Revenue Facts

ಹೈಟೆಕ್ ಬ್ರೋಕರ್‌ ಗಳ ಹುಟ್ಟಿಗೆ ನಾಂದಿ ಹಾಡಿತೇ ಕಾವೇರಿ 2.0 : ದಾಸ್ತವೇಜುಗಳ ಫೀಡಿಂಗ್ ಹೆಸರಿನಲ್ಲಿ ಬ್ರೋಕರ್‌ಗಳ ಡೀಲಿಂಗ್

Kaveri 2.0

Kaveri 2.0 online service

Kaveri 2.0

#kaveri 2.0 #Kaveri online service #Brokers #Karnataka Revenue department

ಬೆಂಗಳೂರು, ಏ. 28: ಆಸ್ತಿಗಳ ನೋಂದಣಿ ಸೇವೆಯನ್ನುಜನರ ಮನೆ ಬಾಗಿಲಿಗೆ ತಲುಪಿಸುವ ಉದ್ದೇಶದಿಂದ ಸರ್ಕಾರ ಪರಿಚಯಿಸಿರುವ ಕಾವೇರಿ 2.0 ತಂತ್ರಾಂಶ ಭ್ರಷ್ಟಾಚಾರ ನಿಯಂತ್ರಣ ಬದಲಿಗೆ ಹೈಟೆಕ್ ಬ್ರೋಕರ್‌ ಗಳನ್ನು ಹುಟ್ಟುಹಾಕಿದೆ.

ಕಾವೇರಿ ತಂತ್ರಾಂಶದ ಮೂಲಕ ಆಸ್ತಿಗಳ ನೋಂದಣಿಯ ವಿವರ ನಮೂದಿಸಲು ಸಾಧ್ಯವಾಗದ ಕಾರಣ ಅನಿವಾರ್ಯವಾಗಿ ಬ್ರೋಕರ್ ಗಳನ್ನು ಅವಲಂಭಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಅನಿವಾರ್ಯತೆ ನೋಡಿದ ಬ್ರೋಕರ್ ಗಳು ಒಂದು ದಾಖಲೆ ಫೀಡಿಂಗ್‌ ಗೆ ಕನಿಷ್ಠ 300 ರೂ. ನಿಂದ 500 ರೂ ನಿಗದಿ ಮಾಡಿದ್ದಾರೆ. ಕಾವೇರಿ 2.0 ತಂತ್ರಾಂಶದ ಲಾಭ ಜನರಿಗೆ ಅಗುತ್ತಿದೆಯೋ ಇಲ್ಲವೋ ಬ್ರೋಕರ್ ಗಳಲ್ಲಿ ಮಾತ್ರ ಸಂತಸ ಹುಟ್ಟು ಹಾಕಿದೆ.

ಇದನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ಬ್ರೋಕರ್ ಗಳು ಕಮಾಯಿ ಬದಲಿಗೆ ಇದೀಗ ಫೀಡಿಂಗ್ ಹೆಸರಿನಲ್ಲಿ ಅಧಿಕೃತವಾಗಿ ಕಂಪ್ಯೂಟರ್ ಬ್ರೋಕರ್ ಸೆಂಟರ್‌ ಗಳನ್ನು ತೆರೆದು ವ್ಯಾಪಾರ ಆರಂಭಿಸಿದ್ದಾರೆ. ಇದು ಉಪ ನೋಂದಣಾಧಿಕಾರಿಗಳ ವಲಯದಲ್ಲಿ ಭಾರೀ ಚರ್ಚೆ ಹುಟ್ಟು ಹಾಕಿದೆ.

ಏನಿದು ಕಾವೇರಿ 2.0 :

