Revenue Facts

ಮನೆಯ ಶೋಕೇಸ್ ಅಂದಗಾಣಿಸುವುದು ಹೇಗೆ? ಪುಸ್ತಕದ ಜೊತೆಗೆ ಕಲಾಕೃತಿಗಳಿಗೂ ಜಾಗವಿರಲಿ

ಮನೆಯ ಶೋಕೇಸ್ ಅಂದಗಾಣಿಸುವುದು ಹೇಗೆ? ಪುಸ್ತಕದ ಜೊತೆಗೆ ಕಲಾಕೃತಿಗಳಿಗೂ ಜಾಗವಿರಲಿ

ಹಿಂದೆ ಪುಸ್ತಕ ಕಪಾಟು ಅಂದರೆ ವಿಷಯದ ಅನುಸಾರವಾಗಿ ಪುಸ್ತಕಗಳನ್ನು ಜೋಡಿಸಿ ಇಡುವುದಾಗಿತ್ತು. ಆದರೆ, ಈಗಿನ ಕಾಲದಲ್ಲಿ ಪುಸ್ತಕ ಕಪಾಟು ಕೂಡ ಮನೆಯ ವಿನ್ಯಾಸದಲ್ಲಿ ಪಾಲು ಪಡೆದಿದೆ. ಪುಸ್ತಕ ಕಪಾಟು ನಮ್ಮ ಆಸಕ್ತಿಯ ಪ್ರತಿಬಿಂಬ. ಮನೆಗೆ ಬಂದ ನೆಂಟರು, ಸ್ನೇಹಿತರಿಗೆ ನಮ್ಮ ಮೊದಲ ಪರಿಚಯವನ್ನು ಕಪಾಟಿನಲ್ಲಿನ ಪುಸ್ತಕಗಳು ಮಾಡಿಕೊಡುತ್ತವೆ. ಅನೇಕರ ಮನೆಗಳಲ್ಲಿ ಪ್ರತ್ಯೇಕ ಲೈಬ್ರೆರಿ ಅಥವಾ ಪುಸ್ತಕಗಳನ್ನು ಇಡುವ ಸಣ್ಣ ರೂಮ್‌ ಇರುವುದಿಲ್ಲ. ಹಾಗಾಗಿ ಬೆಡ್‌ರೂಮ್‌, ಲಿವಿಂಗ್‌ ರೂಮ್‌ಗಳಲ್ಲಿ ಸ್ಥಳ ಸಿಕ್ಕಲ್ಲಿ ಪುಸ್ತಕಗಳನ್ನು ಜೋಡಿಸುತ್ತಾರೆ. ಮನೆಯ ಷೋಕೇಸ್‌ನಲ್ಲಿ ಪುಸ್ತಕಗಳಿಗೆ ಹೆಚ್ಚು ಜಾಗ. ಹಾಗೇ ಪುಸ್ತಕಗಳನ್ನು ಸೆಲ್ಫ್‌, ಶೋಕೇಸ್‌ನಲ್ಲಿ ಜೋಡಿಸಿಡುವ ಬದಲು, ವಿವಿಧ ವಿನ್ಯಾಸಗಳ ಕಪಾಟಿನ ಪ್ರಯೋಗ ಮಾಡಿ ನೀಟಾಗಿ ಜೋಡಣೆ ಮಾಡಬಹುದು.

ಅನೇಕ ಜನರಿಗೆ ಕಪಾಟಿನಲ್ಲಿ ಎಲ್ಲಿ, ಯಾವ ಪುಸ್ತಕಗಳನ್ನಿಡಬೇಕು ಎಂಬ ಗೊಂದಲದ ಜೊತೆಗೆ ಕಡಿಮೆ ಸ್ಥಳದಲ್ಲಿ ಅವುಗಳನ್ನು ಜೋಡಿಸುವ ಕಷ್ಟ. ಪುಸ್ತಕಗಳ ಕಪಾಟು ಅಂದರೆ ಬರೀ ಪುಸ್ತಕಗಳನ್ನೇ ಇಡುವುದಲ್ಲ. ಅಲ್ಲಿ ಕಲಾಕೃತಿ, ಪೇಟಿಂಗ್‌, ಫ್ರೇಮ್‌ಗಳನ್ನು ಬಳಸಿ, ಕಪಾಟನ್ನೇ ಕಲಾಕೃತಿಯಂತೆ ಬದಲಾವಣೆ ಮಾಡುವುದರಲ್ಲಿಯೂ ಜಾಣ್ಮೆ ಇದೆ. ಇಷ್ಟದ ಕಲ್ಪನೆಯ ಕಪಾಟನ್ನು ಅಂದುಕೊಂಡಿದ್ದಕ್ಕಿಂತಲೂ ಸುಲಭವಾಗಿ ಮನೆಯಲ್ಲಿಯೇ ಮಾಡಿಕೊಳ್ಳಬಹುದು.

