Revenue Facts

ಪ್ರೇಮಿಗಳ ಮದುವೆಯನ್ನು ಯಾವ ವಿವಾಹ ಕಾಯ್ದೆ ಅಡಿ ನೋಂದಣಿ ಮಾಡಿಸಬೇಕು ಗೊತ್ತಾ ?

ಪ್ರೇಮಿಗಳ ಮದುವೆಯನ್ನು ಯಾವ ವಿವಾಹ ಕಾಯ್ದೆ ಅಡಿ ನೋಂದಣಿ ಮಾಡಿಸಬೇಕು ಗೊತ್ತಾ ?

ಬೆಂಗಳೂರು, ಸೆ. ಮದುವೆ ಎಂಬುದು ಪ್ರತಿಯೊಬ್ಬರ ಜೀವನದ ಘಟ್ಟ. ಅದರಲ್ಲೂ ಹಿಂದೂ ಸಂಪ್ರದಾಯದಲ್ಲಿ ಮದುವೆಗೆ ಅತಿ ಮಹತ್ವದ ಸ್ಥಾನವಿದೆ. ಭಾರತೀಯ ಕಾನೂನು ಪ್ರಕಾರ ಹದಿನೆಂಟು ವರ್ಷ ತುಂಬಿದ ಹೆಣ್ಣು ಮಗಳು, ಮತ್ತು 21 ವರ್ಷ ತುಂಬಿದ ಗಂಡು ಮಗು ತಮ್ಮ ಇಚ್ಛೆ ಅನುಸಾರ ಯಾರನ್ನು ಬೇಕಾದರೂ ಮದುವೆಯಾಗಲಿಕ್ಕೆ ಭಾರತೀಯ ಸಂವಿಧಾನ ಅವಕಾಶ ಮಾಡಿಕೊಟ್ಟಿದೆ. ಆದ್ರೆ ಇತ್ತೀಚಿನ ದಿನ ಮಾನಗಳಲ್ಲಿ ಪರಸ್ಪರ ಒಬ್ಬರನ್ನು ಒಬ್ಬರು ಪ್ರೀತಿಸಿದವರು ಓಡಿ ಹೋಗಿ ಮದುವೆಯಾಗುವ ಪ್ರಸಂಗಗಳು ಜಾಸ್ತಿಯಾಗುತ್ತವೆ. ಅದರಲ್ಲೂ ಅನ್ಯ ಧರ್ಮೀಯ, ಅನ್ಯ ಜ್ಯಾತೀಯ ಪ್ರೇಮ ವಿವಾಹಗಳು ಹೆಚ್ಚು ಸುದ್ದಿಯಾಗುತ್ತಿವೆ.

ಅನ್ಯ ಧರ್ಮೀಯ ಮತ್ತು ಅನ್ಯ ಜಾತೀಯ ಪ್ರೇಮ ವಿವಾಹಗಳಿಗೆ ಕಾನೂನು ಮಾನ್ಯತೆ ಇದೆಯೇ ? ಈ ಮದುವೆ ನೋಂದಣಿ ಹೇಗೆ ಆಗುತ್ತದೆ ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಅನ್ಯ ಧರ್ಮೀಯ ಮದುವೆಗಳ ನೋಂದಣಿ ಹೇಗೆ ಆಗುತ್ತದೆ. ಇದರ ಬಗ್ಗೆ ಕಾನೂನು ಏನು ಹೇಳುತ್ತದೆ ? ಅನ್ಯ ಜಾತೀಯ ಮದುವೆಗಳು ಯಾವ ಮದುವೆ ಕಾಯ್ದೆ ಅಡಿ ನೋಂದಣಿ ಆಗುತ್ತದೆ. ಆ ನೋಂದಣಿಗೆ ಇರುವ ಮಹತ್ವ ಏನು ? ಪರಸ್ಪರ ಮಾತುಕತೆ ಮೂಲಕ ನಡೆಯುವ ಅರೇಂಜ್ ಮ್ಯಾರೇಜ್ ಗಳನ್ನು ಯಾವ ರೀತಿ ನೋಂದಣಿ ಮಾಡಿಸಬೇಕು ಎಂಬುದರ ಸಮಗ್ರ ವಿವರ ಇಲ್ಲಿ ನೀಡಲಾಗಿದೆ.

