ಚಿತ್ರದುರ್ಗ;ಚಿತ್ರದುರ್ಗ ಜಿಲ್ಲೆಯ ಧರ್ಮಪುರ ಹೋಬಳಿಯ ಮುಂಗುಸುವಳ್ಳಿಯಲ್ಲಿರುವ ಹಿರಿಯೂರು ಜೆಡಿಎಸ್ ಅಭ್ಯರ್ಥಿ ಎಂ.ರವೀಂದ್ರಪ್ಪ ಅವರ ತೋಟದ ಮನೆಯಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಶುಕ್ರವಾರ ಶೋಧ ನಡೆಸಿದ್ದಾರೆ.20 ಐಟಿ ಅಧಿಕಾರಿಗಳ ತಂಡ ಫಾರ್ಮ್‌ಹೌಸ್ ಮೇಲೆ ದಾಳಿ ನಡೆಸಿ ಕೆಲವು ಪ್ರಮುಖ ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿದೆ ಎಂದು ಹೇಳಲಾಗಿದೆ.ಫಾರ್ಮ್‌ಹೌಸ್‌ನಲ್ಲಿದ್ದ ಕಾರ್ಮಿಕರನ್ನು ಪ್ರಶ್ನಿಸಿದ ಅಧಿಕಾರಿಗಳು, ಮುಂದಿನ ಆದೇಶದವರೆಗೆ ಮನೆಯಿಂದ ಹೊರಬರದಂತೆ ರವೀಂದ್ರಪ್ಪ ಮತ್ತು ಅವರ ಕುಟುಂಬ ಸದಸ್ಯರಿಗೆ ಸೂಚಿಸಿದ್ದಾರೆ. ಶುಕ್ರವಾರ ತಡರಾತ್ರಿವರೆಗೂ ಅಧಿಕಾರಿಗಳು ಶೋಧಕಾರ್ಯ ಮುಂದುವರಿಸಿದ್ದಾರೆ.
1.30ಕ್ಕೆ 20ಕ್ಕೂ ಹೆಚ್ಚು ಅಧಿಕಾರಿಗಳ ತಂಡ ಧರ್ಮಪುರ ಹೋಬಳಿಯ ಮುಂಗುಸುವಳ್ಳಿ ಗ್ರಾಮದ ತೋಟದ ಮನೆಗೆ ಮಧ್ಯಾಹ್ನಭೇಟಿ ನೀಡಿತು, ಅವರು ಚುನಾವಣಾ ಪ್ರಚಾರಕ್ಕೆ ತೆರಳಿದ್ದರಿಂದ ಕಾಯುತ್ತ ಕುಳಿತರು. ಸಂಜೆ 4.30ಕ್ಕೆ ಅಭ್ಯರ್ಥಿ ಮನೆಗೆ ಧಾವಿಸಿದ ಬಳಿಕ ಶೋಧ ಕಾರ್ಯ ಆರಂಭವಾಗಿದೆ.ಹಿರಿಯೂರು ಜೆಡಿಎಸ್ ಅಭ್ಯರ್ಥಿ ಗೊಲ್ಲಹಳ್ಳಿ ಗ್ರಾಮದ ರವೀಂದ್ರಪ್ಪ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ತಡರಾತ್ರಿ ರವಿಂದ್ರಪ್ಪ ಸಂಬಂಧಿ ನಾಗರಾಜ್ ನಿವಾಸದ ಮೇಲೂ ದಾಳಿ ನಡೆಸಿ ಪರಿಶೀಲಿಸಿದ್ದಾರೆ.ದಾವಣಗೆರೆ, ಬೆಂಗಳೂರು ಹಾಗೂ ಮೈಸೂರಿನ ಅಧಿಕಾರಿಗಳು ತಂಡದಲ್ಲಿದ್ದಾರೆ. ತೋಟದ ಮನೆಯ ಕೆಲಸಗಾರರನ್ನು ವಿಚಾರಣೆಗೆ ಒಳಪಡಿಸಲಾಗಿದೆ, ತಡರಾತ್ರಿ 2 ಗಂಟೆವರೆಗೂ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸಿದ್ದಾರೆ.ರವೀಂದ್ರಪ್ಪ ಅವರು ಸಣ್ಣ ನೀರಾವರಿ ಇಲಾಖೆಯಲ್ಲಿ ಮುಖ್ಯ ಎಂಜಿನಿಯರ್ ಆಗಿ ನಿವೃತ್ತರಾದ ನಂತರ ಚುನಾವಣಾ ರಾಜಕೀಯಕ್ಕೆ ಪ್ರವೇಶಿಸಿದರು. ನಾಮಪತ್ರ ಸಲ್ಲಿಸುವಾಗ ಚುನಾವಣಾ ಸಮಿತಿಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಜೆಡಿಎಸ್ ಅಭ್ಯರ್ಥಿ 7.5 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಘೋಷಿಸಿದ್ದಾರೆ.