Revenue Facts

ಹೊಸದುರ್ಗ ಸಬ್‌ರಿಜಿಸ್ಟ್ರಾರ್ ವಿರುದ್ಧ ಎಸಿಬಿ ಎಫ್‌ಐಆರ್ ರದ್ದುಮಾಡಿದ ಹೈಕೋರ್ಟ್

ಬೆಂಗಳೂರು: ಚಿತ್ರದುರ್ಗ ಜಿಲ್ಲೆ ಹೊಸದುರ್ಗ ಉಪನೋಂದಣಾಧಿಕಾರಿಯಾಗಿದ್ದ ಪಿ. ಮಂಜುನಾಥ್ ವಿರುದ್ಧ ದಾಖಲಾಗಿದ್ದ ಎಸಿಬಿ ಎಫ್‌ಐಆರ್‌ ಅನ್ನು ಹೈಕೋರ್ಟ್ ಗುರುವಾರ ರದ್ದುಗೊಳಿಸಿದೆ.

ದೂರು ನೀಡುವಲ್ಲಿ ವಿಳಂಬ ಮತ್ತು ಆರೋಪ ಸಾಬೀತುಪಡಿಸುವಲ್ಲಿ ಸಾಕ್ಷಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಈ ಪ್ರಕರಣ ರದ್ದು ಮಾಡಲಾಗಿದೆ. ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠ ಈ ಆದೇಶ ನೀಡಿದೆ.

ಪ್ರಕರಣದ ಹಿನ್ನೆಲೆ:
ಹೊಸದುರ್ಗ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಡಿ.ಎಚ್. ಗುರುಪ್ರಸಾದ್ ಎಂಬುವವರು ಕಳೆದ ಫೆಬ್ರವರಿ 19ರಂದು ಮಾರ್ಟಿಗೇಜ್ ಡೀಡ್ ನೋಂದಣಿ ಮಾಡಿಸಿದ್ದರು. ಅದಾದ ಎರಡು ತಿಂಗಳ ಬಳಿಕ ಮಾರ್ಟಿಗೇಜ್ ಡೀಡ್ ನೋಂದಣಿ ಸಂದರ್ಭದಲ್ಲಿ ಹೊಸದುರ್ಗ ಉಪನೋಂದಣಾಧಿಕಾರಿ ಪಿ. ಮಂಜುನಾಥ್ ತಮಗೆ 5000 ರೂ. ಲಂಚ ಕೇಳಿದ್ದರು ಎಂದು ಅವರು ಚಿತ್ರದುರ್ಗ ಎಸಿಬಿಗೆ ದೂರು ನೀಡಿದ್ದರು.

“ಈ ದೂರಿನ ಅನ್ವಯ ಎಸಿಬಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ಮಂಜುನಾಥ್ ಕಚೇರಿಗೆ ತೆರಳಿ ತಪಾಸಣೆ ನಡೆಸಿದ್ದರು. ಆದರೆ, ಆ ಸಂದರ್ಭದಲ್ಲಿ ಯಾವುದೇ ಸಾಕ್ಷಾಧಾರಗಳು ಲಭ್ಯವಾಗಿರಲಿಲ್ಲ. ಅದಾದ ಒಂದು ತಿಂಗಳ ಬಳಿಕ ಮಂಜುನಾಥ್ ಕಚೇರಿಯಲ್ಲಿ ಇಲ್ಲದ ಸಂದರ್ಭದಲ್ಲಿ ಅವರ ಟೇಬಲ್ ಮೇಲೆ ಫೈಲ್ ಒಂದರಲ್ಲಿ 4000 ರೂ. ಹಣ ಇಡಲಾಗಿತ್ತು. ಮಂಜುನಾಥ್ ಕಚೇರಿಗೆ ಹಿಂತಿರುಗಿ ಕಡತ ಪರಿಶೀಲನೆ ಮಾಡುವ ವೇಳೆ ಫೈಲ್ ಒಂದರಲ್ಲಿ ಹಣ ನೋಡಿದ್ದಾರೆ. ಕೂಡಲೇ ದಾಳಿ ನಡೆಸಿದ ಎಸಿಬಿ ಪೊಲೀಸರು ಲಂಚದ ಆರೋಪದ ಮೇಲೆ ಮಂಜುನಾಥ್‌ ಅವರನ್ನು ಬಂಧಿಸಿದ್ದರು,” ಎಂದು ಮಂಜುನಾಥ್ ಪರ ವಕೀಲ ಸತೀಶ್ ಭಗವತ್ ಅವರು https://revenuefacts.comಗೆ ಮಾಹಿತಿ ನೀಡಿದ್ದಾರೆ.

“ಬಳಿಕ ಈ ಪ್ರಕರಣ ಸಂಬಂಧ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಯಿತು. ಲಂಚದ ಆರೋಪ ಮಾಡಿದ ವ್ಯಕ್ತಿ ತಾನು ನೋಂದಣಿ ಸೇವೆ ಪಡೆದ ಎರಡು ತಿಂಗಳ ನಂತರ ಬಂದು ಲಂಚ ಕೇಳಿದ ಬಗ್ಗೆ ದೂರು ನೀಡಿದ್ದಾರೆ. ಬಳಿಕ ಎಸಿಬಿ ಅಧಿಕಾರಿಗಳು ಕಚೇರಿಯ ಪಂಚನಾಮೆ ಸಲ್ಲಿಸಿದರೂ ಯಾವುದೇ ದಾಖಲೆಗಳು ಲಭ್ಯವಾಗಿಲ್ಲ. ಅದಾದ ಒಂದು ತಿಂಗಳ ಬಳಿಕ ಮಂಜುನಾಥ್ ಕಚೇರಿಯಲ್ಲಿ ಇಲ್ಲದ ವೇಳೆ ಕಡತವೊಂದರಲ್ಲಿ ಹಣ ಇಟ್ಟು ಅವರು ಅದನ್ನು ಪರಿಶೀಲಿಸುವಂತೆ ವ್ಯವಸ್ಥೆ ಮಾಡಲಾಗಿತ್ತು. ಇಂತಹ ಎಲ್ಲ ಕೃತ್ಯಗಳು ಉದ್ದೇಶಪೂರ್ವಕವಾಗಿ ನಡೆಸಿರುವುದು ಸ್ಪಷ್ಟವಾಗಿದೆ. ಇದನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲಾಯಿತು,” ಎಂದು ವಕೀಲ ಸತೀಶ್ ವಿವರಿಸಿದರು.

Exit mobile version