Revenue Facts

ಲ್ಯಾಂಡ್ ಕೇಸುಗಳಲ್ಲಿ ಪೊಲೀಸರು ಮಧ್ಯ ಪ್ರವೇಶಿಸಿದ್ರೆ ಹೀಗೆ ಮಾಡಿ!

ಬೆಂಗಳೂರು,ಡಿ. 14: ಬೆಂಗಳೂರಿನಂತಹ ಮಹಾ ನಗರಗಳಲ್ಲಿ ಕ್ರಿಮಿನಲ್ ಕೇಸುಗಳಿಗಿಂತಲೂ ಭೂಮಿಗೆ ಸಂಬಂಧಪಟ್ಟ ಕೇಸುಗಳೇ ಜಾಸ್ತಿ. ಈ ಕೇಸುಗಳನ್ನುಇತ್ಯರ್ಥ ಮಾಡುವ ಸೋಗಿನಲ್ಲಿ ಪೊಲೀಸರು ಪೊಲೀಸ್ ಠಾಣೆಗಳನ್ನು ರಿಯಲ್ ಎಸ್ಟೇಟ್ ಕೇಂದ್ರಗಳನ್ನಾಗಿ ಮಾಡಿಕೊಂಡಿರುವ ಉದಾಹರಣೆಗಳು ಉಂಟು. ಅನಾವಶ್ಯಕವಾಗಿ ಭೂ ವ್ಯಾಜ್ಯ ಕೇಸುಗಳಲ್ಲಿ ಪೊಲೀಸರು ಮೂಗು ತೂರಿಸುವುದನ್ನು ತಡೆಯಲು ಪೊಲೀಸ್ ಇಲಾಖೆ ಮಾರ್ಗಸೂಚಿಯನ್ನು ನೀಡಿದೆ. ಇದು ಜನ ಸಾಮಾನ್ಯರು ತಿಳಿದುಕೊಂಡರೆ, ಪೊಲೀಸರು ಅನಾವಶ್ಯಕ ಭೂ ವ್ಯಾಜ್ಯಗಳಲ್ಲಿ ಮೂಗು ತೂರಿಸುವುದನ್ನು ತಡೆಯಬಹುದು. ಹೀಗಾಗಿ ಮಾರ್ಗಸೂಚಿಯ ಸಮಗ್ರ ನಿಯಮಗಳನ್ನು ಈ ಕೆಳಗೆ ನೀಡಲಾಗಿದೆ.

ನಿಯಮ 1
ಕೃಷಿ ಅಥವಾ ಕೃಷಿಯೇತರ ಭುಮಿ ಅಥವಾ ಕಟ್ಟಡ/ ನಿವೇಶನಕ್ಕೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿ ಜಿಪಿಎ( ಜನರಲ್ ಪವರ್ ಆಫ್ ಅಟಾರ್ನಿ) ಪೊಲೀಸ್ ಠಾಣೆಯಲ್ಲಿ ಹಾಜರು ಪಡಿಸಿ ರಕ್ಷಣೆ ಕೋರಿದಾಗ:
ಪೊಲೀಸರಿಗೆ ಇರುವ ಅಧಿಕಾರ: ಜಿಪಿಎ ಹಾಜರು ಪಡಿಸಿ ಯಾವುದೇ ವ್ಯಕ್ತಿ ಭೂಮಿಯ ಸ್ವಾಧೀನ ಪಡೆಯಲು ಕೋರಿದಾಗ, ಅಂತಹ ವ್ಯಕ್ತಿಗೆ ಪೊಲೀಸರು ರಕ್ಷಣೆ ಕೊಡಬಾರದು.

ನಿಯಮ -2:
ಕೃಷಿ ಅಥವಾ ಕೃಷಿಯೇತರ ಭೂಮಿ, ಕಟ್ಟಡ, ನಿವೇಶನಕ್ಕೆ ಸಂಬಮಧಿಸಿದಂತೆ ಒಬ್ಬ ವ್ಯಕ್ತಿ ಜಿಪಿಎ ( ಜನರಲ್ ಪವರ್ ಆಫ್ ಅಟಾರ್ನಿ ) ಪೊಲೀಸ್ ಠಾಣೆಯಲ್ಲಿ ಹಾಜರು ಪಡಿಸಿ ಸ್ಥಳೀಯ ಪ್ರಾಧಿಕಾರದ ಆಸ್ತಿ ಹಕ್ಕುಗಳ ರಿಜಿಸ್ಟರ್ ನಲ್ಲಿ ನಮೂದಾಗಿರುವ ಮಾಲಿಕತ್ವ ಮತ್ತು ಸ್ವಾಧೀನತೆ ವ್ಯಕ್ತಿಗಳ ಬಗ್ಗೆ ಪ್ರತಿರೋಧ ವ್ಯಕ್ತ ಪಡಿಸಿ ಜಿಪಿಎ ಹೊಂದಿರುವ ವ್ಯಕ್ತಿಗೆ ರಕ್ಷಣೆ ನೀಡದಂತೆ ಕೇಳಿಕೊಂಡರೆ.

