ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿನ ಮಧ್ಯವರ್ತಿಗಳ ಹಾವಳಿ ಮತ್ತು ಲಂಚಾವತಾರ ತಪ್ಪಿಸಲು ಕಂದಾಯ ಇಲಾಖೆ ಜಾರಿಗೆ ತಂದಿರುವ ಕಾವೇರಿ 2.0 ತಂತ್ರಾಂಶದಿಂದ ಜನರಿಗೆ ಅನುಕೂಲಕ್ಕಿಂತ ಅನನುಕೂಲವೇ ಹೆಚ್ಚಾಗಿದೆ. ತಾಂತ್ರಿಕ ಮೂಲಸೌಕರ್ಯವನ್ನು ಮೇಲ್ದರ್ಜೆಗೇರಿಸದ ಕಾರಣ ಸರ್ವರ್ ಸಮಸ್ಯೆ ಕಾಡುತ್ತಿದೆ. ಹೊಸ ಸಾಫ್ಟ್ವೇರ್ಗೆ ಲಾಗಿನ್ ಆಗಲು, ನೋಂದಣಿಗೆ ಅರ್ಜಿ ಸಲ್ಲಿಸಲು, ಹಣ ಪಾವತಿ, ಋಣಭಾರ ಪತ್ರ ಪಡೆಯಲು, ಸರ್ಟಿಫೈಡ್ ಪತ್ರ ಪಡೆಯುವುದು ಸೇರಿದಂತೆ ಪ್ರತಿಯೊಂದು ಸೇವೆಗೂ ಜನರು ಪರದಾಡುವಂತೆ ಆಗಿದೆ.
ಸಮಸ್ಯೆಗಳು ಒಂದೆರಡಲ್ಲ: ರಾಜ್ಯದ 256 ಸಬ್ ರಿಜಿಸ್ಟ್ರಾರ್ ಕಚೇರಿಗಳ ಪೈಕಿ 220 ಕಡೆಗಳಲ್ಲಿ ಕಾವೇರಿ 2.0 ತಂತ್ರಾಂಶ ಅಳವಡಿಕೆಯಾಗಿದೆ. ಪಾಸ್ಪೋರ್ಟ್ ಮಾದರಿ ಆನ್ಲೈನ್ ಸೇವೆ ಒದಗಿಸುವ ವ್ಯವಸ್ಥೆ ಎನ್ನಲಾಗಿದ್ದರೂ ಅವ್ಯವಸ್ಥೆಯೇ ಹೆಚ್ಚಾಗಿದೆ.
ಹಾವೇರಿ ಜಿಲ್ಲೆಯ ಹಾವೇರಿ, ಹಿರೇಕೆರೂರ, ಬ್ಯಾಡಗಿ ಸೇರಿ ಹಲವೆಡೆ ನಗರಸಭೆ ಆಸ್ತಿಗಳ ನೋಂದಣಿಗೆ ಸಲ್ಲಿಸಿರುವ ಅರ್ಜಿಗಳು ಓಪನ್ ಆಗುತ್ತಿಲ್ಲ. ಮತ್ತೊಂದೆಡೆ ಆನ್ಲೈನ್ ಪೇಮೆಂಟ್ ಮಾಡಿದಾಗ ಬ್ಯಾಂಕ್ ಖಾತೆಯಿಂದ ಮೊತ್ತ ಕಡಿತವಾದರೂ ಖಜಾನೆ-2ಗೆ ತಲುಪಿರುವ ಮಾಹಿತಿ ಸಬ್ ರಿಜಿಸ್ಟ್ರಾರ್ಗೆ ಸಿಗುತ್ತಿಲ್ಲ. ಪರಿಣಾಮ ಪದೇಪದೆ ಶುಲ್ಕ ಪಾವತಿಸುವಂತೆ ಆನ್ಲೈನ್ನಲ್ಲಿ ತೋರಿಸುತ್ತಿದೆ.
ಮಂಡ್ಯ ಜಿಲ್ಲೆ ಬನ್ನೂರು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಆಸ್ತಿ ವರ್ಗಾವಣೆ ಸಲುವಾಗಿ ನೋಂದಣಿ ಮಾಡಿದಾಗ ಡಾಕ್ಯುಮೆಂಟ್ ಸಮರಿ ರಿಪೋರ್ಟ್ನಲ್ಲಿ ಬರೆದುಕೊಟ್ಟವರ ಮತ್ತು ಬರೆಸಿಕೊಂಡವರ ಫೋಟೋ ಮತ್ತು ಬೆರಳಚ್ಚು ಮುದ್ರಣವಾಗಿತ್ತು. ಆದರೆ ಪ್ರಮಾಣಪತ್ರದಲ್ಲಿ ಬರೆದುಕೊಟ್ಟವರ ಫೋಟೋ ಮತ್ತು ಬೆರಳಚ್ಚು ಮುದ್ರಣವಾಗದೆ ಪ್ರಿಂಟ್ ಆಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಕೋರ್ಟ್ನಲ್ಲಿ ಇರುವ ಭೂವ್ಯಾಜ್ಯ, ಖಾತೆ-ಕಂದಾಯ ವರ್ಗಾವಣೆಗೆ ತಡೆಯಾಜ್ಞೆ ಕೊಟ್ಟಿರುವುದು ಪಹಣಿಯಲ್ಲಿ ಉಲ್ಲೇಖಿಸಲಾಗುತ್ತದೆ. ಆಸ್ತಿ ನೋಂದಣಿಗೂ ಮುನ್ನ ಇಸಿ (ಎನ್ಂಬರೆನ್ಸ್ ಸರ್ಟಿಫಿಕೇಟ್) ಪಡೆದು ಮುಂದುವರಿಯುತ್ತಾರೆ. ಜನರು ಇಸಿ ಪಡೆದಾಗ ಖಚಿತ\ ಮಾಹಿತಿ ಸಿಗುತ್ತಿಲ್ಲ. ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ದಿನಕ್ಕೊಂದು ಸಮಸ್ಯೆ ಎದುರಾಗುತ್ತಿದೆ.
