಕಾಯುಕ್ತರ ಬಲೆಗೆ ಬಿದ್ದ ಬೆಳಗಾವಿ ಜಿಲ್ಲೆ ಕಿತ್ತೂರು ತಹಶೀಲ್ದಾರ್ ಅವರನ್ನು ಬಂಧಿಸಲಾಗಿದ್ದು, ಸದ್ಯ ಹಿಂಡಲಗಾ ಜೈಲಿಗೆ ಕಳುಹಿಸಲಾಗಿದೆ.

ಕಿತ್ತೂರು ತಹಶೀಲ್ದಾರ್ ಸೊಮಲಿಂಗಪ್ಪ ಹಾಲಗಿ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ಶುಕ್ರವಾರ ಸಂಜೆ ದಾಳಿ ನಡೆಸಿದರು. ಲಂಚ ಪಡೆಯುತ್ತಿದ್ದಾಗಲೇ ಸಿಕ್ಕಿಬಿದ್ದ ತಹಶೀಲ್ದಾರ್ ಮತ್ತು ಗುಮಾಸ್ತ ನೌಕರ ಜಿ. ಪ್ರಸನ್ನ ಎಂಬುವರ ವಿರುದ್ಧ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡರು.

ಇನ್ನು ಶುಕ್ರವಾರ ಸಂಜೆಯಿಂದ ತಡರಾತ್ರಿವರೆಗೂ ತಹಶೀಲ್ದಾರ್ ಕಚೇರಿಯ ತಪಾಸಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಹಲವು ದಾಖಲೆಗಳು ಸುಮಾರು 10 ಲಕ್ಷ ರೂಪಾಯಿಗೂ ಹೆಚ್ಚಿನ ಹಣ ಲೋಕಾಯುಕ್ತರಿಗೆ ಸಿಕ್ಕಿದೆ.

ಶನಿವಾರ ಬೆಳಗ್ಗೆ ತಹಶೀಲ್ದಾರ್ ಸೋಮಲಿಂಗಪ್ಪ ಮತ್ತು ಪ್ರಸನ್ನ ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ ಬಳಿಕ ಲೋಕಾಯುಕ್ತ ನ್ಯಾಯಾಧೀಶರ ಮುಂದೆ ಹಾಜರುಪಡಿಸಿಲಾಗಿದೆ. ಅಲ್ಲಿಂದ ಅವರನ್ನು ಬೆಳಗಾವಿಯ ಹಿಂಡಲಗಾ ಜೈಲಿಗೆ ಕರೆದೊಯ್ಯಲಾಗಿದೆ.

5 ಲಕ್ಷ ಲಂಚ ಕೇಳಿದ್ದರು:
ಕಿತ್ತೂರು ತಾಲ್ಲೂಕಿನ ಖೋದನಾಪುರ ಗ್ರಾಮದ ರಾಜೇಂದ್ರ ಬಾಪುಸಾಹೇಬ ಇನಾಮದಾರ್ ಎಂಬ ವ್ಯಕ್ತಿ ತಹಶೀಲ್ದಾರ್ ವಿರುದ್ಧ ದೂರು ನೀಡಿದ್ದರು. ರಾಜೇಂದ್ರ ಅವರ ತಂದೆ ಬಾಪುಸಾಹೇಬ ಇನಾಮದಾರ್ ಹೆಸರಲ್ಲಿದ್ದ 10 ಎಕರೆ ಜಮೀನನ್ನು ತಮ್ಮ ಹೆಸರಿಗೆ ಖಾತಾ ಬದಲಾವಣೆ ಮಾಡಿಕೊಳ್ಳಲು ಅರ್ಜಿ ಸಲ್ಲಿಸಿದ್ದರು. ಖಾತಾ ಬದಲಾವಣೆ ಮಾಡಿಕೊಡಬೇಕಾದರೆ 5 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅಲ್ಲದೆ, ಮುಂಗಡವಾಗಿ 2 ಲಕ್ಷ ರೂ. ನೀಡಿದರೆ ಪ್ರಕ್ರಿಯೆ ಆರಂಭಿಸುವುದಾಗಿ ಹೇಳಿದ್ದರು ಎಂದು ಎಂದು ರಾಜೇಂದ್ರ ದೂರಿನಲ್ಲಿ ವಿವರಿಸಿದ್ದಾರೆ.

ದೂರಿನ ಮೇರೆಗೆ ಬಲೆ ಎಣೆದ ಲೋಕಾಯುಕ್ತ ಪೊಲೀಸರು ರಾಜೇಂದ್ರ ಅವರಿಂದ 2 ಲಕ್ಷ ರೂ. ಲಂಚದ ಹಣ ಪಡೆಯುತ್ತಿರುವ ಸಂದರ್ಭದಲ್ಲಿಯೇ ತಹಶೀಲ್ದಾರ್‌ ಮೇಲೆ ದಾಳಿ ನಡೆಸಿದ್ದಾರೆ.

Exit mobile version