ಪೊಲೀಸರು ಮಾಡಬೇಕಿದ್ದು: ಇಂತಹ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಹೋಗಿ ತಮ್ಮ ಸಮಸ್ಯೆ ಬಗೆ ಹರಿಸಿಕೊಳ್ಳಿ ಎಂದು ಪೊಲೀಸರು ಹಿಂಬರಹ ನೀಡುವುದು.

ನಿಯಮ 03:
ಒಬ್ಬ ವ್ಯಕ್ತಿ ಮಾರಾಟ ಒಪ್ಪಂದ ( ಸೇಲ್ ಡೀಡ್ ) ಹಾಜರುಪಡಿಸಿ ಕೃಷಿ ಭೂಮಿ ಅಥವಾ ಕೃಷಿಯೇತರ, ನಿವೇಶನ, ಕಟ್ಟಡಕ್ಕೆ ಸಂಬಂಧಿಸಿದಂತೆ ರಕ್ಷಣೆ ಕೋರಿದರೆ ?
ಪೊಲೀಸರ ಅಧಿಕಾರ: ಸೇಲ್ ಡೀಡ್ ಹಾಜರು ಪಡಿಸಿದ ವ್ಯಕ್ತಿ ಸೇರಿದಂತೆ ಭೂ ವ್ಯಾಜ್ಯ ಸಂಬಂಧ ನ್ಯಾಯಾಲಯಕ್ಕೆ ಹೋಗಿ ಬಗೆಹರಿಸಿಕೊಳ್ಳಲು ಸೂಚನೆ ನೀಡಿ ಹಿಂಬರಹ ನೀಡುವುದು. ಇಲ್ಲದಿದ್ದರೆ, ಇಲ್ಲವೇ ಸ್ಥಳೀಯ ಪ್ರಾಧಿಕಾರಕ್ಕೆ ಹೋಗಿ ಅಸ್ತಿ ಹಕ್ಕು ಪತ್ರದಲ್ಲಿ ತನ್ನ ಮಾಲೀಕತ್ವವನ್ನು ಪ್ರಮಾಣೀಕರಿಸಿ ಅಂತಹ ಆಸ್ತಿ ಹಕ್ಕು ಪತ್ರ ಠಾಣೆಗೆ ಹಾಜರು ಪಡಿಸಿದರೆ ಅಂತಹ ವ್ಯಕ್ತಿಗೆ ಪೊಲೀಸರು ರಕ್ಷಣೆ ಕೊಡಬೇಕು. ಆಸ್ತಿಯ ಹಕ್ಕು ಪ್ರಮಾಣೀಕರಿಸಿದ ವ್ಯಕ್ತಿಗೆ ಪೊಲೀಸರು ರಕ್ಷಣೆ ಕೊಡಬೇಕು.

ನಿಯಮ 04:
ಒಬ್ಬ ವ್ಯಕ್ತಿ ಠಾಣೆಗೆ ಹಾಜರಾಗಿ, ಕೃಷಿ ಭೂಮಿ ಅಥವಾ ಕೃಷಿಯೇತರ ಭುಮಿ ಅಥವಾ ಕಟ್ಟಡಕ್ಕೆ ಸಂಬಂಧಿಸಿದಂತೆ ಮುಂಗಡ ಹಣ ನೀಡಿದ ದಾಖಲೆಯನ್ನು ಹಾಜರು ಪಡಿಸಿ ರಕ್ಷಣೆ ಕೋರಿದರೆ, ?
ಪೊಲೀಸರ ಅಧಿಕಾರ: ಭೂಮಿಯನ್ನು ಹೊಸದಾಗಿ ಸ್ವಾಧೀನ ಪಡೆಯಲು ಬಯಿಸಿದ ವ್ಯಕ್ತಿಗೆ ಯಾವುದೇ ರಕ್ಷಣೆ ನೀಡಬಾರದು. ಅವರು ಖರೀದಿಗೆ ಸಂಬಂಧಿಸಿದಂತೆ ಎಲ್ಲಾ ಕ್ರಮಗಳನ್ನು ಪೂರ್ಣಗೊಳಿಸಿ ಖಾತೆ ಬದಲಾವಣೆ ಮಾಡಿಕೊಂಡು ಅದನ್ನು ಪ್ರಮಾಣೀಕರಿಸಿ ಪ್ರತಿಯನ್ನು ಹಾಜರು ಪಡಿಸಲು ಸೂಚಿಸಬಹುದು. ಆ ದಾಖಲೆಗಳು ನೈಜವಾಗಿದ್ದರೆ ಮಾತ್ರ ಪೊಲೀಸರು ಕ್ರಮ ಕೈಗೊಳ್ಳಬಹುದು.