ಹಳೇ ಸರ್ವರ್ ಹಳೇ ಸಮಸ್ಯೆ
ಡಿಜಿಟಲ್ ಆಡಳಿತ, ಇ-ಆಫೀಸ್ ಅನುಷ್ಠಾನದ ದಿನಗಳಿಂದಲೂ ಕಾಡುತ್ತಿರುವ ಸರ್ವರ್ ಸಮಸ್ಯೆಯನ್ನು ಈವರೆಗೂ ಸರಿಪಡಿಸಿಲ್ಲ ಎಂಬ ದೂರು ತಾಂತ್ರಿಕ ಮೂಲಸೌಕರ್ಯದ ದುಸ್ಥಿತಿಯನ್ನು ಬಿಂಬಿಸುತ್ತಿದೆ. ಕಾಲಕ್ಕೆ ತಕ್ಕಂತೆ ಇಂಟರ್ನೆಟ್ ಸ್ಪೀಡ್, ಬ್ಯಾಂಡ್ವಿಡ್ತ್ ಗಳಲ್ಲಿ ಬದಲಾವಣೆ ತಂದಿಲ್ಲ. ಇದರಿಂದ ದೂರದ ಊರುಗಳಿಂದ ಸರ್ಟಿಫೈಡ್ ಕಾಪಿ (ಸಿಸಿ), ಕರಾರುಪತ್ರ, ಸಾಲ ತೀರುವಳಿ, ಋಣಬಾಧ್ಯತಾ ಪತ್ರ ಮತ್ತು ಸಾಗುವಳಿ ಜಮೀನು ಒಪ್ಪಂದ
ನೋಂದಣಿ ಕಾರ್ಯಕ್ಕೆ ಆಗಮಿಸುವ ಜನರು ಬರಿಗೈಯಲ್ಲಿ ವಾಪಸ್ಸಾಗುವಂತಾಗಿದೆ.
ಅಧಿಕಾರಿಗಳಿಗೆ ಗಂಡಾಂತರ
ಸ್ಥಿರಾಸ್ತಿ ಮೇಲೆ ನೋಂದಣಿ ಆಗಿರುವ ಇತಿಹಾಸ ತಿಳಿಯಲು ಇಸಿ (ಎನ್ಂಬರೆನ್ಸ್ ಸರ್ಟಿಫಿಕೇಟ್) ಪಡೆಯುತ್ತಾರೆ. 2004ರ ನಂತರದ ದಾಖಲೆ ನೋಂದಣಿಗೆ ಆನ್ಲೈನ್ನಲ್ಲಿ ಇಸಿ ಲಭ್ಯವಿದೆ. ಕಾವೇರಿ 2.0ರಲ್ಲಿ ಸರ್ಚ್ ಕೊಟ್ಟಾಗ ಋಣಭಾರ ಇಲ್ಲವೆಂದು ತೋರಿಸುತ್ತಿದೆ. ಇದರಿಂದ ರಿಯಲ್ ಎಸ್ಟೇಟ್, ಬ್ಯಾಂಕ್ ಸಾಲಸೌಲಭ್ಯ ವಿತರಣೆಗೆ ತೊಡಕಾಗಿದೆ. ಕೋರ್ಟ್ ಮೆಟ್ಟಿಲೇರಿದರೆ ಅಧಿಕಾರಿಗಳ ತಲೆದಂಡ ಖಚಿತ ಎನ್ನಲಾಗಿದೆ.
ಪರಿಹಾರವಿಲ್ಲದ ಪ್ರಾಬ್ಲಮ್ಗಳು
1. ನೋಂದಣಿ ಬಳಿಕ ತಹಸೀಲ್ದಾರ್ಗಳಿಗೆ ಜೆ ಸ್ಲಿಪ್ ಹೋಗುತ್ತಿಲ್ಲ
2. ನಕಲು ಪ್ರತಿಗೆ ದೃಢೀಕರಣ ಪತ್ರವೆಂದು ನಮೂದಾಗುತ್ತಿಲ್ಲ
3. ಮಾರ್ಟ್ಗೇಜ್ ಪತ್ರ ನೋಂದಣಿ ವೇಳೆ ಅಡಮಾನ ಮೊತ್ತವೇ ಕಾಣೆ
4. ಖರೀದಿದಾರ, ಮಾರಾಟಗಾರರ ಹೆಸರು ಅದಲು-ಬದಲುಇಲ್ಲವೇ ನಾಪತ್ತೆ
5. ಒಂದೇ ಆಸ್ತಿ ನೋಂದಣಿಗೆ ಹತ್ತಾರು ಬಾರಿ ದಾಖಲೆ ಅಪ್ಲೋಡ್
6. ಏಜೆಂಟ್ಗಳ ಸಹಾಯ ಇಲ್ಲದೆ ದಾಖಲೆ ಅಪ್ಲೋಡ್ ಕಷ್ಟಸಾಧ್ಯ
7. ತಪ್ಪಾಗಿ ಅಪ್ಲೋಡ್ ಮಾಡಿರುವ ದಾಖಲೆಗಳ ಡಿಲೀಟ್ ಗೆ ಅವಕಾಶವಿಲ್ಲ
8. ಇಂಡೆಕ್ಸ್ ತಪ್ಪಾಗಿ ನಮೂದಾಗುತ್ತಿದ್ದು, ಸರಿಪಡಿಸಲು ಅಸಾಧ್ಯ