‘ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು’ ಈ ಗಾದೆ ಮಾತು ಮನೆ ಕಟ್ಟುವ ತಾಪತ್ರಯ, ಕಷ್ಟವನ್ನು ಸೂಚಿಸುತ್ತದೆ. ಜೀವಮಾನದಲ್ಲಿ ಸುಂದರ ಮನೆ ಕಟ್ಟುವುದು ಎಲ್ಲರ ಆಸೆ. ಈಗೀಗ ಅನೇಕ ಮನೆ ನಿರ್ಮಾಣ ಕಂಪೆನಿಗಳು ನಮ್ಮ ಬಜೆಟ್ ತಕ್ಕಂತೆ ಸುಂದರ, ಅದ್ಧೂರಿ ವಿನ್ಯಾಸದ ಮನೆ, ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸಿ ಕೊಡುತ್ತವೆ. ಮನೆ ಕಟ್ಟಿದ ನಂತರ ಗೃಹಪ್ರವೇಶ ಸಂಭ್ರಮ ನಡೆಯಲೇಬೇಕು. ಸಾಂಪ್ರದಾಯಿಕ ರೀತಿಯಲ್ಲಿ ನೆರವೇರುವ ಈ ಕಾರ್ಯಕ್ರಮಕ್ಕೆ ಹತ್ತಿರದ ನೆಂಟರು, ಸ್ನೇಹಿತರು ಬಂದೇ ಬರುತ್ತಾರೆ. ಈ ಗೃಹಪ್ರವೇಶ ಕಾರ್ಯಕ್ರಮವನ್ನು ಸ್ಮರಣೀಯವಾಗಿಸುವುದು ಹೇಗೆ? ಗೃಹಪ್ರವೇಶ ದಿನಕ್ಕೆ ಹೇಗೆ ಮನೆಯನ್ನು ವಿನ್ಯಾಸಗೊಳಿಸಬಹುದು, ಹೇಗೆ ಅತಿಥಿಗಳಿಗೆ ಪಾರ್ಟಿ ನೀಡಬಹುದು ಎಂಬ ಬಗ್ಗೆ ಇಲ್ಲಿದೆ ಕೆಲ ಸಲಹೆಗಳು.
ಮನೆ ಅಲಂಕಾರ
ಈಗೀಗ ಹೂವು, ಕೃತಕ ಹೂವುಗಳನ್ನು ಬಳಸಿಕೊಂಡು ಅನನ್ಯ, ವಿಭಿನ್ನ ಪರಿಕಲ್ಪನೆಯ ಥೀಮ್ಡ್ ಹೌಸ್‌ವಾರ್ಮಿಂಗ್ ಅಲಂಕಾರಗಳನ್ನು ಮಾಡಲಾಗುತ್ತದೆ. ಹಳೆ ಕಾಲದಂತೆ ವಿಂಟೇಜ್ ಡೆಕೋರೇಷನ್, ಸಾಂಪ್ರದಾಯಿಕ ಹೂವಿನ ಅಲಂಕಾರ ಹೀಗೆ ನಾನಾ ಬಗೆಯ ಅಲಂಕಾರಗಳನ್ನು ಮಾಡಬಹುದು. ಮನೆಯ ಪ್ರವೇಶ ದ್ವಾರದಲ್ಲಿ ಬಣ್ಣ ಬಣ್ಣದ ರಂಗೋಲಿ ಹಾಕಿ ಅತಿಥಿಗಳನ್ನು ಸ್ವಾಗತಿಸಬಹುದು.