ನಿಯಮ 05:
ಒಬ್ಬ ವ್ಯಕ್ತಿ ಠಾಣೆಗೆ ಹಾಜರಾಗಿ ಕೃಷಿ ಭೂಮಿಗೆ ಸಂಬಂಧಿಸಿದಂತೆ ನ್ಯಾಯಾಲಯದ ನಿಖರವಾದ ಆದೇಶ ಅಥವಾ ತಡೆಯಾಜ್ಞೆ ತಂದು ರಕ್ಷಣೆ ನೀಡುವಂತೆ ಕೋರಿದಾಗ
ಪೊಲೀಸರ ಕ್ರಮ:
ನ್ಯಾಯಾಲಯ ಜಾರಿ ಮಾಡಿರುವ ಅಜ್ಞೆಯನ್ನು ತಮ್ಮ ಸ್ಥಳಿಯ ಕಂದಾಯ ಪ್ರಾಧಿಕಾರದ ಬಳಿ ಹಾಜರು ಪಡಿಸಿ, ಸದರಿ ಆಜ್ಞೆಯನ್ನು ಅಸ್ತಿ ಹಕ್ಕು ಪತ್ರದಲ್ಲಿ ನಮೂದಿಸಿರುವ ಬಗ್ಗೆ ಪ್ರಮಾಣೀಕೃತ ಪ್ರತಿಯನ್ನು ಹಾಜರು ಪಡಿಸಿದಾಗ ಮಾತ್ರ ಪೊಲೀಸರು ರಕ್ಷಣೆ ನೀಡಬಹುದು.

ನಿಯಮ 06:
ಒಬ್ಬ ವ್ಯಕ್ತಿ ಠಾಣೆಗೆಹಾಜರಾಗಿ ಕೃಷಿಯೇತರ ಭೂಮಿ, ಕಟ್ಟಡ, ನಿವೇಶನಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ನಿಖರವಾದ ಆದೇಶ ಅಥವಾ ತಡೆಯಾಜ್ಞೆ ಹಾಜರು ಪಡಿಸಿ ರಕ್ಷಣೆ ಕೋರಿದರೆ,
ಪೊಲೀಸರ ಕ್ರಮ: ಅಂತಹ ವ್ಯಕ್ತಿಗೆ ಪೊಲೀಸರು ರಕ್ಷಣೆ ನೀಡುವಂತಿಲ್ಲ . ಬದಲಲಿಗೆ ನ್ಯಾಯಾಲಯದ ಆದೇಶವನ್ನು ಸ್ಥಳಿಯ ಪ್ರಾಧಿಕಾರ ಮುಂದೆ ಹಾಜರು ಪಡಿಸಿ ಅವರಿಂದ ಮುಂದೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ನಿಖರವಾದ ಸೂಚನೆ ಪೊಲೀಸ್ ಅಧಿಕಾರಿಗಳಿಗೆ ನೀಡಲು ಕೋರಬೇಕು. ಸ್ಥಳಿಯ ಪ್ರಾಧಿಕಾರ ಅಥವಾ ಸಕ್ಷಮ ಪ್ರಾಧಿಕಾರದ ಸೂಚನೆ ಮೇರೆಗೆ ಪೊಲೀಸರು ರಕ್ಷಣೆ ನೀಡಬಹುದು ಅಥವಾ ಕ್ರಮ ಜರುಗಿಸಬಹುದು.

ನಿಯಮ 07:
ಕೃಷಿ ಜಮೀನಿನ ಗಡಿ ವಿವಾದ ಉಂಟಾಗಿದ್ದರೆ :
ಪೊಲೀಸರ ಕ್ರಮ: ಯಾವುದೇ ಕೃಷಿ ಭೂಮಿಯ ಗಡಿ ಗುರ್ತಿಸಲು ಸಾಧ್ಯವಾಗದೇ ಅಥವಾ ಕೃಷಿ ಜಮೀನು ಗಡಿ ನಿಗದಿ ಪಡಿಸಲು ಸಾಧ್ಯವಾಗದ ಸಂದರ್ಭದಲ್ಲಿ ಪ್ರಕರಣಗಳನ್ನು ತಾಲೂಕು ತಹಶೀಲ್ದಾರ್ ಅವರಿಗೆ ವಹಿಸಿ ವಿವಾದ ಇತ್ಯರ್ಥಕ್ಕೆ ವಿನಂತಿಸಬೇಕು. ಕೃಷಿ ಜಮೀನಿನ ಮೋಜಣಿಯ ನಂತರ ಗಡಿಗಳನ್ನು ಗುರುತಿಸಿ ಕಲ್ಲು ಹಾಕಿದ ನಂತರ, ಮೋಜಣಿಯ ಬಗ್ಗೆ ದೃಢೀಕೃತ ನಕಲು ಪಡೆದು, ಅವುಗಳನ್ನು ಸಲ್ಲಿಸಿದರೆ, ಕೃಷಿ ಭೂಮಿಗೆ ಪಹಣಿ ದಾಖಲೆ ಫಾರಂ 16 ರ ಕಾಲಂ ನಂ 10 ಹಾಗೂ 12 ಪರಿಶೀಲಿಸಿ ಕೃಷಿ ಜಮೀನಿನ ಸ್ವಾಧೀನತೆ ಹೊಂದಿರುವರಿಗೆ ರಕ್ಷಣೆ ನೀಡುವುದು.