ಪ್ರೇಮ ವಿವಾಹ ಮತ್ತು ಹಿಂದೂ ವಿವಾಹ ಕಾಯ್ದೆ: Love Marriage and Hindu Marriage act
ಹಿಂದೂ ವಿವಾಹ ಕಾಯ್ದೆ ಅಡಿ ಮದುವೆ ನೋಂದಣಿ ಮಾಡಿಸಬೇಕಾದರೆ ಹುಡುಗ ಮತ್ತು ಹುಡುಗಿ ಹಿಂದೂ ಧರ್ಮಕ್ಕೆ ಸೇರಿರಬೇಕು. ಮೊದಲೇ ಮದುವೆ ಆಗಿರಬೇಕು. ಮದುವೆ ದೇವಸ್ತಾನದಲ್ಲಿ ಅಗಿರಬಹುದು. ಅಥವಾ ಇಬ್ಬರೂ ಪ್ರಿತಿಸಿ ಕುಟುಂಬಸ್ಥರ ಸಮ್ಮತಿ ಪಡೆದು ಮದುವೆಯಾಗಿದ್ದರೆ ಅಂತಹ ಮದುವೆಗಳನ್ನು ಹಿಂದೂ ವಿವಾಹ ಕಾಯ್ದೆ ಅಡಿ ನೋಂದಣಿ ಮಾಡಿಸಬಹುದು. ಈ ರೀತಿಯ ವಿವಾಹವನ್ನು ಉಪ ನೋಂದಣಾಧಿಕಾರಿ ಅಥವಾ ವಿವಾಹ ನೋಂದಣಾಧಿಕಾರಿ ಬಳಿ ನೋಂದಣಿ ಮಾಡಿಸಬಹುದು. ಈ ಮದುವೆಯನ್ನು ಹುಡಗುನ ವಾಸಸ್ಥಳ ಅಥವಾ ಹುಡುಗಿಯ ವಾಸಸ್ಥಳ ಅಥವಾ ಮದುವೆಯಾದ ಸ್ಥಳ ಈ ಮೂರರಲ್ಲಿ ಒಂದರ ವ್ಯಾಪ್ತಿಯಲ್ಲಿ ಬರುವ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿಯೇ ಮದುವೆ ನೋಂದಣಿ ಮಾಡಬಹುದು. ಹಿಂದೂ ಎಂದರೆ, ಸಿಖ್ಖರು, ಹಿಂದೂ, ಜೈನ್ ಮತ್ತು ಬೌದ್ಧ ಧರ್ಮದವರು ಹಿಂದೂ ವಿವಾಹ ಕಾಯ್ದೆ ವ್ಯಾಪ್ತಿಗೆ ಬರುತ್ತಾರೆ. ಆರ್ಯ ಸಮಾಜ ಮಾಡಿಸುವ ಮದುವೆಗಳು ಸಹ ಹಿಂದೂ ವಿವಾಹ ಕಾಯ್ದೆ ವ್ಯಾಪ್ತಿಗೆ ಬರುತ್ತವೆ. ಆರ್ಯ ಸಮಾಜದಲ್ಲಿ ಅನ್ಯ ಧರ್ಮೀಯರು ಮದುವೆಯಾದರೂ, ಹಿಂದೂ ವಿವಾಹ ಕಾಯ್ದೆ ಅಡಿಯೇ ಮದುವೆ ನೋಂದಣಿ ಮಾಡಿಸುವ ಅವಕಾಶ ಕಲ್ಪಿಸಲಾಗಿದೆ. ಹಿಂದೂ ವಿವಾಹ ಕಾಯ್ದೆ ಅಡಿಯಲ್ಲಿ ಮದುವೆಯಾದ ನಿಜವಾದ ದಿನಾಂಕವನ್ನೇ ಉಲ್ಲೇಖಿಸಿ ಪ್ರಮಾಣ ಪತ್ರ ನೀಡಲಾಗುತ್ತದೆ.

