Revenue Facts

ಯುಗಾದಿ ಹಬ್ಬಕ್ಕೆ ಕಾಯಿ ಹಾಗೂ ಬೇಳೆ ಹೋಳಿಗೆ ಮಾಡುವ ಸುಲಭ ವಿಧಾನ

ಬೆಂಗಳೂರು, ಮಾ. 22 : ಯುಗಾದಿ ಹಬ್ಬ ಎಂದರೆ ದಕ್ಷಿಣ ಭಾರತೀಯರಿಗೆ ಹೋಳಿಗೆ ತಿನ್ನುವ ಸಂಭ್ರಮ. ಎಲ್ಲರ ಮನೆಯಲ್ಲು ಯುಗಾದಿ ಹಬ್ಬದ ದಿನ ಹೋಳಿಗೆಯನ್ನು ಕಡ್ಡಾಯವಾಗಿ ಮಾಡಲಾಗುತ್ತದೆ. ಬೆಳಗ್ಗೆ ಎಣ್ಣೆ ಸ್ನಾನ ಮಾಡಿ, ಹೊಸ ಬಟ್ಟೆ ಧರಿಸಿ, ದೇವರಿಗೆ ಪೂಜೆ ಮಾಡಿ ಬೇವು ಬೆಲ್ಲ ತಿಂದು ಮಧ್ಯಾಹ್ನದ ಊಟಕ್ಕೆ ಬಿಸಿ ಬಿಸಿ ಹೋಳಿಎ ಸವಿದರೇನೆ ಹಬ್ಬ ಮಾಡಿದಂತೆ. ಒಬ್ಬರ ಮನೆಯಲ್ಲಿ ಬೇಳೆ ಹೋಳಿಗೆ ಮಾಡಿದರೆ, ಮತ್ತೊಬ್ಬರ ಮನೆಯಲ್ಲಿ ಕಾಯಿ ಹೋಳಿಗೆಯನ್ನು ಮಾಡಲಾಗುತ್ತದೆ. ಹಾಗಾದರೆ, ಈ ಎರಡೂ ಹೋಳಿಗೆಯನ್ನು ಮಾಡುವ ಸುಲಭ ವಿಧಾನವನ್ನು ತಿಳೀಯೋಣ ಬನ್ನಿ..

ಕಣಕ ಮಾಡುವ ವಿಧಾನ: ಚಿರೋಟಿ ರವೆ – ಕಾಲು ಕಪ್, ಮೈದಾಹಿಟ್ಟು – 2 ಬಟ್ಟಲು, ಎಣ್ಣೆ – ಅಗತ್ಯಕ್ಕೆ ತಕ್ಕಷ್ಟು, ಉಪ್ಪು – 1 ಚಿಟಿಕೆ, ಅರಿಸಿನ – 1 ಚಿಟಿಕೆ ತೆಗೆದುಕೊಳ್ಳಿ. ಒಂದು ಪಾತ್ರೆಯಲ್ಲಿ ಮೈದಾಹಿಟ್ಟು, ಚಿರೋಟಿ ರವೆ, ಅರಿಶಿನ, ಉಪ್ಪು ಹಾಕಿ ನೀರಿನಲ್ಲಿ ಕಲಸಿ. ಚಪಾತಿ ಹಿಟ್ಟಿಗಿಂತ ಸ್ವಲ್ಪ ತೆಳ್ಳಗಿರಲಿ, ಇದು ಮುಳುಗುವಂತೆ ಎಣ್ಣೆ ಹಾಕಿ. ನೆನೆಯಲು ಬಿಡಿ.

ಬೇಳೆ ಹೋಳಿಗೆ: ತೊಗರಿ ಬೇಳೆ – 1/2 ಕೆಜಿ, ಬೆಲ್ಲ – 1/2 ಕೆಜಿ, ತೆಂಗಿನಕಾಯಿ ತುರಿ – ಒಂದು ಬಟ್ಟಲು, ಏಲಕ್ಕಿ ಪುಡಿ – ಸ್ವಲ್ಪ, ಎಣ್ಣೆ – ಅಗತ್ಯಕ್ಕೆ ತಕ್ಕಷ್ಟು ತೆಗೆದುಕೊಳ್ಳಿ.

