ಸ್ವಾಮಿ ವಿವೇಕಾನಂದ ಜನ್ಮ ದಿನಾಚರಣೆ ಅಂಗವಾಗಿ ನಡೆಯುವ ರಾಷ್ಟ್ರೀಯ ಯುವಜನೋತ್ಸವ ಈ ಬಾರಿ ಹುಬ್ಬಳ್ಳಿ-ಧಾರವಾಡದಲ್ಲಿ ನಡೆಯಲಿದ್ದು, ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದರು.
ಅವರು ಇಂದು ರಾಷ್ಟ್ರೀಯ ಯುವಜನೋತ್ಸವದ ಪೂರ್ವಭಾವಿ ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಎಲ್ಲ ರಾಜ್ಯಗಳಿಂದ ಸುಮಾರು 7.5 ಸಾವಿರ ಪ್ರತಿನಿಧಿಗಳು ಈ ಉತ್ಸವದಲ್ಲಿ ಭಾಗವಹಿಸಲಿದ್ದು, ವಸತಿ ಸೌಕರ್ಯ ಮತ್ತು ವೇದಿಕೆಗಳನ್ನು ಸಿದ್ಧ ಪಡಿಸಲು ಸೂಚನೆ ನೀಡಲಾಗಿದೆ.ಕರ್ನಾಟಕ ರಾಜ್ಯಕ್ಕೆ ಈ ಅವಕಾಶ ದೊರೆತಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಯುವ ಸಬಲೀಕರಣ ಸಚಿವ ಅನುರಾಗ್ ಠಾಕೂರ್ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಅವರು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಯುವಜನರನ್ನು ಮನವಿ ಮಾಡಿರುವ ಪ್ರಧಾನಮಂತ್ರಿ ಮೋದಿ ಯುವಜನರು ತಮ್ಮ ಸಲಹೆ, ಐಡಿಯಾಗಳನ್ನು ಹಂಚಿಕೊಳ್ಳಬಹುದು ಎಂದಿದ್ದಾರೆ. ಜನವರಿ 12ರಂದು ನಾನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ 25ನೇ ರಾಷ್ಟ್ರೀಯ ಯುವಜನೋತ್ಸವದಲ್ಲಿ ಪಾಲ್ಗೊಳ್ಳಲಿದ್ದೇನೆ. ಯುವಜನೋತ್ಸವದ ಮೂಲಕ ದೇಶದ ಯುವಕರನ್ನು ಒಟ್ಟುಗೂಡಿಸುವುದು, ಯುವಕರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಮಾಡಿಕೊಡುವುದು ಉದ್ದೇಶವಾಗಿದೆ. ಯುವಜನರ ಸಾಮಾಜಿಕ ಮತ್ತು ಸಾಂಸ್ಕೃತಿಕ ಅನನ್ಯತೆಯ ವಿನಿಮಯಕ್ಕೆ ಇದು ಒಂದು ವೇದಿಕೆಯಾಗಿದೆ.
ಸಭೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಕ್ರೀಡಾ ಸಚಿವರಾದ ನಾರಾಯಣಗೌಡರು, ಕಂದಾಯ ಸಚಿವ ಆರ್. ಅಶೋಕ್, ನಗರಾಭಿವೃದ್ಧಿ ಸಚಿವ ಬಸವರಾಜ ಬೈರತಿ, ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಇಲಾಖಾ ಕಾರ್ಯದರ್ಶಿಗಳೂ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