ನಿಯಮ 08:
ಕೃಷಿಯೇತರ ಜಮೀನು, ನಿವೇಶನ, ಕಟ್ಟಡ ವಿಚಾರದಲ್ಲಿವಿವಾದ ಉಂಟಾದರೆ,
ಪೊಲೀಸರ ಕ್ರಮ: ಕೃಷಿಯೇತರ ಜಮೀನು, ನಿವೇಶನ ಅಥವಾ ಕಟ್ಟಡಗಳ ಗಡಿಗಳನ್ನು ಗುರುತಿಸಲು ಸಾಧ್ಯವಾಗದೇ ಇದ್ದಲ್ಲಿ ಅಥವಾ ಗಡಿಯನ್ನು ನಿಗದಿ ಪಡಿಸಲು ಸಾಧ್ಯವಾಗದ ಸಂದರ್ಭದಲ್ಲಿ ಸದರಿ ಜಮೀನಿನ ಸರ್ವೆಗೆ ಸಂಬಂಧಿಸಿದ ವ್ಯಕ್ತಿಯು ಸರ್ವೆ ಇಲಾಖೆ ಅಥವಾ ನಗರಸಭೆ ಅಧಿಕಾರಿಗಳ ಬಳಿ ಹೋಗಿ ಮೋಜಿಣಿಗಾಗಿ ಅರ್ಜಿ ಸಲ್ಲಿಸಬೇಕು. ಸರ್ವೆ ಮಾಡಿ ಗಡಿಗಳನ್ನು ಗುರುತಿಸಿ ಕಲ್ಲುಗಳನ್ನು ಹಾಕಬೇಕು. ಸರ್ವೆ ವರದಿ ಬಳಿಕ ದೃಢೀಕೃತ ನಕಲನ್ನು ಹಾಜರು ಪಡಿಸಿದ ಬಳಿಕ ಕೃಷಿಯೇತರ ಭುಮಿಯ ನಕಾಶೆ ಹಾಗೂ ಖಾತಾ ನಕಲು ಪರಿಶೀಲಿಸಿ ಕಟ್ಟಡ ಸ್ವಾಧಿನತೆ ಹೊಂದಿದ ವ್ಯಕ್ತಿಗೆ ರಕ್ಷಣೆ ನೀಡಬೆಕು.

ನಿಯಮ 09:
ಕೃಷಿ ಜಮೀನಿನ ಬಗ್ಗೆ ವಿವಾದಿತ ಎರಡೂ ಪಕ್ಷದವರು ಪಹಣಿ ಪತ್ರ ಹಾಜರು ಪಡಿಸಿದ ಸಂದರ್ಭ ಒದಗಿ ಬಂದರೆ,
ಪೊಲೀಸರ ಕ್ರಮ: ಕೃಷಿಯೇತರ ಭೂಮಿ ಅಥವಾ ನಿವೇಶನ ಕಟ್ಟಡ ವಿಚಾರದಲ್ಲಿ ಎರಡೂ ಪಕ್ಷದವರು ಸದರಿ ಜಮೀನಿಗೆ ಸಂಬಂಧಿಸಿದಂತೆ ಪಹಣಿ ಪತ್ರಗಳನ್ನು ಪೊಲೀಸ್ ಠಾಣಾಧಿಕಾರಿ ಮುಂದೆ ಹಾಜರು ಪಡಿಸಬೇಕು. ಈ ದಾಖಲೆಗಳನ್ನು ಠಾಣಾಧಿಕಾರಿ ಪ್ರಾಥಮಿಕ ವಿಚಾರಣೆ ನಡೆಸಿ ಸುಳ್ಳು ದಾಖಲೆಗಳನ್ನು ಹಾಜರು ಪಡಿಸಿದ ವ್ಯಕ್ತಿಯ ಮೇಲೆ ಕ್ರಿಮಿನಲ್ ದಾವೆ ದಾಖಲಿಸಿ ತನಿಖೆ ನಡೆಸಬಹುದು. ತನಿಖೆಯ ನಂತರ ಯಾವ ವ್ಯಕ್ತಿ ನಿಜವಾದ ಪಹಣಿ ಪತ್ರಗಳನ್ನು ಹಾಜರು ಪಡಿಸುತ್ತಾನೋ ಆ ಪಹಣಿ ಪತ್ರ, ಖಾತಾ ದಾಖಲೆ ನೋಡಿ ಅರ್ಹ ವ್ಯಕ್ತಿಗೆ ರಕ್ಷಣೆ ನೀಡಬೇಕು.

