Revenue Facts

ಸೇವೆ ಸಿಗದಿದ್ದರೂ ಶುಲ್ಕ ಮಾತ್ರ ಖಾಸಗಿ ಕಂಪೆನಿ ಪಾಲು: K2 ಚಲನ್ ದೋಖಾ!

ಸೇವೆ ಸಿಗದಿದ್ದರೂ ಶುಲ್ಕ ಮಾತ್ರ ಖಾಸಗಿ ಕಂಪೆನಿ ಪಾಲು: K2 ಚಲನ್ ದೋಖಾ!

ಬೆಂಗಳೂರು: ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಉಪನೋಂದಾಣಿಧಿಕಾರಿ ಕಚೇರಿಯಲ್ಲಿ ಕ್ರಯಪತ್ರ ನೋಂದಣಿಗಾಗಿ ಸುನಿತಾ (ಹೆಸರು ಬದಲಾಯಿಸಲಾಗಿದೆ) ಎಂಬ ಮಹಿಳೆ ದಿನಾಂಕ 31.05.2022 ಭೇಟಿ ನೀಡಿದ್ದರು. ಎರಡು ಕ್ರಯಪತ್ರಗಳ ನೋಂದಣಿಗೆ K2 ಚಲನ್ ಪಡೆಯುತ್ತಾರೆ. ಕಾರಣಾಂತರಗಳಿಂದ ಕ್ರಯಪತ್ರಗಳ ನೋಂದಣಿ ಆಗುವುದಿಲ್ಲ. ತದನಂತರ ಅವರು K2 ಚಲನ್ ಮೊತ್ತ ಮರುಪಾವತಿಗಾಗಿ ದಿನಾಂಕ 27.06.2022ರಂದು ಅರ್ಜಿಯೊಂದನ್ನು ಕೊಡುತ್ತಾರೆ.

ಇದಕ್ಕೆ ಸಂಬಂಧಪಟ್ಟಂತೆ ಜಿಲ್ಲಾ ನೋಂದಣಾಧಿಕಾರಿಗಳು 17.10.2022ಕ್ಕೆ ಆದೇಶವೊಂದನ್ನು ಮಾಡುತ್ತಾರೆ. ಈ ಆದೇಶವನ್ನು ಪರಿಶೀಲನೆ ಮಾಡಿ ನೋಡಿದಾಗ ಅವರ ನೋಂದಣಿ ಶುಲ್ಕ, ಮುದ್ರಾಂಕ ಶುಲ್ಕ, ಸೆಸ್ ಮೊತ್ತವನ್ನು ಮಾತ್ರ ಮರುಪಾವತಿ ಮಾಡಲು ಆದೇಶಿಸಿದ್ದು, ಆ K2 ಚಲನ್‌ನಲ್ಲಿ ಪಡೆದಿರುವ ಅಫಿಡವಿಟ್ ಶುಲ್ಕ, ಸೇವಾ ಶುಲ್ಕ ಹಾಗೂ ಮುಟೇಷನ್ ಶುಲ್ಕ ಮರುಪಾವತಿಸಲು ಆದೇಶ ಮಾಡಿರುವುದಿಲ್ಲ. ಇದು ಸರಿಸುಮಾರು ಎರಡು K2 ಚಲನ್‌ಗಳಿಗೆ ಸೇರಿ ಸುಮಾರು 1,055 ರೂ. ನಷ್ಟು ಸುನಿತಾ ಎಂಬುವರಿಗೆ ನಷ್ಟವಾಗಿದೆ.

ಇದೇ ರೀತಿ ರಾಜ್ಯದಲ್ಲಿ ಪ್ರತಿದಿನ ಸಾವಿರಾರು K2 ಚಲನ್‌ಗಳು ಮರುಪಾವತಿಗೆ ಸಲ್ಲಿಕೆಯಾಗಿ, ಜನರ ಹಣ ವ್ಯರ್ಥವಾಗುತ್ತಿದೆ.

K2 ಚಲನ್‌ ಮೂಲಕ ಕಟ್ಟಿದ ಹಣ ಸರ್ಕಾರದ ಖಜಾನಗೆ ಹೋಗುತ್ತದೆಯಾದರೂ, ಆಸ್ತಿ ನೋಂದಣಿ ದಾಖಲೆಗಳ ಸೇವೆಯ ನಿರ್ವಹಣೆ ಮಾಡುವ ಜವಾಬ್ದಾರಿಯನ್ನು ಖಾಸಗಿ ಕಂಪೆನಿಗೆ ವಹಿಸಲಾಗಿದ್ದು, ಸೇವಾ ಶುಲ್ಕದ ಈ ಖಾಸಗಿ ಕಂಪೆನಿ ಪಾಲಾಗುತ್ತದೆ. ಹೀಗೆ ಸರ್ಕಾರದ ಸೇವೆಗಾಗಿ ಜನ ಕಟ್ಟಿದ ಹಣಕ್ಕೆ ಸೇವೆ ಒದಗಿಸಿದ್ದರೂ ಸಹ ಸೇವಾ ಶುಲ್ಕ ಮಾತ್ರ ಕಂಪೆನಿಯ ಪಾಲಾಗುತ್ತದೆ.