ಕಂದಾಯ ಇಲಾಖೆ ಪರಿಚಯಿಸುತ್ತಿರುವ ಕಾವೇರಿ 2.0 ತಂತ್ರಾಂಶದಿಂದ ಯಾವುದೇ ಆಸ್ತಿಗಳ ಪರಭಾರೆ ದಾಖಲೆ ನೋಂದಣಿ, ವಿವಾಹ ನೋಂದಣಿ, ಜಿಪಿಎ ನೊಂದಣಿ ಸೇರಿದಂತೆ ಬಹುತೇಕ ಸೇವೆಗಳನ್ನು ಆನ್‌ಲೈನ್ ಮೂಲಕವೇ ಪಡೆಯಲು ಅವಕಾಶ ಕಲ್ಪಿಸಿದೆ. ಆದ್ರೆ ಸಾರ್ವಜನಿಕರೇ ತಮ್ಮ ಆಸ್ತಿಯಗಳ ನೋಂದಣಿ ಸಂಬಂಧ ದಾಸ್ತವೇಜುಗಳ ವಿವರಗಳನ್ನು ಆನ್‌ಲೈನ್‌ ನಲ್ಲಿಯೇ ಫೀಡಿಂಗ್ ಮಾಡಬೇಕು. ಆನ್‌ಲೈನ್ ನಲ್ಲಿ ಫೀಡಿಂಗ್ ಮಾಡಿದ ಬಳಿಕ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪಾವತಿಸಲು ಸಂಬಂಧಪಟ್ಟ ಪಾರ್ಟಿಗೆ ಸಂದೇಶ ಹೋಗುತ್ತದೆ. ಶುಲ್ಕ ಪಾವತಿಸಿದ ಬಳಿಕ ದಾಸ್ತವೇಜು ನೋಂದಣಿಯ ದಿನಾಂಕ ನಿಗದಿಯಾಗುತ್ತದೆ. ಸಂಬಂಧಪಟ್ಟ ಪಾರ್ಟಿಗಳು ಉಪ ನೋಂದಣಾಧಿಕಾರಿಗಳ ಕಚೇರಿಗೆ ಹೋದ ಕೂಡಲೇ ಆಸ್ತಿಯನ್ನು ನೋಂದಣಿ ಮಾಡಿಕೊಡಲಾಗುತ್ತದೆ. ಇದರಿಂದ ಉಪ ನೋಂದಣಾಧಿಕಾರಿಗಳ ಕಚೇರಿಗಳ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿದದೆ.ಜತೆಗೆ ಸಾರ್ವಜನಿಕರ ಅನಿವಾರ್ಯ ಅಲೆದಾಟಕ್ಕೆ ಬ್ರೇಕ್ ಬೀಳಲಿದೆ. ಬ್ರೋಕರ್ ಗಳ ಹಾವಳಿಗೆ ಕಡಿವಾಣ ಬೀಳಲಿದೆ ಎಂಬುದು ಸರ್ಕಾರದ ಅಶಯ. ಆದ್ರೆ ವಾಸ್ತವದಲ್ಲಿ ಆಗುತ್ತಿರುವುದೇ ಬೇರೆ.

ಹೈಟೆಕ್ ಬ್ರೋಕರ್ ಗಳ ಹಾವಳಿಗೆ ನಾಂದಿ:

ಜನ ಸಾಮಾನ್ಯರಿಗೆ ಕಂಪ್ಯೂಟರ್ ಜ್ಞಾನ ಇಲ್ಲ. ಕಾವೇರಿ ತಂತ್ರಾಂಶ ಕೇವಲ ವೆಬ್‌ ಸೈಟ್ ಲಾಗಿನ್ ಗೆ ಸೀಮಿತಗೊಳಿಸಲಾಗಿದೆ. ಆಪ್‌ ರೂಪದಲ್ಲಿ ಸಾರ್ವಜನಿಕರಿಗೆ ಲಭ್ಯವಿಲ್ಲ. ಇನ್ನು ಒಂದು ದಾಸ್ತವೇಜುಗಳ ವಿವರಗಳನ್ನು ಕಾವೇರಿ ತಂತ್ರಾಂಶದಲ್ಲಿ ಫೀಡ್ ಮಾಡುವಾಗ ಅದರ ಕಾನೂನು ಅಂಶಗಳ ಅರಿವು ಸಾರ್ವಜನಿಕರಿಗೆ ಗೊತ್ತಿಲ್ಲ. ಹೀಗಾಗಿ ದಾಸ್ತವೇಜುಗಳನ್ನು ಫೀಡ್ ಮಾಡಲು ಸಾರ್ವಜನಿಕರು ಅನಿವಾರ್ಯವಾಗಿ ಉಪ ನೋಂದಣಾಧಿಕಾರಿಗಳ ಕಚೇರಿ ಸುತ್ತ ತಲೆಯೆತ್ತಿರುವ ಹೈಟೆಕ್ ಬ್ರೋಕರ್‌ ಗಳ ನ್ನೇ ಅವಲಂಬಿಸುವಂತಾಗಿದೆ. ದಾಖಲೆಗಳ ಫೀಡಿಂಗ್ ಗೆ ಗ್ರಾಮೀಣ ಭಾಗದಲ್ಲಿ ಕನಿಷ್ಠ 300 ರಿಂದ 500 ರೂ. ಫಿಕ್ಸ್ ಮಾಡಿಕೊಂಡಿದ್ದಾರೆ. ಬೆಂಗಳೂರು ನಗರದಲ್ಲಿ ದಾಖಲೆಗಳ ಫೀಡಿಂಗ್ ಶುಲ್ಕವನ್ನು ಐದು ನೂರು ರೂಪಾಯಿ ನಿಗದಿ ಮಾಡಿಕೊಂಡಿದ್ದಾರೆ.