ಓಡಿ ಹೋಗಿ ಮದುವೆಯಾಗಲು ವಿಶೇಷ ವಿವಾಹ ಕಾಯ್ದೆ: Love, love marriage and Special Marriage act 1954
ವಿವಾಹ ನೋಂದಣಾಧಿಕಾರಿ ಅಥವಾ ಉಪ ನೋಂದಣಾಧಿಕಾರಿಯೇ ಮದುವೆ ಮಾಡಿಸುತ್ತಾರೆ. ಈ ಕಾಯ್ದೆ ಅಡಿ ಎಲ್ಲಾ ಧರ್ಮದವರು ಬರುತ್ತಾರೆ. ಅಂದರೆ, ಹಿಂದೂ- ಮುಸ್ಲಿಂ ಮದುವೆ, ಕ್ರಿಶ್ಚಿಯನ್ – ಮುಸ್ಲಿಂ, ಮದುವೆ, ಹಿಂದೂ- ಕ್ರಿಶ್ಚಿಯನ್ ಇತರೆ ಯಾವುದೇ ಅನ್ಯ ಧರ್ಮೀಯ ಮದುವೆಗಳು ಈ ಕಾಯ್ದೆ ವ್ಯಾಪ್ತಿಗೆ ಬರುತ್ತವೆ. ಇದರಲ್ಲಿ ವಿಶೇಷವಾಗಿ ಹುಡುಗ ಅಥವಾ ಹುಡುಗಿಯ ವಾಸಸ್ಥಳದ ವಿವಾಹ ನೋಂದಣಾಧಿಕಾರಿ ( ಉಪ ನೋಂದಣಾಧಿಕಾರಿ ಕಚೇರಿ ) ಕಚೇರಿಯಲ್ಲಿ ನೋಂದಣಿ ಮಾಡಿಸಬಹುದು. ಈ ವಿವಾಹ ಆಗಲು ಪ್ರಾರಂಭ ದಿನಾಂಕದಿಂದ 30 ದಿನಗಳ ವರೆಗೆ ತಕರಾರು ಅವಧಿ ಇರುತ್ತದೆ. ಯಾರಾದರೂ ಮದುವೆ ಬಗ್ಗೆ ತಕರಾರು ತೆಗೆಯಬಹುದು. ನೈಜ ತಕರಾರು ಇಲ್ಲದಿದ್ದರೆ 30 ದಿನಗಳ ನಂತರ 90 ದಿನಗಳ ಒಳಗಾಗಿ ವಿವಾಹ ನೋಂದಣಾಧಿಕಾರಿ ನೋಂದಣಿ ಮಾಡುತ್ತಾರೆ. 90 ದಿನಗಳಲ್ಲಿ ಮದುವೆಯಾಗದಿದ್ದರೆ, ಪುನಃ 30 ದಿನ ನೋಟಿಸ್ ಕೊಟ್ಟು ಮದುವೆ ಮಾಡಿಸಬೇಕಾಗುತ್ತದೆ. ಇದರಲ್ಲಿ ಮದುವೆಯ ಜವಾಬ್ಧಾರಿ ಉಪ ನೋಂದಣಾಧಿಕಾರಿಯದ್ದೇ ಆಗಿರುತ್ತದೆ. ಮದುವೆಗೆ ಸಂಬಂಧಿಸದಿಂತೆ ಕಾನೂನು ಅಂಶ ಪಾಲನೆ ಉಪ ನೋಂದಣಾಧಿಕಾರಿ ಜವಾಬ್ಧಾರಿಯಾಗಿರುತ್ತದೆ.