ಒಂದು K2 ಚಲನ್ ಹಿಂದಿರುಗಿಸಿದರೆ ಎಷ್ಟು ಹಣ ವ್ಯರ್ಥ?
ಒಂದು K2 ಚಲನ್ ಹಿಂದಿರುಗಿಸಿದರೆ ಎಷ್ಟು ಹಣ ವ್ಯರ್ಥ ಆಗುತ್ತದೆ ಎಂಬುದನ್ನು ನೋಡಿದರೆ ಗಾಬರಿ ಹುಟ್ಟಿಸುತ್ತದೆ. ಹೀಗೆ ಸುಖಾ ಸುಮ್ಮನೆ ಹಣ ಸರ್ಕಾರ ಮತ್ತು ಖಾಸಗಿ ಕಂಪೆನಿಯ ಪಾಲಾಗುತ್ತಿರುವುದು ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ.

ಉದಾಹರಣೆಗೆ ಆಸ್ತಿಯ ಒಂದು ದಾನ ಪತ್ರ ನೋಂದಣಿಯಾದರೆ ಆ ಪತ್ರ ಮೂರು ಪುಟಗಳಿದ್ದರೆ ಉಪನೋಂದಣಾಧಿಕಾರಿಯ ಕಚೇರಿಯ ಹಿಂಬರಹವು ಮೂರು ಪುಟ ಬರುತ್ತದೆ. ಕೊಡುವವರು ಮತ್ತು ತೆಗೆದುಕೊಳ್ಳುವವರ ಆಧಾರ್ ಪತ್ರಗಳು, ಆಸ್ತಿ ಮತ್ತು ಕಂದಾಯ ಖಾತಾ ಪತ್ರ ಎಲ್ಲಾ ಸೇರಿ ಒಟ್ಟಾರೆ 10 ಪುಟಗಳಾದರೆ, ಒಂದು ಪುಟಕ್ಕೆ 35 ರೂ.ಗಳಂತೆ 350 ರೂ. ಸೇವಾ ಶುಲ್ಕ ನೋಂದಣಿ ಮಾಡಿಸಿಕೊಳ್ಳುವವರು ಕಟ್ಟಬೇಕಿರುತ್ತದೆ.

ಈ ಮೊತ್ತವು ಮುದ್ರಾಂಕ ಶುಲ್ಕ, ನೋಂದಣಿ ಶುಲ್ಕಗಳ ಜೊತೆಯಲ್ಲಿಯೇ K2 ಚಲನ್‌ನಲ್ಲಿ ಪಾರ್ಟಿಗಳು ಪಾವತಿ ಮಾಡಿರುತ್ತಾರೆ. ಆದರೆ, K2 ಚಲನ್‌ ಉಪಯೋಗಿಸದ ಸಂದರ್ಭಗಳಲ್ಲಿ ಸೇವೆಯನ್ನೇ ಒದಗಿಸದೆ ಮರುಪಾವತಿ ನೀಡುವಾಗ ಮುದ್ರಾಂಕ ಶುಲ್ಕ, ನೋಂದಣಿ ಶುಲ್ಕ, ಸೆಸ್ ಶುಲ್ಕ ಮಾರುಪಾವತಿ ನೀಡಿ, ಸೇವಾ ಶುಲ್ಕ ಖಾಸಗಿ ಕಂಪೆನಿ ಪಾಲಾಗುತ್ತಿರುವುದು ವಿಪರ್ಯಾಸ.

ಈ ಬಗ್ಗೆ ಸರ್ಕಾರ ಕೂಲಂಕಷವಾಗಿ ಪರಿಶೀಲಿಸಿ ಖಾಸಗಿಯವರ ಪಾಲಾಗುವ ಹಣವನ್ನು ಜನರಿಗೆ ಮರುಪಾವತಿಸಲು ರಾಜ್ಯಕ್ಕೆ ಅನ್ವಯ ಆಗುವಂತೆ ಎಲ್ಲಾ ಜಿಲ್ಲಾ ನೋಂದಣಿ ಮತ್ತು ಉಪನೋಂದಣಾಧಿಕಾರಿ ಕಚೇರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುವ ಅಗತ್ಯವಿದೆ.

ಮೇಲೆ ತಿಳಿಸಿರುವ ಮಳವಳ್ಳಿ ಪ್ರಕರಣದಲ್ಲಿ ಸುನಿತಾ ಎಂಬ ಮಹಿಳೆ ತನ್ನ ಹಣವನ್ನು ಪಡೆಯಲು ಸುಮಾರು ಐದೂವರೆ ತಿಂಗಳು ಕಚೇರಿಯಿಂದ ಕಚೇರಿಗೆ ಅಲೆಯಬೇಕಾಯಿತು. ಬಹುತೇಕರು ಇಂತಹ ಅಲೆದಾಟವೇ ಬೇಡ ಎಂದು ಕೈತೊಳೆದುಕೊಳ್ಳುತ್ತಾರೆ. ಹೀಗೆ ಸಾರ್ವಜನಿಕರ ಹಣ ವ್ಯರ್ಥವಾಗದೆ ಸರ್ಕಾರ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಬೇಕಾಗಿದೆ.

Exit mobile version