ಕೃಷಿ ಜಮೀನು, ಕೃಷಿಯೇತರ ಜಮೀನು, ನಿವೇಶನ, ಕಟ್ಟಡ ವಿಚಾರದಲ್ಲಿ ವಿವಾದಿತ ಪಕ್ಷಗಾರರಲ್ಲಿ ಯಾರು ನಿಜವಾದ ಮಾಲೀಕ, ಸ್ವಾಧೀನದಾರ ಎಂಬುದು ಕಂಡು ಬಾರದೇ ಇದ್ದರೆ, ಈ ಜಮೀನಿಗೆ ಸಂಬಂಧಿಸಿದಂತೆ ಗಲಾಟೆ ಅಗುವ ಸಂದರ್ಭ ಇದ್ದರೆ, ಠಾಣಾಧಿಕಾರಿ ಸಿಆರ್‌ಪಿಸಿ ಸೆಕ್ಷನ್ 145 ಅಡಿಯಲ್ಲಿ ಪ್ರಕರಣ ದಾಖಲಿಸಿ ಉಪ ವಿಭಾಗೀಯ ದಂಡಾಧಿಕಾರಿಗಳ ಮುಂದೆ ಕ್ರಮ ಜರುಗಿಸಬೇಕು. ಉಪ ದಂಡಾಧಿಕಾರಿಗಳ ಅಜ್ಞೆ ಅನುಸಾರ ಕಾರ್ಯ ನಿರ್ವಹಿಸುವುದು. ಅಲ್ಲದೇ ಪಹಣಿ ಪತ್ರಿಕೆಯಲ್ಲಿ ಉಪ ವಿಭಾಗೀಯ ದಂಡಾಧಿಕಾರಿಗಳ ಆದೇಶ ನಮೂದು ಮಾಡಿಸುವ ಸಲುವಾಗಿ ತಲಶೀಲ್ದಾರ್ ಗೆ ಮನವಿ ಮಾಡುವುದು. ದಾಖಲೆಗಳ ನೈಜತೆ ಪರಿಶೀಲಿಸಿ ಅರ್ಹ ವ್ಯಕ್ತಿಗೆ ರಕ್ಷಣೆ ಕೊಡಬೇಕು.

ಕೃಷಿಯೇತರ ಜಮೀನು, ನಿವೇಶನ, ಕಟ್ಟಡ ವಿಚಾರದಲ್ಲಿ ಸ್ಥಳೀಯ ಪ್ರಾಧಿಕಾರದ ಮುಂದೆ ವಿಭಾಗೀಯ ದಂಡಾಧಿಕಾರಿಗಳು ಮಾಡಿದ ಅದೇಶವನ್ನು ಹಾಜರು ಪಡಿಸಿ ಈ ಬಗ್ಗೆ ಸದರಿ ಆಸ್ತಿಯ ಖಾತೆಗಳಲ್ಲಿ ಸೂಕ್ತ ನೋಂದಣಿ ಮಾಡುವಂತೆ ಸೂಚಿಸುವುದು ಖಾತಾ ಪತ್ರ, ಪಹಣಿ ಪತ್ರಿಕೆ ಹಾಜರು ಪಡಿಸಿದ ಬಳಿಕ ಅವುಗಳ ನೈಜತೆ ಪರಿಶೀಲಸಿ ಅರ್ಹ ವ್ಯಕ್ತಿಗೆ ಪೊಲೀಸರು ರಕ್ಷಣೆ ನೀಡಬಹುದು.

ನಿಯಮ 10:
ಒಬ್ಬ ವ್ಯಕ್ತಿಯು ನ್ಯಾಯಾಲಯದ ಆದೇಶ ಹಾಜರು ಪಡಿಸಿ ರಕ್ಷಣೆ ಕೋರಿದಾಗ
ಪೊಲೀಸರ ಕ್ರಮ: ಯಾವುದೇ ನ್ಯಾಯಾಲಯದ ಆದೇಶದ ಆಧಾರದ ಮೇಲೆ ಪೊಲೀಸ್ ರಕ್ಷಣೆಯನ್ನು ನೀಡುವಂತೆ ಠಾಣಾಧಿಕಾರಿಗಳಿಗೆ ಒತ್ತಾಯ ಪಡಿಸುವಂತಿಲ್ಲ. ನ್ಯಾಯಾಲಯವು ಪೊಲೀಸರಿಗೆ ಜಾರು ಮಾಡಲು ಆದೇಶಿಸಿದ್ದ ಪಕ್ಷದಲ್ಲಿ ಅಂತಹ ಆದೇಶವನ್ನು ಮಾತ್ರ ಪೊಲೀಸರು ಕಡ್ಡಾಯವಾಗಿ ಪಾಲಿಸಬೇಕು. ನ್ಯಾಯಾಲಯದ ಆದೇಶವನ್ನು ಜಾರಿ ಮಾಡಲು ಸಾಧ್ಯವಾಗದಿದ್ದ ಪಕ್ಷದಲ್ಲಿ ಅಭಿಯೋಜನಾ ಸಹಾಯಕ ( ಕಾನೂನು ಸಲಹೆ) ಅವರ ಸಲಹೆ ಪಡೆಯುವುದು. ನ್ಯಾಯಾಲಯದ ಆದೇಶ ಪಾಲನೆ ಮಾಡಲು ಸಾಧ್ಯವಾಗದ ಕಾರಣಗಳೊಂದಿಗೆ ಸಂಬಂಧಪಟ್ಟ ನ್ಯಾಯಾಲಯಕ್ಕೆ ವರದಿ ಸಲ್ಲಿಸಬಹುದು.

