ಎಚ್‌ಡಿಎಫ್‌ಸಿ ಕಾರ್ಯನಿರ್ವಾಹಕ ಅಧಿಕಾರಿಯಾದ ಕಾಯ್ಜಾದ್ ಬರುಚಾ ಮುಂಬೈನ ಬಾಂದ್ರಾದಲ್ಲಿ ದುಬಾರಿ ಬೆಲೆಯ ಅಪಾರ್ಟ್‌ಮೆಂಟ್ ಒಂದರಲ್ಲಿ ₹35ಕೋಟಿಗೆ ಫ್ಲ್ಯಾಟ್ ಖರೀದಿಸಿದ್ದಾರೆ. ನಿರ್ಮಾಣ ಹಂತದಲ್ಲಿರುವ ಅಪಾರ್ಟ್‌ಮೆಂಟ್‌ಗಳ ಖರೀದಿಯಲ್ಲಿ ನಡೆದ ದುಬಾರಿ ವಹಿವಾಟು ಇದಾಗಿದೆ. ಅಂದಹಾಗೆ ಅಪಾರ್ಟ್‌ಮೆಂಟ್ ಹೆಸರು ʼಸದ್ಗುರು ರೆಂಡೆಜ್ವೋಜ್ʼ.
ಮನಿಕಂಟ್ರೋಲ್‌ಗೆ ಸಿಕ್ಕಿರುವ ನೋಂದಣಿ ದಾಖಲಾತಿಯ ಪ್ರಕಾರ, ಬರುಚಾ ಖರೀದಿಸಿರುವ ಫ್ಲಾಟ್ 3,414 ಚದರ ಅಡಿ ವಿಸ್ತೀರ್ಣ ಹೊಂದಿದ್ದು, ಬಾಲ್ಕನಿ 250 ಚದರ ಅಡಿಯಷ್ಟು ವಿಸ್ತಾರವಾಗಿದೆ. ಬರುಚಾ ಅವರಿಗೆ ಐದು ಕಾರುಗಳನ್ನು ಪಾರ್ಕ್ ಮಾಡಲು ಸಾಧ್ಯವಾಗುವಷ್ಟು ದೊಡ್ಡದಾದ ಪಾರ್ಕಿಂಗ್ ಸ್ಥಳವನ್ನು ನೀಡಲಾಗಿದೆ.
ಸ್ಟಾಂಪ್ ಡ್ಯೂಟಿ ಹಾಗೂ ಸರುಕು ಮತ್ತು ಸೇವಾ ತೆರಿಗೆ (GST)ಯಾಗಿ ₹3.5ಕೋಟಿ ಹಣವನ್ನು ಬರುಚಾ ಪಾವತಿಸಿದ್ದು, ಫ್ಲ್ಯಾಟ್‌ನ ಒಂದು ಚದರ ಅಡಿಯ ಬೆಲೆ ಒಂದು ಲಕ್ಷ ರೂಪಾಯಿಗೂ ಅಧಿಕ ಎಂಬುದು ವಿಶೇಷ.
ಈ ಅಪಾರ್ಟ್‌ಮೆಂಟ್ ಸ್ಥಳೀಯ ಜನಪ್ರಿಯ ಬಿಲ್ಡರ್ ಆದ ʼಸದ್ಗುರು ಬಿಲ್ಡರ್ಸ್ʼದ್ದಾಗಿದೆ. ʼಸದ್ಗುರು ರೆಂಡೆಜ್ವೋಜ್ʼ ನಿರ್ಮಾಣ ಯೋಜನೆಯು ಜನವರಿ 2022ರಲ್ಲಿ ಪ್ರಾರಂಭಗೊಂಡಿದ್ದು 2024ರ ಡಿಸೆಂಬರ್ ವೇಳೆಗೆ ಮುಕ್ತಾಯಗೊಳ್ಳಲಿದೆ. ಕಂಪೆನಿಯು ಬಾಂದ್ರಾ, ಖರ್ ಹಾಗೂ ಸಾಂತಾಕ್ರೂಜ್ ಪ್ರದೇಶಗಳಲ್ಲಿನ ಸೂಕ್ಷ್ಮ ಮಾರುಕಟ್ಟೆಗಳ ಮೇಲೆ ತನ್ನ ವ್ಯವಹಾರವನ್ನು ಕೇಂದ್ರೀಕರಿಸಿದೆ.
ಬರುಚಾ ಅವರ ಫ್ಲ್ಯಾಟ್ ಖರೀದಿಯ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿರುವ ಸದ್ಗುರು ಬಿಲ್ಡರ್ಸ್‌ನ ಶರಣ್ ಬಬಾನಿ, ʼಮುಂಬೈನಲ್ಲಿ ಸುಂದರವಾದ ಕಟ್ಟಡಗಳಿಲ್ಲ. ಕೆಲವೇ ಕೆಲವು ಕಟ್ಟಡಗಳು ಕಣ್ಣಿಗೆ ಮುದ ನೀಡುವಂತಿವೆಯಷ್ಟೇ. ನಾವು ಕಲಾತ್ಮಕವಾದ ಹಾಗೂ ಸುಂದರವಾದ ಕಟ್ಟಡಗಳ ನಿರ್ಮಾಣ ಮಾಡಿ ಇತರರಿಗಿಂತ ವಿಭಿನ್ನ ಎಂಬುದನ್ನು ಸಾಬೀತುಪಡಿಸಿಕೊಂಡಿದ್ದೇವೆʼ ಎಂದರು.
ಬರುಚಾ, 2022ರ ಆರ್ಥಿಕ ವರ್ಷದಲ್ಲಿ ಅತಿಹೆಚ್ಚು ವೇತನ ಪಡೆದ ಬ್ಯಾಂಕರ್. ಸಂಭಾವನೆಯಾಗಿ ₹10 ಕೋಟಿ ಹಾಗೂ ಕಾರ್ಯಕ್ಷಮತೆಗನುಗುಣವಾಗಿ ₹4.46ಕೋಟಿ ಬೋನಸ್ ಅನ್ನು ಅವರು ಪಡೆದಿದ್ದರು.
ಇದಕ್ಕೂ ಮುಂಚೆ ಅನೇಕರು ದುಬಾರಿ ಬೆಲೆಯ ಫ್ಲ್ಯಾಟ್ ಖರೀದಿಸಿದ್ದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು. Toppr.com ನ ಸಂಸ್ಥಾಪಕರಾದ ಜಿಶಾನ್ ಹಯಾತ್ ಜುಲೈನಲ್ಲಿ ₹41ಕೋಟಿ ಮೊತ್ತದಲ್ಲಿ ಫ್ಲ್ಯಾಟ್ ಖರೀದಿಸಿದ್ದರೆ, ಎಂಜೆಲ್ ಬುಕಿಂಗ್ ಸಂಸ್ಥೆಯ ಮಾಜಿ ನಿರ್ದೇಶಕರಾದ ಮುಖೇಶ್ ಗಾಂಧಿ ₹50 ಕೋಟಿ ಮೌಲ್ಯದ ಫ್ಯ್ಲಾಟ್ ಅನ್ನು ಖರೀದಿಸಿದ್ದರು.