ಬೆಂಗಳೂರು, ಜ. 01 : ಕರ್ನಾಟಕ ರಾಜ್ಯ ಸರ್ಕಾರ 116 ಐಎಎಸ್, ಐಪಿಎಸ್ ಮತ್ತು ಐಎಫ್‌ಎಸ್ ಅಧಿಕಾರಿಗಳಿಗೆ ಬಡ್ತಿ ನೀಡಿ ಆದೇಶ ಹೊರಡಿಸಿದೆ. ಹೊಸ ವರ್ಷದ ಹಿನ್ನೆಲೆ ಡಿಸೆಂಬರ್ 31 ರಂದೇ ಸರ್ಕಾರ ಬಡ್ತಿ ನೀಡಿ ಆದೇಶಿಸಿದೆ. ನಿನ್ನೆಯಿಂದಲೇ ಅಧಿಕಾರಿಗಳು ತಮ್ಮ ಹೊಸ ಜವಾಬ್ದಾರಿಗಳನ್ನು ನಿಭಾಯಿಸಲು ಆರಂಭಿಸಿದ್ದಾರೆ. ಒಟ್ಟು 42 ಐಎಎಸ್ ಅಧಿಕಾರಿಗಳಿಗೆ ಬಡ್ತಿ ನೀಡಲಾಗಿದ್ದು, 52 ಐಪಿಎಸ್ ಅಧಿಕಾರಿಗಳಿಗೆ ಪ್ರಮೋಷನ್ ಭಾಗ್ಯ ದೊರೆತಿದೆ. ವಿವಿಧ ಶ್ರೇಣಿಯ 22 ಐಎಫ್ʼಎಸ್ ಅಧಿಕಾರಿಗಳು ಬಡ್ತಿ ಹೊಂದಿದ್ದಾರೆ. ಈ ಹಿಂದೆ ಇದ್ದ ಸ್ಥಾನದಲ್ಲೇ ಬಹುತೇಕ ಅಧಿಕಾರಿಗಳನ್ನು ಮುಂದುವರಿಸಿದ್ದು, ಕೆಲವರನ್ನು ವರ್ಗಾವಣೆ ಮಾಡಲಾಗಿದೆ. ಬಡ್ತಿ ಜೊತೆಗೆ ವೇತನ ಪರಿಷ್ಕರಿಸಿ ಆದೇಶ ಹೊರಡಿಸಿದೆ.
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮತ್ತು ಸಹಕಾರ ಇಲಾಖೆ ಕಾರ್ಯದರ್ಶಿಯಾಗಿದ್ದ ಎಸ್.ಆರ್ ಉಮಾಶಂಕರ್ ಬಡ್ತಿ ನೀಡಲಾಗಿದೆ. ಸೀನಿಯರ್ ಟೈಂ ವೇತನ ಶ್ರೇಣಿಗೆ ಬಡ್ತಿ ನೀಡಿ, ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ನಿರ್ದೇಶಕರನ್ನಾಗಿ ಅಶ್ವಿಜಾ ಬಿ.ವಿ ಅವರನ್ನು ನೇಮಕ ಮಾಡಲಾಗಿದೆ. ಇವರೊಂದಿಗೆ ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿ ಮೇಜರ್ ಮಣಿವಣ್ಣನ್ ಪಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಯದರ್ಶಿ ನವೀನ್ ರಾಜ್ ಸಿಂಗ್ ಗೆ ಪ್ರಮೋಷನ್ ದೊರೆತಿದೆ. ಹಾಗೆಯೇ ಕಮಿಷನರ್, ಸರ್ವೆ ಇತ್ಯರ್ಥ ಮತ್ತು ಭೂ ದಾಖಲೆಗಳು, ಆರೋಗ್ಯ ಮತ್ತು ಐಟಿ, ಬಿಬಿಎಂಪಿ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಅವರು ಬಡ್ತಿ ಹೊಂದಿದ್ದಾರೆ.
ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರ ಕಾರ್ಯದರ್ಶಿ ಡಾ ಕೆ ವಿ ತ್ರಿಲೋಕ್ ಚಂದ್ರ, ಇ-ಆಡಳಿತ ಕೇಂದ್ರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಕುಲ್ ಎಸ್ ಎಸ್, ಶ್ರೀವಿದ್ಯಾ ಪಿ ಎಲ್, ಬಿಬಿಎಂಪಿ ವಿಶೇಷ ಆಯುಕ್ತ ಎಸ್ಟೇಟ್ , ಪೌರಾಡಳಿತ ನಿರ್ದೇಶಕರಾದ ಡಾ ರಾಮ್ ಪ್ರಸಾತ್ ಮನೋಹರ್ ವಿ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಕಾರ್ಯನಿರ್ವಾಹಕ ಸದಸ್ಯರಾದ ಮಂಜುಶ್ರೀ ಎನ್, ನೋಂದಣಿ ಮಹಾನಿರೀಕ್ಷಕರು ಮತ್ತು ಅಂಚೆ ಚೀಟಿಗಳ ಆಯುಕ್ತರಾದ ಗಿರೀಶ್ ಆರ್, ಡಾ ಮಮತಾ ಬಿ ಆರ್, ಗ್ರಾಮೀಣಾಭಿವೃದ್ಧಿ ಆಯೋಗ ಶಿಲ್ಪಾ ನಾಗ್ ಸಿ ಟಿ ಮತ್ತು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯ ಅಧ್ಯಕ್ಷೆ, ನಳಿನಿ ಅತುಲ್ ಅವರಿಗೆ ಬಡ್ತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಒಟ್ಟು 42 ಐಎಎಸ್ ಅಧಿಕಾರಿಗಳಿಗೆ ಬಡ್ತಿ ನೀಡಲಾಗಿದೆ.
ಇನ್ನು 52 ಐಪಿಎಸ್ ಅಧಿಕಾರಿಗಳಿಗೆ ಬಡ್ತಿ ಸಿಕ್ಕಿದ್ದು, ಹೊಸ ವರ್ಷ ಸಂತಸವನ್ನು ಹೆಚ್ಚು ಮಾಡಿದೆ. ಅಮರ್ ಕುಮಾರ್ ಪಾಂಡೆ ಅವರ ವಯೋನಿವೃತ್ತಿಯಿಂದ ತೆರವಾದ ಗೃಹರಕ್ಷಕ ದಳ, ನಾಗರಿಕ ರಕ್ಷಣೆ ಮತ್ತು ಅಗ್ನಿಶಾಮಕ ಇಲಾಖೆಯ ಪೊಲೀಸ್ ಮಹಾನಿರ್ದೇಶಕರ ಹುದ್ದೆಗೆ ಬಂದಿಖಾನೆ ಡಿಜಿಪಿ ಅಲೋಕ್ ಮೋಹನ್ ಅವರನ್ನು ವರ್ಗಾವಣೆ ಮಾಡಲಾಗಿದೆ. ರಾಜೀವ್ ರಂಜನ್, ಈಗ ಅರಣ್ಯ ಮತ್ತು ವನ್ಯಜೀವಿಗಳ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿಯಾಗಿ ಮತ್ತು ಬ್ರಿಜೇಶ್ ಕುಮಾರ್ ದೀಕ್ಷಿತ್ ಅವರನ್ನು ಈಗ ಪಿಸಿಸಿಎಫ್, ಅಭಿವೃದ್ಧಿ ಇಲಾಖೆಗೆ ವರ್ಗಾವಣೆ ಮಾಡಿದ್ದು, ಸ್ಮಿತಾ ಬಿಜ್ಜೂರ್ ಅವರನ್ನು ಕರ್ನಾಟಕ ಔಷಧೀಯ ಸಸ್ಯಗಳ ಪ್ರಾಧಿಕಾರದ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ಬಡ್ತಿಯೊಂದಿಗೆ ಹಲವು ಐಪಿಎಸ್ ಅಧಿಕಾರಿಗಳನ್ನು ಟ್ರಾನ್ಸ್ ಫರ್ ಮಾಡಲಾಗಿದೆ.