ನಿಯಮ 11:
ಕೃಷಿ ಭೂಮಿ / ಕೃಷಿಯೇತರ ಭುಮಿ ನಿವೇಶನದಲ್ಲಿ ಕಾನೂನು ಬಾಹಿರವಾಗಿ ಸ್ವಾಧೀನ ಪಡಿಸಿಕೊಂಡಿದ್ದರೆ,
ಪೊಲೀಸರ ಕ್ರಮ: ಕೃಷಿ ಭೂಮಿ ಅಥವಾ ಕೃಷಿಯೇತರ ಭೂಮಿಗೆ ಸಂಬಂಧಿಸಿದಂತೆ ರೆಕಾರ್ಡ್‌ ಆಫ್ ರೈಟ್ಸ್ ನಲ್ಲಿ ನಮೂದಾಗಿರುವ ಅಥವಾ ನಿಯಮಾನುಸಾರ ಸದರಿ ಭೂಮಿಯ ಖಾತೆಯನ್ನು ತನನ್ ಹೆಸರಿಗೆ ಹೊಂದಿರುವ ವ್ಯಕ್ತಿಯ ಖಾತಾ ಎಕ್ಸ್ಸ್ಟಾಕ್ಟ್ ನ ದೃಢೀಕೃತ ಪ್ರಮಾಣ ಪತ್ರ ಹಾಜರು ಪಡಿಸಿದ ವ್ಯಕ್ತಿ ಠಾಣೆಗೆ ದೂರು ನೀಡಿದಲ್ಲಿ ಅಂತಹ ಸಂದರ್ಭದಲ್ಲಿ ನಿಯಮ ಬಾಹಿರವಾಗಿ ಸ್ವಾಧೀನ ಪಡೆದಿರುವ ವ್ಯಕ್ತಿಯ ವಿರುದ್ಧ ಕ್ರಿಮಿನಲ್ ಕೇಸ್ ಬುಕ್ ಮಾಡಿ ಪೊಲೀಸರು ತನಿಖೆ ನಡೆಸಬಹುದು. ತನಿಖೆ ನಡೆಸಿದಾಗ ಅರೋಪ ಸತ್ಯ ಎಂದು ಕಂಡು ಬಂದರೆ, ಅಂತಹ ಸಂದರ್ಭದಲ್ಲಿ ನಿಯಮ ಬಾಹಿರವಾಗಿ ಸ್ವಾಧೀನದಲ್ಲಿರುವ ವ್ಯಕ್ತಿಯನ್ನು ಸದರಿ ಸ್ವತ್ತಿನಿಂದ ಖಾಲಿ ಮಾಡಿಸಬಹದು. ನೈಜ ಮಾಲೀಕನಿಗೆ ರಕ್ಷಣೆ ನೀಡಬಹುದು.

ನಿಯಮ 12:
ಕೃಷಿಯೇತರ ಭೂಮಿ ಅಥವಾ ಕಟ್ಟಡವನ್ನು ಗುತ್ತಿಗೆ, ಬಾಡಿಗೆ ಪಡೆದ ವ್ಯಕ್ತಿಯು ಗುತ್ತಿಗೆ ಅಥವಾ ಬಾಡಿಗೆ ಕರಾರು ನವೀಕರಿಸಸದೇ ಸದರಿ ಸ್ವತ್ತನ್ನು ಖಾಲಿ ಮಾಡಲು ನಿರಾಕರಿಸಿದರೆ,
ಪೊಲೀಸರ ಕ್ರಮ: ಯಾವುದೇ ವ್ಯಕ್ತಿ ಕೃಷಿ ಅಥವಾ ಕೃಷಿಯೇತರ ಭೂಮಿ, ನಿವೇಶನ, ಕಟ್ಟಡವನ್ನು ಕರಾರು ಮೂಲಕ ಬಾಡಿಗೆ, ಗುತ್ತಿಗೆ ಪಡೆದು ವಾಯಿದೆ ಮುಗಿದ ಬಳಿಕ ಸದರಿ ಸ್ವತ್ತಿನಲ್ಲಿ ಮುಂದುವರೆದಿದ್ದರೆ, ಅದು ನಿಯಮ ಬಾಹಿರ ಸ್ವಾಧೀನವಾಗುತ್ತದೆ. ನೈಜ ಮಾಲೀಕನ ದೂರಿನ ಮೇರೆಗೆ ಅನಧಿಕೃತ ಸ್ವಾಧೀನ ಅನುಭವ ಪಡೆಯುತ್ತಿರುವ ವ್ಯಕ್ತಿಯ ವಿರುದ್ಧ ಕ್ರಿಮಿನಲ್ ದಾವೆ ದಾಕಲಿಸಿ ಅನಧಿಕೃತವಾಗಿ ಸ್ವಾಧೀನದಲ್ಲಿರುವ ವ್ಯಕ್ತಿಯನ್ನು ಸದರಿ ಸ್ವತ್ತಿನಿಂದ ಹೊರ ಹಾಕಿ ನೈಜ ಮಾಲೀಕನಿಗೆ ರಕ್ಷಣೆ ನೀಡಬಹುದು.

