ಬೆಂಗಳೂರು20;ವಕೀಲರೊಬ್ಬರ ಮೇಲೆ ಸಿವಿಲ್ ವಿಚಾರವಾಗಿ ಜಗಳ ತೆಗೆದು ಅವರ ಮೇಲೆಯೆ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿ, ಅಮಾನವೀಯವಾಗಿ ನಡೆಸಿಕೊಂಡು ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸಂತ್ರಸ್ತ ವಕೀಲರಿಗೆ ಈ ಹಿಂದೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಪಿ.ಎಸ್.ಐ ಆಗಿದ್ದ ಆರೋಪಿ ಕೆ.ಪಿ ಸತೀಶ್ ರವರು 03 ಲಕ್ಷ ರೂ ಪರಿಹಾರ ನೀಡಬೇಕೆಂದು ಘನ ಉಚ್ಚ ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಪುತ್ತಿಲ ಗ್ರಾಮದ ವಕೀಲ ಕುಲದೀಪ್ ರವರು ಅದೇ ಜಿಲ್ಲೆಯ ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಪಿ.ಎಸ್.ಐ ಕೆ.ಪಿ ಸತೀಶ್ ರವರು ನನ್ನ ಮೇಲೆ ಹಲ್ಲೆ ನಡೆಸಿದ್ದು ಈ ಬಗ್ಗೆ ಪಿ.ಎಸ್.ಐ ಸತೀಶ್ ರವರ ವಿರುದ್ದ ಎಫ್.ಐ.ಆರ್ ದಾಖಲಿಸಿ ತನಿಖೆ ಕೈಗೊಂಡು ಪ್ರಕರಣ ಕುರಿತು ಇಲಾಖಾ ವಿಚಾರಣೆ ನಡೆಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಹಾಗೂ ನನಗೆ ಪರಿಹಾರ ನೀಡಲು ಆದೇಶಿಸಬೇಕೆಂದು ಕೋರಿ ಹೈಕೊರ್ಟ್ ಮೆಟ್ಟಿಲೇರಿದ್ದರು.
ಸಂತ್ರಸ್ತ ವಕೀಲರ ರಿಟ್ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾ||. ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಟ ಗುರುವಾರ ಆದೇಶ ನೀಡಿ ಪರಿಹಾರ ಮೊತ್ತವನ್ನು ತಪ್ಪಿತಸ್ಥ ಪೊಲೀಸ್ ಅಧಿಕಾರಿಯಿಂದಲೇ ವಸೂಲು ಮಾಡುವಂತೆ ಆದೇಶ ನೀಡುವುದರ ಜೊತೆಗೆ ಪೊಲೀಸ್ ಅಧಿಕಾರಿಯ ವಿರುದ್ದ ಕೈಗೊಂಡಿರುವ ಇಲಾಖಾ ವಿಚಾರಣೆಯನ್ನು ಒಂದು ತಿಂಗಳ ಒಳಗೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕೆಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಸೂಚನೆ ನೀಡಿದೆ.