ಕಲಾಕೃತಿ, ಹೂವಿನ ಕುಂಡದ ಬಳಕೆ
ಮನೆಯ ಹಾಲ್‌ ಅಥವಾ ಲಿವಿಂಗ್‌ ರೂಮ್‌ನ ಗೋಡೆಗೆ ಮೂರು ಅಥವಾ ನಾಲ್ಕು ಮರದ ಸೆಲ್ಫ್‌ಗಳನ್ನು ಮೊಳೆ ಹೊಡೆದು ಇಡಬೇಕು. ಅದರಲ್ಲಿ ನಾವು ಆಗಾಗ ಓದಬಯಸುವ ಅಥವಾ ಪರಿಚಿತರು ಬಂದಾಗ ಅವರ ಓದನ್ನು ಕೆರಳಿಸುವ ಮೂರು – ನಾಲ್ಕು ಪುಸ್ತಕಗಳನ್ನು ಕಲಾಕೃತಿ, ಹೂದಾನಿಗಳ ಜೊತೆ ಜೋಡಿಸಬೇಕು. ಹಾಗೇ ಪ್ರಾಚೀನ ಮರದ ಪೆಟ್ಟಿಗೆ, ಪುರಾತನ ಕಾಲದ ಅಪರೂಪದ ವಸ್ತುಗಳನ್ನು ಇಲ್ಲಿ ಪುಸ್ತಕದ ಜೊತೆಗೆ ಜೋಡಿಸಬಹುದು. ಇಂತಹ ಸೆಲ್ಫ್‌ಗಳಲ್ಲಿ ಅಧಿಕ ಪುಸ್ತಕಗಳನ್ನು ಜೋಡಿಸಿಡುವ ಭಾರ ಬೇಡ.

ಒಂದೇ ರೀತಿಯ ಪುಸ್ತಕ, ಕಲಾಕೃತಿಗಳನ್ನು ಎದುರುಬದುರಾಗಿ ಜೋಡಿಸಿ ಮನೆಯಲ್ಲಿ ಪುಸ್ತಕಗಳು, ಕಲಾಕೃತಿಗಳು ಕೆಲವು ಬಾರಿ ಒಂದೇ ರೀತಿಯದ್ದಾಗಿರಬಹುದು. ಆದರೆ ಕಪಾಟಿನಲ್ಲಿ ಜೋಡಿಸುವಾಗ ಅವುಗಳನ್ನು ಪರಸ್ಪರ ವಿರುದ್ಧವಾಗಿ ಜೋಡಿಸಿದರೆ ಚಂದಕಾಣುತ್ತದೆ. ಹಾಗೇ ಮೇಲೆ ಕೆಳಗಿನ ಸೆಲ್ಫ್‌ಗಳಲ್ಲಿ ಕೂಡ ಒಂದೇ ರೀತಿಯಾಗಿ ಇಡುವುದು ಬೇಡ. ಒಂದು ಹೂದಾನಿಯನ್ನು ಮೇಲಿನ ಸೆಲ್ಫ್‌ನಲ್ಲಿಟ್ಟರೆ ಮತ್ತೊಂದನ್ನು ಕೊನೆಯ ಸೆಲ್ಫ್‌ನಲ್ಲಿ ಮತ್ತೊಂದು ಭಾಗದಲ್ಲಿಡಿ.