ನಿಯಮ 13:
ಒಂದು ಸ್ವತ್ತು ಅಥವಾ ಆಸ್ತಿಯನ್ನು ಹಲವರಿಗೆ ಮಾರಾಟ ಪತ್ರ ಮಾಡಿದ್ದು, ಅಂತಹ ಹಲವು ವ್ಯಕ್ತಿಗಳು ರಕ್ಷಣೆ ನೀಡುವಂತೆ ಪೊಲೀಸರನ್ನು ಕೋರಿದಾಗ,
ಪೊಲೀಸರ ಕ್ರಮ: ರೆಕಾರ್ಡ್ ಆಫ್ ರೈಟ್ಸ್ ಕಲಂ 10 ಮತ್ತು 12 ರಲ್ಲಿನಮೂದಾಗಿರುವ ವ್ಯಕ್ತಿಗೆ ಮಾತ್ರವೇ ರಕ್ಷಣೆ ನೀಡತಕ್ಕದ್ದು. ಸ್ವತ್ತಿನ ಪ್ರಥಮ ಖರೀದಿದಾರರಿಗೆ ಇಂತಹ ಸ್ವತ್ತಿಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಸ್ಥಳೀಯ ಕಚೇರಿಯ ಸ್ವತ್ತು ಸ್ವಾಧೀನ ರಿಜಿಸ್ಟರ್ ನ ರೆಕಾರ್ಡ್ ಅಫ್ ರೈಟ್ಸ್ ಮ್ಯುಟೇಷನ್ ಬದಲಾವನೆ ಮಾಡಿಕೊಳ್ಳುವುಂತೆ ಸೂಕ್ತ ತಿಳುವಳಿಕೆ ಕೊಟ್ಟು ಕಳುಹಿಸುವುದು. ಎರಡನೇ ಅಥವಾ ಆನಂತರದ ಖರೀದಿದಾರರಿಗೆ ಸ್ವತ್ತನ್ನು ಮಾರಾಟ ಮಾಡಿರುವ ವ್ಯಕ್ತಿ ವಂಚನೆ ಮಾಡಿದಂತಾಗಿದ್ದು, ಮಾರಾಟಗಾರನ ವಿರುದ್ಧ ಪೊಲೀಸರೇ ಸ್ವತಃ ಕ್ರಿಮಿನಲ್ ಕೇಸು ದಾಖಲಿಸಿ ಅಗತ್ಯ ಕ್ರಮ ಜರುಗಿಸಬಹುದು.

ನಿಯಮ 14:
ಒಬ್ಬ ವ್ಯಕ್ತಿ ಮ್ಯುಟೇಷನ್ ಮಾಡಿಸದೇ ಖಾತಾ ಬದಲಾವಣೆಯಾಗದ ಕೃಷಿ ಅಥವಾ ಕೃಷಿ ಭೂಮಿ ಅಥವಾ ಕಟ್ಟಡ ನಿವೇಶನಕ್ಕೆ ಸಂಬಂಧಿಸಿದಂತೆ ಕೇವಲ ಇತ್ತೀಚೆಗೆ ಜಾರಿಯಾದ ಮಾರಾಟ ಒಪ್ಪಂದ ಪತ್ರವನ್ನು ಹಾಜರು ಪಡಿಸಿ ರಕ್ಷಣೆ ಕೋರಿದರೆ ( ಸೇಲ್ ಡೀಡ್ )
ಪೊಲೀಸರ ಕ್ರಮ: ಭೂಮಿಯನನ್ಉ ಹೊಸದಾಗಿ ಸ್ವಾಧೀನ ಪಡೆಯಲು ಬಯಿಸಿದ ವ್ಯಕ್ತಿಗೆ ಯಾವುದೇ ರಕ್ಷಣೆಯನ್ನು ಪೊಲೀಸರು ನೀಡುವಂತಿಲ್ಲ. ಖರೀದಿ ಕರಾರು ( ಸೇಲ್ ಡೀಡ್ ) ಮೂಲಕ ಖರೀದಿಸಿರುವ ವ್ಯಕ್ತಿಗೆ ಸದರಿ ಸ್ವತ್ತಿಗೆ ಸಂಬಂಧಿಸಿದಂತೆ ಸ್ಥಳೀಯ ಕಂದಾಐ ಕಚೇರಿಗೆ ಅಥವಾ ಸ್ಥಳೀಯ ಪ್ರಾಧಿಕಾರ ಮುಂದೆ ಮ್ಯುಟೇಷನ್ ಮಾಡಿಸುವಂತೆ, ಕೃಷಿಯೇತರ ಭೂಮಿಯಾಗಿದ್ದ ಪಕ್ಷದಲ್ಲಿ ಖಾತಾ ಬದಲಾವಣೆ ಮಾಡಿಕೊಂಡು ಬರುವಂತೆ ತಿಳುವಳಿಕೆ ಕೊಟ್ಟು ಕಳಿಸುವುದು.