ಫೀಡಿಂಗ್ ಹೆಸರಿನಲ್ಲಿ ವ್ಯವಹಾರ: ಬ್ರೋಕರ್‌ ಗಳು ಸಾರ್ವಜನಿಕರ ಫೀಡಿಂಗ್ ಸಂದರ್ಭದಲ್ಲಿಯೇ ಡೀಲಿಂಗ್ ಮಾಡುತ್ತಾರೆ. ದಾಸ್ತವೇಜುಗಳ ನೋಂದಣಿಗೆ ಇಂತಿಷ್ಟುಮಾಮೂಲಿಯನ್ನು ಅಧಿಕೃತವಾಗಿ ಫಿಕ್ಸ್ ಮಾಡುತ್ತಿದ್ದಾರೆ. ದಾಸ್ತವೇಜು ನೋಂದಣಿಗೆ ಮೊಬೈಲ್ ಸಂಖ್ಯೆಯನ್ನು ಬ್ರೋಕರ್‌ ಗಳ ಮೊಬೈಲ್ ನಂಬರ್ ನೀಡುತ್ತಾರೆ. ನೋಂದಣಿ ಮತ್ತು ಮುದ್ರಾಂಕ ಶುಲ್ಕವನ್ನು ಬ್ರೋಕರ್‌ ಗಳೇ ಪಾರ್ಟಿಗಳಿಂದ ಪಡೆದು ಅದಕ್ಕೂ ಹೆಚ್ಚುವರಿ ಶುಲ್ಕ ಪಡೆಯುತ್ತಿದ್ದಾರೆ. ದಾಸ್ತವೇಜುಗಳ ನೋಂದಣಿ ಸ್ಲಾಟ್ ಕೂಡ ಬ್ರೋಕರ್ ಗೆ ಹೋಗುವ ಕಾರಣದಿಂದ ಆತನ ಸೂಚನೆ ಮೇರೆಗೆ ಪಾರ್ಟಿಗಳು ಉಪ ನೋಂದಣಾಧಿಕಾರಿಗಳ ಕಚೇರಿಗೆ ಹೋಗಿ ದಾಖಲೆಗಳ ಪರಿಶೀಲನೆ ಮಾಡುತ್ತಿದ್ದಾರೆ. ಇದಕ್ಕೂ ಇಂತಿಷ್ಟು ಕಮೀಷನ್ ಪಡೆಯುತ್ತಿದ್ದಾರೆ. ಒಟ್ಟಾರೆ ಕಾವೇರಿ 2.0 ತಂತ್ರಾಂಶ ಹೈಟೆಕ್ ಬ್ರೋಕರ್‌ ಗಳ ಅವಲಂಬನೆ ಜಾಸ್ತಿ ಮಾಡಿದೆ. ಮಾತ್ರವಲ್ಲ ಉಪ ನೋಂದಣಾಧಿಕಾರಿಗಳ ಅವಲಂಬನೆಗಿಂತಲೂ ಪೀಡಿಂಗ್ ಕಾರಣಕ್ಕೆ ಬ್ರೋಕರ್‌ ಗಳನ್ನೇ ಅವಲಂಬಿಸುವಂತಾಗಿದೆ. ಇದರಿಂದ ಉಪ ನೋಂದಣಾಧಿಕಾರಿ ಕಚೇರಿಗಳ ಸುತ್ತಮುತ್ತ ಫೀಡಿಂಗ್ ಸೆಂಟರ್‌ ಗಳು ನಾಯಿ ಕೊಡೆಗಳಂತೆ ತಲೆಯೆತ್ತುತ್ತಿವೆ.

ಆಫ್‌ಲೈನ್ ಗೂ ಅವಕಾಶ ಸೂಕ್ತ:

