Revenue Facts

ಸುಪ್ರೀಂಕೋರ್ಟ್ ನಲ್ಲಿ CAA ಗೆ ಸಂಬಂಧಿಸಿದ 200ಕ್ಕೂ ಹೆಚ್ಚು ಅರ್ಜಿಗಳ ವಿಚಾರಣೆ

ಹೊಸದಿಲ್ಲಿ;CAA (Citizenship Amendment Act) ಅನುಷ್ಠಾನವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌(supreme court)ನಲ್ಲಿ 200 ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಸಂಬಂಧ ಇಂದು ವಿಚಾರಣೆ ನಡೆಯಲಿದೆ. ಸಿಎಎ ಅನುಷ್ಠಾನವನ್ನು ತಡೆ ನೀಡುವಂತೆ ಕೋರಿರುವ ಅರ್ಜಿದಾರರು, ಧರ್ಮದ ಆಧಾರದ ಮೇಲೆ ಮಾಡಿದ ಈ ಕಾನೂನು ಮುಸ್ಲಿಮರ ವಿರುದ್ಧ ಬೇಧಭಾವ ಮಾಡುತ್ತದೆ ಎಂದು ಆರೋಪಿಸಿದ್ದಾರೆ. ಮುಖ್ಯ ನ್ಯಾಯಾಧೀಶ ಡಿ ವೈ ಚಂದ್ರಚೂಡ ನೇತೃತ್ವದ ನ್ಯಾಯಾಧೀಶ ಜೆಬಿ ಪಾರ್ದಿವಾಲಾ ಮತ್ತು ಮನೋಜ್ ಮಿಶ್ರಾರನ್ನು ಒಳಗೊಂಡ ಪೀಠವು ಅರ್ಜಿಯ ವಿಚಾರಣೆಯನ್ನು ನಡೆಸಲಿದೆ. ಕಳೆದ ವಾರ, ಹಿರಿಯ ವಕೀಲ ಕಪಿಲ್ ಸಿಬಲ್ ಕೇರಳ ಮೂಲದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ಸಿಎಎ ವಿರುದ್ಧವಾಗಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯ ಪ್ರಸ್ತಾಪವನ್ನು ಕೋರ್ಟ್‌ನಲ್ಲಿ ಮಾಡಿದ್ದಾರೆ.IUML ಜೊತೆಗೆ, ಇತರ ಪಕ್ಷಗಳು ಮತ್ತು ವ್ಯಕ್ತಿಗಳಾದ ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾ (DYFI), ಅಸ್ಸಾಂ ವಿಧಾನಸಭೆಯ ವಿರೋಧ ಪಕ್ಷದ ನಾಯಕ ದೇಬಬ್ರತ ಸೈಕಾ, ಅಸ್ಸಾಂನ ಕಾಂಗ್ರೆಸ್ ಸಂಸದ ಅಬ್ದುಲ್ ಖಲೀಕ್ ಮತ್ತು ಇತರರು ಸಹ ಅರ್ಜಿಗಳನ್ನು ಸಲ್ಲಿಸಿದ್ದಾರೆ.ಸಿಎಎ ಕಾಯಿದೆಯನ್ನು 2019ರಲ್ಲಿ ಸಂಸತ್ತು ಅಂಗೀಕರಿಸಿದೆ. ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಿಂದ ಡಿಸೆಂಬರ್ 31, 2014ರ ಮೊದಲು ವಲಸೆ ಬಂದ ಹಿಂದೂಗಳು, ಸಿಖ್ಖರು, ಜೈನರು, ಬೌದ್ಧರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರು ಸೇರಿದಂತೆ ಕಿರುಕುಳಕ್ಕೊಳಗಾದ ಮುಸ್ಲಿಮೇತರ ವಲಸಿಗರಿಗೆ ಭಾರತೀಯ ಪೌರತ್ವವನ್ನು ನೀಡುವ ಉದ್ದೇಶವನ್ನು ಹೊಂದಿದೆ.

Exit mobile version