ಬೆಂಗಳೂರು, ಏ. 06 : ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ರಂಗೇರುತ್ತಿದೆ. ಕಳೆದ ವಾರವೇ ನೀತಿ ಸಂಹಿತೆ ಜಾರಿಯಾಗಿದ್ದು, ಎಲ್ಲೆಡೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಇದೇ ವೇಳೆಯಲ್ಲಿ ಮಹಾರಾಷ್ಟ್ರದಿಂದ ದಾಖಲೆ ಇಲ್ಲದ ಕೋಟ್ಯಂತರ ರೂಪಾಯಿ ನಗದು ರಾಜ್ಯಕ್ಕೆ ಬಂದಿದೆ. ಬೆಳಗಾವಿ ಗಡಿಯಲ್ಲಿ ಪ್ರಯಾಣಿಕರ ಸೊಗಿನಲ್ಲಿ ಬಸ್ಗಳಲ್ಲಿ ಹಣವನ್ನು ಸಾಗಿಸಲಾಗುತ್ತಿದೆ. ಅಭ್ಯರ್ಥಿಗಳು ಮತದಾರರಿಂದ ವೋಟ್ ಪಡೆಯಲು ಆಮಿಷಗಳನ್ನು ಒಡ್ಡುವುದು, ಉಡುಗೊರೆಗಳನ್ನು ನೀಡುವುದು, ಹಣ ಕೊಡುವುದನ್ನು ಮಾಡುತ್ತಿದ್ದಾರೆ. ಹೀಗಾಗಿ ಎಲ್ಲೆಡೆ ಚುನಾವಣಾ ಆಯೋಗ ಹಾಗೂ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದೆ. ಎಲ್ಲಾ ಚೆಕ್ ಪೋಸ್ಟ್ಗಳಲ್ಲೂ ತಪಾಸಣೆಗಳು ಜೋರಾಗಿ ನಡೆಯುತ್ತಿವೆ.
ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುತ್ತಿದ್ದ ಬಸ್ ನಲ್ಲಿ ಕೋಟ್ಯಂತರ ರೂಪಾಯಿ ಸಿಕ್ಕಿದ್ದು, ಪೊಲೀಸರು ತಪಾಸಣೆ ನಡೆಸಿ ಜಪ್ತಿ ಮಾಡಿದ್ದಾರೆ. ಚೆಕ್ಪೋಸ್ಟ್ಗಳಲ್ಲಿ ಪೊಲೀಸರ ಕಣ್ಣು ತಪ್ಪಿಸಿ ಹಣವನ್ನು ಸಾಗಿಸಲು ಖದೀಮರು ಕಳ್ಳ ದಾರಿಗಳನ್ನು ಹಿಡಿದಿದ್ದಾರೆ. ಬಸ್ಗಳಲ್ಲಿ ದಾಖಲೆ ಇಲ್ಲದ ಹಣ ಸಾಗಿಸುವ ಕೃತ್ಯ ಎಸಗಿದ್ದಾರೆ. ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಬಳಿ ಚೆಕ್ ಪೋಸ್ಟ್ನಲ್ಲಿ ಖಾಸಗಿ ಬಸ್ ತಪಾಸಣೆ ನಡೆಸಿದ ಪೋಲಿಸರಿಗೆ ಕೋಟ್ಯಾಂತರ ರೂಪಾಯಿ ನಗದು ದೊರೆತಿದೆ.
ಮುಂಬೈನಿಂದ ಮಂಗಳೂರಿಗೆ ಹೋಗುತ್ತಿದ್ದ ಖಾಸಗಿ ಬಸ್ನಲ್ಲಿ ರಾಜಸ್ಥಾನ ಮೂಲದ ಮಹೇಂದ್ರ ಕುಮಾರ್ ಎಂಬುವವರ ಬ್ಯಾಗ್ ತಪಾಸಣೆ ಮಾಡಿದಾಗ ಹಣ ಸಿಕ್ಕಿದೆ. ಬ್ಯಾಗ್ನಲ್ಲಿ ಎರಡು ಕೋಟಿ ರೂ. ನಗದು ನೋಡಿದ ಪೊಲೀಸರು ಶಾಕ್ ಆಗಿ ಆತನನ್ನ ವಶಕ್ಕೆ ಪಡೆದಿದ್ದಾರೆ. ಹಣಕ್ಕೆ ಯಾವುದೇ ದಾಖಲೆ ಇಲ್ಲದ ಕಾರಣ ವಶಕ್ಕೆ ಪಡೆದಿದ್ದು, ಸ್ಥಳಕ್ಕೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಈಗ ಪೋಲೀಸರ ಖನ್ಗಾವಲು ಇನ್ನಷ್ಟು ಹೆಚ್ಚಾಗಿದ್ದು, ಅಕ್ರಮವಾಗಿ ಸಾಗಿಸುವ ಹಣಕ್ಕೆ ಬ್ರೇಕ್ ಹಾಕಲು ಪೊಲೀಸರು ಮುಂದಾಗಿದ್ದಾರೆ.