ಪ್ರಸ್ತುತತೆ ಇರಲಿ
ಅಡುಗೆ ಮನೆಯಲ್ಲಿ ಪುಸ್ತಕ ಕಪಾಟಿ ಇದೆಯೆಂದಾದರೆ ಅಡುಗೆ ಸಂಬಂಧಿಸಿದ ಕೃತಿಗಳಿಗೆ ಪ್ರಾಧಾನ್ಯತೆ ಇರಲಿ. ಇಲ್ಲಿ ಬರೀ ರೆಸಿಪಿ ಸಂಬಂಧಿಸಿದ ಪುಸ್ತಕಗಳೇ ಇರಬೇಕೆಂದಿಲ್ಲ. ಅವುಗಳ ಜೊತೆಗೆ ರುಚಿ, ಆರೋಗ್ಯಕ್ಕೆ ಸಂಬಂಧಿಸಿದ ಕೃತಿಗಳನ್ನಿಡಬಹುದು. ಅಡುಗೆ ಮನೆಯಲ್ಲಿ ಪುಸ್ತಕಗಳ ವಿನ್ಯಾಸ ಮಾಡುವುದು ನಮ್ಮ ಬುದ್ಧಿವಂತಿಕೆಯನ್ನು ತಿಳಿಸುತ್ತದೆ. ಇಲ್ಲಿ ಗಾಜಿನ ವಸ್ತುಗಳು, ಪಿಂಗಾಣಿ ಬಟ್ಟಲುಗಳನ್ನು ಬಳಸಿಕೊಂಡು ಪುಸ್ತಕಗಳನ್ನು ಜೋಡಿಸಬಹುದು. ಮಕ್ಕಳ ಕೋಣೆಯಲ್ಲಿ ಮಕ್ಕಳ ಪುಸ್ತಕ, ಗ್ಲೋಬ್‌, ಪ್ರಾಣಿಗಳ ಪರಿಚಯ ಕೃತಿಗಳನ್ನು ಅವರನ್ನು ರಂಜಿಸುವಂತಹ ವಸ್ತು, ಆಟಿಕೆಗಳನ್ನು ಬಳಸಿ ಜೋಡಿಸಿಡಬಹುದು.
ಲಿವಿಂಗ್‌ ರೂಮ್‌ನಲ್ಲಿ ಕಾಫಿ– ಟೇಬಲ್‌ ಬುಕ್‌ಗಳು, ಪ್ರಸ್ತುತ ಸನ್ನಿವೇಶಕ್ಕೆ ತಕ್ಕುದಾದ ಕೃತಿಗಳು, ಹೊಸದಾಗಿ ಪ್ರಕಟಗೊಂಡ ಕೃತಿಗಳನ್ನು ಪೇಟಿಂಗ್‌, ಫೋಟೊ ಫ್ರೇಮ್‌ಗಳ ಜೊತೆಗೆ ಜೋಡಿಸಿಡಿ.

ಬಗೆ ಬಗೆ ಕಪಾಟಿನ ವಿನ್ಯಾಸ
ಈಗ ಮನೆಯ ವಿನ್ಯಾಸಕ್ಕೆ ತಕ್ಕಂತೆ ಮರದ, ಕಬ್ಬಿಣದ ಪುಸ್ತಕ ಕಪಾಟುಗಳನ್ನು ವಿನ್ಯಾಸಗೊಳಿಸಲಾಗುತ್ತದೆ. ಮನೆಯಲ್ಲಿ ಸ್ಥಳಾವಕಾಶದ ಕೊರತೆಯಿದ್ದರೂ ಗೋಡೆಯಲ್ಲಿ ಬಾಕ್ಸ್‌ ಬಾಕ್ಸ್‌ ಮಾದರಿಯಲ್ಲಿ ಪುಸ್ತಕಗಳ ಗಾತ್ರಕ್ಕೆ ತಕ್ಕಂತೆ ಮರದ ಬಾಕ್ಸ್‌ ಕಪಾಟು ಮಾಡಿಕೊಡಲಾಗುತ್ತದೆ. ಇದರಲ್ಲಿ ಆಸಕ್ತಿಗೆ ತಕ್ಕಂತೆ ಅಡ್ಡವಾಗಿ, ಲಂಬ ಮಾದರಿಯಲ್ಲಿ ನೋಡಲೂ ಆಕರ್ಷಕ ಆಗಿರುವಂತೆ ಪುಸ್ತಕಗಳನ್ನು ಜೋಡಿಸಿಟ್ಟುಕೊಳ್ಳಬಹುದು.

ಮನೆಯ ಮೂಲೆಯಲ್ಲಿನ ಜಾಗವನ್ನು ಸದುಪಯೋಗ ಮಾಡಿಕೊಂಡು ಉದ್ದವಾದ ಐದಾರು ಅಂತಸ್ತಿನ ಚೌಕಾಕಾರದ ಕಪಾಟ ಮಾಡಿಕೊಂಡು ಪುಸ್ತಕ ಜೋಡಿಸಬಹುದು. ಹಾಗೇ ಮನೆಯ ಹಾಲ್‌ನಲ್ಲಿ, ಟಿವಿ ಪಕ್ಕದಲ್ಲಿ ಒಣಗಿದ ಮರದಂತಹ ಮರದ ಕಲಾಕೃತಿಯಂತಹ ಕಪಾಟು ಮಾಡಿಕೊಂಡರೆ ಒಳಾಂಗಣ ವಿನ್ಯಾಸವೇ ಬದಲಾಗುತ್ತದೆ. ಮಾರುಕಟ್ಟೆಯಲ್ಲಿ ಕಡಿಮೆ ಜಾಗದಲ್ಲಿ ಅಂದವಾಗಿ ಪುಸ್ತಕ ಪೇರಿಸಿಡಬಹುದಂತಹ ಅನೇಕ ಮಾದರಿಯ ಆಕರ್ಷಕ ಪುಸ್ತಕ ಕಪಾಟುಗಳು ಲಭ್ಯವಿವೆ.

Exit mobile version