ಅನ್ ಬಾಕ್ಸಿಂಗ್
ಹೊಸ ಮನೆಗೆ ಹೋಗುವ ಸಂದರ್ಭದಲ್ಲಿ ಸಾಮಾನುಗಳನ್ನು ಸಾಗಿಸುವುದು, ಅಲ್ಲಿ ನೀಟಾಗಿ ಜೋಡಿಸುವುದು ಪ್ರಯಾಸದಾಯಕ ಕೆಲಸ. ಗೃಹಪ್ರವೇಶ, ಪೂಜೆ ಕಾರ್ಯಕ್ರಮದ ನಂತರ ಆತ್ಮೀಯರು, ಸ್ನೇಹಿತರ ಜೊತೆ ಸಣ್ಣದಾಗಿ ಪಾರ್ಟಿ ಇರಿಸಿಕೊಂಡು ಕೆಲವೊಂದು ಗೇಮ್ ಮೂಲಕ ಈ ಕೆಲಸವನ್ನು ಸುಲಭ ಮಾಡಿಕೊಳ್ಳಬಹುದು. ಅತಿಥಿಗಳ ಕೈಯಲ್ಲಿ ಜೋಡಿಸಬೇಕಾದ ವಸ್ತುಗಳ ಪಟ್ಟಿ ನೀಡಿ, ಸಾಮಾನುಗಳ ರಾಶಿಯಿಂದ ಅವನ್ನು ಹುಡುಕಿ, ಗೊತ್ತುಪಡಿಸಿದ ಜಾಗದಲ್ಲಿ ಇರಿಸುವ ಆಟ ಆಡಬಹುದು. ಇದು ಅವರಿಗೆ ಮೋಜಿನ ಆಟವಾದರೆ, ಮನೆ ಸದಸ್ಯರಿಗೆ ಜೋಡಿಸುವ ಕೆಲಸವನ್ನೂ ಸುಲಭ ಮಾಡುತ್ತದೆ. ಮನೆಯ ಷೋಕೇಸ್ ಅಲಂಕಾರ, ಗೋಡೆ ಅಲಂಕಾರದ ಬಗ್ಗೆಯೂ ಬಂದ ಅತಿಥಿಗಳಿಂದ ಸಲಹೆ ಪಡೆಯಬಹುದು.
ನೆರೆ ಮನೆಯವರಿಗೆ ಆಹ್ವಾನ
ಹೊಸ ಪ್ರದೇಶದಲ್ಲಿ ಮನೆ ಕಟ್ಟಿದವರಿಗೆ ಅಥವಾ ದೊಡ್ಡ ದೊಡ್ಡ ಅಪಾರ್ಟ್‌ಮೆಂಟ್‌ಗಳಲ್ಲಿ ಮನೆ ಖರೀದಿ ಮಾಡುವವರಿಗೆ ವೇಳೆ ಅಕ್ಕ ಪಕ್ಕದ ಮನೆಯವರ ಪರಿಚಯವಿರುವುದಿಲ್ಲ. ಗೃಹಪ್ರವೇಶ ನೆಪದಲ್ಲಿ ಅವರನ್ನು ಮನೆಗೆ ಕರೆದು ಅವರ ಸ್ನೇಹ ಸಂಪಾದಿಸಬಹುದು. ಒಂದು ವೇಳೆ ಅವರು ಆ ದಿನ ಬರಲಾಗದಿದ್ದರೂ ಅವರು ನಿಮ್ಮ ಸ್ನೇಹಿತರಾಗುವುದಂತೂ ಸತ್ಯ. ಅವರ ಮೂಲಕ ಹೊಸ ಸ್ಥಳದ ಬಗ್ಗೆ ಮಾಹಿತಿ ಪಡೆಯಬಹುದು.
ಸಣ್ಣ ಪಾರ್ಟಿ
ಮನೆ ಕಟ್ಟುವ ಸಂದರ್ಭದಲ್ಲಿ ಅನೇಕರು ಮಾನಸಿಕವಾಗಿ, ದೈಹಿಕವಾಗಿ ಸಹಾಯ ಮಾಡಿದವರಿರುತ್ತಾರೆ. ಹಾರೈಸಿದವರಿರುತ್ತಾರೆ. ಅವರಿಗಾಗಿ ಗೃಹಪ್ರವೇಶದ ನಂತರ ಅಥವಾ ಮರುದಿನ ಮನೆಯಲ್ಲೇ ಸಣ್ಣ ಮಟ್ಟಿನ ಪಾರ್ಟಿ ನೀಡುವುದರಿಂದ ಸಂಬಂಧ ಹಸಿರಾಗಿರುತ್ತದೆ.