ಬೆಲ್ಲವನ್ನು ಪುಡಿ ಮಾಡಿಟ್ಟುಕೊಳ್ಳಿ. ಒಂದು ದಪ್ಪ ತಳದ ಪಾತ್ರೆಯಲ್ಲಿ ತೊಗರಿಬೇಳೆ, ಚಿಟಿಕೆ ಅರಿಶಿನ ಮತ್ತು ಒಂದು ಚಮಚ ಎಣ್ಣೆ ಹಾಕಿ ನೀರು ಹಾಕಿ ಬೇಯಲು ಇಡಿ. ಉಗುರಿನಿಂದ ಬೇಳೆಯನ್ನು ಹೋಳು ಮಾಡುವಷ್ಟು ಬೇಯಲಿ. ಬಳಿಕ ಇದಕ್ಕೆ ಕಾಯಿ ತು ಹಾಗೂ ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ ಬೇಯಿಸಿಕೊಳ್ಳಿ. ಸ್ವಲ್ಪ ಗಟ್ಟಿಯಿರುವಾಗಲೇ ಇದಕ್ಕೆ ಪುಡಿ ಮಾಡಿದ ಬೆಲ್ಲ, ತೆಂಗಿನಕಾಯಿ ತುರಿ, ಮತ್ತು ಏಲಕ್ಕಿ ಪುಡಿ ಹಾಕಿ ಮಿಕ್ಸ್ ಮಾಡಿ ಒಲೆಯಿಂದ ಇಳಿಸಿ. ಇದು ತಣ್ಣಗಾದ ಮೇಲೆ ನೀರು ಹಾಕದೆ ರುಬ್ಬಿಕೊಳ್ಳಿ.

ಕಾಯಿ ಹೋಳಿಗೆ: 2 ಕಪ್ ಹಸಿ ಕೊಬ್ಬರಿ ತುರಿ 1 ಕಪ್ ಬೆಲ್ಲಾ, 1 ಟಿ ಸ್ಪೂನ್ ಅಷ್ಟು ಹುರಿಗಡಲೆ ಪೌಡರ್, 1 ಟಿ ಸ್ಪೂನ್ ತುಪ್ಪ, ಕಾಲು ಟಿ ಸ್ಪೂನ್ ಏಲಕ್ಕಿ.

ಒಂದು ಪಾತ್ರೆಗೆ ಬೆಲ್ಲ ಹಾಕಿ ಕರಗಿಸಿಕೊಳ್ಳಿ. ಇತ್ತ ಹಸಿ ಕಾಯಿಯನ್ನು ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಬೆಲ್ಲ ಕರಗಿದ ಕೂಡಲೇ ಕಾಯಿಯನ್ನು ಹಾಕಿ ಬಾಡಿಸಿ, ತಳ ಬಿಡುವ ಹೊತ್ತಿಗೆ ಹುರಿಗಡಲೆ ಪುಡಿ,
ಏಲಕ್ಕಿ ಹಾಕಿ ಬಾಡಿಸಿ. ತಳ ಬಿಡುವಅಗ ಆಫ್‌ ಮಾಡಿ. ಹೂರಣ ತಣ್ಣಗಾದ ಮೇಲೆ ಹೋಳಿಗೆ ತಟ್ಟಿ.

ಹೋಳಿಗೆ ಮಾಡುವುದು: ಹೋರಣವನ್ನು ಸಣ್ಣ ಸಣ್ಣ ಉಂಡೆಗಳಾಗಿ ಮಾಡಿಕೊಳ್ಳಿ. ಕಲಸಿಟ್ಟ ಮೈದಾ ಮಿಶ್ರಣವನ್ನು ತೆಗೆದುಕೊಂಡು ಮತ್ತೊಮ್ಮೆ ಚೆನ್ನಾಗಿ ನಾದಿಕೊಳ್ಳಿ. ಒಂದು ಮಣೆ ಮೇಲೆ ಬಾಳೆ ಎಲೆ/ ಪ್ಲಾಸ್ಟಿಕ್ ಕವರ್ ಹಾಕಿ. ಅದರ ಮೇಲೆ ಸ್ವಲ್ಪ ಎಣ್ಣೆ ಸವರಿ, ಸ್ವಲ್ಪ ಮೈದಾ ಮಿಶ್ರಣವನ್ನು ತೆಗೆದುಕೊಂಡು ಅದರ ಮೇಲೆ ತಟ್ಟಿಕೊಳ್ಳಿ.

ಇದರ ಮಧ್ಯೆ ಹೂರಣದ ಉಂಡೆಯನ್ನು ಇಟ್ಟು ಮೈದಾದಿಂದ ಮುಚ್ಚಿ. ತಟ್ಟಿಕೊಳ್ಳಿ. ಕಾದ ಕಾವಲಿ ಮೇಲೆ ಹಾಕಿ ಬೇಯಿಸಿಕೊಳ್ಳಿ. ಬೇಳೆ ಅಥವಾ ಕಾಯಿ ಹೋಳಿಗೆ ಎರಡನ್ನು ತಟ್ಟುವುದು ಒಂದೇ ರೀತಿ. ಹೋಳಿಗೆಯನ್ನು ಬಿಸಿ ಇರುವಾಗಲೇ ತುಪ್ಪ ಅಥವಾ ಬಿಸಿ ಮಾಡಿದ ಹಾಲಿನೊಂದಿಗೆ ಸವಿಯಬಹುದು.

Exit mobile version