ನೋಟಿಸ್ ಕೊಡುವಾಗ ಮತ್ತು ಮದುವೆ ಮಾಡಿಕೊಳ್ಳುವಾಗ ಹುಡುಗ ಮತ್ತು ಹುಡುಗಿ ಜತೆಗೆ ಮೂರು ಸಾಕ್ಷಿಗಳು ಕಡ್ಡಾಯವಾಗಿ ಉಪ ನೋಂದಣಾಧಿಕಾರಿಗಳ ಎದುರು ಹಾಜರಿರಬೇಕು. ಉದಾಹರಣೆಗೆ ಹಿಂದು- ಹಿಂದು, ಹಿಂದು- ಮುಸ್ಲಿಂ, ಮುಸ್ಲಿಂ -ಕ್ರಿಶ್ಚಿಯನ್ ಮದುವೆಗಳು ನೇರವಾಗಿ ಉಪ ನೋಂದಣಾಧಿಕಾರಿಗಳೇ ಮಾಡಿಸುತ್ತಾರೆ. ಹಿಂದೂ ಧರ್ಮಕ್ಕೆ ಸೇರಿದ ಯುವಕ- ಯುವತಿ ನೇರವಾಗಿ ಉಪ ನೋಂದಣಾಧಿಕಾರಿಗಳ ಕಚೇರಿಗೆ ಹಾಜರಾಗಿ ಮದುವೆಯಾದರೂ ಅದೂ ಸಹ ವಿಶೇಷ ವಿವಾಹ ಕಾಯ್ದೆ ಅಡಿಯಲ್ಲಿ ನೋಂದಣಿ ಮಾಡಿಸಲಾಗುತ್ತದೆ. ಅದೇ ಯುವಕ ಯುವತಿ ಓಡಿ ಹೋಗಿ ಬೇರೆಲ್ಲಾದರೂ ಮದುವೆಯಾಗಿ ಆ ನಂತರ ನೋಂದಣಿ ಮಾಡಿಸಿದರೆ ಅದು ಹಿಂದೂ ವಿವಾಹ ಕಾಯ್ದೆ ಅಡಿಯಲ್ಲಿಯೇ ಮದುವೆ ನೋಂದಣಿ ಮಾಡಿಸಲಾಗುತ್ತದೆ.

ವಿಶೇಷ ವಿವಾಹ ಕಾಯ್ದೆ (ಇತರೆ ) ನೋಂದಣಿ ಕಾಯ್ದೆ: Special marriage ( Extra )Registraton act
ಇದರಲ್ಲಿ ಕಡ್ಡಾಯವಾಗಿ ಹುಡುಗ ಮತ್ತು ಹುಡುಗನಿಗೆ 21 ವರ್ಷ ವಯಸ್ಸು ತುಂಬಿರಬೇಕು. ಇಬ್ಬರೂ ಅನ್ಯ ಧರ್ಮೀಯರು ಆಗಿರಬೇಕು. ಮತ್ತು ಕಡ್ಡಾಯವಾಗಿ ಈಗಾಗಲೇ ಮದುವೆಯಾಗಿರಬೇಕು. ಉಪ ನೋಂದಣಾಧಿಕಾರಿಯವರು ನೀಡುವ ಪ್ರಮಾಣ ಪತ್ರದಲ್ಲಿ ಅವರ ನಿಜವಾದ ಮದುವೆಯಾದ ದಿನಾಂಕವನ್ನು ಉಲ್ಲೇಖಿಸಿ ಮದುವೆ ನೋಂದಣಿ ಮಾಡಿಸಲಾಗುತ್ತದೆ. ವಿಶೇಷ ವಿವಾಹ (ಇತರೆ) ನೋಂದಣಿ ಕಾಯ್ದೆ ಅಡಿಯಲ್ಲಿ ಮಕ್ಕಳ ಹೆಸರನ್ನು ನೋಂದಣಿ ಮಾಡಿಸಲು ಅವಕಾಶವಿದೆ.