Kaveri 2.0 online service

ಸಾರ್ವಜನಿಕರು ತಮ್ಮ ಜೀವನದಲ್ಲಿ ಒಂದು ಅಥವಾ ಎರಡು ಬಾರಿ ಆಸ್ತಿಗಳ ಪರಭಾರೆ ಸಂಬಂಧ ಉಪ ನೋಂದಣಾಧಿಕಾರಿಗಳ ಕಚೇರಿಗೆ ಬರುತ್ತಾರೆ. ಹೀಗಾಗಿ ಆನ್‌ಲೈನ್ ನಲ್ಲಿ ಲಾಗಿನ್ ಅಗಿ ದಾಖಲೆಗಳನ್ನು ಕಾನೂನು ಬದ್ಧವಾಗಿ ಫೀಡಿಂಗ್ ಮಾಡುವ ಜ್ಞಾನ ಹೊಂದಿಲ್ಲ. ಆನ್‌ಲೈನ್ ಜತೆಗೆ ಆಫ್‌ಲೈನ್ ( ಕಚೇರಿಗೆ ನೇರವಾಗಿ ಹೋಗುವ ) ಗೂ ಅವಕಾಶ ಕಲ್ಪಿಸಬೇಕು. ಆಗ ಮಾತ್ರ ಬ್ರೋಕರ್‌ ಗಳ ಹಾವಳಿಗೆ ಕಡಿವಾಣ ಬೀಳಲಿದೆ. ಸಂಪೂರ್ಣವಾಗಿ ಅನ್‌ಲೈನ್ ಮಾಡುವುದರಿಂದ ಸಾರ್ವಜನಿಕರು ಬ್ರೋಕರ್ ಗಳನ್ನೇ ಹೆಚ್ಚು ಅವಲಂಬಿಸಿ ಭ್ರಷ್ಟಾಚಾರ ಕಡಿಮೆ ಬದಲಿಗೆ ಮತ್ತಷ್ಟು ಹೆಚ್ಚಾಗಲಿದೆ. ಸಾರ್ವಜನಿಕರು ದಾಸ್ತವೇಜುಗಳ ಫೀಡಿಂಗ್ ಗಾಗಿ ಬ್ರೋಕರ್ ಗಳ ಕಂಪ್ಯೂಟರ್ ಸೆಂಟರ್‌ ಗಳನ್ನೇ ಅವಲಂಬಿಸ ಬೇಕಾಗುತ್ತದೆ. ಇದಕ್ಕೆ ಬ್ರೇಕ್ ಬೀಳದ ಹೊರತೂ ಉಪ ನೋಂದಣಾಧಿಕಾರಿಗಳ ಕಚೇರಿಗಳ ಭ್ರಷ್ಟಾಚಾರಕ್ಕೆ ಬ್ರೇಕ್ ಬೀಳುವುದು ಅಸಾಧ್ಯ ಎಂಬ ಮಾತು ಉಪ ನೋಂದಣಾಧಿಕಾರಿಗಳ ವಲಯದಲ್ಲಿ ಕೇಳಿ ಬರುತ್ತಿದೆ. ಈ ನಿಟ್ಟಿನಲ್ಲಿ ಕಂದಾಯ ಇಲಾಖೆ ಪರಮಾರ್ಶಿಸಿ ಆನ್‌ಲೈನ್ ಜತೆಗೆ ಆಫ್‌ಲೈನ್ ಗೂ ಅವಕಾಶ ಕಲ್ಪಿಸುವುದು ಸೂಕ್ತ.

ಫೀಡಿಂಗ್ ಸೆಂಟರ್ ಅನಿವಾರ್ಯ:

ಇನ್ನು ಸಾರ್ವಜನಿಕರ ದಾಸ್ತವೇಜುಗಳ ಪೀಡಿಂಗ್ ಮಾಡುವ ಸೇವೆಯನ್ನು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಫೀಡಿಂಗ್ ಸೆಂಟರ್ ತೆರೆಯುವುದು ಸೂಕ್ತ. ಪ್ರತಿಯೊಂದು ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಪ್ರತ್ಯೇಕ ಫೀಡಿಂಗ್ ಸೆಂಟರ್ ಸಾರ್ವಜನಿಕರು ಆಸ್ತಿಗಳ ದಾಸ್ತವೇಜು ನೋಂದಣಿ ಸಂದರ್ಭದಲ್ಲಿ ಇಲಾಖೆಯ ಸಿಬ್ಬಂದಿಯೇ ನೆರವು ನೀಡಿದಲ್ಲಿ ಬ್ರೋಕರ್‌ ಗಳ ಹಾವಳಿ ತಪ್ಪಲಿದೆ. ಈ ನಿಟ್ಟಿನಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಪರಮಾರ್ಶಿಸುವುದು ಸೂಕ್ತ. ಈ ವ್ಯವಸ್ಥೆ ಕಲ್ಪಿಸದೇ ಇದ್ದರೆ, ಬ್ರೋಕರ್‌ ಗಳೇ ಒಂದು ದಿನ ಉಪ ನೋಂದಣಾಧಿಕಾರಿಗಳ ಕಚೇರಿಗಳು ಬ್ರೋಕರ್‌ ಗಳ ಚುಕ್ಕಾಣಿಗೆ ಹಿಡಿಯಲಿವೆ.

Exit mobile version