ನಿಯಮ 15:
ಯಾವುದೇ ಕೃಷಿ ಭೂಮಿ, ಕೃಷಿಯೇತರ ಭೂಮಿ, ನಿವೇಶನ ಅಥವಾ ಕಟ್ಟಡಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ತಡೆಯಾಜ್ಞೆ ನೀಡಿದ ಪಕ್ಷದಲ್ಲಿ
ಪೊಲೀಸರ ಕ್ರಮ: ರೆಕಾರ್ಡ್ ಆಫ್ ರೈಟ್ಸ್ ( ಆರ್‌ಟಿಸಿ ) ಕಲಂ 10 ಮತ್ತು 12 ರಲ್ಲಿ ನಮೂದಿಸಲಾದ ವ್ಯಕ್ತಿಗೆ ರಕ್ಷಣೆ ನೀಡುವುದು.ಸದರಿ ಸ್ವತ್ತಿನ ಸ್ವಾಧೀನಕ್ಕೆ ಸಂಬಂಧಿಸಿದಂತೆ ಠಾಣಾಧಿಕಾರಿಗೆ ಯಾವುದೇ ಅನುಮಾನ ಬಂದ ಪಕ್ಷದಲ್ಲಿ ದಾಖಲಾತಿಗಳು ಪಾರದರ್ಶಕವಾಗಿರದ ಸಂದರ್ಭದಲ್ಲಿ ಎರಡು ಪಾರ್ಟಿಗಳು ಸಂಬಂಧಪಟ್ಟ ಕಂದಾಯ ಕಚೇರಿಯಿಂದ ರಕ್ಷಣೆ ಕುರಿತು ಸ್ಪಷ್ಟ ನಿರ್ದೇಶನ ಪಡೆದು ಹಾಜರು ಪಡೆಸುವಂತೆ ಸೂಕ್ತ ಸಲಹೆ ನೀಡಿ ಕಳುಹಿಸಬೇಕು ಪೊಲೀಸರು.

ನಿಯಮ 16:
ಕರ್ನಾಟಕ ಸರ್ಕಾರ ಅಥವಾ ಕರ್ನಾಟಕ ಸರ್ಕಾರದ ಸಂಸ್ಥೆಗಳಾದ ಕೆಐಎಡಿಬಿ, ಬಿಡಿಎ, ಮತ್ತಿತರ ಪ್ರಾಧಿಕಾರಿಗಳು ಸ್ವಾಧೀನವಾದ ಭೂಮಿಗೆ ಸಂಬಂಧಿಸಿದಂತೆ ಕೃಷಿ ಭೂಮಿಯ ರೆಕಾರ್ಡ್ ಆಫ್ ರೈಟ್ಸ್ ನಲ್ಲಿ ಮಾಲೀಕನೆಂದು ಅಥವಾ ಕೃಷಿಯೇತರ ಭೂಮಿ, ನಿವೇಶನ, ಹಾಗೂ ಕಟ್ಟಡ ಖಾತಾದಾರನೆಂದು ಸದರಿ ಸ್ವತ್ತಿಗೆ ರಕ್ಷಣೆ ನೀಡುವಂತೆ ಕೋರಿದರೆ   ಮಾರಾಟ ಒಪ್ಪಂದ ಆಧಾರದ ಮೇಲೆ ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ಪರಿಹಾರವನ್ನು ನೀಡಿರುವುದಿಲ್ಲ ಎಂಬ ಆಧಾರದ ಮೇಲೆ ಭೂಮಿಯನನ್ಉ ಸ್ವಾಧೀನಕ್ಕೆ ಪಡೆಯಲು ಬಯಿಸಿರುವ ವ್ಯಕ್ತಿ ಪರ ಯಾವುದೇ ರೀತಿಯ ರಕ್ಷಣೆ ನೀಡುವಂತಿಲ್ಲ. ಅಂತಹ ವ್ಯಕ್ತಿಗೆ ಸಂಬಂಧಪಟ್ಟ ಸರ್ಕಾರಿ ಕಚೇರಿಯಲ್ಲಿ ಸಮಸ್ಯೆ ಇತ್ಯರ್ಥ ಪಡಿಸಿಕೊಳ್ಳಲು ಸಲಹೆ ನೀಡಬೇಕು.

Exit mobile version