ಉದಾಹರಣೆಗೆ ಹಿಂದೂ ಧರ್ಮದ ಯುವಕ, ಮುಸ್ಲಿಂ ಧರ್ಮದ ಯುವತಿಯನ್ನು ಮದುವೆಯಾಗಿ ಇಬ್ಬರಿಗ ಒಂದು ಮಗು ಆಗಿರುತ್ತಾರೆ. ಆಕಸ್ಮಿಕ ಗಂಡ ತೀರಿ ಹೋದ ನಂತರ ಮತ್ತೊಂದು ಮದುವೆ ಯುವತಿ ಆಗುವ ವೇಳೆ, ವಿಶೇಷ ವಿವಾಹ ( ಇತರೆ) ನೋಂದಣಿ ಕಾಯ್ದೆ ಅಡಿ ಆ ಮಹಿಳೆಯ ಮಗುವನ್ನು ಸಹ ನೋಂದಣಿ ಪ್ರಮಾಣ ಪತ್ರದಲ್ಲಿ ಸೇರಿಸಲು ಅವಕಾಶವಿದೆ. ಮದುವೆ ನೋಂದಣಿ ಮಾಡಿಸುವ ಮುನ್ನ ದಂಪತಿಯ ಮದುವೆಯ ಬಗ್ಗೆ 30 ದಿನಗಳ ನೋಟಿಸ್ ನೀಡಲಾಗುತ್ತದೆ. ಮೂವತ್ತು ದಿನಗಳ ನಂತರ 90 ದಿನಗಳ ಒಳಗಾಗಿ ಪುನಃ ಉಪ ನೋಂದಣಾಧಿಕಾರಿಗಳ ಸಮಕ್ಷಮ ಮೂವರು ಸಾಕ್ಷಿಗಳ ಜತೆ ಹೋದಾಗ ವಿವಾಹ ಪ್ರಮಾಣ ಪತ್ರ ನೀಡುತ್ತದೆ. 90 ದಿನಗಳ ನಂತರ ಹೋದರೆ, ಮತ್ತೆ ಮೂವತ್ತು ದಿನಗಳ ತಕರಾರು ಅವಧಿ ಬಿಟ್ಟು ಹೊಸದಾಗಿ ಮದುವೆ ನೋಂದಣಿ ಪ್ರಕ್ರಿಯೆ ಮಾಡಿಸಬೇಕು.

ಮದುವೆ ನೋಂದಣಿ ಕಡ್ಡಾಯವಲ್ಲ:
ಈ ರೀತಿಯ ವಿವಾಹಗಳಿಗೆ ಭಾರತೀಯ ಸಂವಿಧಾನದ ಪ್ರಕಾರ ಮಾನ್ಯತೆ ಇದೆ. ಜನನ, ಮರಣ ಪ್ರಮಾಣ ಪತ್ರ ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು. ಆದರೆ ವಿವಾಹ ನೋಂದಣಿ ಕಡ್ಡಾಯವಾಗಿರುವುದಿಲ್ಲ. ಐಚ್ಛಿಕವಾಗಿರುತ್ತದೆ. ಅಂದರೆ ನೋಂದಣಿ ಮಾಡಿಸಲೂಬಹುದು. ನೋಂದಣಿ ಮಾಡಿಸದೇಯೂ ಇರಬಹುದು. ನೋಂದಣಿ ಮಾಡಿಸದಿದ್ದರೂ ಸಹ ಯಾವುದೇ ರೀತಿಯ ಮದುವೆಗೆ ಕಾನೂನು ಮಾನ್ಯತೆ ಇದೆ.

Exit mobile version