ಗುರುಗ್ರಾಮದಲ್ಲಿ ವಾಟಿಕಾ ಹೌಸಿಂಗ್ ಪ್ರಾಜೆಕ್ಟ್‌ಗಳ ಮಾರಾಟ ಹಾಗೂ ಖರೀದಿಗಳ ಮೇಲೆ ಹರಿಯಾಣ ರಿಯಲ್ ಎಸ್ಟೇಟ್ ನಿಯಂತ್ರಣಾ ಪ್ರಾಧಿಕಾರವು (ಎಚ್‌ಆರ್‌ಇಆರ್‌ಎ) ನಿರ್ಬಂಧ ವಿಧಿಸಿದೆ.
ಕಳೆದ ವಾರ ಎಚ್‌ಆರ್‌ಇಆರ್‌ಎ ಬಿಡುಗಡೆಗೊಳಿಸಿರುವ ಹೇಳಿಕೆಯಲ್ಲಿ ಗುರುಗ್ರಾಮದಲ್ಲಿರುವ 88ಎ ಹಾಗೂ 88ಬಿ ಸೆಕ್ಟರ್‌ಗಳಲ್ಲಿನ ವಾಟಿಕ ಇಂಡಿಯಾ ಕಂಪೆನಿಯ ಎರಡು ದೊಡ್ಡ ಪ್ರಾಜೆಕ್ಟ್‌ಗಳಲ್ಲಿ ಆಸ್ತಿ ಅಪಾರ್ಟ್‌ಮೆಂಟ್ ಖರೀದಿ ಅಥವಾ ಮಾರಾಟವನ್ನು ನಿರ್ಬಂಧಿಸಲಾಗಿದೆ ಎಂದು ತಿಳಿಸಿದೆ.
ಮೂಲಗಳ ಪ್ರಕಾರ, ಈ ಎರಡು ಪ್ರಾಜೆಕ್ಟ್‌ಗಳ ಲೈಸೆನ್ಸ್ 2019ರಲ್ಲಿ ಮುಗಿದಿದೆ. ಕಡ್ಡಾಯವಾಗಿ ಹೊಸದಾಗಿ ನೋಂದಣಿ ಪ್ರಕ್ರಿಯೆಗೆ ಅಗತ್ಯವಿರುವ ದಾಖಲೆಗಳನ್ನು ಕಟ್ಟಡ ಡೆವಲಪರ್ ಒದಗಿಸಬೇಕಾಗಿದೆ. ಹಾಗೇ ಝೋನಿಂಗ್ ಪ್ಲಾನ್ ಹಾಗೂ ಸರ್ವೀಸ್ ಪ್ಲಾನ್ ಅನುಮೋದನೆಗೆ ಬಾಕಿಯಿವೆ ಎಂಬುದನ್ನೂ ಪ್ರಾಧಿಕಾರ ಪರಿಗಣಿಸಿ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.
ಪ್ರಾಧಿಕಾರ ತನ್ನ ಅಧಿಕಾರದ ಮೂಲಕ ವಾಟಿಕಾ ಪ್ರಾಜೆಕ್ಟ್‌ನ ಡೆವಲಪರ್‌ಗೆ ಕಟ್ಟಡ ನೋಂದಣಿ ಅರ್ಜಿಯನ್ನು ಯಾಕೆ ತಿರಸ್ಕರಿಸಬಾರದು ಎಂದು ಮೂವತ್ತು ದಿನಗಳ ಷೋಕಾಸ್ ನೋಟಿಸ್ ನೀಡುತ್ತದೆ. ಅಗತ್ಯ ಮಾಹಿತಿ ಹಾಗೂ ವಿವರಗಳನ್ನು ಒದಗಿಸದೇ ಡೆವಲಪರ್ ಅರ್ಜಿಯನ್ನು ಸಲ್ಲಿಸಿದ್ದಾರೆ. ಹಾಗಾಗಿ ಸರಿಯಾಗಿ ರಿಜಿಸ್ಟರ್ ಮಾಡದ ಪ್ರಾಪರ್ಟಿಗಳ ಮಾರಾಟ ಹಾಗೂ ಖರೀದಿಯನ್ನು ಪ್ರಾಧಿಕಾರ ತಡೆಹಿಡಿದಿದೆ ಎಂದು ಹೇಳಿಕೆಯಲ್ಲಿ ತಿಳಿಸಿವೆ.